Ryanair flight window shatter: ಜರ್ಮನಿ ದೇಶಕ್ಕೆ ಹೊರಟಿದ್ದ ರಯಾನ್‌ಏರ್ ವಿಮಾನದ ಕಿಟಕಿ ಮಧ್ಯ ಆಕಾಶದಲ್ಲೇ ಒಡೆದು ಹೋಗಿದ್ದು, ಆ ಕ್ಷಣದಲ್ಲಿ ಸೃಷ್ಟಿಯಾದ ಗಾಳಿಯ ಭೀಕರ ಒತ್ತಡಕ್ಕೆ ಪ್ರಯಾಣಿಕನೊಬ್ಬ ಅರ್ಧದಷ್ಟು ವಿಮಾನದಿಂದ ಹೊರಕ್ಕೆ ಹಾರಿಹೋಗಿದ್ದಾನೆ. ಆದರೆ ಆ ಕ್ಷಣದಲ್ಲಿ ಆತನ ಪತ್ನಿ ತೋರಿದ ಸಮಯಪ್ರಜ್ಞೆ, ಪವಾಡದಂತೆ ಆತನ ಪ್ರಾಣ ಉಳಿಸಿದೆ. ಏನಿದು ಘಟನೆ? ಇಲ್ಲಿದೆ ಸಂಪೂರ್ಣ ವಿವರ.

ಜರ್ಮನಿಯ ಮೆಮ್ಮಿಂಗೆನ್‌ಗೆ ಹೊರಟಿದ್ದ ರಯಾನ್‌ಏರ್ (Ryanair) FR1879 ವಿಮಾನದಲ್ಲಿ ಗಗನದಲ್ಲೇ ತೀವ್ರ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇಂಜಿನ್‌ನಲ್ಲಾದ ಲೋಪದಿಂದಾಗಿ ಅದರ ಒಂದು ಭಾಗ ವಿಮಾನದ ಬಾಡಿಗೆ ಬಡಿದು, ಕಿಟಕಿ ಒಡೆದು ಹೋಗಿದೆ. ಇದರಿಂದಾಗಿ ಕ್ಯಾಬಿನ್‌ನಲ್ಲಿ ಏಕಾಏಕಿ ವಾಯುಭಾರ ಕುಸಿತ (Decompression) ಉಂಟಾಗಿ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಡೆದಿದ್ದೇನು?

ಥೆಸ್ಸಲೋನಿಕಿಯಿಂದ ಹೊರಟಿದ್ದ ಈ ವಿಮಾನವು ಉತ್ತರ ಮ್ಯಾಸಿಡೋನಿಯಾ ಗಗನಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಇಂಜಿನ್‌ನಿಂದ ಸಿಡಿದ ತುಂಡು ವಿಮಾನದ ಪಕ್ಕದ ಭಾಗಕ್ಕೆ ಬಡಿದಿದ್ದರಿಂದ ಕಿಟಕಿ ಸಂಪೂರ್ಣವಾಗಿ ಧ್ವಂಸಗೊಂಡಿದೆ.

ಪತ್ನಿಯ ಸಮಯಪ್ರಜ್ಞೆಯಿಂದ ಬದುಕಿದ ಪ್ರಾಣ!

ಕಿಟಕಿ ಒಡೆದ ತಕ್ಷಣ ಉಂಟಾದ ಗಾಳಿಯ ತೀವ್ರ ಒತ್ತಡಕ್ಕೆ, ಆ ಕಿಟಕಿಯ ಪಕ್ಕದಲ್ಲೇ ಕುಳಿತಿದ್ದ 61 ವರ್ಷದ ಸೆರ್ಬಿಯಾ ಮೂಲದ ಪ್ರಯಾಣಿಕ ಅರ್ಧದಷ್ಟು ವಿಮಾನದಿಂದ ಹೊರಕ್ಕೆ ಎಳೆಯಲ್ಪಟ್ಟಿದ್ದಾರೆ! ಆದರೆ, ಅದೃಷ್ಟವಶಾತ್ ಪಕ್ಕದಲ್ಲೇ ಇದ್ದ ಅವರ ಪತ್ನಿ ತಕ್ಷಣವೇ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಇದರಿಂದಾಗಿ ಅವರು ವಿಮಾನದಿಂದ ಕೆಳಗೆ ಬೀಳುವುದು ತಪ್ಪಿ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭೀಕರ ದೃಶ್ಯವನ್ನು ಕಣ್ಣಾರೆ ಕಂಡ ಇತರ ಪ್ರಯಾಣಿಕರು ತೀವ್ರ ದಿಗ್ಭ್ರಮೆಗೊಂಡಿದ್ದಾರೆ.

Scroll to load tweet…

ಗ್ರೀಸ್‌ನಲ್ಲಿ ತುರ್ತು ಲ್ಯಾಂಡಿಂಗ್ (Emergency Landing)

ಘಟನೆ ಸಂಭವಿಸುತ್ತಿದ್ದಂತೆ ವಿಮಾನದ ಸಿಬ್ಬಂದಿ ತುರ್ತು ಪರಿಸ್ಥಿತಿ ಘೋಷಿಸಿ, ವಿಮಾನವನ್ನು ತಕ್ಷಣವೇ ಕಡಿಮೆ ಎತ್ತರಕ್ಕೆ ಇಳಿಸಿ, ಗ್ರೀಸ್‌ನ ಥೆಸ್ಸಲೋನಿಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಶಸ್ವಿಯಾಗಿ ತಿರುಗಿಸಿದ್ದಾರೆ. ರನ್‌ವೇನಲ್ಲಿ ಮೊದಲೇ ಸಿದ್ಧವಾಗಿದ್ದ ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ತಂಡಗಳು ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ನೀಡಿವೆ.

Scroll to load tweet…

ಘಟನೆಯ ತನಿಖೆ ಆರಂಭ

ಹೊರಕ್ಕೆ ಎಳೆಯಲ್ಪಟ್ಟ 61 ವರ್ಷದ ವ್ಯಕ್ತಿಯ ಹೆಗಲು ಹಾಗೂ ದೇಹದ ಮೇಲ್ಭಾಗಕ್ಕೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ನಾಲ್ಕು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತೀವ್ರ ಆಘಾತಕ್ಕೊಳಗಾಗಿದ್ದರಿಂದ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಉಳಿದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಟರ್ಮಿನಲ್‌ಗೆ ಕರೆತರಲಾಗಿದ್ದು, ಅವರನ್ನು ಜರ್ಮನಿಗೆ ತಲುಪಿಸಲು ರಯಾನ್‌ಏರ್ ಸಂಸ್ಥೆಯು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದೆ.

ರಯಾನ್‌ಏರ್ ಸಂಸ್ಥೆಯು ವಿಮಾನ ಮರುನಿರ್ದೇಶನವನ್ನು ಖಚಿತಪಡಿಸಿದ್ದು, ಕಿಟಕಿಯ ವೈಫಲ್ಯವೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದೆ. ಆದರೆ ಇಂಜಿನ್ ದೋಷದ ತೀವ್ರತೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಸದ್ಯ ಅಧಿಕಾರಿಗಳು ಈ ಘಟನೆಯ ತನಿಖೆ ಆರಂಭಿಸಿದ್ದಾರೆ.