ಕೇಬಲ್ ಕಾರು ದುರಂತ: ಸಾವಿನ ಸಂಖ್ಯೆ 3ಕ್ಕೆ ಏರಿಕೆ
- 26 ತಾಸು ರೋಪ್‌ವೇನಲ್ಲೇ ಸಿಲುಕಿ 23 ಪ್ರವಾಸಿಗರ ಪರದಾಟ
- 2 ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರಾರಯಚರಣೆ
- ತ್ರಿಕೂಟ್ ಭಾರತದ ಅತಿ ಎತ್ತರದ ಲಂಬ ರೋಪ್ ವೇ
ರಾಂಚಿ: ಜಾರ್ಖಂಡ್‌ನ ದೇವಘರ್ ಜಿಲ್ಲೆಯ ತ್ರಿಕೂಟ ಪರ್ವತದಲ್ಲಿ ಸಂಭವಿಸಿದ ಕೇಬಲ್ ಕಾರ್ ನಡುವಣ ಡಿಕ್ಕಿಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆ ಆಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, 23 ಪ್ರವಾಸಿಗರು ಹಗಲೂ-ರಾತ್ರಿ 26 ತಾಸಿನಿಂದ ಸೋಮವಾರ ಸಂಜೆಯವರೆಗೆ ರೋಪ್‌ವೇನಲ್ಲೇ ಸಿಲುಕಿ ಪರದಾಡುತ್ತಿದ್ದರು.
ಅವಘಡದಲ್ಲಿ ಸಿಲುಕಿದ್ದ 25 ಮಂದಿಯನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ಇನ್ನೂ 23 ಜನರು ಪರ್ವತದ ಮಧ್ಯೆ ಕಳೆದ 26 ತಾಸುಗಳಿಂದ ರೋಪ್ ವೇ ಕೇಬಲ್ ಕಾರ್ ಟ್ರ್ಯಾಲಿಯಲ್ಲಿ ಸಿಲುಕಿದ್ದು, ಭಾರತೀಯ ವಾಯುಸೇನೆಯ ಎರಡು ಹೆಲಿಕಾಪ್ಟರ್ ಮೂಲಕ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರಾರಯಚರಣೆ ನಡೆಯುತ್ತಿದೆ. ಮೃತರ ಪೈಕಿ ಒಬ್ಬ ವ್ಯಕ್ತಿಯು, ರೋಪ್‌ವೇನಿಂದ ಹೆಲಿಕಾಪ್ಟರ್‌ಗೆ ಹತ್ತುವಾಗ ಆಯ ತಪ್ಪಿ ಬಿದ್ದು ಅಸುನೀಗಿದ್ದಾನೆ. ದಟ್ಟಾರಣ್ಯದ ಕಣಿವೆಯ ಮೂಲಕ ರೋಪ್ ವೇ ಹಾದು ಹೋಗುವುದರಿಂದ ರಕ್ಷಣಾ ಕಾರ್ಯಾಚರಣೆ ಸವಾಲಾಗಿದೆ. ಡ್ರೋನ್ ಮೂಲಕ ಆಹಾರ ಮತ್ತು ನೀರು ತಲುಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
20 ತಾಸು, ಕೇಬಲ್‌ನಲ್ಲಿ ಸಿಲುಕಿದ್ದಾರೆ 46 ಪ್ರವಾಸಿಗರು, ಜೀವ ರಕ್ಷಿಸಲು ಯೋಧರ ಸಾಹಸ!
ತಾಂತ್ರಿಕ ದೋಷದಿಂದ ದುರಂತ ಸಂಭವಿಸಿರಬಹುದೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಈ ಮಧ್ಯೆ ಘಟನೆ ಬೆನ್ನಲ್ಲೇ ರೋಪ್ ವೇ ಮ್ಯಾನೇಜರ್ ಮತ್ತು ಸಿಬ್ಬಂದಿಗಳು ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಆಗಿದ್ದೇನು?
ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ರೋಪ್ ವೇ ಟ್ರ್ಯಾಲಿಯಲ್ಲಿ ಸಾಗುತ್ತಿರುವಾಗ ತಕ್ಷಣ ವಿದ್ಯುತ್ ಕಡಿತಗೊಂಡಿತು. ಮಾರ್ಗ ಮಧ್ಯದಲ್ಲಿ ಸಿಲುಕಿಕೊಂಡೆವು. ಆಗ ಕೆಲ ಕೇಬಲ್ ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿತು. ರಾತ್ರಿಯೇ ಒಬ್ಬರು ಅಸುನೀಗಿದರು ಎಂದು ಪ್ರವಾಸಿಯೊಬ್ಬರು ಹೇಳಿದ್ದಾರೆ. ಸಹಾಯವಾಣಿಗೆ ಕರೆ ಮಾಡಿದಾಗ ತಾಂತ್ರಿಕ ದೋಷದಿಂದ ರೋಪ್ ವೇ ಟ್ರ್ಯಾಲಿಗಳ ಸಂಚಾರ ಸ್ಥಗಿತಗೊಂಡಿದೆ ಎಂದು ತಿಳಿಸಿದರು. ಮತ್ತೆ ಕರೆ ಮಾಡಿದಾಗ ರೋಪ್ ವೇ ನಿಂತಿದೆ. ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗುತ್ತದೆ ಎಂದರು. ಅಂದಾಜು 100 ಅಡಿ ಎತ್ತರದಲ್ಲಿ ಸಿಲುಕಿಕೊಂಡಿದ್ದೆವು. ಬದುಕುವ ಭರವಸೆಯೇ ಹೋಗಿತ್ತು ಎಂದು ದುರ್ಘಟನೆಯಿಂದ ಪಾರಾದ ಸಂದೀಪ್ ಎಂಬವರು ತಿಳಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಕೇಬಲ್ ಕಾರು ದುರಂತ, ಇಬ್ಬರು ಸಾವು, 46 ಮಂದಿಗಾಗಿ ಮುಂದುವರೆದ ರಕ್ಷಣಾ ಕಾರ್ಯ!
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಮಂಜುನಾಥ್ ಭಜಂತ್ರಿ (Manjunath Bhajantri), ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೆಲವರು ಇನ್ನೂ ಕೇಬರ್ ಕಾರ್‌ನಲ್ಲಿ ಸಿಲುಕಿದ್ದಾರೆ. ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. ಬಾಬಾ ಬದರೀನಾಥ ದೇಗುಲದಿಂದ (Baba Badarinath Temple) 20 ಕಿ.ಮೀ ದೂರದಲ್ಲಿರುವ ತ್ರಿಕೂಟ್ ರೋಪ್ ವೇ 766 ಮೀಟರ್ ಉದ್ದ ಮತ್ತು 392 ಮೀಟರ್ ಎತ್ತರದಲ್ಲಿದ್ದು, ಭಾರತದ ಅತಿ ಎತ್ತರದ ಲಂಭ ರೋಪ್ ವೇ ಎಂಬ ಖ್ಯಾತಿ ಪಡೆದಿದೆ. ರೋಪ್ ವೇನಲ್ಲಿ ತಲಾ ನಾಲ್ಕು ಜನರು ಕೂರಬಹುದಾದ 25 ಕೇಬಲ್ ಕಾರುಗಳಿವೆ ಎಂದು ಜಾರ್ಖಂಡ್ ಪ್ರವಾಸೋದ್ಯಮ ಇಲಾಖೆ (Jharkhand Tourism Department) ತಿಳಿಸಿದೆ.
ಮರುಹುಟ್ಟು ಪಡೆದೆ: ಬದುಕಿದವನ ಅನುಭವ
ಕೇಬಲ್ ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ದುರಂತ ನಡೆದ ನಂತರ 20 ಗಂಟೆಗಳ ಕಾಲ ಕೇಬಲ್ ಕಾರ್‌ನಲ್ಲೇ ಕುಳಿತಿದ್ದೆ. ಅಲ್ಲಿ ಕುಡಿಯಲೂ ನೀರೂ ಇರಲಿಲ್ಲ. ಬದುಕಲಾರೆ ಎಂದೇ ಹಲವು ಬಾರಿ ಅನಿಸಿತ್ತು. ನಂತರ ಹೆಲಿಕಾಪ್ಟರ್ ಮೂಲಕ ರಕ್ಷಿಸಿದರು. ಇದು ನನ್ನ ಮರುಹುಟ್ಟು ಅನಿಸುತ್ತಿದೆ ಎಂದು ದುರ್ಘಟನೆಯಿಂದ ಪಾರಾದ ಬಿಹಾರ ಮೂಲದ ಪ್ರವಾಸಿಗ ಶೈಲೇಂದ್ರ ಕುಮಾರ್ ಯಾದವ್ (Shailendra kumar Yadav) ಎಂಬವರು ತಿಳಿಸಿದ್ದಾರೆ.