ಔಷಧಿ ಇಲ್ಲದೆ ಲಂಕಾದಲ್ಲಿ ಶಸ್ತ್ರಚಿಕಿತ್ಸೆ ಸ್ಥಗಿತ: ದ್ವೀಪ ರಾಷ್ಟ್ರಕ್ಕೆ ಭಾರತದ ನೆರವು!
* ಕ್ಯಾಂಡಿ ಪೆರಡಿನಿಯಾ ಆಸ್ಪತ್ರೆಯಿಂದ ಸರ್ಜರಿಗೆ ಬ್ರೇಕ್
* ಔಷಧಿ ಇಲ್ಲದೆ ಲಂಕಾದಲ್ಲಿ ಶಸ್ತ್ರಚಿಕಿತ್ಸೆ ಸ್ಥಗಿತ!
* ಕಳವಳಕಾರಿ ಪರಿಸ್ಥಿತಿ ಬೆನ್ನಲ್ಲೇ ಭಾರತದ ಸಹಾಯಹಸ್ತ
ಕೊಲಂಬೊ(ಮಾ.30): ಆರ್ಥಿಕ ಮುಗ್ಗಟ್ಟು, ವಿದೇಶಿ ವಿನಿಮಯ ಕೊರತೆ ಕಾರಣ ವಿದೇಶಗಳಿಂದ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಲಾಗದ ಸ್ಥಿತಿಯಲ್ಲಿರುವ ಶ್ರೀಲಂಕಾದಲ್ಲಿ ಇದೀಗ ಆಸ್ಪತ್ರೆಗಳು ಶಸ್ತ್ರಚಿಕಿತ್ಸೆಯನ್ನೇ ಸ್ಥಗಿತಗೊಳಿಸುವ ಹಂತಕ್ಕೆ ತಲುಪಿವೆ.
ಲಂಕಾದ ಪ್ರಮುಖ ನಗರಗಳ ಪೈಕಿ ಒಂದಾದ ಕ್ಯಾಂಡಿ ನಗರದ ಪೆರಿಡೆನಿಯಾ ಆಸ್ಪತ್ರೆಯಲ್ಲಿ ಸೋಮವಾರದಿಂದಲೇ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನೂ ಸ್ಥಗಿತಗೊಳಿಸಿ ಪ್ರಕಟಣೆ ಹೊರಡಿಸಲಾಗಿದೆ. ಈ ಕುರಿತು ಸೋಮವಾರ ಸುತ್ತೋಲೆ ಹೊರಡಿಸಿರುವ ಆಸ್ಪತ್ರೆಯ ನಿರ್ದೇಶಕರು ‘ಅರಿವಳಿಕೆ ನೀಡಲು ಬಳಸುವ ಕೆಲ ಔಷಧ, ಶಸ್ತ್ರಚಿಕಿತ್ಸೆಗೆ ಬೇಕಾದ ಉಪಕರಣ ಮತ್ತು ಕೆಲ ಔಷಧಗಳು ಅಲಭ್ಯವಾಗಿರುವ ಕಾರಣ, ನಾವು ಸೋಮವಾರ ದಾಖಲಾಗಿರುವ ರೋಗಿಗಳೂ ಸೇರಿದಂತೆ ಯಾರಿಗೂ ಶಸ್ತ್ರಚಿಕಿತ್ಸೆ ಕೈಗೊಳ್ಳದೇ ಇರುವ ನಿರ್ಧಾರ ಕೈಗೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.
ತನ್ನ ಬಹುತೇಕ ಅಗತ್ಯಕ್ಕೆ ವಿದೇಶಗಳನ್ನೇ ನಂಬಿರುವ ಶ್ರೀಲಂಕಾ ಇದೀಗ ಸಾಲದ ಸುಳಿಯಲ್ಲಿ ಮುಳುಗಿದೆ. ಆದಾಯದ ಮೂಲವಾದ ಪ್ರವಾಸೋದ್ಯಮ ಮಲಗಿದೆ. ಪರಿಣಾಮ ವಿದೇಶಿ ವಿನಿಮಯ ಪೂರ್ತಿ ಕರಗಿ ಹೋಗಿದೆ. ವಿದೇಶಗಳಿಂದ ವಸ್ತುಗಳ ಖರೀದಿಗೂ ಹಣವಿಲ್ಲದಾಗಿದೆ. ಪರಿಣಾಮ ದೇಶದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯೂ ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕು ಹೈರಾಣಾಗಿದೆ.
ಭಾರತದ ನೆರವು:
ಈ ನಡುವೆ ಲಂಕಾ ಆಸ್ಪತ್ರೆಗಳ ಕರುಣಾಜನಕ ಕಥೆಯ ಬಗ್ಗೆ ಸ್ಪಂದಿಸಿರುವ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ನೆರವಿನ ಹಸ್ತ ಚಾಚಿದ್ದಾರೆ. ಸದ್ಯ ಲಂಕಾ ಭೇಟಿಯಲ್ಲಿರುವ ಜೈಶಂಕರ್, ಲಂಕಾದಲ್ಲಿನ ಭಾರತೀಯ ಹೈಕಮೀಷನರ್ ಗೋಪಾಲ್ ಬಾಗ್ಲೇ ಅವರಿಗೆ, ಭಾರತ ಯಾವ ರೀತಿಯಲ್ಲಿ ನೆರವಾಗಬಹುದು ಎಂಬುದನ್ನು ಚರ್ಚಿಸಿ, ಪರಿಹಾರ ಒದಗಿಸುವಂತೆ ಸೂಚಿಸಿದ್ದಾರೆ.
ಭಾರತದಿಂದ ಮತ್ತೆ $1 ಬಿಲಿಯನ್ ನೆರವು ಕೇಳಿದ ಶ್ರೀಲಂಕಾ!
ಒಂದು ಕೆಜಿ ಅಕ್ಕಿಗೆ 500 ರೂಪಾಯಿ, 500 ಗ್ರಾಂ ಹಾಲಿನ ಪುಡಿ ಬೆಲೆ 790 ರೂಪಾಯಿ, ಒಂದು ಕೆಜಿ ಸಕ್ಕರೆ 290 ರೂಪಾಯಿ, ಒಂದು ಲೀಟರ್ ಪೆಟ್ರೋಲ್ ಬೆಲೆ 300 ರೂಪಾಯಿ. ಇದು ಶ್ರೀಲಂಕಾದಲ್ಲಿನ ಆರ್ಥಿಕ ಪರಿಸ್ಥಿತಿ(Srilanka Economic Crisis). ಕಂಡು ಕೇಳರಿಯದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾ ಎಲ್ಲಾ ರಾಷ್ಟ್ರಗಳಲ್ಲಿ ನೆರವು ಬೇಡುತ್ತಿದೆ. ಈಗಾಗಲೇ ಭಾರತ(India) ಅಗತ್ಯ ವಸ್ತುಗಳ ಖರೀದಿಗೆ 1 ಬಿಲಿಯನ್ ಅಮೆರಿಕನ್ ಡಾಲರ್ ಹಣ ಸಾಲ ನೀಡಿದೆ. ಇದೀಗ ಮತ್ತೆ 1 ಬಿಲಿಯನ್ ಅಮೆರಿಕನ್ ಡಾಲರ್ ನೆರವು(Credit) ನೀಡಿ ಎಂದು ಭಾರತಕ್ಕೆ ಮನವಿ ಮಾಡಿದೆ.
ವಿದೇಶಿ ವಿನಿಮಯದಲ್ಲಿ ಶೇಕಡಾ 70 ರಷ್ಟು ಕುಸಿತ ಕಂಡಿರುವ ಶ್ರೀಲಂಕಾದಲ್ಲಿ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಭಾರತ ಈಗಾಗಲೇ ನೆರವು ನೀಡಿದರೂ ಸದ್ಯದ ಪರಿಸ್ಥಿತಿಯಲ್ಲಿ ಶ್ರೀಲಂಕಾಗೆ ಸಾಕಾಗುತ್ತಿಲ್ಲ. ಹೀಗಾಗಿ ಮತ್ತೆ 1 ಬಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡುವಂತೆ ಭಾರತವನ್ನು ಕೇಳಿಕೊಂಡಿದೆ. ಭಾರತದ ವಿದೇಶಾಂಗ ಸಚಿವ ಹಾಗೂ ಶ್ರೀಲಂಕಾ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.
ಲಂಕಾಗೆ 40ಸಾವಿರ ಟನ್ ಡೀಸೆಲ್ ನೀಡಿ ನೆರವಾದ ಭಾರತ
ಭಾರತ ಹಾಗೂ ಶ್ರೀಲಂಕಾ ವಿದೇಶಾಂಗ ಸಚಿವರು ಮಹತ್ವದ ಮಾತುಕತೆ ನಡೆಸಿದ್ದಾರೆ. ಆದರೆ ಈ ಮಾಹಿತಿಗಳನ್ನು ಬಹಿರಂಗಪಡಿಸಲು ಉಭಯ ದೇಶದ ನಾಯಕರು ನಿರಾಕರಿಸಿದ್ದಾರೆ. ಮೂಲಗಳ ಪ್ರಕಾರ ಶ್ರೀಲಂಕಾಗೆ ಮತ್ತೆ ನೆರವು ನೀಡಲು ಭಾರತದ ಮುಂದಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ
ಆಹಾರ ಧಾನ್ಯಗಳು ಸೇರಿದಂತೆ ವಿದೇಶಗಳಿಂದ ಯಾವ ವಸ್ತುಗಳನ್ನು ಖರೀದಿಸಲು ಶ್ರೀಲಂಕಾ ಬಳಿ ನಯಾ ಪೈಸೆ ಇಲ್ಲದಾಗಿದೆ. ಹಣದುಬ್ಬರದಿಂದ ಜನರು ಕಂಗಾಲಾಗಿದ್ದಾರೆ.ಶ್ರೀಲಂಕಾದ ಪ್ರಮುಖ ಆದಾಯ ಮೂಲ ಪ್ರವಾಸೋದ್ಯಮ. ಆದರೆ ಕೋವಿಡ್‌ನಿಂದಾಗಿ ಕಳೆದ 3 ವರ್ಷಗಳಿಂದ ಈ ಉದ್ಯಮ ಪೂರ್ಣ ನೆಲಕಚ್ಚಿದೆ. ಮತ್ತೊಂದೆಡೆ ಶ್ರೀಲಂಕಾ ತನ್ನ ಬಹುತೇಕ ವಸ್ತುಗಳಿಗಾಗಿ ವಿದೇಶಗಳನ್ನೇ ಅವಲಂಬಿಸಿದೆ. ಪ್ರತಿಯೊಂದಕ್ಕೂ ಡಾಲರ್ ಮೂಲಕವೇ ಹಣ ಪಾವತಿ ಮಾಡಬೇಕು. ಆದರೆ ಆದಾಯ ಮೂಲ ಬತ್ತಿಹೋದ ಕಾರಣ, ದೇಶ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದೆ. ವಿದೇಶಿ ವಿನಿಮಯ ಪೂರ್ಣ ಕರಗಿಹೋಗಿದೆ. ವಿದೇಶಗಳಿಂದ ಅಗತ್ಯ ವಸ್ತುಗಳ ಖರೀದಿಗೂ ಹಣ ಇಲ್ಲದಾಗಿದೆ. ಹೀಗೆ ಅಗತ್ಯ ವಸ್ತು ಪೂರೈಕೆ ಕಡಿತಗೊಂಡ ಕಾರಣ ಅವುಗಳ ಬೆಲೆ ಗಗನಕ್ಕೇರಿದೆ.
ಶ್ರೀಲಂಕಾದಲ್ಲಿ ಆರ್ಥಿಕ ಸ್ಥಿತಿ ಭೀಕರ: ತಮಿಳುನಾಡಿನ ರಾಮೇಶ್ವರಂಗೆ 6 ನಿರಾಶ್ರಿತರ ಆಗಮನ!
ಲಂಕಾದಲ್ಲಿ ಬದುಕು ದುಸ್ತರವಾದ ಬೆನ್ನಲ್ಲೇ, ಅಲ್ಲಿನ ತಮಿಳು ಕುಟುಂಬಗಳು ಬೋಟ್ ಮಾಲೀಕರಿಗೆ ಹಣ ಕೊಟ್ಟು ಭಾರತಕ್ಕೆ ವಲಸೆ ಬರುತ್ತಿವೆ. ಹಸಿವಿನಿಂದ ಸಾಯುವ ಬದಲು ಭಾರತದ ಜೈಲಿನಲ್ಲಾದರು ಇರುತ್ತೇವೆ ಎಂದು ಭಾರತ ರಾಮೇಶ್ವರಂ ಸೇರಿದಂತೆ ತಮಿಳುನಾಡಿನ ಕರಾವಳಿ ತೀರಕ್ಕೆ ಅಕ್ರಮವಾಗಿ ಆಗಮಿಸುತ್ತಿದ್ದಾರೆ.
ತೀವ್ರ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಪರಿಣಾಮ ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್‌ನಂಥ ಅಗತ್ಯವಸ್ತುಗಳ ಭಾರೀ ಕೊರತೆ ಉಂಟಾಗಿದೆ. ಹೀಗಾಗಿ ಪೆಟ್ರೋಲ್ ಬಂಕ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತ ಜನರು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಅದು ಹಿಂಸಾಚಾರಕ್ಕೆ ತಿರುಗಿದೆ. ಹೀಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಪೆಟ್ರೋಲ್ ಬಂಕ್‌ಗಳಲ್ಲಿ ಸೇನೆ ನಿಯೋಜಿಸಿ ಶ್ರೀಲಂಕಾ ಆದೇಶ ಹೊರಡಿಸಿದೆ.
ತೈಲ ಖರೀದಿಗಾಗಿ ಸರದಿ ಸಾಲಿನಲ್ಲಿ ನಿಂತ ಇಬ್ಬರು ಸಾವನ್ನಪಿದ ಘಟನೆಯೂ ಶ್ರೀಲಂಕಾದಲ್ಲಿ ನಡೆದಿದೆ. ಲಂಕಾ ಪರಿಸ್ಥಿತ ಘನಘೋರವಾಗಿದೆ.