Coconut imports in USA: ಭಾರತದಲ್ಲಿ ಜಸ್ಟ್ 40-50 ರೂಗೆ ಸಿಗುವ ಎಳನೀರಿನ ಬೆಲೆ ಅಮೆರಿಕದಲ್ಲಿ ಎಷ್ಟಿರಬಹುದು ಎಂದು ಯೋಚಿಸಿದ್ದೀರಾ? ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅಲ್ಲಿನ ಎಳನೀರಿನ ರೇಟ್ ಕೇಳಿ ಭಾರತದವರೆಲ್ಲಾ ಶಾಕ್ ಆಗಿದ್ದಾರೆ! ನಮ್ಮ ದೇಶದಲ್ಲಿ ತೀರಾ ಸಾಮಾನ್ಯವಾದ ಎಳನೀರು ಅಮೆರಿಕದಲ್ಲಿ ಅಷ್ಟೊಂದು ದುಬಾರಿಯಾಗಲು ಕಾರಣವೇನು? ಅಲ್ಲಿ ತೆಂಗಿನಕಾಯಿ ಬೆಳೆಯುವುದೇ ಇಲ್ವಾ? ಈ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
ಭಾರತದಲ್ಲಿ ರಸ್ತೆ ಬದಿಯಲ್ಲಿ ಅರಾಮಾಗಿ 40 ರಿಂದ 80 ರೂಪಾಯಿ ಕೊಟ್ಟು ಕುಡಿಯುವ ಎಳನೀರು, ಅಮೆರಿಕಕ್ಕೆ ಹೋದರೆ ಅದು ಸಾಮಾನ್ಯ ಪಾನೀಯವಾಗಿ ಉಳಿಯುವುದಿಲ್ಲ. ಬದಲಿಗೆ ಅದೊಂದು 'ಲಕ್ಸುರಿ ಡ್ರಿಂಕ್' ಆಗಿ ಬದಲಾಗುತ್ತದೆ! ಹೌದು. ಇತ್ತೀಚೆಗೆ ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ಅಮೆರಿಕದ ಎಳನೀರಿನ ಬೆಲೆ ಬಹಿರಂಗವಾದಾಗ ಭಾರತೀಯರು ಅಕ್ಷರಶಃ ದಂಗಾಗಿದ್ದಾರೆ. ಅಲ್ಲಿ ಒಂದು ಎಳನೀರಿಗೆ ಬರೋಬ್ಬರಿ 10 ಡಾಲರ್. ಅಂದರೆ ನಮ್ಮ ರೂಪಾಯಿ ಲೆಕ್ಕದಲ್ಲಿ ಅಂದಾಜು 950 ರಿಂದ 960 ರೂಪಾಯಿ!
ಅಮೆರಿಕದಲ್ಲಿ ತೆಂಗಿನ ಬೇಸಾಯದ ಕೊರತೆ
ತೆಂಗಿನ ಮರಗಳು ಬೆಳೆಯಲು ಬಿಸಿ ಮತ್ತು ಆರ್ದ್ರತೆಯಿಂದ ಕೂಡಿದ ಉಷ್ಣವಲಯದ ಹವಾಮಾನ ಬೇಕು. ಆದರೆ ಅಮೆರಿಕದ ಹೆಚ್ಚಿನ ರಾಜ್ಯಗಳಲ್ಲಿ ಚಳಿಗಾಲ ತೀವ್ರವಾಗಿರುತ್ತದೆ. ಕೇವಲ ಫ್ಲೋರಿಡಾ ಮತ್ತು ಹವಾಯಿಯಂತಹ ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರ ತೆಂಗಿನ ಮರಗಳು ಬೆಳೆಯುತ್ತವೆ. ಇದು ಇಡೀ ದೇಶದ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲದ ಕಾರಣ, ಅಮೆರಿಕವು ಶೇ. 90ಕ್ಕಿಂತ ಹೆಚ್ಚು ತೆಂಗಿನಕಾಯಿಗಳನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತದೆ.
ಸಾವಿರಾರು ಕಿಲೋಮೀಟರ್ ಪ್ರಯಾಣ ಮತ್ತು ಶಿಪ್ಪಿಂಗ್ ವೆಚ್ಚ
ಅಮೆರಿಕಕ್ಕೆ ಎಳನೀರು ಹೆಚ್ಚಾಗಿ ಥೈಲ್ಯಾಂಡ್, ವಿಯೆಟ್ನಾಂ, ಫಿಲಿಪೈನ್ಸ್ ಮತ್ತು ಭಾರತದಿಂದ ರಫ್ತಾಗುತ್ತದೆ. ಈ ಎಳನೀರು ಸಾವಿರಾರು ಕಿಲೋಮೀಟರ್ ಸಮುದ್ರ ಮಾರ್ಗದ ಮೂಲಕ ಪ್ರಯಾಣಿಸಬೇಕಾಗುತ್ತದೆ. ಹಡಗಿನ ಬಾಡಿಗೆ, ಕಂಟೈನರ್ ವೆಚ್ಚ, ಪ್ಯಾಕಿಂಗ್, ಮತ್ತು ಅತಿ ಮುಖ್ಯವಾಗಿ ಎಳನೀರು ಕೆಡದಂತೆ ಇಡಲು ಬೇಕಾದ 'ಕೋಲ್ಡ್ ಸ್ಟೋರೇಜ್' (ಶೈತ್ಯಾಗಾರ) ವೆಚ್ಚಗಳು ಇದರ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸುತ್ತವೆ.
ದುಬಾರಿ ಕಾರ್ಮಿಕ ವೆಚ್ಚ ಮತ್ತು ತೆರಿಗೆ
ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಕಾರ್ಮಿಕರ ಕೂಲಿ (Labor Cost) ಅತಿ ಹೆಚ್ಚು. ಹಡಗಿನಿಂದ ಇಳಿಸುವುದು, ಟ್ರಕ್‌ಗಳಿಗೆ ಲೋಡ್ ಮಾಡುವುದು ಮತ್ತು ಸೂಪರ್‌ಮಾರ್ಕೆಟ್ ಶೆಲ್ಫ್‌ಗಳಲ್ಲಿ ಜೋಡಿಸುವವರೆಗೆ ಪ್ರತಿ ಹಂತದಲ್ಲೂ ಹೆಚ್ಚಿನ ವೇತನ ನೀಡಬೇಕಾಗುತ್ತದೆ. ಇದರೊಂದಿಗೆ ಆಮದು ತೆರಿಗೆ (Import Duty), ಅಂಗಡಿಗಳ ಬಾಡಿಗೆ ಮತ್ತು ವಿದ್ಯುತ್ ವೆಚ್ಚಗಳು ಸೇರಿ ಅಂತಿಮವಾಗಿ ಗ್ರಾಹಕರ ಕೈ ಸೇರುವಾಗ ಬೆಲೆ 900 ರೂಪಾಯಿ ದಾಟಿರುತ್ತದೆ.
ಭಾರತದಲ್ಲಿ ಅಗ್ಗವಾಗಿ ಸಿಗಲು ಕಾರಣವೇನು?
ಭಾರತವು ವಿಶ್ವದ ಅತಿದೊಡ್ಡ ತೆಂಗು ಉತ್ಪಾದಕ ದೇಶಗಳಲ್ಲಿ ಒಂದು. ನಮ್ಮಲ್ಲಿ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಹೇರಳವಾಗಿ ತೆಂಗಿನಕಾಯಿ ಬೆಳೆಯಲಾಗುತ್ತದೆ. ಸ್ಥಳೀಯವಾಗಿ ಉತ್ಪಾದನೆಯಾಗುವುದರಿಂದ ಸಾರಿಗೆ ವೆಚ್ಚ ಕಡಿಮೆ ಇರುತ್ತದೆ ಮತ್ತು ಯಾವುದೇ ಆಮದು ತೆರಿಗೆ ಇರುವುದಿಲ್ಲ. ಹೀಗಾಗಿ ನಮಗೆ ಅಗ್ಗದ ದರದಲ್ಲಿ ತಾಜಾ ಎಳನೀರು ಸಿಗುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಜನರ ಪ್ರತಿಕ್ರಿಯೆ ಹೇಗಿತ್ತು?
ಅಮೆರಿಕದಲ್ಲಿ 10 ಡಾಲರ್ ಎಳನೀರಿನ ವಿಡಿಯೋ ಮುನ್ನಲೆಗೆ ಬಂದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವು ಬಳಕೆದಾರರು, "ಭಾರತದಲ್ಲಿ ಅಷ್ಟು ಹಣವಿದ್ದರೆ ಇಡೀ ಕುಟುಂಬವೇ ಹಲವು ಬಾರಿ ಎಳನೀರು ಕುಡಿಯಬಹುದು" ಎಂದು ಬರೆದಿದ್ದಾರೆ. ಇನ್ನು ಕೆಲವರು, "ಭಾರತದಲ್ಲಿ ಸಿಗುವ ತಾಜಾ ವಸ್ತುಗಳ ನಿಜವಾದ ಮೌಲ್ಯ ವಿದೇಶಕ್ಕೆ ಹೋದಾಗ ತಿಳಿಯುತ್ತದೆ" ಎಂದು ಹೇಳಿದ್ದಾರೆ.
ಭಾರತದಲ್ಲಿ ತೆಂಗಿನಕಾಯಿ ಸುಲಭವಾಗಿ ಬೆಳೆಯುವುದರಿಂದ ಇಲ್ಲಿ ಅದರ ಬೆಲೆ ಕಡಿಮೆ ಇರುತ್ತದೆ. ಅದೇ ಅಮೆರಿಕದಲ್ಲಿ ತೆಂಗಿನ ಬೇಸಾಯ ತುಂಬಾ ಸೀಮಿತವಾಗಿದ್ದು, ಹೆಚ್ಚಿನ ತೆಂಗಿನಕಾಯಿಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ದೂರದ ಪ್ರಯಾಣ, ಆಮದು, ತೆರಿಗೆ ಮತ್ತು ಇತರ ವೆಚ್ಚಗಳ ಕಾರಣದಿಂದಾಗಿ ಅಲ್ಲಿ ಒಂದು ಎಳನೀರಿನ ಬೆಲೆ 10 ಡಾಲರ್ (ಸುಮಾರು 953 ರೂ.) ತಲುಪುತ್ತದೆ. ಇದೇ ಕಾರಣಕ್ಕಾಗಿ, ಭಾರತದಲ್ಲಿ ಅತ್ಯಂತ ಸಾಮಾನ್ಯವಾದ ಪಾನೀಯ ವಿದೇಶದಲ್ಲಿ ಒಂದು 'ಲಕ್ಸುರಿ ಡ್ರಿಂಕ್' (Luxury drink) ನಂತೆ ಕಾಣಿಸುತ್ತದೆ.
