ನೇಪಾಳದ ಕಾಮೀ ರೀತಾ ಶೆರ್ಪಾ ಅವರು 32ನೇ ಬಾರಿಗೆ ಮೌಂಟ್‌ ಎವರೆಸ್ಟ್ ಏರಿ ತಮ್ಮದೇ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಇವರೊಂದಿಗೆ, 'ಪರ್ವತರಾಣಿ' ಲಕ್ಪಾ ಶೆರ್ಪಾ ಕೂಡ 11ನೇ ಬಾರಿ ಶಿಖರವನ್ನೇರಿ ತಮ್ಮ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ.

ಕಾಠ್ಮಂಡು: ವಿಶ್ವದ ಅತಿ ಎತ್ತರದ ಪರ್ವತವಾಗಿರುವ ಮೌಂಟ್‌ ಎವರೆಸ್ಟ್‌ನ ತುದಿಯನ್ನು 32ನೇ ಬಾರಿ ತಲುಪುವ ಮೂಲಕ ನೇಪಾಳದ ಕಾಮೀ ರೀತಾ ಶೆರ್ಪಾ(56), ತಮ್ಮದೇ ಹೆಸರಲ್ಲಿದ್ದ ‘ಅತಿಹೆಚ್ಚು ಬಾರಿ ಎವರೆಸ್ಟ್‌ ಹತ್ತಿದವರು’ ಎಂಬ ದಾಖಲೆ ಮುರಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎವರೆಸ್ಟ್‌ ಮ್ಯಾನ್‌ ಎಂದೇ ಖ್ಯಾತರಾಗಿರುವ ಇವರು 14 ಪೀಕ್ಸ್‌ ಎಕ್ಸ್‌ಪೆಡಿಷನ್‌ ಎಂಬ ಕಂಪನಿ ಆಯೋಜಿಸಿದ್ದ ಪರ್ವತಾರೋಹಣದ ತಂಡದ ನಾಯಕರಾಗಿದ್ದು, ಭಾನುವಾರ ಬೆಳಗ್ಗೆ 10.12ರ ಹೊತ್ತಿಗೆ 29,032 ಅಡಿ ಎತ್ತರದ ಶಿಖರವನ್ನೇರಿದ್ದಾರೆಂದು ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.

ಯಾರು ಈ ಶೆರ್ಪಾ?

ಕೋಶಿ ಪ್ರಾಂತ್ಯದ ಸೋಲುಖುಂಬು ಜಿಲ್ಲೆಯವರಾದ ಕಾಮೀ ರೀತಾ, 1992ರಲ್ಲಿ ಪರ್ವತಾರೋಹಿಯಾಗಿ ವೃತ್ತಿಯನ್ನು ಆರಂಭಿಸಿದರು. 1994ರಲ್ಲಿ ಮೊದಲ ಬಾರಿ ಎವರೆಸ್ಟ್‌ ಹತ್ತಿದರು. 2025ರ ಮೇ 27ರಂದು ಇವರು 31ನೇ ಬಾರಿ ಈ ಪರ್ವತವನ್ನು ಏರಿದ್ದರು.

ಇದನ್ನು ಹೊರತುಪಡಿಸಿ ಕೆ2 ಮತ್ತು ಮೌಂಟ್‌ ಲೋತ್ಸೆಯನ್ನು ಒಂದು ಬಾರಿ, ಮನಸ್ಲುವನ್ನು 3 ಬಾರಿ, ಚೋ ಓಯುವನ್ನು 8 ಬಾರಿ ಹತ್ತಿದ್ದಾರೆ. ಪ್ರತಿ ಬಾರಿಯೂ 8000 ಮೀಟರ್‌ಗಿಂತ ಎತ್ತರಕ್ಕೇರಿದ್ದರು ಎಂಬುದು ಗಮನಾರ್ಹ.

ಪರ್ವತ ರಾಣಿ ದಾಖಲೆ

ಮೌಂಟ್‌ ಎವರೆಸ್ಟ್‌ ಏರಿದ ಮೊದಲ ನೇಪಾಳಿ ಮಹಿಳೆ ಎಂದು ಗುರುತಿಸಿಕೊಂಡು ‘ಪರ್ವತರಾಣಿ’ ಎಂಬ ಹೆಸರು ಪಡೆದಿರುವ ಲಕ್ಪಾ ಶೆರ್ಪಾ ಕೂಡ 11ನೇ ಬಾರಿ ಈ ಪರ್ವತವನ್ನೇರುವ ಮೂಲಕ ತಮ್ಮ ಈ ಹಿಂದಿನ ದಾಖಲೆಯನ್ನೇ ಮುರಿದಿದ್ದಾರೆ. ಈಕೆ ಭಾನುವಾರ ಬೆಳಗ್ಗೆ 9.30ಕ್ಕೆ ಶಿಖರವನ್ನೇರಿದರು ಎಂದು ಪ್ರವಾಸೋದ್ಯಮ ಇಲಾಖೆ ಖಚಿತಪಡಿಸಿದೆ.

ಪ್ರಧಾನಿ ಅಭಿನಂದನೆ

ರೀತಾ ಮತ್ತು ಲಕ್ಪಾ ಅವರನ್ನು ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರು ಅಭಿನಂದಿಸಿದ್ದು, ‘ಅಚಲ ಧೈರ್ಯ, ಕಠಿಣ ಸ್ವಯಂ ಶಿಸ್ತು ಮತ್ತು ಕೆಲಸದ ಪ್ರತಿ ಸಮರ್ಪಣೆಯಿಂದ ಮಾತ್ರ ಇಂತಹ ಸಾಧನೆ ಸಾಧ್ಯ’ ಎಂದಿದ್ದಾರೆ.

Scroll to load tweet…