ಶಾಲೆಗೆ ಹೋಗಲು ಜೀವ ಕೈಯಲ್ಲಿ ಹಿಡಿದು ನದಿ ದಾಟುವ ಮಕ್ಕಳು... ವಿಡಿಯೋ ವೈರಲ್
ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸೇತುವೆ ಇಲ್ಲದ ನದಿ ದಾಟುವ ಸಾಹಸ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಈ ದುಸ್ಥಿತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಜಗತ್ತಿನ ವಿವಿಧೆಡೆ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಹಾಗೂ ಶಿಕ್ಷಣ ಈಗಲೂ ಗಗನಕುಸುಮದಂತಿದೆ. ಶಿಕ್ಷಣಕ್ಕಾಗಿ ಮಕ್ಕಳು ತಮ್ಮ ಜೀವನವನ್ನೇ ಪಣಕ್ಕಿಡುವಂತಹ ಸ್ಥಿತಿ ಕೆಲ ಪ್ರದೇಶಗಳಲ್ಲಿ ಇದೆ. ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಶಿಕ್ಷಣಕ್ಕಾಗಿ ಶಾಲೆಗೆ ಹೋಗಬೇಕಾದರೆ, ಗುಡ್ಡಗಾಡು, ಕಲ್ಲು ಮುಳ್ಳುಗಳ ರಸ್ತೆ, ಸೇತುವೆ ಇಲ್ಲದ ನದಿ, ಅಥವಾ ಬಿದರಿನ ಸೇತುವೆ ಮುಂತಾದವುಗಳನ್ನು ದಾಟಿ ಶಾಲೆಗೆ ತಲುಪಬೇಕಾಗುತ್ತದೆ. ಬೆನ್ನಿನ ಮೇಲೆ ಮಣ ಭಾರದ ಬ್ಯಾಗ್ ಹೊತ್ತುಕೊಂಡು, ಮಕ್ಕಳು ಕಡಿದಾದ ಕಾಡಿನ ದಾರಿಯಲ್ಲಿ ಸಾಗಬೇಕಾದ ಸ್ಥಿತಿ ಹಲವು ಕಡೆಗಳಲ್ಲಿ ಇದೆ. ಅದೇ ರೀತಿ ಇಲ್ಲೊಂದು ಕಡೆ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸೇತುವೆ ಇಲ್ಲದ ನದಿ ದಾಟುವ ಸಾಹಸ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಈ ದುಸ್ಥಿತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಯಿಂದ ತುಂಬಿ ಹರಿಯುವ ನದಿಯೊಂದನ್ನು (Over Flowing River) ಮಕ್ಕಳು ಹಗ್ಗದ ಸಹಾಯದಿಂದ ನೇತಾಡಿಕೊಂಡು ದಾಟುತ್ತಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಮಕ್ಕಳು ನೀರಲ್ಲಿ ಕೊಚ್ಚಿ ಹೋಗುವುದಂತೂ ಪಕ್ಕಾ. ಶಿಕ್ಷಣಕ್ಕಾಗಿ ಮಕ್ಕಳು ಇಲ್ಲಿ ಜೀವ ಕೈಯಲ್ಲಿಡಿದು ಹರ ಸಾಹಸ ಮಾಡುತ್ತಿದ್ದಾರೆ. @ValaAfshar ಎಂಬ ಬಳಕೆದಾರರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಶಿಕ್ಷಣ (Education) ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುವಂತಹ ದೇಶದಲ್ಲಿ ವಾಸಿಸುತ್ತಿರುವ ನಾವು ನಿಜಕ್ಕೂ ಅದೃಷ್ಟವಂತರು, ವಿಶ್ವದ ಕೆಲವು ಭಾಗಗಳಲ್ಲಿ ಮಕ್ಕಳು ಶಿಕ್ಷಣ ಪಡೆಯುವ ಸಲುವಾಗಿ ತಮ್ಮ ಜೀವವನ್ನೇ ಅಪಾಯಕ್ಕೆ (ಒಡುತ್ತಿದ್ದಾರೆ' ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಈ ವಿಡಿಯೋವನ್ನು ನವಂಬರ್ 2 ರಂದು ಪೋಸ್ಟ್ ಮಾಡಲಾಗಿದ್ದು, ಎರಡು ಮಿಲಿಯನ್‌ಗೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಸೂಟು ಬೂಟು ಧರಿಸಿದ ಬಾಲಕಿಯರು ನದಿ ಪಕ್ಕ ನಿಂತಿದ್ದು, ನದಿಗೆ ಆ ತುದಿಯಿಂದ ಈ ತುದಿಗೆ ಹಗ್ಗವೊಂದನ್ನು ಕಟ್ಟಲಾಗಿದೆ. ಹಗ್ಗಕ್ಕೆ ಬಳ್ಳಿಯಂತೆ ವಸ್ತುವೊಂದನ್ನು ಸುತ್ತಿದ್ದು, ಈ ಬಳ್ಳಿಯಂತಹದನ್ನು ಕೈಯಲ್ಲಿ ಹಿಡಿದು ನೇತಾಡಿಕೊಂಡು ವಿದ್ಯಾರ್ಥಿಗಳು ನದಿಯ ಮತ್ತೊಂದು ಭಾಗವನ್ನು ತಲುಪುತ್ತಾರೆ.
ಪ್ರವಾಹದಿಂದ ಸೇತುವೆ ಮುಳುಗಡೆ: ಮಹಿಳೆಯ ಸಹಾಯಕ್ಕೆ ಬಂದ ನಿವೃತ್ತ ನರ್ಸ್, ಸುಸೂತ್ರ ಹೆರಿಗೆ!
ಈ ವಿಡಿಯೋ ನೋಡಿದ ಅನೇಕರು ಕೆಲ ಬಡ ರಾಷ್ಟ್ರಗಳ ದುಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಬಡ ರಾಷ್ಟ್ರಗಳ ಮಕ್ಕಳು ಹೇಗೆ ಸೂಟು ಬೂಟು ಧರಿಸಿ ನೀಟ್ ಆಗಿ ಸಿದ್ಧರಾಗಿದ್ದಾರೆ? ಅವರ ಪೋಷಕರು ಈ ವೆಚ್ಚವನ್ನು ಬರಿಸುವ ತಾಕತ್ತು ಹೊಂದಿದ್ದಾರೆಯೇ ಎಂದು ಮತ್ತೆ ಕೆಲವರು ಪ್ರಶ್ನಿಸಿದ್ದಾರೆ. ಈ ದೃಶ್ಯ ತುಂಬಾ ಭಯಾನಕವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಜೊತೆಯಾಗಿ ಸೇರಿಕೊಂಡು ಈ ಹಳ್ಳಿಗೆ ಸೇತುವೆಯನ್ನು ನಿರ್ಮಿಸಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ರಿಬ್ಬನ್ ಕಟ್ ಮಾಡ್ತಿದ್ದಂಗೆ ಬ್ರಿಡ್ಜ್ ಢಮಾರ್: ಕೆಳಗೆ ಬಿದ್ದ ಅಧಿಕಾರಿಗಳು
ಅಂದಹಾಗೆ ಈ ವೀಡಿಯೋ ನಮ್ಮ ಭಾರತದ್ದು ಮಾತ್ರ ಅಲ್ಲ. ಆದರೆ ಎಲ್ಲಿಯದು ಎಂದು ಖಚಿತವಾಗಿಲ್ಲ.