: ಏರ್‌ಪೋರ್ಟ್‌ನಲ್ಲಿ ವ್ಹೀಲ್ ಚೇರ್ ಸಿಗದೇ 80 ವರ್ಷದ ವೃದ್ಧರೊಬ್ಬರು 1 ಕಿಲೋ ಮೀಟರ್‌ ನಡೆದ ಬಳಿಕ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದ ದಾರುಣ ಹಾಗೂ ಆಘಾತಕಾರಿ ಘಟನೆ  ಮುಂಬೈ ಏರ್‌ಪೋರ್ಟ್‌ನಲ್ಲಿ ನಡೆದಿದೆ. 

ಮುಂಬೈ: ಏರ್‌ಪೋರ್ಟ್‌ನಲ್ಲಿ ವ್ಹೀಲ್ ಚೇರ್ ಸಿಗದೇ 80 ವರ್ಷದ ವೃದ್ಧರೊಬ್ಬರು 1 ಕಿಲೋ ಮೀಟರ್‌ ನಡೆದ ಬಳಿಕ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದ ದಾರುಣ ಹಾಗೂ ಆಘಾತಕಾರಿ ಘಟನೆ ಮುಂಬೈ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಹಿರಿಯ ನಾಗರಿಕ ವ್ಯಕ್ತಿಯೊಬ್ಬರು ತನಗೆ ವ್ಹೀಲ್‌ಚೇರ್ ವ್ಯವಸ್ಥೆ ಮಾಡುವಂತೆ ಏರ್‌ಪೋರ್ಟ್ ಸಿಬ್ಬಂದಿಯನ್ನು ಕೇಳಿದ್ದಾರೆ. ಆದರೆ ಏರ್‌ಪೋರ್ಟ್ ಸಿಬ್ಬಂದಿ ಈ 80 ವರ್ಷದ ವೃದ್ಧರಿಗೆ ವ್ಹೀಲ್‌ಚೇರ್ ವ್ಯವಸ್ಥೆ ಮಾಡುವಲ್ಲಿ ವಿಫಲರಾಗಿದ್ದು, ಇದರಿಂದ ವಿಮಾನದಿಂದ ಇಳಿದು ಏರ್‌ಪೋರ್ಟ್ ಇಮಿಗ್ರೇಷನ್‌ ವಿಭಾಗವನ್ನು ತಲುಪುವಷ್ಟರಲ್ಲಿ ವೃದ್ಧರೂ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 

ವೃದ್ಧ ಹಾಗೂ ಅವರ ಪತ್ನಿ ಮೊದಲೇ ವ್ಹೀಲ್‌ ಚೇರ್ ಬುಕ್ ಮಾಡಿದ್ದರು. ಆದರೆ ಮುಂಬೈ ವಿಮಾನ ನಿಲ್ದಾಣದಲ್ಲಿ ವೃದ್ಧರಿಗಾಗಿ ಒಂದೇ ವ್ಹೀಲ್ ಚೇರ್ ಇದ್ದು ಇದರಿಂದ ಪತ್ನಿಗೆ ವ್ಹೀಲ್ ಚೇರ್ ನೀಡಿದ ಪತಿ ಬಳಿಕ ಆಕೆಯೊಂದಿಗೆ ತಾವು ಸುಮಾರು ಒಂದು ಕಿಲೋ ಮೀಟರ್ ನಡೆಯುತ್ತಾ ವಿಮಾನ ನಿಲ್ದಾಣದ ಇಮಿಗ್ರೇಷನ್ ವಲಯವನ್ನು ಪ್ರವೇಶಿಸಿದ್ದಾರೆ. ಅಷ್ಟರಲ್ಲೇ ಹೃದಯಾಘಾತವಾಗಿದ್ದು, ವೃದ್ಧ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಫೆಬ್ರವರಿ 12 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಏರ್‌ಪೋರ್ಟ್‌ ಟಾರ್‌ಮ್ಯಾಕ್‌ನಲ್ಲಿ ಆಹಾರ ತಿಂದ ಪ್ರಯಾಣಿಕರು: ಇಂಡಿಗೋಗೆ ಬರೋಬ್ಬರಿ 1.2 ಕೋಟಿ ರೂ. ದಂಡ!

ಈ ದಂಪತಿ ನ್ಯೂಯಾರ್ಕ್‌ನಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿದ್ದು, ಮೊದಲೇ ವ್ಹೀಲ್‌ಚೇರ್ ಕೂಡ ಬುಕ್ ಮಾಡಿದ್ದರು. ಆದರೆ ವಿಮಾನ ನಿಲ್ದಾಣದ ನಿರ್ಲಕ್ಷ್ಯದಿಂದಾಗಿ ಇವರಲ್ಲಿ ಒಬ್ಬರಿಗೆ ಮಾತ್ರ ವ್ಹೀಲ್ ಚೇರ್ ಸಿಕ್ಕಿದ್ದು, ಪತ್ನಿಗೆ ಅದನ್ನು ನೀಡಿ ನಡೆದುಕೊಂಡೇ ಬಂದ ವೃದ್ಧ ಪತ ಪ್ರಾಣ ಕಳೆದುಕೊಳ್ಳುವಂತಾಗಿದೆ. 

ದುರಾದೃಷ್ಟವಶಾತ್ ನ್ಯೂಯಾರ್ಕ್‌ನಿಂದ ಮುಂಬೈಗೆ ಆಗಮಿಸಿದ್ದ ನಮ್ಮ ಪ್ರಯಾಣಿಕರೊಬ್ಬರು ತಮ್ಮ ವ್ಹೀಲ್‌ಚೇರ್ ಹೊಂದಿದ್ದ ಪತ್ನಿಯೊಂದಿಗೆ ಏರ್‌ಪೋರ್ಟ್‌ನ ವಲಸೆ ವಿಭಾಗಕ್ಕೆ ಧಾವಿಸುತ್ತಿದ್ದಂತೆಯೇ ಅಸ್ವಸ್ಥರಾಗಿದ್ದಾರೆ, ಏರ್‌ಪೋರ್ಟ್‌ನಲ್ಲಿ ವ್ಹೀಲ್ ಚೇರ್‌ಗೆ ಭಾರಿ ಬೇಡಿಕೆ ಇದ್ದು, ವ್ಹೀಲ್ ಚೇರ್ ಸಿಗುವವರೆಗೆ ನಿಲ್ಲುವಂತೆ ನಾವು ಅವರಿಗೆ ಮನವಿ ಮಾಡಿದ್ದೆವು. ಆದರೆ ಅವರು ತಮ್ಮ ವ್ಹೀಲ್‌ ಚೇರ್‌ನಲ್ಲಿದ್ದ ಪತ್ನಿಯ ಜೊತೆ ವಾಕ್ ಮಾಡಲು ನಿರ್ಧರಿಸಿದರು. ಏರ್‌ಪೋರ್ಟ್‌ನ ವೈದ್ಯರು ಅವರನ್ನು ಪರೀಕ್ಷಿಸಿದ ನಂತರ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಹೇಳಿದರು ಎಂದು ಈ ಘಟನೆಗೆ ಸಂಬಂಧಿಸಿದಂತೆ ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ. 

ಗುದದ್ವಾರದಲ್ಲಿ ಕೋಟಿ ಕೋಟಿ ಮೌಲ್ಯದ ಚಿನ್ನ ಬಚ್ಚಿಟ್ಟುಕೊಂಡಿದ್ದ ದಂಪತಿ: ವಿಮಾನ ನಿಲ್ದಾಣದಲ್ಲಿ ಸೆರೆ

ಹೀಗೆ ಭಾರತಕ್ಕೆ ಆಗಮಿಸುತ್ತಿದ್ದಂತೆ ಉಸಿರು ಚೆಲ್ಲಿದ ವೃದ್ಧರೂ ಭಾರತ ಮೂಲದವರಾಗಿದ್ದು, ಅಮೆರಿಕಾ ಪಾಸ್‌ಪೋರ್ಟ್ ಹೊಂದಿದ್ದರು. ನ್ಯೂಯಾರ್ಕ್‌ನಿಂದ ಭಾರತಕ್ಕೆ ಬಂದ AI-116 ಏರ್ ಇಂಡಿಯಾ ವಿಮಾನದ ಇಕನಾಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದ್ದರು. ಈ ವಿಮಾನವೂ ಬೆಳಗ್ಗೆ 11.30ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಕೆಲ ವಿಳಂಬದಿಂದಾಗಿ ಮಧ್ಯಾಹ್ನ 2.10 ನಿಮಿಷಕ್ಕೆ ಮುಂಬೈ ತಲುಪಿತ್ತು.