ಅಮೆರಿಕ-ಇರಾನ್ ಶಾಂತಿ ಒಪ್ಪಂದದ ನಂತರ ಹೋರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ಪುನರಾರಂಭವಾಗಿದೆ. ಇದು ಕರ್ನಾಟಕದಲ್ಲಿ ಡಾಂಬರು, ರಸಗೊಬ್ಬರ ಲಭ್ಯತೆಗೆ ಆಶಾಕಿರಣ ಮೂಡಿಸಿದ್ದು, ಷೇರುಪೇಟೆ ಮತ್ತು ರುಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡಿದೆ.

ನ್ಯೂಯಾರ್ಕ್‌ (ಜೂ.19): ಅಮೆರಿಕ ಮತ್ತು ಇರಾನ್‌ ಅಧ್ಯಕ್ಷರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ, 3.5 ತಿಂಗಳ ಬಳಿಕ ಹೋರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಓಡಾಟ ಆರಂಭವಾಗಿದೆ ಎಂದು ಕಡಲು ಸಂಚಾರ ಡೇಟಾ ಕಂಪನಿ ಲಾಯ್ಡ್ಸ್ ಲಿಸ್ಟ್ ಇಂಟೆಲಿಜೆನ್ಸ್ ಹೇಳಿದೆ. ಅತ್ತ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಕೂಡ, ‘ಇರಾನ್‌ ಬಂದರುಗಳಿಂದ ಸಂಚಾರ ಕೈಗೊಳ್ಳಲು ಹತ್ತಾರು ಹಡಗುಗಳಿಗೆ ನಮ್ಮ ಸೇನೆ ಅನುಮತಿಸಿದೆ’ ಎಂದಿದ್ದಾರೆ. ಅಮೆರಿಕದ ಸೇನೆ ತನ್ನ ಮೇಲೆ ದಾಳಿ ಮಾಡಿದಾಗಿನಿಂದ, ಜಗತ್ತಿಗೆ ಕಚ್ಚಾತೈಲ ಮತ್ತು ಅನಿಲ ಪೂರೈಸುವ ಪ್ರಮುಖ ಮಾರ್ಗವಾಗಿರುವ ಹೋರ್ಮುಜ್‌ಅನ್ನು ಇರಾನ್‌ ಮುಚ್ಚಿತ್ತು. ನಿರ್ಬಂಧದ ಹೊರತಾಗಿಯೂ ಸಾಗುತ್ತಿದ್ದ ನೌಕೆಗಳ ಮೇಲೆ ದಾಳಿ ಮಾಡುತ್ತಿದ್ದುದಲ್ಲದೆ, ತಮ್ಮ ಕಣ್ತಪ್ಪಿಸಿ ಯಾವೊಂದೂ ಹಡಗು ಸಾಗಬಾರದೆಂದು ಜಲಸ್ಫೋಟಕಗಳನ್ನೂ ಅಳವಡಿಸಿತ್ತು. ಇದೀಗ ಆ ಮಾರ್ಗವನ್ನು ಯುದ್ಧಪೂರ್ವ ಕಾಲದಂತೆ ಮುಕ್ತ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಹೋರ್ಮುಜ್‌ನಲ್ಲಿ ಹಡುಗು ಓಡಾಟ ಆರಂಭವಾದ ಬೆನ್ನಲ್ಲಿಯೇ, ರಾಜ್ಯದಲ್ಲಿ ರಸ್ತೆಗಳಿಗೆ ರಡಾಂಬರು ಕೊರತೆ ನಿವಾರಣೆಯಾಗುವ ನಿರೀಕ್ಷೆ ಹೆಚ್ಚಾಗಿದೆ. ರಸಗೊಬ್ಬರದ ಕಚ್ಚಾವಸ್ತು ಲಭ್ಯತೆ ಹೆಚ್ಚಳವಾಗುವ ಸಾಧ್ಯತೆಯೂ ದಟ್ಟವಾಗಿದೆ. ಅದರೊಂದಿಗೆ ಮನೆ, ಹೋಟೆಲ್‌ಗೆ ಗ್ಯಾಸ್‌ಗಳು ಇನ್ನಷ್ಟು ಸುಲಭವಾಗಿ ಸಿಗುವ ಸಾಧ್ಯತೆಯೂ ಇದೆ.

ಪೆಟ್ರೋಲ್‌ ಬೆಲೆ ತಕ್ಷಣಕ್ಕೆ ಇಳಿಕೆಯಿಲ್ಲ: ಕೇಂದ್ರ ಸಚಿವ ಗೋಪಿ

ತ್ರಿಶ್ಶೂರು (ಕೇರಳ): ‘ಯುದ್ಧ ಅಂತ್ಯದಿಂದ ಜಾಗತಿಕ ಕಚ್ಚಾ ತೈಲಗಳ ಬೆಲೆ ಕಡಿಮೆಯಾದ ಮಾತ್ರಕ್ಕೆ ಭಾರತದಲ್ಲಿ ತಕ್ಷಣವೇ ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿಮೆ ಇಳಿಸುವುದಕ್ಕೆ ಆಗುವುದಿಲ್ಲ’ ಎಂದು ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ರಾಜ್ಯ ಖಾತೆ ಸಚಿವ ಸುರೇಶ್‌ ಗೋಪಿ ಹೇಳಿದ್ದಾರೆ. ಗುರುವಾರ ಮಾತನಾಡಿದ ಅವರು, ‘ಇತ್ತೀಚೆಗೆ ಆಗಿರುವ ಬೆಲೆ ಏರಿಕೆಗಳಿಂದ ಲೀ.ಗೆ ಇಂಧನ ಬೆಲೆ 3.94 ರು.ಗಳಷ್ಟು ಏರಿಕೆ ಆಗಿದೆ. ಆದರೆ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ ಎನ್ನುವ ಕಾರಣಕ್ಕೆ ತಕ್ಷಣವೇ ದೇಶದಲ್ಲಿ ಬೆಲೆ ಇಳಿಸಲು ಸಾಧ್ಯವಿಲ್ಲ. ಹೋರ್ಮುಜ್‌ ಮೂಲಕ ತೈಲ ಪೂರೈಕೆ ಇನ್ನೂ ಯಥಾಸ್ಥಿತಿಗೆ ಬರಲು ಸಮಯ ಹಿಡಿಯುತ್ತದೆ. ಹೀಗಾಗಿ ದರ ಕಡಿತಕ್ಕೆ ಸಮಯ ಹಿಡಿಯುತ್ತದೆ’ ಎಂದು ಹೇಳಿದರು.

5ನೇ ದಿನವೂ ಷೇರುಪೇಟೆ ಚೇತರಿಕೆ, ರುಪಾಯಿ ಚೇತರಿಕೆ

ಮುಂಬೈ: ಮಧ್ಯಪ್ರಾಚ್ಯ ಯುದ್ಧ ಅಂತ್ಯ, ಕಚ್ಚಾ ತೈಲಗಳ ಬೆಲೆ ಇಳಿಕೆ ಬೆನ್ನಲ್ಲೇ ಸತತ 5ನೇ ದಿನವೂ ಷೇರುಪೇಟೆ ಚೇತರಿಸಿಕೊಂಡಿದೆ. ಗುರುವಾರದ ಅಂತ್ಯಕ್ಕೆ ಸೆನ್ಸೆಕ್ಸ್ 254.34 ಅಂಕಗಳ ಏರಿಕೆ ಕಂಡು 77, 409.98ರಲ್ಲಿ ಅಂತ್ಯವಾಗಿದೆ. ಇನ್ನು ನಿಫ್ಟಿ 82.30 ಅಂಕಗಳ ಹೆಚ್ಚಳದೊಂದಿಗೆ 24,148ರಲ್ಲಿ ಕೊನೆಗೊಂಡಿದೆ.

ರುಪಾಯಿ ಏರಿಕೆ: ಶಾಂತಿ ಒಪ್ಪಂದಕ್ಕೆ ಸಹಿ ಬೆನ್ನಲ್ಲೇ ಡಾಲರ್‌ ಎದುರು ರುಪಾಯಿ ಮೌಲ್ಯವೂ ಏರಿಕೆಯಾಗಿದೆ. 14 ಪೈಸೆ ಏರಿಕೆಯಾಗಿ ಗುರುವಾರದ ಅಂತ್ಯಕ್ಕೆ 94.36 ರು.ಗೆ ತಲುಪಿದೆ.