ಮಧ್ಯಪ್ರಾಚ್ಯ ಸಂಘರ್ಷದ ವೇಳೆ ಹೋರ್ಮುಜ್ ಜಲಸಂಧಿಯಲ್ಲಿ ಇರಾನ್ ಅಳವಡಿಸಿದ್ದ ಜಲಸ್ಪೋಟಕಗಳು ಈಗ ಅದಕ್ಕೇ ತಿರುಗುಬಾಣವಾಗಿವೆ. ಈ ಸ್ಫೋಟಕಗಳನ್ನು ಪತ್ತೆಹಚ್ಚಲು ಸಾಧ್ಯವಾಗದೆ, ಕದನ ವಿರಾಮದ ಹೊರತಾಗಿಯೂ ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವನ್ನು ತೆರೆಯಲು ಇರಾನ್ ಪರದಾಡುತ್ತಿದೆ.
ಇರಾನ್‌ಗೆ ತಾನೇ ಹೂತಿಟ್ಟ ಬಾಂಬ್‌ನಿಂದ ಸಂಕಷ್ಟ
ಟೆಹ್ರಾನ್: ಮಧ್ಯಪ್ರಾಚ್ಯ ಸಂಘರ್ಷದ ವೇಳೆ ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ತಡೆಯುವ ಉದ್ದೇಶದಿಂದ ತಾನೇ ಅಳವಡಿಸಿದ್ದ ಜಲಸ್ಪೋಟಕಗಳನ್ನು (ವಾಟರ್ ಮೈನ್) ಪತ್ತೆಹಚ್ಚಲು ಸಾಧ್ಯವಾಗದ ಸ್ಥಿತಿಗೆ ಇದೀಗ ಇರಾನ್ ತಲುಪಿದೆ. ಇದೇ ಕಾರಣಕ್ಕೆ ಹೋರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತಗೊಳಿಸಲು ಪರದಾಡುತ್ತಿದೆ.
ಇರಾನ್‌ನ ಕ್ರಮ ಪಾಕಿಸ್ತಾನದಲ್ಲಿ ನಡೆಯಲಿರುವ ಅಮೆರಿಕ ಜತೆಗಿನ ಶಾಂತಿ ಮಾತುಕತೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಅಮೆರಿಕವು ಆದಷ್ಟು ಶೀಘ್ರು ಹೋರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವಂತೆ ಇರಾನ್ ಮೇಲೆ ತೀವ್ರ ಒತ್ತಡ ಹಾಕುತ್ತಿದೆ. ಕಳೆದ ತಿಂಗಳು ಸಣ್ಣ ಸಣ್ಣ ಬೋಟುಗಳನ್ನು ಬಳಸಿ ಇರಾನ್ ಹೋರ್ಮುಜ್ ಜಲಸಂಧಿಯಲ್ಲಿ ಭಾರೀ ಪ್ರಮಾಣದಲ್ಲಿ ಜಲ ಸ್ಫೋಟಕಗಳನ್ನು ಅಳವಡಿಸಿತ್ತು. ಆದರೆ, ಈ ಜಲ ಸ್ಫೋಟಕಗಳನ್ನು ಎಲ್ಲೆಲ್ಲಿ ಅಳವಡಿಸಲಾಗಿದೆ ಎಂಬ ಕುರಿತು ಇರಾನ್‌ಗೆ ಸರಿಯಾದ ಮಾಹಿತಿ ಇಲ್ಲ. ವರದಿಗಳ ಪ್ರಕಾರ ಕೆಲ ಜಲಸ್ಫೋಟಕಗಳು ಅವು ತನ್ನಿಂತನಾಗಿಯೇ ಸ್ಥಳ ಬದಲಾಯಿಸುವ ರೀತಿಯಲ್ಲಿ ಅಳವಡಿಸಲಾಗಿತ್ತು. ಈಗ ಅದೇ ಇರಾನ್ ಪಾಲಿಗೆ ದೊಡ್ಡ ತಲೆನೋವು ತಂದಿಟ್ಟಿದೆ. ಈ ಸ್ಫೋಟಕಗಳನ್ನು ಪತ್ತೆ ಹೆಚ್ಚುವುದು ಸವಾಲಾಗಿ ಪರಿಣಮಿಸಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳಿಗೆ ಅಪಾಯ ತಪ್ಪಿದ್ದಲ್ಲ ಎನ್ನುವಂತಾಗಿದೆ.
ಈ ವಾರದ ಆರಂಭದಲ್ಲಿ 2 ವಾರಗಳ ಕದನ ವಿರಾಮಕ್ಕೆ ಸಮ್ಮತಿಸಿದ್ದ ಇರಾನ್, ಹೋರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಲು ಒಪ್ಪಿಕೊಂಡಿತ್ತು. ಆದರೆ, ಜಲಸ್ಪೋಟಕಗಳ ಕಾರಣದಿಂದ ಶನಿವಾರದವರೆಗೂ ಜಲಸಂಧಿಯನ್ನು ಎಲ್ಲಾ ಹಡಗುಗಗಳಿಗೆ ಮುಕ್ತಗೊಳಿಸಲು ವಿಫಲವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇದೇ ಕಾರಣಕ್ಕೆ ಹಡಗುಗಳ ಸಂಚಾರಕ್ಕೆ ಪ್ರತ್ಯೇಕ ಮಾರ್ಗವನ್ನೂ ಇರಾನ್ ಸೂಚಿಸಿದೆ. ವಿಶ್ವದ ಶೇ.25 ತೈಲ ಹೋರ್ಮುಜ್‌ನಿಂದ ಸಾಗಣೆ ಆಗುತ್ತದೆ.
ಹೋರ್ಮುಜ್ ತೆರವು ಆರಂಭಿಸಿದ್ದೇವೆ: ಟ್ರಂಪ್
ವಾಷಿಂಗ್ಟನ್: ಮಧ್ಯ ಪ್ರಾಚ್ಯ ಬಿಕ್ಕಟ್ಟು ಶಮನಕ್ಕೆ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ ನಡೆಯುತ್ತಿರುವ ನಡುವೆಯೇ 'ಹೋರ್ಮುಜ್ ಜಲಸಂಧಿಯ ತೆರವು ಕಾರ್ಯ ಅಂಭಿಸಿದೇವೆ. ಯುದ್ಧ ಆರಂಭದ ನಂತರ 2 ಅಮೆರಿಕ ಯುದ್ಧ ನೌಕೆಗಳು ಹೋರ್ಮುಜ್ ದಾಟಿವೆ. ಅವುಗಳ ಮೂಲಕ ತಂತ್ರಜ್ಞಾನ ಬಳಸಿ ಅಲ್ಲಿನ ಜಲಬಾಂಬ್ ತೆರವು ಆರಂಭಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಲ್ಲದೆ, 'ಖಾಲಿ ತೈಲ ಹಡಗುಗಳು ತೈಲಕ್ಕಾಗಿ ಅಮೆರಿಕದತ್ತ ಬರುತ್ತಿವೆ. ನಮ್ಮಲ್ಲಿ ಸೌದಿ ಅರೇಬಿಯಾಗಿಂತ ಹೆಚ್ಚಿನ ಪ್ರಮಾಣ ದಲ್ಲಿ ತೈಲ ಸಂಗ್ರಹವಿದೆ ಎಂದಿದ್ದಾರೆ. 'ಜಗತ್ತಿನ ದೊಡ್ಡ ತೈಲ ಟ್ಯಾಂಕರ್ ಗಳೂ ಸೇರಿದಂತೆ ಸಂಪೂರ್ಣ ಖಾಲಿಯಾ ಗಿರುವ ಹಡಗುಗಳು ಇದೀಗ ಅಮೆರಿಕದತ್ತ ಅತ್ಯುತ್ತಮ ತೈಲ ತುಂಬಿಸಿಕೊಳ್ಳಲು ಬರುತ್ತಿವೆ. ಜಗತ್ತಿನ ಎಲ್ಲಿಗೆ ಬೇಕಾದರೂ ತೈಲ ರಫ್ತು ಮಾಡಲು ಅಮೆರಿಕ ಸಿದ್ದವಾಗಿದೆ. ಅಷ್ಟೊಂದು ಪ್ರಮಾಣದಲ್ಲಿ ತೈಲ ನಮ್ಮಲಿದೆ' ಎಂದಿದ್ದಾರೆ. ಇದಲ್ಲದೆ, 'ಚೀನಾ, ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್, ಜರ್ಮನಿ ಮತ್ತು ಇತರ ಹಲವು ದೇಶಗಳು ಸೇರಿದಂತೆ ಪ್ರಪಂಚದಾದ್ಯಂತದ ದೇಶಗಳಿಗೆ ಅನುಕೂಲವಾಗುವಂತೆ ನಾವು ಈಗ ಹೋರ್ಮುಜ್ ಜಲಸಂಧಿಯನ್ನು ತೆರವುಗೊಳಿಸುವ ಪ್ರಕ್ರಿಯೆ ಪ್ರಾರಂಭಿಸುತ್ತಿದ್ದೇವೆ. ಆಶ್ಚರ್ಯಕರವಾಗಿ, ಅವರಿಗೆ ಈ ಕೆಲಸವನ್ನು ಸ್ವತಃ ಮಾಡಲು ಧೈರ್ಯ ಅಥವಾ ಇಚ್ಛಾಶಕ್ತಿ ಇಲ್ಲ ಎಂದು ಕುಟುಕಿದ್ದಾರೆ.
20,000 ಟನ್ ಎಲ್ಪಿಜಿ ಹೊತ್ತು ಹೋರ್ಮುಜ್ ದಾಟಿದ ಭಾರತದ 'ಜಗವಿಕ್ರಮ'
ನವದೆಹಲಿ:ಕದನ ವಿರಾಮ ಇದ್ದರೂ ಹೋರ್ಮುಜ್ ಸಂದಿಗ್ಧತೆ ಮುಂದುವರೆದಿರುವ ನಡುವೆ ಸುಮಾರು 20, 000 ಟನ್ ಎಲ್ ಪಿಜಿ ಹೊತ್ತ ಭಾರತದ ಮತ್ತೊಂದು ಎಲ್ ಪಿಜಿ ನೌಕೆ 'ಜಗವಿಕ್ರಮ', ಹೋರ್ಮುಜ್ ಜಲಸಂಧಿ ದಾಟಿ ಭಾರತದತ್ತ ಪ್ರಯಾಣಿಸಿದೆ. ಮುಂಬೈ ಮೂಲದ ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಕಂಪನಿಯ ಒಡೆತನದ ಈ ಹಡಗು 26,000 ಟನ್‌ಗಳಿಗಿಂತ ಹೆಚ್ಚು ತೂಕದ ಸಾಮರ್ಥವನ್ನು ಹೊಂದಿದ್ದು, ಸದ್ಯ 20,000 ಟನ್ ಎಲ್ಪಿಜಿ ಹೊತ್ತು ಪ್ರಯಾಣಿಸಿದೆ. ಈ ಮೂಲಕ ಯುದ್ಧದ ಬಳಿಕ ಹೋರ್ಮುಜ್ ದಾಟಿದ ಹಡಗುಗಳ ಸಂಖ್ಯೆ 9ಕ್ಕೇರಿಕೆಯಾಗಿದೆ. ಇನ್ನೂ 15 ಹಡಗುಗಳು ಅಲ್ಲಿಯೇ ಉಳಿದುಕೊಂಡಿವೆ.
ಇದನ್ನೂ ಓದಿ: ಕಿವಿಯೊಳಗೇ ಸಿಡಿದ ಜೆಬಿಎಲ್ ಇಯರ್ ಬಡ್: ಎಂಬಿಬಿಎಸ್ ವಿದ್ಯಾರ್ಥಿನಿಗೆ ಗಂಭೀರ ಗಾಯ


