ಮಧ್ಯದಲ್ಲಿ ಕೆಟ್ಟು ನಿಂತ ರೋಲರ್ ಕೋಸ್ಟರ್: 235 ಅಡಿ ಎತ್ತರದಲ್ಲಿ ಪ್ರವಾಸಿಗರ ಪರದಾಟ
- ತಾಂತ್ರಿಕ ದೋಷದಿಂದಾಗಿ ಕೆಟ್ಟು ನಿಂತ ರೋಲರ್ ಕೋಸ್ಟರ್
- ಬ್ರಿಟನ್‌ನ ಮನೋರಂಜನಾ ಪಾರ್ಕ್‌ವೊಂದರಲ್ಲಿ ಘಟನೆ
- ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಸಾಹಸಿ ಕ್ರೀಡೆ ಆಡುವವರಿಗೆ ಚಿಲ್ ನೀಡುವ ಮನೋರಂಜನಾ ಪಾರ್ಕೊಂದರಲ್ಲಿ ಅನಾಹುತವೊಂದು ನಡೆದಿದೆ. ಪ್ರವಾಸಿಗರನ್ನು ಹೊತ್ತು ಹೊರಟಿದ ರೋಲರ್ ಕೋಸ್ಟರ್ ವೊಂದು ನಡುಮಾರ್ಗದಲ್ಲಿ ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿದ್ದು, ಪರಿಣಾಮ ಪ್ರವಾಸಿಗರು 235 ಅಡಿಗಳಷ್ಟು ಎತ್ತರದಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ಬ್ರಿಟನ್‌ನ ಬ್ಲ್ಯಾಕ್‌ಪೂಲ್ ಪ್ಲೆಷರ್ ಬೀಚ್‌ನ ಮನೋರಂಜನಾ ಪಾರ್ಕ್‌ವೊಂದರಲ್ಲಿ ಭಾನುವಾರ ಈ ಘಟನೆ ನಡೆದಿದೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ಬಳಿಕ ಜನರು ನಿಂತ ರೋಲರ್ ಕೋಸ್ಟ್‌ರ್‌ನಲ್ಲಿ ಅತ್ತಿತ್ತ ಓಡಾಡುತ್ತಿರುವುದು ಕಂಡು ಬರುತ್ತಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಡೈಲಿಸ್ಟಾರ್ ಪ್ರಕಾರ, ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ರೋಲರ್‌ಕೋಸ್ಟರ್‌ನ ಗಾಡಿಯು 235 ಅಡಿ ಎತ್ತರದಲ್ಲಿ ಓಡುತ್ತಿದ್ದಾಗ ನಿಂತು ಹೋಯಿತು ಎಂದು ಸಾಹಸಿ ಕ್ರೀಡೆಯಲ್ಲಿ ಭಾಗವಹಿಸಿದವರು ಹೇಳಿದ್ದಾರೆ. ಈ Big One ಹೆಸರಿನ ರೋಲರ್ ಕೋಸ್ಟರ್ 1994ರಲ್ಲಿ ಪ್ರಾರಂಭವಾದಾಗ ವಿಶ್ವದ ಅತಿ ಎತ್ತರದ ಮತ್ತು ಕಡಿದಾದ ರೋಲರ್ ಕೋಸ್ಟರ್ ಎಂದು ಹೆಸರಾಗಿತ್ತು. ಬ್ಲ್ಯಾಕ್‌ಪೂಲ್‌ನಲ್ಲಿಅ ಸ್ಕೈಲೈನ್‌ನಲ್ಲಿ ಅದರ ಎತ್ತರ ಮತ್ತು ಪ್ರಾಮುಖ್ಯತೆಯಿಂದಾಗಿ ಇದನ್ನು ಫಿಲ್ಡ್ ಕರಾವಳಿಯಿಂದಲೂ (Fylde coast) ನೋಡಬಹುದಾಗಿದೆ. ಡೈಲಿಸ್ಟಾರ್ ಪ್ರಕಾರ, ಪ್ರವಾಸಿಗರ ಈ ಸಾಹಸಿ ಜಾಲಿ ರೈಡ್ ಮಧ್ಯದಲ್ಲಿ ನಿಂತಾಗ ಜನರು ಅಲ್ಲಿಂದ ಹೊರ ಬರಲು ಬದಿಯಲ್ಲಿರುವ ಮೆಟ್ಟಿಲುಗಳನ್ನು ಬಳಸಿಕೊಂಡು ಕೋಸ್ಟರ್‌ನಲ್ಲಿ ನಡೆಯಲು ಪ್ರಾರಂಭಿಸಿದರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ವಂಡರ್ ಲಾದಂತಹ ಮನೋರಂಜನಾ ಹಾಗೂ ಸಾಹಸ ತಾಣಗಳಿಗೆ ನೀವು ಭೇಟಿ ನೀಡಿದ್ದರೆ ನಿಮಗೆ ರೋಲರ್ ಕೋಸ್ಟ್‌ನಲ್ಲಿ ಪ್ರಯಾಣಿಸಿದ ಅನುಭವವಿರಬಹುದು. ರೋಲರ್ ಕೋಸ್ಟರ್ ಸವಾರಿ ನೋಡುಗರಿಗೆ ಅದರಲ್ಲಿ ಪ್ರಯಾಣಿಸುವವರಿಗೆ ಥ್ರಿಲ್ ಹಾಗೂ ಖುಷಿ ನೀಡುತ್ತದೆ. ಆದರೆ ಅತಿವೇಗದಲ್ಲಿ ಸುತ್ತುತ್ತಿರುವ ಟ್ರ್ಯಾಕ್ ಅನ್ನು ಏರುವಾಗ ಮತ್ತು ಇಳಿಯುವಾಗ ಅನೇಕರಿಗೆ ಭಯ ಉಂಟು ಮಾಡುತ್ತದೆ.
ಅಮೆರಿಕಾದ ಉತ್ತರ ಕೆರೊಲಿನಾದ (North Carolina) ಕ್ಯಾರೋವಿಂಡ್ಸ್ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿಯೂ ಕೆಲ ದಿನಗಳ ಹಿಂದೆ ಹೀಗೆಯೇ ರೋಲರ್ ಕೋಸ್ಟರ್ ಏರಿದ ಸವಾರರ ಗುಂಪಿಗೆ ಭಯಾನಕ ಅನುಭವವಾಗಿತ್ತು. ರೋಲರ್ ಕೋಸ್ಟರ್ ಏರಿ ಎಂಜಾಯ್ ಮಾಡುತ್ತಿರಬೇಕಾದರೆ ಅದು ಮಧ್ಯದಲ್ಲೇ ಸ್ಥಗಿತಗೊಂಡು ಪ್ರವಾಸಿಗರು ತಲೆಕೆಳಗಾಗಿ ಇರುವಂತಾದ ಭಯಾನಕ ಘಟನೆ ನಡೆದಿತ್ತು. ಸುಮಾರು 45 ನಿಮಿಷಗಳ ಕಾಲ ಇದು ಸ್ಥಗಿತಗೊಂಡು ಪ್ರವಾಸಿಗರು ತಲೆಕೆಳಗಾಗಿ ಇರುವಂತಾಗಿತ್ತು ಎಂದು ತಿಳಿದು ಬಂದಿದೆ.
ಅರ್ಧದಲ್ಲಿ ಸ್ಥಗಿತಗೊಂಡ ರೋಲರ್ ಕೋಸ್ಟರ್: ತಲೆಕೆಳಗಾದ ಸ್ಥಿತಿಯಲ್ಲಿ ಪ್ರವಾಸಿಗರು
ಅದೃಷ್ಟವಶಾತ್ ಅವರಲ್ಲಿ ಯಾರಿಗೂ ಯಾವುದೇ ಹಾನಿಗಳಾಗಿಲ್ಲ. 'ಫ್ಲೈಯಿಂಗ್ ಕೋಬ್ರಾ' ಎಂಬ ಹೆಸರಿನ ರೋಲರ್‌ಕೋಸ್ಟರ್ ರೈಡ್‌ನಲ್ಲಿ ಸವಾರರು ಸಿಲುಕಿಕೊಂಡಿದ್ದರು. ಇದು ಗಂಟೆಗೆ 50 ಮೈಲು ವೇಗದಲ್ಲಿ (50mph) ವೇಗದಲ್ಲಿ 360-ಡಿಗ್ರಿ ಲೂಪ್‌ನಲ್ಲಿ ಜನರನ್ನು ಕಳುಹಿಸುವ ಸವಾರಿ ಆಗಿದೆ. 125 ಅಡಿ ಎತ್ತರದ ಕೋಸ್ಟರ್ ರೈಡ್ ಮುಗಿಯುವ ಮೊದಲು ಅದು ಸವಾರರನ್ನು ಆರು ಬಾರಿ ತಿರುಗಿಸುತ್ತದೆ. ದುರದೃಷ್ಟವಶಾತ್ ಈ ಗುಂಪಿಗೆ, ಅವರ ಸವಾರಿಯು ಸಂಪೂರ್ಣವಾಗಿ ತಲೆಕೆಳಗಾಗಿ ಚಲಿಸುತ್ತಿದ್ದ ಸಮಯದಲ್ಲಿ ತಾಂತ್ರಿಕ ದೋಷ ಕಂಡು ಬಂದು ಮೇಲ್ಭಾಗದಲ್ಲಿ ನಿಂತಿದೆ. ಪರಿಣಾಮ ಪ್ರವಾಸಿಗರು ಸ್ಟಕ್ ಆಗುವಂತಾಗಿತ್ತು.
ಕೇಬಲ್ ಕಾರು ದುರಂತ: ಸಾವಿನ ಸಂಖ್ಯೆ 3ಕ್ಕೆ ಏರಿಕೆ