ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಆಪ್ತರೇ ಹತ್ಯೆ ಮಾಡ್ತಾರೆ: ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಭವಿಷ್ಯ
ಒಂದಲ್ಲಾ ಒಂದು ದಿನ ಖಂಡಿತವಾಗಿ ವ್ಲಾಡಿಮಿರ್ ಪುಟಿನ್ ಆಡಳಿತದ ದೌರ್ಬಲ್ಯ ರಷ್ಯರನ್ನು ಕಾಡಲಿದೆ. ಆಗ ಭಕ್ಷಕರೇ ಇನ್ನೊಬ್ಬ ಭಕ್ಷಕನನ್ನು ಕಬಳಿಸಲಿದ್ದಾರೆ. ಹಂತಕನನ್ನು ಹತ್ಯೆಗೈಯಲು ಅವರಿಗೊಂದು ಕಾರಣ ಸಿಗಲಿದೆ ಎಂದು ವೊಲೊದಿಮಿರ್ ಜೆಲೆನ್‌ಸ್ಕಿ ಹೇಳಿದ್ದಾರೆ.
ಕೀವ್ (ಫೆಬ್ರವರಿ 28): ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಂದೊಂದು ದಿನ ತಮ್ಮ ಆಪ್ತ ವಲಯದಿಂದಲೇ ಹತ್ಯೆಗೀಡಾಗಲಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಭವಿಷ್ಯ ನುಡಿದಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ಯುದ್ಧಕ್ಕೆ ಫೆಬ್ರವರಿ 24ರಂದು ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲೇ ಉಕ್ರೇನ್ ಸರ್ಕಾರ ‘ಇಯರ್’ ಎಂಬ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ ಈ ಜೆಲೆನ್‌ಸ್ಕಿ ಆಡಿರುವ ಈ ಮಾತುಗಳಿವೆ ಎಂದು ನ್ಯೂಸ್‌ವೀಕ್ ವರದಿ ಮಾಡಿದೆ.
‘ಒಂದಲ್ಲಾ ಒಂದು ದಿನ ಖಂಡಿತವಾಗಿ ವ್ಲಾಡಿಮಿರ್ ಪುಟಿನ್ (Vladimir Putin) ಆಡಳಿತದ ದೌರ್ಬಲ್ಯ ರಷ್ಯರನ್ನು (Russia) ಕಾಡಲಿದೆ. ಆಗ ಭಕ್ಷಕರೇ ಇನ್ನೊಬ್ಬ ಭಕ್ಷಕನನ್ನು ಕಬಳಿಸಲಿದ್ದಾರೆ. ಹಂತಕನನ್ನು ಹತ್ಯೆಗೈಯಲು ಅವರಿಗೊಂದು ಕಾರಣ ಸಿಗಲಿದೆ. ಅವರು ಕಾಮ್‌ರೋವ್‌ನ ಮಾತುಗಳನ್ನು ಪುನರುಚ್ಚರಿಸಲಿದ್ದಾರೆ. ಇಂಥದ್ದೊಂದು ಸಾಧ್ಯತೆ ಇದೆಯೇ ಎಂದು ಯಾರಾದರೂ ಪ್ರಶ್ನಿಸಿದರೆ ನನ್ನ ಉತ್ತರ, ಖಂಡಿತಾ ಇದೆ. ಆದರೆ ಅದು ಯಾವಾಗ ಸಂಭವಿಸಲಿದೆ ಎಂದು ನಾನು ಹೇಳಲಾರೆ’ ಎಂದು ವೊಲೊದಿಮಿರ್ ಜೆಲೆನ್‌ಸ್ಕಿ (Volodymyr Zelensky) ಹೇಳಿದ್ದಾರೆ ಎನ್ನಲಾದ ಮಾತುಗಳು ವರದಿಯಲ್ಲಿವೆ.
ಇದನ್ನು ಓದಿ: ವರ್ಷ ಪೂರೈಸಿದ ಹತ್ಯಾಕಾಂಡ: ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಯುದ್ಧದ ಪರಿಣಾಮವೇನು?
‘ಯುದ್ಧ ಆರಂಭವಾದ ಬಳಿಕ ವ್ಲಾಡಿಮಿರ್ ಪುಟಿನ್ ಆಪ್ತ ವಲಯದಲ್ಲಿ ಸಾಕಷ್ಟು ಹತಾಶೆ ಕಾಣಿಸುತ್ತಿದೆ. ವ್ಲಾಡಿಮಿರ್ ಪುಟಿನ್ ಆಪ್ತ ವಲಯ ತನ್ನ ನಾಯಕನ ಬಗ್ಗೆ ಅಸಮಾಧಾನಗೊಂಡಿದೆ’ ಎಂದು ಅಮೆರಿಕದ (United States) ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿತ್ತು. ಜೊತೆಗೆ ಉಕ್ರೇನ್ ಯುದ್ಧದಲ್ಲಿ(Ukraine War) ಭಾಗಿಯಾದ ರಷ್ಯಾ ಯೋಧರು ಕಣ್ಣೀರಿಡುತ್ತಿರುವ ಕುರಿತೂ ವರದಿಗಳನ್ನು ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಈ ಮಾತುಗಳನ್ನು ಆಡಿದ್ದಾರೆ .ಆದರೆ, ಅಂತಹ ಸನ್ನಿವೇಶವು ಹೊರಹೊಮ್ಮುವ ಸಾಧ್ಯತೆ ತೀರಾ ಕಡಿಮೆ ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ.
ಇನ್ನೊಂದೆಡೆ, ಕ್ರಿಮಿಯಾ (Crimea) ಪರ್ಯಾಯ ದ್ವೀಪದ ಉಕ್ರೇನ್ ನಿಯಂತ್ರಣಕ್ಕೆ ಮರಳುವುದು ಯುದ್ಧದ ಅಂತ್ಯದ ಭಾಗವಾಗಿದೆ ಎಂದು ವೊಲೊದಿಮಿರ್ ಜೆಲೆನ್‌ಸ್ಕಿ ಭಾನುವಾರ ಹೇಳಿದ್ದಾರೆ. ಇದು ನಮ್ಮ ಭೂಮಿ, ನಮ್ಮ ಜನರು, ನಮ್ಮ ಇತಿಹಾಸ. ನಾವು ಉಕ್ರೇನ್‌ನ ಪ್ರತಿಯೊಂದು ಮೂಲೆಗೂ ಉಕ್ರೇನ್ ಧ್ವಜವನ್ನು ಮರಳಿಸುತ್ತೇವೆ ಎಂದೂ ಅವರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ರಹಸ್ಯವಾಗಿ ಉಕ್ರೇನ್‌ಗೆ ಭೇಟಿ ನೀಡಿದ್ದು ಹೇಗೆ?
ಈ ಮಧ್ಯೆ, ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಅವರ ಈ ಹೇಳಿಕೆಗಳಿಗೆ ರಷ್ಯಾ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.
ಉಕ್ರೇನ್ ಯುದ್ಧದ ಸಾವು ನೋವು
ಯುಕೆ ರಕ್ಷಣಾ ಸಚಿವಾಲಯದ ಅಂದಾಜಿನ ಪ್ರಕಾರ, 40,000ದಿಂದ 60,000 ರಷ್ಯನ್ ಸೈನಿಕರು ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ. ರಷ್ಯಾದ ಸಾವು, ನೋವು, ಯುದ್ಧದಲ್ಲಿ ಗಾಯಾಳುಗಳಾದವರ ಸಂಖ್ಯೆ ಅಂದಾಜು 2 ಲಕ್ಷ ತಲುಪಬಹುದು ಎಂದು ಸಚಿವಾಲಯ ಹೇಳಿದೆ.
ಡಿಸೆಂಬರ್ ತಿಂಗಳಲ್ಲಿ ಉಕ್ರೇನಿನ ಅಧಿಕೃತ ಹೇಳಿಕೆಯ ಪ್ರಕಾರ 13,000 ಸೈನಿಕರು ಸಾವಿಗೀಡಾಗಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ಸಾವಿಗೀಡಾಗಿದ್ದಾರೆ ಅಥವಾ ಗಾಯಾಳುಗಳಾಗಿದ್ದಾರೆ ಎಂದು ಜನರಲ್ ಮಿಲ್ಲೆವ್ ಜನವರಿಯಲ್ಲಿ ಹೇಳಿದ್ದರು. ಕನಿಷ್ಠ 8,006 ನಾಗರಿಕರು ಯುದ್ಧದಲ್ಲಿ ಮೃತಪಟ್ಟಿದ್ದಾರೆ ಮತ್ತು ಕನಿಷ್ಠ 13,287 ನಾಗರಿಕರು ಗಾಯಾಳುಗಳಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಚಿಲ್ಡ್ರನ್ ಆಫ್ ವಾರ್ ಪ್ರಕಾರ, 461 ಉಕ್ರೇನಿನ ಮಕ್ಕಳು ಅಸುನೀಗಿದ್ದು, 927 ಮಕ್ಕಳು ಗಾಯಾಳುಗಳಾಗಿದ್ದಾರೆ, ಹಾಗೂ 345 ಮಕ್ಕಳು ಕಾಣೆಯಾಗಿದ್ದಾರೆ.
ದ ಅಟ್ಲಾಂಟಿಕ್ ಪ್ರಕಾರ, ಕನಿಷ್ಠ 24 ಪ್ರಮುಖ ರಷ್ಯನ್ನರು ಯುದ್ಧ ಆರಂಭವಾದಂದಿನಿಂದ ಸಾವಿಗೀಡಾಗಿದ್ದಾರೆ. ಕೀವ್ ಪ್ರಾಂತ್ಯದಲ್ಲಿ 1,700ಕ್ಕೂ ಹೆಚ್ಚು ನಾಗರಿಕರು ಸಾವಿಗೀಡಾಗಿದ್ದಾರೆ. ಅದರಲ್ಲಿ 700 ಜನರು ಬುಚ್ಚಾದಲ್ಲಿ ಸಾವಿಗೀಡಾಗಿದ್ದಾರೆ ಎಂದು ಉಕ್ರೇನಿನ ಪ್ರಾಸಿಕ್ಯೂಟರ್ ಜನರಲ್ ಕಚೇರಿ ಫೆಬ್ರವರಿ 22ರಂದು ತಿಳಿಸಿದೆ.