ಅಮೆರಿಕದ ದಾಳಿಯಿಂದಾಗಿ ಇರಾನ್ ಹೋರ್ಮುಜ್ ಜಲಸಂಧಿ ಮುಚ್ಚಿದ್ದು, ಇದನ್ನು ತೆರೆಯಲು ವಿಶ್ವಸಂಸ್ಥೆಯಲ್ಲಿ ಮಂಡಿಸಿದ ಗೊತ್ತುವಳಿಗೆ ರಷ್ಯಾ ಮತ್ತು ಚೀನಾ ವಿಟೋ ಚಲಾಯಿಸಿವೆ. ಈ ನಡುವೆ, ಸರ್ವನಾಶದ ಎಚ್ಚರಿಕೆ ನೀಡಿದ ಅಮೆರಿಕದೊಂದಿಗೆ ಇರಾನ್ ಮಾತುಕತೆಯ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿದೆ ಎಂದು ವರದಿಯಾಗಿದೆ.

ವಿಶ್ವಸಂಸ್ಥೆ: ಇಸ್ರೇಲ್ ಅಮೆರಿಕಾದ ದಾಳಿಯಿಂದಾಗಿ ಹೋರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದ್ದು, ಇದನ್ನು ತೆರೆಯಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡನೆಯಾಗಿದ್ದ ಗೊತ್ತುವಳಿಗೆ ಚೀನಾ ಹಾಗೂ ರಷ್ಯಾ ವಿರೋಧಿಸಿವೆ. ತಮ್ಮ ವಿಶೇಷ ವಿಟೋ ಅಧಿಕಾರದ ಬಳಕೆ ಮಾಡಿ ರಷ್ಯಾ ಹಾಗೂ ಚೀನಾ ಈ ಗೊತ್ತುವಳಿಗೆ ತಡೆಯೊಡ್ಡಿವೆ. ಈ ಎರಡೂ ದೇಶಗಳು ಇರಾನ್ ಪರ ಹಾಗೂ ಅಮೆರಿಕ ವಿರೋಧಿಯಾಗಿವೆ ಎಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ ಹೋರ್ಮುಜ್ ಜಲಸಂಧಿಯನ್ನು ಬುಧವಾರ ನಸುಕಿನೊಳಗೆ ತೆರೆಯದಿದ್ದರೆ ಇರಾನ್ ಅನ್ನು ಸರ್ವನಾಶ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.

ಅಮೆರಿಕಾ ಜೊತೆ ಮಾತುಕತೆ ಬಾಗಿಲು ಪೂರ್ಣ ಬಂದ್: ಇರಾನ್

ವಾಷಿಂಗ್ಟನ್: 'ಗಡುವಿನೊಳಗೆ ಇರಾನ್ ಒಪ್ಪಂದ ಮಾಡಿಕೊಳ್ಳದಿದ್ರೆ ಆ ದೇಶದ ನಾಗರಿಕತೆಯನ್ನೇ ನಾಶ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ ಬೆನ್ನಲ್ಲೇ, `ಮಾತುಕತೆಯ ಬಾಗಿಲನ್ನು ಟೆಹ್ರಾನ್ ಸಂಪೂರ್ಣವಾಗಿ ಮುಚ್ಚಿದೆ ಎಂದು ಇರಾನಿನ ಮಾಧ್ಯಮ ವರದಿ ಮಾಡಿದೆ. ಅಮೆರಿಕದ ಜೊತೆಗಿನ ಎಲ್ಲಾ ರಾಜತಾಂತ್ರಿಕ ಮತ್ತು ಪರೋಕ್ಷ ಸಂದಹನ ಮಾರ್ಗಗಳನ್ನು ಇರಾನ್ ಸ್ಥಗಿತಗೊಳಿಸಿದೆ ಎಂದು ಇರಾನ್ ಮಾಧ್ಯಮ ಸಂಸ್ಥೆ ಟೆಹ್ರಾನ್ ಟೈಮ್ಸ್ ಮಂಗಳವಾರ ವರದಿ ಮಾಡಿದೆ. ಇದಲ್ಲದೆ, 'ಇರಾನ್ ಅಧಿಕಾರಿಗಳು ಕೇವಲ ಕದನ ವಿರಾಮದ ಬದಲು ಸಂಪೂರ್ಣ ಯುದ್ಧ ಅಂತ್ಯಗೊಳಿಸಲು ಬಯಸುತ್ತಿದ್ದಾರೆ ಎಂದು ಮಾಧ್ಯಮ ವರದಿ ಹೇಳಿದೆ.

ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಅಮೆರಿಕ ಕಾಲಮಾನ ಮಂಗಳವಾರ ರಾತ್ರಿ 8ರ ನಂತರ (ಭಾರತದ ಕಾಲಮಾನ ಬುಧವಾರ ಬೆಳಗ್ಗೆ 5.30ಕ್ಕೆ) ಇರಾನ್ ಅನ್ನು ಸರ್ವನಾಶ ಮಾಡುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಗುಡುಗಿದ್ದರು.

4 ವಾರ ಟಿಆರ್‌ಪಿ ಇಲ್ಲ!

ನವದೆಹಲಿ: ಸದ್ಯ ನಡೆಯುತ್ತಿರುವ ಮಧ್ಯಪ್ರಾಚ್ಯ ಬಿಕ್ಕಟ್ಟಿನ ವೇಳೆ ಸಂವೇದನಾಶೀಲರಹಿತ ವರದಿಗಾರಿಕೆ ಮತ್ತು ಊಹಾಪೋಹಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಟೆಲಿವಿಷನ್ ರೇಟಿಂಗ್ ಪಾಯಿಂಟ್ ಅನ್ನು (ಟಿಆ‌ರ್.ಪಿ) ಮತ್ತೆ 4 ವಾರಗಳ ಕಾಲ ಸ್ಥಗಿತ ಗೊಳಿಸಿದೆ. ಈ ಪ್ರಕಾರ ಬಾರ್ಕ್ ಸಂಸ್ಥೆಗೆ ಯಾವುದೇ ಚಾನೆಲ್‌ಗಳಿಗೆ ರೇಟಿಂಗ್ ನೀಡಲು 4 ವಾರ ಕಾಲ ಅವಕಾಶ ಇರುವುದಿಲ್ಲ.

ಇಂದು ರಾತ್ರಿ ಇಡೀ ನಾಗರಿಕತೆ ಸಾಯುತ್ತದೆ, ಮತ್ತೆಂದೂ ಹಿಂತಿರುಗುವುದಿಲ್ಲ.ಅದು ಸಂಭವಿಸಬೇಕೆಂದು ನಾನು ಬಯಸುವುದಿಲ್ಲ, ಆದರೂ ಅದು ಸಂಭವಿಸಬಹುದು. ಆದಾಗ್ಯೂ, ಅಲ್ಲಿ ಅಧಿಕಾರದಲ್ಲಿ ಬದಲಾವಣೆ ಆಗಿ ಉತ್ತಮ ಜನರು ಬರಬಹುದು ಹಾಗೂ ಬಹುಶಃ ಕ್ರಾಂತಿಕಾರಿಯಾಗಿ ಏನಾದರೂ ಅದ್ಭುತ ಸಂಭವಿಸಬಹುದು. ಯಾರಿಗೆ ತಿಳಿದಿದೆ? ಇಂದು ರಾತ್ರಿ ನಾವು ಕಂಡುಕೊಳ್ಳುತ್ತೇವೆ, ಇದು ಪ್ರಪಂಚದ ದೀರ್ಘ ಮತ್ತು ಸಂಕೀರ್ಣ ಇತಿಹಾಸದ ಪ್ರಮುಖ ಕ್ಷಣಗಳಲ್ಲಿ ಒಂದಾಗಿದೆ. 47 ವರ್ಷಗಳ ಸುಲಿಗೆ, ಭ್ರಷ್ಟಾಚಾರ ಮತ್ತು ಸಾವು ಅಂತಿಮವಾಗಿ ಕೊನೆಗೊಳ್ಳುತ್ತದೆ. ದೇವರು ಇರಾನ್‌ನ ಮಹಾನ್ ಜನರನ್ನು ಆಶೀರ್ವದಿಸಲಿ ಎಂದು ಟ್ರಂಪ್ ತಮ್ಮ ಸೋಶಿಯಲ್ ಮೀಡಿಯಾ ಟ್ರುತ್‌ನಲ್ಲಿ ನಿನ್ನೆ ಬರೆದುಕೊಂಡಿದ್ದರು.