ಲಂಕಾ ಅಧ್ಯಶ್ರ ಗೊಟಬಯ ರಾಜಪಕ್ಸ ನಿವಾಸದ ಎದುರು ಪ್ರತಿಭಟನೆ ಪ್ರತಿ ದಿನ 13 ಗಂಟೆಗಳಿಂದ ವಿದ್ಯುತ್ ಕಡಿತ, ಆಹಾರ, ತೈಲ ಯಾವುದು ಸಿಗುತ್ತಿಲ್ಲ ಗುಂಪು ಚದುರಿಸಲು ಆಶ್ರುವಾಯು ಬಳಕೆ, ಓರ್ವ ಗಂಭೀರ ಗಾಯ

ಕೊಲೊಂಬೊ(ಏ.01): ಶ್ರೀಲಂಕಾ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ. ಆಹಾರ ಸೇರಿದಂತೆ ಯಾವುದೇ ಉತ್ನನ್ನಗಳನ್ನು ಆಮದು ಮಾಡಿಕೊಳ್ಳಲು ಶ್ರೀಲಂಕಾ ಖಜಾನೆ ಖಾಲಿಯಾಗಿದೆ. ಇತ್ತ ಜನರು, ಔಷದಿ ಸಿಗದೆ, ಖರೀದಿಸಲು ಸಾಧ್ಯವಾಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಪ್ರತಿ ದಿನ 13 ಗಂಟೆ ಶ್ರೀಲಂಕಾ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಮುಳುಗಿದೆ. ಇದರಿಂದ ರೊಚ್ಚಿಗೆದ್ದಿರುವ ಜನರು ಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಗೊಟಬಯ ನಿವಾಸ ಎದುರು ಪ್ರತಿಭಟನೆ ಮಾಡಿದ ಲಂಕನ್ನರು ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಗೊಟಬಯ ನಿವಾಸದ ಮುಂದೆ ಭದ್ರತೆಗಾಗಿ ನಿಲ್ಲಿಸಿದ್ದ ಸೇನಾ ವಾಹನಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ಉದ್ವಿಘ್ನಗೊಳ್ಳುತ್ತಿದ್ದಂತೆ ಪೊಲೀಸರು ಆಶ್ರುವಾಯು, ಜಲ ಫಿರಂಗಿಗಳ ಮೂಲಕ ಗುಂಪು ಚದುರಿಸಿದ್ದಾರೆ.

Sri Lanka: ದ್ವೀಪ ರಾಷ್ಟ್ರ ಲಂಕಾ ದಿವಾಳಿ: ಒಂದು ಹೊತ್ತಿನ ಊಟಕ್ಕೂ ಜನರ ಪರದಾಟ

ಪೊಲೀಸರು ಪ್ರತಿಭಟನಾಕಾರರ ನಡುವಿನ ಚಕಮಕಿಯಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದಾನೆ. ಪಟ್ಟು ಬಿಡದ ಪ್ರತಿಭಟನಾ ಕಾರರು ತಕ್ಷಣವೇ ರಾಜಪಕ್ಸ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಶ್ರೀಲಂಕಾದ ಆರ್ಥಿಕ ಪರಿಸ್ಥಿತಿಯನ್ನು ಈ ಮಟ್ಟಕ್ಕೆ ಇಳಿಸಿ ದೇಶದಲ್ಲಿ ಆಹಾರಕ್ಕೂ ಹಾಹಾಕಾರ ಏಳುವಂತೆ ಮಾಡಿದ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ ನೀಡಲಿ ಎಂದು ಪ್ರತಿಬಟನೆ ಮುಂದುವರಿದಿದೆ.

ಪರಿಸ್ಥಿತಿ ನಿಯಂತ್ರಣಕ್ಕೆ ಪಡೆಯಲು ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಇನ್ನು ಪ್ರತಿಭಟನೆ ವೇಳೆ ಗೊಯಬಯ ರಾಜಪಕ್ಸ ನಿವಾಸದಲ್ಲಿ ಇರಲಿಲ್ಲ ಎಂದು ಎಎಫ್‌ಪಿ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಔಷಧಿ ಇಲ್ಲದೆ ಲಂಕಾದಲ್ಲಿ ಶಸ್ತ್ರಚಿಕಿತ್ಸೆ ಸ್ಥಗಿತ: ದ್ವೀಪ ರಾಷ್ಟ್ರಕ್ಕೆ ಭಾರತದ ನೆರವು!

ಶ್ರೀಲಂಕಾದಲ್ಲಿ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಲೇ ಇದ್ದು, ಇದೀಗ ದೇಶವ್ಯಾಪಿ ನಿತ್ಯ 13 ಗಂಟೆಗಳ ಕಾಲ ಪವರ್‌ ಕಟ್‌ ಘೋಷಿಸಲಾಗಿದೆ. ವಿದ್ಯುತ್‌ ಉತ್ಪಾದನೆಯ ಮೂಲವಾಗಿರುವ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಕಚ್ಚಾ ವಸ್ತುವಿನ ಕೊರತೆಯಾಗಿರುವ ಕಾರಣ, ವಿದ್ಯುತ್‌ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಕುಂಠಿತಗೊಂಡಿದೆ. ಹೀಗಾಗಿ ನಿತ್ಯ 7 ಗಂಟೆಗಳಷ್ಟಿದ್ದ ಪವರ್‌ ಕಟ್‌ ಅನ್ನು ಇದೀಗ 10 ಗಂಟೆಗಳಿಗೆ ವಿಸ್ತರಿಸಲಾಗಿತ್ತು. ಇದೀಗ 13 ಗಂಟೆಗೆ ವಿಸ್ತರಣೆ ಮಾಡಲಾಗಿದೆ.

ಶ್ರೀಲಂಕಾದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅವಶ್ಯಕ ವಸ್ತುಗಳಾದ ಅಕ್ಕಿ, ಹಾಲಿನ ಪುಡಿ, ಬೇಳೆಕಾಳು, ಎಲ್‌ಪಿಜಿ, ಸಕ್ಕರೆ ಸೇರಿದಂತೆ ಹಲವು ದಿನಬಳಕೆಯ ವಸ್ತುಗಳ ಬೆಲೆಯಲ್ಲಿ ಧಿಡೀರ್‌ ಏರಿಕೆಯಾಗಿದೆ. 400 ಗ್ರಾಂ ಹಾಲಿನ ಪುಡಿಯ ಬೆಲೆ 790 ಲಂಕಾ ರುಪಿಗೆ ತಲುಪಿದ್ದರೆ, 1 ಕೇಜಿ ಅಕ್ಕಿಯ ಬೆಲೆ 290 ಲಂಕಾ ರು.ನಷ್ಟಾಗಿದೆ. ಇನ್ನೊಂದು ತಿಂಗಳಲ್ಲಿ ಅದು 500 ರು. ತಲುಪುವ ಭೀತಿ ಇದೆ. ಉಳಿದಂತೆ 1 ಕೆಜಿ ಹಾಲಿನ ಪುಡಿ ಬೆಲೆ 1600 ರು., ಸಕ್ಕರೆ 290 ರು., 1 ಕಪ್‌ ಟೀ ಬೆಲೆ 100 ರು., ಗೋಧಿ ಹಿಟ್ಟು 160 ರು., ಕಾಳುಗಳು 270 ರು., ಪೆಟ್ರೋಲ್‌ 285, ಎಲ್‌ಪಿಜಿ 2000 ರು. ತಲುಪಿದೆ. ಜೊತೆಗೆ ಪೇಪರ್‌ ದೊರೆಯದೇ ಶಾಲೆಗಳು ಪರೀಕ್ಷೆ ನಡೆಸಲಾಗುತ್ತಿಲ್ಲ. ಈ ನಡುವೆ ಕೊರೋನಾ ಸಾಂಕ್ರಾಮಿಕದ ನಂತರ ಶ್ರೀಲಂಕಾದಲ್ಲಿ 5 ಲಕ್ಷ ಜನರು ಬಡತನ ರೇಖೆಗಿಂತ ಕೆಳಗೆ ಕುಸಿದಿದ್ದಾರೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾ ಈ ತೀವ್ರತೆಯನ್ನು ಎದುರಿಸಲು 38 ಸಾವಿರ ಕೋಟಿ ಸಾಲದ ಅಡಿಯಲ್ಲಿ ಮಾಸಿಕ ಇಂಧನ ಪೂರೈಕೆಯ ಜೊತೆಗೆ ತುರ್ತಾಗಿ ಡೀಸೆಲ್‌ ಒದಗಿಸುವಂತೆ ಮಾಡಿರುವ ಮನವಿಯನ್ನು ಭಾರತ ಒಪ್ಪಿಕೊಂಡಿದೆ. ಹಾಗಾಗಿ ಭಾರತ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 40 ಸಾವಿರ ಟನ್‌ ಡೀಸೆಲ್‌ ಅನ್ನು ಶೀಘ್ರದಲ್ಲೇ ಶ್ರೀಲಂಕಾಗೆ ಒದಗಿಸಲಿವೆ. ಈಗಾಗಲೇ ಶ್ರೀಲಂಕಾ ಸರ್ಕಾರ ಮತ್ತು ಭಾರತದ ಆಮದು ಮತ್ತು ರಫ್ತು ಬ್ಯಾಂಕ್‌ 38 ಸಾವಿರ ಕೋಟಿ(500 ಮಿ.ಡಾ) ಸಾಲದ ಒಪ್ಪಂದಕ್ಕೆ ಸಹಿ ಹಾಕಿವೆ.