ಅಮೆರಿಕಾದಲ್ಲಿ ಶಿಕ್ಷಣ ಕೊಡಿಸೋದಾಗಿ ಬಾಲಕನ ಕರೆದೊಯ್ದು ಕೆಲಸಕ್ಕಿಟ್ಟುಕೊಂಡ ಎನ್‌ಆರ್‌ಐ ಜೋಡಿ
ಅಮೆರಿಕಾದಲ್ಲಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸುವ ಆಮಿಷ ನೀಡಿ ಸಂಬಂಧಿ ಬಾಲಕನೋರ್ವನನ್ನು ಅಮೆರಿಕಾಗೆ ಕರೆದೊಯ್ದ ಜೋಡಿಯೊಂದು ಅಲ್ಲಿ ಆತನನ್ನು ಕೆಲಸಕ್ಕಿರಿಸಿಕೊಂಡ ಘಟನೆ ನಡೆದಿದೆ. ಪ್ರಕರಣ ಸಂಬಂಧ ಈ ಜೋಡಿಯನ್ನು ಅಮೆರಿಕಾ ನ್ಯಾಯಾಲಯ ಕಂಬಿ ಹಿಂದೆ ಕಳುಹಿಸಿದೆ.
ವಾಷಿಂಗ್ಟನ್: ಅಮೆರಿಕಾದಲ್ಲಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸುವ ಆಮಿಷ ನೀಡಿ ಸಂಬಂಧಿ ಬಾಲಕನೋರ್ವನನ್ನು ಅಮೆರಿಕಾಗೆ ಕರೆದೊಯ್ದ ಜೋಡಿಯೊಂದು ಬಳಿಕ ಅಲ್ಲಿದ್ದ ತಮ್ಮ ಪೆಟ್ರೋಲ್‌ಬಂಕ್‌ನಲ್ಲಿ ಒತ್ತಾಯಪೂರ್ವಕವಾಗಿ 3 ವರ್ಷ ಕೆಲಸಕ್ಕಿರಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಈಗ ಎನ್‌ಆರ್‌ಐ ಜೋಡಿಗೆ ಅಮೆರಿಕಾದ ನ್ಯಾಯಾಲಯವೊಂದು ಜೈಲು ಶಿಕ್ಷೆಯ ಜೊತೆ ಭಾರಿ ದಂಡ ವಿಧಿಸಿದೆ.
ಗಂಡ 31 ವರ್ಷದ ಹರ್ಮನ್ ಪ್ರೀತ್ ಸಿಂಗ್‌ಗೆ 135 ತಿಂಗಳು ಎಂದರೆ 11 ವರ್ಷ 25 ದಿನಗಳು ಹಾಗೂ ಹೆಂಡತಿ 43 ವರ್ಷದ ಕುಲ್ಬೀರ್ ಕೌರ್‌ಗೆ 87 ತಿಂಗಳು ಎಂದರೆ 7 ವರ್ಷ 25 ತಿಂಗಳು ಶಿಕ್ಷೆ ವಿಧಿಸಿ ಅಮೆರಿಕಾದ ಕೋರ್ಟ್ ಆದೇಶ ನೀಡಿದ್ದು, ಜೊತೆಗೆ ಸಂತ್ರಸ್ತನಾಗಿರುವ ಸಂಬಂಧಿ ಬಾಲಕನಿಗೆ ಪಾವತಿಸುವುದಕ್ಕಾಗಿ 1.87 ಕೋಟಿ ದಂಡ ವಿಧಿಸಿದೆ.
ವಿಚಾರಣೆಯಲ್ಲಿ ಪ್ರಸ್ತುತಪಡಿಸಲಾದ ಸಾಕ್ಷ್ಯಗಳ ಪ್ರಕಾರ ಈ ದಂಪತಿ 2018 ರಲ್ಲಿ, ಹರ್ಮನ್ ಪ್ರೀತ್ ಸಿಂಗ್‌ನ ಸೋದರ ಸಂಬಂಧಿ ಹಾಗೂ ಅಪ್ರಾಪ್ತನಾಗಿದ್ದ ಬಾಲಕನನ್ನು ಅಮೆರಿಕಾದಲ್ಲಿ ಶಾಲೆಗೆ ಸೇರಿಸಿ ಶಿಕ್ಷಣ ನೀಡುವ ಭರವಸೆ ನೀಡಿ ಕರೆದೊಯ್ದಿದ್ದಾರೆ. ಆತ ಅಮೆರಿಕಾಗೆ ಬಂದ ನಂತರ ಆರೋಪಿಗಳು ಆತನ ಬಳಿ ಇದ್ದ ವಲಸೆ ಸಂಬಂಧಿ ದಾಖಲೆಗಳನ್ನು ತೆಗೆದುಕೊಂಡಿದ್ದಾರೆ. ಬಳಿಕ ಆತನನ್ನು ಶಾಲೆಗೆ ಕಳುಹಿಸುವ ಬದಲು ಸಿಂಗ್ ಅವರ ಪೆಟ್ರೋಲ್ ಪಂಪ್ ಹಾಗೂ ಶಾಪ್‌ವೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡಲು ಒತ್ತಾಯಿಸಿದ್ದಾರೆ. ಸುಮಾರು ಮೂರು ವರ್ಷಗಳ ಕಾಲ ಎಂದರೆ 2018ರ ಮಾರ್ಚ್‌ನಿಂದ ಮೇ 2021ರವರೆಗೆ ಈ ಕ್ರೂರಿ ದಂಪತಿಗಳು ಬಾಲಕನನ್ನು ದುಡಿಸಿಕೊಂಡಿದ್ದಾರೆ.
ಯುಎಇನಿಂದ ಭಾರತದ ಅಪರಾಧಿ ನರೇಂದ್ರ ಸಿಂಗ್ ಗಡಿಪಾರು
ಪುಟ್ಟ ಬಾಲಕ ಎಂಬುದನ್ನು ನೋಡದೇ ದಿನಕ್ಕೆ 12 ರಿಂದ 17 ಗಂಟೆಗಳ ಕಾಲ ದುಡಿಸಿಕೊಂಡಿದ್ದಾರೆ. ಸ್ಟೋರ್‌ನಲ್ಲಿ ಕೆಲಸ ಮಾಡುವುದರಿಂದ ಹಿಡಿದು ಕ್ಲೀನಿಂಗ್, ಅಡುಗೆ ಮಾಡುವುದು, ಸಂಗ್ರಹಣೆಯನ್ನು ನೋಡಿಕೊಳ್ಳುವುದು ಹಣದ ರಿಜಿಸ್ಟೇಷನ್, ಸ್ಟೋರ್ ರೆಕಾರ್ಡ್ ನೋಡಿಕೊಳ್ಳುವುದು ಸೇರಿದಂತೆ ಅತ್ಯಂತ ಕಡಿಮೆ ಸಂಬಳಕ್ಕೆ ಎಷ್ಟು ದುಡಿಸಲು ಸಾಧ್ಯವೋ ಅಷ್ಟು ದುಡಿಸಿಕೊಂಡಿದ್ದಾರೆ ಎಂಬುದು ವಿಚಾರಣೆ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳಿಂದ ತಿಳಿದು ಬಂದಿದೆ.
ಸಿಗದ ವ್ಹೀಲ್‌ಚೇರ್: ತಾಯ್ನಾಡು ತಲುಪುತ್ತಿದ್ದಂತೆ ಉಸಿರು ಚೆಲ್ಲಿದ 80ರ ಪ್ರಾಯದ ಅನಿವಾಸಿ ಭಾರತೀಯ
ಆತ ಕೆಲಸ ಮುಂದುವರಿಸಲೇಬೇಕು ಎಂದು ಬಲಿಪಶುವಿನ ವಲಸೆ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಂಡು ದೈಹಿಕ ಕಿರುಕುಳದ ಜೊತೆ ಜೀವ ಬೆದರಿಕೆಯೊಡ್ಡಿದ್ದಾರೆ. ಆತನ ಆರೋಗ್ಯ ಹದಗೆಡುವುದಕ್ಕೆ ಕಾರಣವಾಗಿದ್ದಾರೆ, ಸ್ಟೋರ್ ಹಿಂಬದಿಯೇ ಇಡೀ ರಾತ್ರಿ ಕಳೆಯುವುವಂತೇ ಮಾಡಿದ್ದಾರೆ. ಸರಿಯಾಗಿ ತಿನ್ನಲು ಕೊಡದೇ, ವೈದ್ಯಕೀಯ ಸೌಲಭ್ಯದ ಜೊತೆ ಶಿಕ್ಷಣವನ್ನು ಕೂಡ ನಿರಾಕರಿಸಿದ್ದಾರೆ. ಅಲ್ಲದೇ ಆತ ತಾನು ಭಾರತಕ್ಕೆ ಹೋಗುತ್ತೇನೆ ಎಂದರೂ ಬಿಡದೇ ಆತ ವೀಸಾ ಅವಧಿ ಮೀರಿದ ನಂತರವೂ ದೇಶದಲ್ಲಿ ಉಳಿಯುವಂತೆ ಮಾಡಿ ಆತನಿಗೆ ತ್ರಿಶಂಕು ಸ್ಥಿತಿ ತಂದಿದ್ದಾರೆ ಎಂಬುದು ತನಿಖಾಧಿಕಾರಿಗಳು ಸಂಗ್ರಹಿಸಿದ ಸಾಕ್ಷ್ಯಗಳಿಂದ ತಿಳಿದು ಬಂದಿದೆ.
ಎನ್‌ಆರ್‌ಐಗಳು ದತ್ತು ಪಡೆಯಲು ನೆಲೆಸಿದ ದೇಶದ ಒಪ್ಪಿಗೆ ಕಡ್ಡಾಯ: ಹೈಕೋರ್ಟ್
ಬರೀ ಇಷ್ಟೇ ಅಲ್ಲದೇ ಆರೋಪಿ ಕೌರ್ ಅನ್ನು ಮದುವೆಯಾಗುವಂತೆ ಒತ್ತಾಯಿಸಿದ್ದರು. ಅಲ್ಲದೇ ಈ ಮದುವೆಯನ್ನು ಆತನ ಕುಟುಂಬದ ಆಸ್ತಿಯನ್ನು ಕಬಳಿಸಲು ಬಳಸುವುದಾಗಿ ಆತನನ್ನು ಬೆದರಿಸಿದ್ದರು. ಅಲ್ಲದೇ ಸಂತ್ರಸ್ತನ ಕೂದಲನ್ನು ಹಿಡಿದು ಎಳೆದಾಡಿರುವ ಹಾಗೂ ಆತ ತನ್ನ ವಲಸೆ ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿದಾಗ ಆತನಿಗೆ ಕೆನ್ನೆಗೆ ಬಾರಿಸಿ ಹೊಡೆದು ಬಡಿದು ಮಾಡಿದ್ದಾರೆ. ಅಲ್ಲದೇ ಮೂರು ಬೇರೆ ಬೇರೆ ಸಂದರ್ಭಗಳಲ್ಲಿ ಈ ಯುವಕ ರಜೆ ತೆಗೆದುಕೊಂಡಾಗ ಹಾಗೂ ಹೊರಡಲು ಮುಂದಾದಾಗ ರಿವಾಲ್ವರ್ ಹಿಡಿದು ಬೆದರಿಸಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಗಳು ಸಂತ್ರಸ್ತನನ್ನು ಶಾಲೆಗೆ ಸೇರಿಸಲು ಸಹಾಯ ಮಾಡುವುದಾಗಿ ಸುಳ್ಳು ಭರವಸೆ ನೀಡಿ ಯುನೈಟೆಡ್ ಸ್ಟೇಟ್ಸ್‌ಗೆ ಕರೆತರಲು ಸಂತ್ರಸ್ತನೊಂದಿಗಿನ ಸಂಬಂಧವನ್ನು ದುರ್ಬಳಕೆ ಮಾಡಿದ್ದಾರೆ ಎಂದು ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ವಿಭಾಗದ ಸಹಾಯಕ ಅಟಾರ್ನಿ ಜನರಲ್ ಕ್ರಿಸ್ಟನ್ ಕ್ಲಾರ್ಕ್ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಕಡಿಮೆ ಹಣಕ್ಕೆ ಆತನನ್ನು ದುಡಿಸಿಕೊಳ್ಳಲು ಆತನ ವಲಸೆ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಂಡರು ಮತ್ತು ಕನಿಷ್ಠ ವೇತನದ ಜೊತೆ ದೀರ್ಘ ಕಾಲ ಕೆಲಸ ಮಾಡಲು ಆತನಿಗೆ ಬೆದರಿಕೆಯೊಡ್ಡಿ ದೈಹಿಕವಾಗಿ ಹಲ್ಲೆ ಮಾಡಿದ್ದಲ್ಲದೇ ಮಾನಸಿಕವಾಗಿ ನಿಂದಿಸಿದ್ದಾರೆ ಎಂದು ಅವರು ದೂರಿದ್ದಾರೆ. ಈ ದಂಪತಿ ನಂತರದಲ್ಲಿ ವಿಚ್ಛೇದನಕ್ಕೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ.