ಪಾಕ್ ಮಾಜಿ ಪ್ರಧಾನಿ ಇಮ್ರಾನ್ ವಿರುದ್ಧ ದೇಶದ್ರೋಹ ಪ್ರಕರಣ ವಜಾ ಅರ್ಜಿ ವಜಾಗೊಳಿಸಿದ ಇಸ್ಲಾಮಾಬಾದ್ ಹೈಕೋರ್ಟ್ ರಂಜಾನ್ ಬಳಿಕ ನವಾಜ್ ಷರೀಫ್ ಮರಳಿ ಪಾಕ್‌ಗೆ
ಇಸ್ಲಾಮಾಬಾದ್(ಏ.12): ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan)ಸೇರಿದಂತೆ ಹಲವಾರು ಸಚಿವರ ವಿರುದ್ಧ ದೇಶದ್ರೋಹದ ಆರೋಪದಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ (Islamabad High Court) ಸೋಮವಾರ ವಜಾಗೊಳಿಸಿದೆ. ಇದರೊಂದಿಗೆ ಇಮ್ರಾನ್ ತಮ್ಮ ಸರ್ಕಾರವನ್ನು ಉರುಳಿಸುವಲ್ಲಿ ವಿದೇಶಿ ಶಕ್ತಿಗಳ ಕೈವಾಡವಿರುವ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನೂ ವಜಾಗೊಳಿಸಲಾಗಿದೆ. ಮೌಲ್ವಿ ಇಕ್ಬಾಲ್ ಹೈದರ್ ಎಂಬುವವರು ಇಮ್ರಾನ್ ಸೇರಿದಂತೆ ಇನ್ನಿತರ ಸಚಿವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ, ವಿದೇಶಗಳಿಗೆ ಹೋಗದಂತೆ ಇವರ ಮೇಲೆ ತಡೆಯೊಡ್ಡಬೇಕು ಎಂದು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸ್ವೀಕಾರಾರ್ಹವಲ್ಲ ಎಂದು ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ ಅರ್ಜಿದಾರನ ಮೇಲೆಯೇ 1 ಲಕ್ಷ ರೂ. ದಂಡವನ್ನು ಹೇರಿದೆ.
ರಂಜಾನ್ ಬಳಿಕ ನವಾಜ್ ಷರೀಫ್ ಮರಳಿ ಪಾಕ್‌ಗೆ
ಈ ನಡುವೆ ಬ್ರಿಟನ್‌ನಲ್ಲಿರುವ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಮುಂದಿನ ತಿಂಗಳು ರಂಜಾನ್ ನಂತರ ಲಂಡನ್‌ನಿಂದ ಮತ್ತೆ ಪಾಕಿಸ್ತಾನಕ್ಕೆ ಮರಳುವ ಸಾಧ್ಯತೆಗಳಿವೆ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ (Pakistan Muslim League-Nawaz Party) ಹಿರಿಯ ನಾಯಕ ಮಾಹಿತಿ ನೀಡಿದ್ದಾರೆ. ಇಮ್ರಾನ್ ಸರ್ಕಾರ ಉರುಳಿದ ನಂತರ ಹೊಸ ಸರ್ಕಾರ ನಿರ್ಮಾಣಕ್ಕಾಗಿ ಮಿತ್ರಪಕ್ಷಗಳೊಂದಿಗೆ ಚರ್ಚೆಯನ್ನು ನಡೆಸಲು ನವಾಜ್ ಪಾಕಿಸ್ತಾನಕ್ಕೆ ಮರಳುವ ಸಾಧ್ಯತೆಯಿದೆ ಎಂದು ಪಕ್ಷದ ನಾಯಕ ಮಿಯಾನ್ ಜಾವೇದ್ ಲತೀಫ್ (Mian Javed Latif) ತಿಳಿಸಿದ್ದಾರೆ.
ನವಾಜ್ ವಿರುದ್ಧ ಹಲವಾರು ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿದ್ದವು. ಪನಾಮಾ ಪೇಪರ್ಸ್ ಪ್ರಕರಣದಲ್ಲಿ (Panama Papers case) 2017ರಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅವರನ್ನು ಪ್ರಧಾನಿ ಪಟ್ಟದಿಂದ ಪದಚ್ಯುತಗೊಳಿಸಿತ್ತು. 2019ರಲ್ಲಿ ವಿದೇಶದಲ್ಲಿ ಚಿಕಿತ್ಸೆ ಪಡೆಯುವ ನೆಪದಲ್ಲಿ ಷರೀಫ್ ಲಂಡನ್‌ಗೆ ತೆರಳಿದ್ದರು. ನಂತರ ಪ್ರಕರಣದಲ್ಲಿ ಜಾಮೀನು ಪಡೆದು ಸೆರೆವಾಸದಿಂದ ತಪ್ಪಿಸಿಕೊಂಡಿದ್ದರು.
ನಿಮಗೆ ಭಾರತ ಅಷ್ಟೊಂದು ಇಷ್ಟವಾದರೆ ಅಲ್ಲಿಗೆ ಹೋಗಿ: ಇಮ್ರಾನ್ ಖಾನ್‌ಗೆ ಮರಿಯಮ್ ಸಲಹೆ
ಇತ್ತ ಇಮ್ರಾನ್ ಖಾನ್ ಪದಚ್ಯುತಿಯ ನಂತರ ಪಾಕಿಸ್ತಾನದ ಪ್ರಧಾನಿ ಹುದ್ದೆಗೇ ಏರಿರುವ ಶೆಹಬಾಜ್ ಶರೀಫ್, ಅಧಿಕಾರಕ್ಕೆ ಏರುತ್ತಿದ್ದಂತೆಯೇ ಕಾಶ್ಮೀರ ವಿಚಾರವಾಗಿ ಕ್ಯಾತೆ ತೆಗೆದಿದ್ದಾರೆ. ಸಂಸತ್ತಿನಲ್ಲಿ ಪ್ರಧಾನಿಯಾದ ನಂತರ ಮಾಡಿದ ಮೊದಲ ಭಾಷಣದಲ್ಲಿ ಕಾಶ್ಮೀರದಲ್ಲಿ 370 ವಿಧಿಯನ್ನು (Article 370) ರದ್ದುಗೊಳಿಸಿದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೇ ಕಾಶ್ಮೀರಿ ಜನರಿಗೆ ರಾಜತಾಂತ್ರಿಕ ಹಾಗೂ ನೈತಿಕ ಬೆಂಬಲ ಒದಗಿಸಲು ಪಾಕಿಸ್ತಾನ ಬದ್ಧವಾಗಿದೆ ಎಂದು ಘೋಷಿಸಿದ್ದಾರೆ.
ಪ್ರಧಾನಿಯಾಗಿ ಆಯ್ಕೆ ಆದ ನಂತರ ಸೋಮವಾರ ಸಂಜೆ ಮಾತನಾಡಿದ ಅವರು, ಭಾರತದೊಂದಿಗೆ ಶಾಂತಿಯುತ ಸಂಬಂಧವನ್ನು ಕಾಯ್ದುಕೊಳ್ಳಲು ಬಯಸಿದ್ದೇನೆ. ಆದರೆ ಕಾಶ್ಮೀರದ ಬಿಕ್ಕಟ್ಟು ಪರಿಹಾರಕ್ಕೂ ಮುಂಚೆ ಅದು ಸಾಧ್ಯವಾಗುವುದಿಲ್ಲ. ಭಾರತ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಕಾಶ್ಮೀರಿಗರ ರಕ್ತದಿಂದ ಕಾಶ್ಮೀರದ ಕಣಿವೆಯೇ ಕೆಂಪಾಗಿದೆ ಎಂದು ಆರೋಪಿಸಿದರು.
ಕಾಶ್ಮೀರಿ ಸಹೋದರ, ಸಹೋದರಿಯರ ಧ್ವನಿಯನ್ನು ಎಲ್ಲ ವೇದಿಕೆಗಳಿಗೆ (ಅಂತಾರಾಷ್ಟ್ರೀಯ ಮಟ್ಟದಲ್ಲಿ) ನಾವು ತಲುಪಿಸುತ್ತವೆ ಎಂದು ಭರವಸೆ ನೀಡಿದ ಪ್ರಧಾನಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ಕುರಿತು ಪ್ರಸ್ತಾಪಿಸುವ ಮೂಲಕ ಕಾಶ್ಮೀರಿಗರಿಗೆ ನಾವು ರಾಜಕೀಯ, ರಾಜತಾಂತ್ರಿಕ ಹಾಗೂ ನೈತಿಕ ಬೆಂಬಲ ಒದಗಿಸಲಿದ್ದೇವೆ ಎಂದರು.
ಲಂಕೆಯ ಬೆಂಕಿಗೂ, ಪಾಕ್ ಪತನದ ಹಿಂದೆಯೂ ಚೀನೀ ಹಣದ ಕೈವಾಡ!
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕಾಶ್ಮೀರದ ವಿಷಯದ ಇತ್ಯರ್ಥಕ್ಕೆ ಮುಂದೆ ಬರಬೇಕು ಎಂದು ಈ ವೇಳೆ ಮನವಿ ಮಾಡಿದ ಶೆಹಬಾಜ್ ಅವರು, ಉಭಯ ದೇಶಗಳು ಸೇರಿ ಕಾಶ್ಮೀರದ ಗಡಿಯ ಎರಡೂ ಬದಿಯಲ್ಲಿರುವ ಜನರು ಬಡತನ, ನಿರುದ್ಯೋಗ ಹಾಗೂ ಔಷಧಿಗಳ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.