ಲಂಡನ್‌ನ ಬ್ರೆಂಟ್ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪಾನ್ ಮಸಾಲ ಉಗುಳಿದ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳಿಗೆ ತಲಾ 1.72 ಲಕ್ಷ ರೂ. ದಂಡ ವಿಧಿಸಲಾಗಿದೆ. ಆರಂಭಿಕ ದಂಡವನ್ನು ಪಾವತಿಸಲು ವಿಫಲವಾದ ಕಾರಣ ನ್ಯಾಯಾಲಯವು ದಂಡದ ಮೊತ್ತವನ್ನು ಹೆಚ್ಚಿಸಿದೆ.

ಲಂಡನ್ (ಮಾ.19): ಸಾರ್ವಜನಿಕ ಸ್ಥಳದಲ್ಲಿ ಪಾನ್ ಮಸಾಲ ಅಗಿದು ಉಗುಳಿದ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳಿಗೆ ಲಂಡನ್‌ನ ಬ್ರೆಂಟ್ ನಗರದಲ್ಲಿ ಭಾರಿ ಮೊತ್ತದ ದಂಡ ವಿಧಿಸಲಾಗಿದೆ. ಎಡ್ಜ್‌ವೇರ್ ನಿವಾಸಿ ಅಕ್ಷಿತ್ ಕುಮಾರ್ ಭದ್ರೆ ಪಟೇಲ್ ಮತ್ತು ರೂಸ್ಲಿಪ್ ನಿವಾಸಿ ಹಿತೇಶ್ ಪಟೇಲ್ ಎಂಬುವವರೇ ಈ ಭಾರಿ ದಂಡಕ್ಕೆ ಗುರಿಯಾದವರು. ಇಬ್ಬರಿಗೂ ತಲಾ 1,391 ಪೌಂಡ್ (ಅಂದಾಜು 1.72 ಲಕ್ಷ ರೂಪಾಯಿ) ದಂಡ ವಿಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Add Asianetnews Kannada as a Preferred SourcegooglePreferred

ಆರಂಭದಲ್ಲಿ ಸಾರ್ವಜನಿಕ ಸ್ಥಳವನ್ನು ಅಶುದ್ಧಗೊಳಿಸಿದ್ದಕ್ಕಾಗಿ ಇಬ್ಬರಿಗೂ ತಲಾ 100 ಪೌಂಡ್ (ಅಂದಾಜು 12,371 ರೂಪಾಯಿ) ದಂಡ ವಿಧಿಸಲಾಗಿತ್ತು. ಆದರೆ, ಈ ಇಬ್ಬರೂ ನಿಗದಿತ ಅವಧಿಯಲ್ಲಿ ದಂಡ ಪಾವತಿಸಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ.

ಅಕ್ಷಿತ್ ಕುಮಾರ್ ಪಟೇಲ್ ಕಿಂಗ್ಸ್‌ಬರಿ ರಸ್ತೆಯ ಮೆಟ್ರೋ ಸ್ಟೇಷನ್ ಬಳಿ ಪಾನ್ ಮಸಾಲ ಉಗುಳಿದ್ದಕ್ಕಾಗಿ ಇವರಿಗೆ 2025ರ ಜೂನ್‌ನಲ್ಲಿ ನಾರ್ತ್ ವೆಸ್ಟ್ ಲಂಡನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ದಂಡ ವಿಧಿಸಿತ್ತು. ಆದರೆ ಇವರು ನ್ಯಾಯಾಲಯಕ್ಕೆ ಹಾಜರಾಗಿದ್ದಾಗಲು ಅಥವಾ ದಂಡವನ್ನಾಗಲಿ ಪಾವತಿಸಿರಲಿಲ್ಲ. ಹಿತೇಶ್ ಪಟೇಲ್ ವೆಂಬ್ಲಿ ಹಿಲ್ ರಸ್ತೆಯಲ್ಲಿ ಪಾನ್ ಮಸಾಲ ಉಗುಳಿದ್ದಕ್ಕಾಗಿ ಇವರಿಗೂ 100 ಪೌಂಡ್ ದಂಡ ವಿಧಿಸಲಾಗಿತ್ತು. ಇವರೂ ಸಹ ಪಾವತಿಗೆ ಮುಂದಾಗದ ಕಾರಣ ದಂಡದ ಮೊತ್ತವನ್ನು 1,391 ಪೌಂಡ್‌ಗೆ ಹೆಚ್ಚಿಸಲಾಗಿದೆ.

ಸ್ವಚ್ಛತೆಗಾಗಿ ಲಂಡನ್ ನಗರದ ಹೋರಾಟ

ವರದಿಗಳ ಪ್ರಕಾರ, ಪಾದಚಾರಿ ಮಾರ್ಗಗಳು ಮತ್ತು ಕಟ್ಟಡಗಳ ಮೇಲೆ ಅಂಟಿರುವ ಪಾನ್ ಕಲೆಗಳನ್ನು ಸ್ವಚ್ಛಗೊಳಿಸಲು ಬ್ರೆಂಟ್ ಸಿಟಿ ಕೌನ್ಸಿಲ್ ಪ್ರತಿ ವರ್ಷ ಸುಮಾರು 30,000 ಪೌಂಡ್ (ಸುಮಾರು 37 ಲಕ್ಷ ರೂಪಾಯಿ) ಖರ್ಚು ಮಾಡುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪಾನ್ ಉಗುಳುವುದನ್ನು ತಡೆಯಲು ಈಗಾಗಲೇ ಹಲವೆಡೆ ಜಾಗೃತಿ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ ಮತ್ತು 100 ಪೌಂಡ್ ದಂಡದ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ಇಷ್ಟೇ ಅಲ್ಲದೆ, ಸಾರ್ವಜನಿಕ ಸ್ಥಳಗಳನ್ನು ಗಲೀಜು ಮಾಡುವವರನ್ನು ಪತ್ತೆಹಚ್ಚಲು ಪೆಟ್ರೋಲಿಂಗ್ ಅನ್ನು ಸಹ ತೀವ್ರಗೊಳಿಸಲಾಗಿದೆ.