Sri Lanka: ದ್ವೀಪ ರಾಷ್ಟ್ರ ಲಂಕಾ ದಿವಾಳಿ: ಒಂದು ಹೊತ್ತಿನ ಊಟಕ್ಕೂ ಜನರ ಪರದಾಟ
* ಲಂಕಾದಲ್ಲಿ ನಿತ್ಯ 10 ತಾಸು ಪವರ್ ಕಟ್
* ವಿದ್ಯುತ್ ಉತ್ಪಾದಿಸುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಚ್ಚಾ ವಸ್ತು ಕೊರತೆ
* ವಿದೇಶದಿಂದ ತೈಲ ತಂದ ಹಡಗುಗಳಿಗೆ ಪಾವತಿಸಲೂ ಇಲ್ಲ ಅಗತ್ಯ ಹಣ
ಕೊಲಂಬೊ(ಮಾ.31): ನೆರೆಯ ಶ್ರೀಲಂಕಾದಲ್ಲಿ(Sri Lanka) ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಲೇ ಇದ್ದು, ಇದೀಗ ದೇಶವ್ಯಾಪಿ ನಿತ್ಯ 10 ಗಂಟೆಗಳ ಕಾಲ ಪವರ್ ಕಟ್ ಘೋಷಿಸಲಾಗಿದೆ. ವಿದ್ಯುತ್(Electricity) ಉತ್ಪಾದನೆಯ ಮೂಲವಾಗಿರುವ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಚ್ಚಾ ವಸ್ತುವಿನ ಕೊರತೆಯಾಗಿರುವ ಕಾರಣ, ವಿದ್ಯುತ್ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಕುಂಠಿತಗೊಂಡಿದೆ. ಹೀಗಾಗಿ ನಿತ್ಯ 7 ಗಂಟೆಗಳಷ್ಟಿದ್ದ ಪವರ್ ಕಟ್ ಅನ್ನು ಇದೀಗ 10 ಗಂಟೆಗಳಿಗೆ ವಿಸ್ತರಿಸಲಾಗಿದೆ.
ದೇಶದಲ್ಲಿ ಆರ್ಥಿಕತೆ ಪೂರ್ಣ ಕುಸಿದಿರುವ ಕಾರಣ ವಿದೇಶಿ ವಿನಿಮಯ(Foreign Exchange) ಸಂಗ್ರಹ ಪೂರ್ತಿ ಕರಗಿಹೋಗಿದೆ. ಹೀಗಾಗಿ ವಿದೇಶಗಳಿಂದ ಯಾವುದೇ ವಸ್ತುಗಳ ಖರೀದಿಗೆ ಅಗತ್ಯವಾದ ವಿದೇಶಿ ಕರೆನ್ಸಿ ಇಲ್ಲದ ಕಾರಣ, ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಕಚ್ಚಾವಸ್ತು ಖರೀದಿ ಅಸಾಧ್ಯವಾಗಿದೆ. ಹೀಗಾಗಿ ದೇಶದಲ್ಲಿ ಭಾರೀ ಇಂಧನ(Fuel) ಕೊರತೆ ಕಾಣಿಸಿಕೊಂಡಿದೆ. ನಿತ್ಯ 750 ಮೆಗಾವ್ಯಾಟ್‌ನಷ್ಟು ವಿದ್ಯುತ್ ಕೊರತೆ ಇದೆ ಎಂದು ಸರ್ಕಾರ ಹೇಳಿದೆ.
Sri Lanka Crisis ಭಾರತದಿಂದ ಮತ್ತೆ $1 ಬಿಲಿಯನ್ ನೆರವು ಕೇಳಿದ ಶ್ರೀಲಂಕಾ!
ದುಡ್ಡಿಲ್ಲ:
ಈ ನಡುವೆ ವಿದೇಶಗಳಿಂದ(Foreign) ಆಮದು ಮಾಡಿಕೊಂಡ ಡೀಸೆಲ್ ದೇಶದ ಕರಾವಳಿಗೆ ಬಂದಿದ್ದರೂ, ಅದಕ್ಕೆ ಪಾವತಿಸಲು ಹಣವಿಲ್ಲ. ಹೀಗಾಗಿ ತೈಲ ಖರೀದಿಗಾಗಿ ಬುಧವಾರ ಮತ್ತು ಗುರುವಾರ ಯಾರೂ ಬಂಕ್‌ಗಳ ಮುಂದೆ ಸರದಿ ನಿಲ್ಲಬಾರದು ಎಂದು ಸರ್ಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್, ಬಳಕೆದಾರರಿಗೆ ಸೂಚಿಸಿದೆ. ಶುಕ್ರವಾರದ ಬಳಿಕವಷ್ಟೇ ಹಣ ಪಾವತಿ ಮಾಡಿ, ಇಂಧನ ಇಳಿಸಿಕೊಳ್ಳುವುದು ಸಾಧ್ಯವಾಗಲಿರುವ ಕಾರಣ ಅಲ್ಲಿಯವರೆಗೂ ಇಂಧನ ಲಭ್ಯವಾಗುವುದಿಲ್ಲ ಎಂದು ಹೇಳಿದೆ. ಈ ನಡುವೆ ಸಾಲದ ರೂಪದಲ್ಲಿ ಭಾರತ(India) ಪೂರೈಸಲಿರುವ ತೈಲ, ಗುರುವಾರ ದೇಶವನ್ನು ತಲುಪಲಿದೆ ಎಂದು ಇಂಧನ ಸಚಿವ ಗಮಿನಿ ಲೊಕುಗೆ ಹೇಳಿದ್ದಾರೆ.
ದ್ವೀಪ ರಾಷ್ಟ್ರ ಲಂಕಾ ದಿವಾಳಿ
1948ರ ಆರ್ಥಿಕ ಬಿಕ್ಕಟ್ಟಿನ ನಂತರ ಇದೇ ಮೊದಲ ಬಾರಿಗೆ ಆರ್ಥಿಕತೆ ಅಲ್ಲೋಲಕಲ್ಲೋಲವಾಗಿ ದ್ವೀಪ ರಾಷ್ಟ್ರ ಶ್ರೀಲಂಕಾ ಅತಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಆಹಾರ ವಸ್ತುಗಳ ಕೊರತೆ, ನಿರುದ್ಯೋಗ, ಇಂಧನ ಅಭಾವ, ವಿದೇಶಿ ಕರೆನ್ಸಿಯ ಕೊರತೆಯಿಂದ ಇಡೀ ದೇಶವೇ ದಿವಾಳಿಯಂಚಿಗೆ ತಲುಪಿದೆ. ಮೂರು ಹೊತ್ತಿನ ಊಟಕ್ಕೂ ಗತಿಯಿಲ್ಲದೇ ಜನ ನೆರೆಯ ದೇಶಗಳತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಏನು, ಲಂಕಾದಲ್ಲಿ ಏನಾಗುತ್ತಿದೆ ಮತ್ತಿತರ ಕುತೂಹಲಕರ ಮಾಹಿತಿ ಇಲ್ಲಿದೆ.
ಲಂಕಾದಲ್ಲಿ ಏನಾಗುತ್ತಿದೆ?
ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕತೆ ಕುಸಿತವು ಜನಸಾಮಾನ್ಯರ ನಿತ್ಯ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅವಶ್ಯಕ ವಸ್ತುಗಳಾದ ಅಕ್ಕಿ, ಹಾಲಿನ ಪುಡಿ, ಬೇಳೆಕಾಳು, ಎಲ್‌ಪಿಜಿ, ಸಕ್ಕರೆ ಸೇರಿದಂತೆ ಹಲವು ದಿನಬಳಕೆಯ ವಸ್ತುಗಳ ಬೆಲೆಯಲ್ಲಿ ಧಿಡೀರ್ ಏರಿಕೆಯಾಗಿದೆ. 400 ಗ್ರಾಂ ಹಾಲಿನ ಪುಡಿಯ ಬೆಲೆ 790 ಲಂಕಾ ರುಪಿಗೆ ತಲುಪಿದ್ದರೆ, 1 ಕೇಜಿ ಅಕ್ಕಿಯ ಬೆಲೆ 290 ಲಂಕಾ ರು.ನಷ್ಟಾಗಿದೆ. ಇನ್ನೊಂದು ತಿಂಗಳಲ್ಲಿ ಅದು 500 ರು. ತಲುಪುವ ಭೀತಿ ಇದೆ. ಉಳಿದಂತೆ 1 ಕೆಜಿ ಹಾಲಿನ ಪುಡಿ ಬೆಲೆ 1600 ರು., ಸಕ್ಕರೆ 290 ರು., 1 ಕಪ್ ಟೀ ಬೆಲೆ 100 ರು., ಗೋಧಿ ಹಿಟ್ಟು 160 ರು., ಕಾಳುಗಳು 270 ರು., ಪೆಟ್ರೋಲ್ 285, ಎಲ್‌ಪಿಜಿ 2000 ರು. ತಲುಪಿದೆ. ಜೊತೆಗೆ ಪೇಪರ್ ದೊರೆಯದೇ ಶಾಲೆಗಳು ಪರೀಕ್ಷೆ ನಡೆಸಲಾಗುತ್ತಿಲ್ಲ. ಈ ನಡುವೆ ಕೊರೋನಾ ಸಾಂಕ್ರಾಮಿಕದ ನಂತರ ಶ್ರೀಲಂಕಾದಲ್ಲಿ 5 ಲಕ್ಷ ಜನರು ಬಡತನ ರೇಖೆಗಿಂತ ಕೆಳಗೆ ಕುಸಿದಿದ್ದಾರೆ.
ಶ್ರೀಲಂಕಾ ಬಿಕ್ಕಟ್ಟಿಗೆ ಕಾರಣ ಏನು?
ಶ್ರೀಲಂಕಾದಲ್ಲಿ ಆರ್ಥಿಕತೆ ಪತನಗೊಳ್ಳಲು ವಿದೇಶಿ ಕರೆನ್ಸಿಯ ಕೊರತೆಯೇ ಪ್ರಮುಖ ಕಾರಣ. ಶ್ರೀಲಂಕಾ ಆಮದಿನ ಮೇಲೆಯೇ ಅವಲಂಬಿಸಿದೆ. ಅದು ಪೆಟ್ರೋಲ್, ಡೀಸೆಲ್, ಆಹಾರ ವಸ್ತು, ಪೇಪರ್, ಸಕ್ಕರೆ, ಕಾಳುಗಳು, ಔಷಧ, ಸಾರಿಗೆ ಸಲಕರಣೆ ಮತ್ತಿತರ ಅನೇಕ ಅಗತ್ಯ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಆದರೆ ಡಾಲರ್ ಎದುರು ಶ್ರೀಲಂಕಾ ರುಪಾಯಿ ಮೌಲ್ಯ ಭಾರೀ ಇಳಿಕೆಯಾಗಿ ವಿದೇಶಿ ಕರೆನ್ಸಿಯ ತೀವ್ರ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಈ ಅಗತ್ಯ ವಸ್ತುಗಳನ್ನು ಖರೀದಿಸಲು ಹಣದ ಕೊರತೆ ಎದುರಾಗಿದೆ.
ಪ್ರವಾಸೋದ್ಯಮ ಸ್ಥಗಿತ
ದ್ವೀಪ ರಾಷ್ಟ್ರ ಶ್ರೀಲಂಕಾದ ಮುಖ್ಯ ಆದಾಯವೇ ಪ್ರವಾಸೋದ್ಯಮ. ಜಿಡಿಪಿಯ(GDP) ಶೇ.10ರಷ್ಟು ಆದಾಯ ಪ್ರವಾಸೋದ್ಯಮದಿಂದ(Tourism) ಬರುತ್ತದೆ. ಆದರೆ ಕೊರೋನಾ ಸಾಂಕ್ರಾಮಿಕ ಕಾರಣದಿಂದ ಕಳೆದ ಎರಡ್ಮೂರು ವರ್ಷಗಳಿಂದ ಪ್ರವಾಸೋದ್ಯಮ ಸ್ಥಗಿತಗೊಂಡಿದೆ. ವಿದೇಶಿ ಯಾತ್ರಿಕರ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಹೀಗಾಗಿ 2019ರಲ್ಲಿ 7.5 ಬಿಲಿಯನ್ ಇದ್ದ ಆದಾಯ ಏಕಾಏಕಿ 2.8 ಬಿಲಿಯನ್‌ಗೆ ತಗ್ಗಿದೆ. ಇದು ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದೆ.
ವಿದೇಶಿ ಸಾಲದ ಸುಳಿಯಲ್ಲಿ ಲಂಕಾ
ಚೀನಾದೊಂದಿಗೆ(China) ಸುಮಾರು 5 ಶತಕೋಟಿಯಷ್ಟು ಬೃಹತ್ ವಿದೇಶಿ ಸಾಲದ ಹೊರೆ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣ. ಲಂಕಾ 2021ರಲ್ಲಿ ಬೀಜಿಂಗ್‌ನಿಂದ ಪಡೆದ ಒಟ್ಟು ಸಾಲದ ಪೈಕಿ ಕೇವಲ 1 ಬಿಲಿಯನ್ ಸಾಲವನ್ನು ಮರುಪಾವತಿಸಿದೆ. ಭಾರತ ಮತ್ತು ಜಪಾನ್(Japan) ಸೇರಿದಂತೆ ಅನೇಕ ವಿದೇಶಿ ಮೂಲಗಳಿಂದ ದೊಡ್ಡ ಪ್ರಮಾಣದ ಹಣವನ್ನು ಸಾಲವಾಗಿ ಪಡೆದಿದೆ. ಇದು ಲಂಕಾವನ್ನು ಆರ್ಥಿಕ ಪತನಕ್ಕೆ ತಳ್ಳಿದೆ. ಹಣದುಬ್ಬರ ಶೇ.17.5ಕ್ಕೆ ಏರಿಕೆಯಾಗಿದೆ. ಇದು ಇಡೀ ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಪ್ರಮಾಣದ ಹಣದುಬ್ಬರವಾಗಿತ್ತು.
ವಿದೇಶಿ ಬಂಡವಾಳ ಹೂಡಿಕೆ ಇಳಿಮುಖ
2018ರಲ್ಲಿ ಶೀಲಂಕಾದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್‌ಡಿಐ) 1.6 ಶತಕೋಟಿ ಡಾಲರ್ ಇತ್ತು. 2019ರಲ್ಲಿ ಇದು 793 ದಶಲಕ್ಷ ಡಾಲರ್‌ಗೆ ಮತ್ತು 2020ರಲ್ಲಿ 548 ದಶಲಕ್ಷ ಡಾಲರಿಗೆ ಇಳಿಕೆಯಾಯಿತು. ಎಫ್‌ಡಿಐ ಇಳಿಕೆಯ ಬೆನ್ನಲ್ಲೇ, ಮೀಸಲು ನಿಧಿಯಲ್ಲಿದ್ದ ವಿದೇಶಿ ಕರೆನ್ಸಿಯೂ ಇಳಿಮುಖವಾಯಿತು. ಇನ್ನೊಂದೆಡೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಪಡೆಯಲೂ ಲಂಕಾ ನಿರಾಕರಿಸಿದ್ದು, ಅದರ ಆರ್ಥಿಕ ಪತನಕ್ಕೆ ಕೊನೇ ಮೊಳೆ ಹೊಡೆದಂತಾಯಿತು.
ಸಾವಯವ ಕೃಷಿ ನೀಡಿದ ಪೆಟ್ಟು
ಕೃಷಿಯನ್ನು ಶೇ.100ರಷ್ಟು ಸಾವಯವವಾಗಿಸಬೇಕು ಎಂಬ ಉದ್ದೇಶದಿಂದ ದೇಶಾದ್ಯಂತ ರಾಸಾಯನಿಕ ಗೊಬ್ಬರಗಳಿಗೆ ಸರ್ಕಾರ ನಿಷೇಧ ಹೇರಿದೆ. ಪರಿಣಾಮ ಆಹಾರ ವಸ್ತುಗಳ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಬೆಲೆ ಏರಿಕೆಯಾಗಿದೆ. ವಸ್ತುಗಳ ಬೆಲೆಗೆ ಕಡಿವಾಣ ಹಾಕಿದ್ದೂ ಪೂರೈಕೆ ಕೊರತೆಗೆ ಕಾರಣವಾಗಿದೆ. ಇದರ ಜತೆಗೆ ಆಹಾರ ಮಾಫಿಯಾ ಅತ್ಯಗತ್ಯ ವಸ್ತುಗಳನ್ನು ಕಳ್ಳದಾಸ್ತಾನು ಮಾಡಿದ ಕಾರಣ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ.
ಸರ್ಕಾರ ಏನು ಮಾಡುತ್ತಿದೆ?
ಲಂಕಾ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಊಹಾಪೋಹಗಳು ಹರಡಿದ್ದರಿಂದ ಅಗತ್ಯ ವಸ್ತುಗಳ ಅಕ್ರಮ ಸಂಗ್ರಹಣೆಯಾಗಿದೆ. ಹೀಗಾಗಿ ಪೆಟ್ರೋಲ್, ಕಾಗದ, ಆಹಾರೋತ್ಪನ್ನಗಳು ಸೇರಿದಂತೆ ಅಗತ್ಯವಸ್ತುಗಳ ಪೂರೈಕೆ ಕೊರತೆಯಾಗಿ ಬೆಲೆಯೂ ಏರುತ್ತಿದೆ ಎಂದು ಸರ್ಕಾರ ದೂರಿದೆ. ಅಲ್ಲದೆ ಈ ಸಂಬಂಧ 2021ರಲ್ಲಿ ಸುಗ್ರೀವಾಜ್ಞೆ ಮೂಲಕ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿದೆ. ಈ ಮೂಲಕ ತುರ್ತು ಪರಿಸ್ಥಿತಿಯಲ್ಲಿ, ವರ್ತಕರಿಂದ ಅಕ್ರಮ ಆಹಾರ ಸಾಮಗ್ರಿಗಳನ್ನು ವಶಪಡಿಸಿಕೊಂಡು ಅವುಗಳನ್ನು ನ್ಯಾಯಯುತ ಬೆಲೆಯಲ್ಲಿ ಗ್ರಾಹಕರಿಗೆ ಪೂರೈಸಲು ಸೇನೆಗೆ ಜವಾಬ್ದಾರಿ ನೀಡಿದೆ. ಇಷ್ಟೆಲ್ಲಾ ಕ್ರಮಗಳ ಹೊರತಾಗಿಯೂ ಇದು ಅಕ್ರಮ ದಾಸ್ತಾನಾಗಿ ಜನಸಾಮಾನ್ಯರು ಪರದಾಡುತ್ತಿದ್ದಾರೆ.
ಶ್ರೀಲಂಕಾದಲ್ಲಿ ಆರ್ಥಿಕ ಸ್ಥಿತಿ ಭೀಕರ: ತಮಿಳುನಾಡಿನ ರಾಮೇಶ್ವರಂಗೆ 6 ನಿರಾಶ್ರಿತರ ಆಗಮನ!
ಭಾರತಕ್ಕೆ ವಲಸೆ ಹಚ್ಚಳ
ಆರ್ಥಿಕತೆ ಕುಸಿದುಬಿದ್ದ ಪರಿಣಾಮ ಶ್ರೀಲಂಕಾದಲ್ಲಿ ಬದುಕು ದುಸ್ತರವಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೆ ಸರದಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಒಂದು ಹೊತ್ತಿನ ಊಟಕ್ಕೂ(Food) ಹರಸಾಹಸ ಪಡಬೇಕಾದ ಸ್ಥಿತಿ ಬಂದಿದೆ. ಹೀಗಾಗಿ ಕಂಗೆಟ್ಟ ಜನರು ಭಾರತಕ್ಕೆ ನಿರಾಶ್ರಿತರಾಗಿ ವಲಸೆ ಆರಂಭಿಸಿದ್ದಾರೆ. ಅಲ್ಲಿನ ತಮಿಳು ಕುಟುಂಬಗಳು ಬೋಟ್ ಮಾಲೀಕರಿಗೆ 50000 ರು.ವರೆಗೂ ಹಣ ಕೊಟ್ಟು ಭಾರತಕ್ಕೆ ವಲಸೆ ಬರುತ್ತಿವೆ.
ಲಂಕಾಗೆ ಭಾರತದ ನೆರವು
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾ ಈ ತೀವ್ರತೆಯನ್ನು ಎದುರಿಸಲು 38 ಸಾವಿರ ಕೋಟಿ ಸಾಲದ ಅಡಿಯಲ್ಲಿ ಮಾಸಿಕ ಇಂಧನ ಪೂರೈಕೆಯ ಜೊತೆಗೆ ತುರ್ತಾಗಿ ಡೀಸೆಲ್(Diesel) ಒದಗಿಸುವಂತೆ ಮಾಡಿರುವ ಮನವಿಯನ್ನು ಭಾರತ ಒಪ್ಪಿಕೊಂಡಿದೆ. ಹಾಗಾಗಿ ಭಾರತ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 40 ಸಾವಿರ ಟನ್ ಡೀಸೆಲ್ ಅನ್ನು ಶೀಘ್ರದಲ್ಲೇ ಶ್ರೀಲಂಕಾಗೆ ಒದಗಿಸಲಿವೆ. ಈಗಾಗಲೇ ಶ್ರೀಲಂಕಾ ಸರ್ಕಾರ(Government of Sri Lanka)ಮತ್ತು ಭಾರತದ ಆಮದು ಮತ್ತು ರಫ್ತು ಬ್ಯಾಂಕ್ 38 ಸಾವಿರ ಕೋಟಿ(500 ಮಿ.ಡಾ) ಸಾಲದ ಒಪ್ಪಂದಕ್ಕೆ ಸಹಿ ಹಾಕಿವೆ. ಕೊಲೊಂಬೋದಲ್ಲಿ ಪರಿಸ್ಥಿತಿ ಮತ್ತಷ್ಟುಹದಗೆಟ್ಟಿದ್ದರಿಂದ ಈ ಸಹಾಯವನ್ನು ಮತ್ತಷ್ಟುವಿಸ್ತರಿಸಲು ಭಾರತ ಒಪ್ಪಿಗೆ ನೀಡಿದೆ. ಭಾರತ, ಚೀನಾ ಸೇರಿದಂತೆ ಕೆಲ ದೇಶಗಳು ಶ್ರೀಲಂಕಾಕ್ಕೆ ಈ ಸಮಸ್ಯೆಯಿಂದ ಹೊರಬರಲು ನೆರವು ಮತ್ತು ಸಾಲದ ಸೌಲಭ್ಯ ಒದಗಿಸಿದ್ದರೂ, ರಾಜಕೀಯವಾಗಿ ಅಸ್ಥಿರವಾಗಿರುವ ದೇಶದ ಮೇಲೆ ಅದು ಯಾವುದೇ ಪರಿಣಾಮ ಬೀರಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟುಗಂಭೀರವಾಗುವ ಆತಂಕ ಎದುರಾಗಿದೆ.