ಸಂದೀಪ್‌ ವಾಗ್ಲೆ

ಮಂಗಳೂರು(ಜು.20): ‘ಕೊರೋನಾ ಸೋಂಕು ತಾರಕಕ್ಕೆ ಹೋದಾಗಲೂ ಅರಬ್‌ ದೇಶ ಕತಾರ್‌ ಎಂದೂ ಸಂಪೂರ್ಣವಾಗಿ ಲಾಕ್‌ಡೌನ್‌ ಆಗಲಿಲ್ಲ. ಅಲ್ಲಿ ನಾನಿದ್ದ ಕಚೇರಿಯಲ್ಲೇ ಕೊರೋನಾ ಸೋಂಕಿತರಿದ್ದರೂ ಮುನ್ನೆಚ್ಚರಿಕೆ ವಿಧಾನಗಳನ್ನು ಅನುಸರಿಸಿದ್ದರಿಂದ ಅಷ್ಟೂದಿನ ನನಗೆ ಸೋಂಕು ಹರಡಲಿಲ್ಲ. ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಹೇರದೆ ಕೇವಲ ಶಿಸ್ತುಬದ್ಧ ಕಾನೂನು, ನಿರ್ಬಂಧಗಳಿಂದಲೇ ಕತಾರ್‌ ದೇಶ ಕೊರೋನಾವನ್ನು ಈಗ ನಿಯಂತ್ರಣಕ್ಕೆ ತಂದಿದೆ.’

"

- ಇವು ಕತಾರ್‌ನಲ್ಲಿ ಕೊರೋನಾ ಅವಧಿಯಲ್ಲಿ ಮೂರೂವರೆ ತಿಂಗಳ ಕಾಲ ಕೆಲಸ ನಿರ್ವಹಿಸಿ ಭಾರತಕ್ಕೆ ಮರಳಿರುವ ಮಂಗಳೂರು ಮೂಲದ ಪ್ರಖ್ಯಾತ್‌ ರಾಜ್‌ ಅವರ ನುಡಿಗಳು. ಮಾನವ ಸಂಪನ್ಮೂಲ ಪೂರೈಕೆ ಕಂಪನಿಯೊಂದಲ್ಲಿ ಮ್ಯಾನೇಜರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಕತಾರ್‌ನಲ್ಲಿನ ತನ್ನ ಅನುಭವವನ್ನು ಕನ್ನಡಪ್ರಭದೊಂದಿಗೆ ಹಂಚಿಕೊಂಡರು.

ಗುಡ್‌ ನ್ಯೂಸ್: ಸಾವಿನ ದರ ಭಾರತದಲ್ಲೇ ಕಡಿಮೆ!

ಅಗತ್ಯ ಸೇವೆಯೊಂದಿಗೆ ಬಿಗಿ ನಿಯಮ: ಸುಮಾರು 26 ಲಕ್ಷ ಜನಸಂಖ್ಯೆ ಇರುವ ಈ ಪುಟ್ಟದೇಶದಲ್ಲಿ ಮಾರ್ಚ್ ತಿಂಗಳಲ್ಲೇ ಕೊರೋನಾ ಕತಾರ್‌ಗೆ ಕಾಲಿಟ್ಟಿತ್ತು. ಯಾವಾಗ ಸೋಂಕಿತರ ಸಂಖ್ಯೆ ಏರತೊಡಗಿತೋ, ಎಚ್ಚೆತ್ತ ಸರ್ಕಾರ ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧಿಸಿತು. ಪ್ರತಿದಿನ 600- 700ರಷ್ಟುಪ್ರಕರಣಗಳು ದಾಖಲಾಗತೊಡಗಿದಾಗ ಅಲ್ಲಿನ ಕೆಲಸದ ಅವಧಿಯನ್ನು ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಕಡಿತಗೊಳಿಸಲಾಯಿತು. ರಂಜಾನ್‌ ಅವಧಿಯಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಮಾಡಿದರು. ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಜನ ಸಂಚಾರ ನಿರ್ಬಂಧಿಸಿದರು. ವರ್ಕ್ ಫ್ರಂ ಹೋಂ ಪಾಲನೆಗೆ ಆದೇಶ ಮಾಡಿದರು. ಅವಶ್ಯಕ ವಸ್ತುಗಳ ಅಂಗಡಿ, ಸೂಪರ್‌ ಮಾರ್ಕೆಟ್‌ಗಳು ಹಗಲಿಡೀ ತೆರೆದಿರುತ್ತಿದ್ದವು. ಕೆಲವು ಪ್ರದೇಶಗಳಿಗೆ, ಅಗತ್ಯವಲ್ಲದ ಸೇವೆಗಳಿಗೆ ನಿರ್ಬಂಧ ಹೇರಲಾಗಿತ್ತಷ್ಟೇ ಎಂದು ನೆನಪಿಸಿಕೊಂಡರು ಪ್ರಖ್ಯಾತ್‌.

ಕತಾರ್‌ ಸರ್ಕಾರ ಜನರಿಗೆ ಅಗತ್ಯ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳುವುದರೊಂದಿಗೆ ಬಿಗಿ ನಿಯಮಗಳನ್ನೂ ಜಾರಿ ಮಾಡಿತ್ತು. ಒಂದೋ ಮಾಸ್ಕ್ ಹಾಕಿ, ಇಲ್ಲವೇ ಜೈಲು ಸೇರಿ ಎಂದು ಕಟ್ಟಪ್ಪಣೆ ಹೊರಡಿಸಿತು. ಸಾಮಾಜಿಕ ಅಂತರ ಪಾಲನೆಯನ್ನೂ ಕಡ್ಡಾಯ ಮಾಡಿದರು. ಮಾಸ್ಕ್‌ ಹಾಕದಿದ್ದವರಿಗೆ 3 ವರ್ಷ ಜೈಲು ಶಿಕ್ಷೆ ಕಾಯಂಗೊಳಿಸಿತು. ಉಲ್ಲಂಘಿಸಿದವರಿಗೆ ಭಾರೀ ದಂಡ ವಿಧಿಸಿದ್ದಲ್ಲದೆ ಜೈಲಿಗೂ ಎಳೆದೊಯ್ದರು.

ಇವೆಲ್ಲದರ ಪರಿಣಾಮ ಒಂದೊಮ್ಮೆ ದಿನಕ್ಕೆ 2 ಸಾವಿರ ಕೊರೋನಾ ಪ್ರಕರಣಗಳು ದಾಖಲಾಗುತ್ತಿದ್ದ ಕತಾರ್‌ನಲ್ಲಿ ಈಗ ಸೋಂಕು ನಿಯಂತ್ರಣಕ್ಕೆ ಬಂದಿದ್ದು ದಿನಕ್ಕೆ 250ರಿಂದ 350 ಪ್ರಕರಣಗಳಷ್ಟೇ ವರದಿಯಾಗುತ್ತಿವೆ. ಭಾನುವಾರದವರೆಗೂ ಕತಾರ್‌ನ ಒಟ್ಟು 1,06,648 ಮಂದಿಗೆ ಸೋಂಕು ದೃಢಪಟ್ಟಿದ್ದು, ಅವರಲ್ಲಿ ಈಗಾಗಲೇ 1,03,377 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 157 ಸಾವು ಸಂಭವಿಸಿದ್ದು ಪ್ರಸ್ತುತ ಕೇವಲ 3114 ಮಂದಿಯಷ್ಟೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕ ಪತ್ತೆ ಕ್ಷೀಣ!

ಸೋಂಕಿತರ ಪತ್ತೆಗೆ ಆ್ಯಪ್‌!

ಕೊರೋನಾ ಸೋಂಕಿತರ ಪತ್ತೆಗೆ ಕತಾರ್‌ ಸರ್ಕಾರ ಮೊಬೈಲ್‌ ಆ್ಯಪ್‌ ಸಿದ್ಧಪಡಿಸಿದೆ. ಅಲ್ಲಿ ಎಲ್ಲ ನಾಗರಿಕರಿಗೂ ಐಡಿ ಇರುತ್ತದೆ. ಎಲ್ಲರೂ ಆ ಸಂಖ್ಯೆಯನ್ನು ಆ್ಯಪ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಪಾಸಿಟಿವ್‌ ಇದ್ದಲ್ಲಿ ಆ್ಯಪ್‌ನಲ್ಲಿ ಕೆಂಪು ಬಣ್ಣ, ಕ್ವಾರಂಟೈನ್‌ನಲ್ಲಿದ್ದರೆ ಹಳದಿ ತೋರಿಸುತ್ತದೆ. ಅಂಗಡಿ, ಮಾರುಕಟ್ಟೆಪ್ರವೇಶಿಸುವ ಮೊದಲು ಮೊಬೈಲ್‌ ಆ್ಯಪ್‌ ತೋರಿಸಬೇಕು. ಕೆಂಪು, ಹಳದಿ ಇದ್ದವರಿಗೆ ಪ್ರವೇಶವಿಲ್ಲ. ಹಸಿರು ತೋರಿಸಿದರೆ ಮಾತ್ರ ಒಳಹೋಗಬಹುದು.

ಲಾಕ್‌ಡೌನ್‌ ಒಂದೇ ಪರಿಹಾರವಲ್ಲ ಜನರ ಹೊಣೆಯೂ ಮುಖ್ಯ ನನ್ನ ಕಚೇರಿಯಲ್ಲೇ ಸೋಂಕಿತರಿದ್ದರು!

ನಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ 70 ಉದ್ಯೋಗಿಗಳಿದ್ದರು. ಅವರಲ್ಲಿ 8ಕ್ಕೂ ಅಧಿಕ ಮಂದಿಗೆ ಸೋಂಕಿನ ಲಕ್ಷಣಗಳು ಕಂಡುಬಂದಿದ್ದರೂ ಕಚೇರಿಗೆ ಬರುತ್ತಿದ್ದರು. ಅವರೊಂದಿಗೇ ಕುಳಿತು ನಾನೂ ಕೆಲಸ ಮಾಡಬೇಕಾಗಿತ್ತು. ಅವರು ಆಗಾಗ ಕೆಮ್ಮುತ್ತ, ಸೀನುತ್ತಲೇ ಇದ್ದರು. ನಾನು ಮುನ್ನೆಚ್ಚರಿಕೆಯಾಗಿ ಮಾಸ್ಕ್…, ಗ್ಲೌಸ್‌ ಧರಿಸುತ್ತಿದ್ದೆ. ಆರೋಗ್ಯ ಮಾರ್ಗಸೂಚಿಗಳೆಲ್ಲವನ್ನೂ ಪಾಲಿಸುತ್ತಿದ್ದೆ. ಬೆಳಗ್ಗೆ 7ಕ್ಕೆ ಮನೆಯಲ್ಲಿ ತಿಂಡಿ ತಿಂದು ಕಚೇರಿಗೆ ಹೊರಟರೆ ಸಂಜೆ ಆರಕ್ಕೆ ಮನೆಗೆ ಬರುವವರೆಗೂ ಕಚೇರಿಯಲ್ಲಿ ಏನೂ ತಿನ್ನುತ್ತಿರಲಿಲ್ಲ. ಅಲ್ಲಿಂದ ವಿಮಾನದಲ್ಲಿ ಮಂಗಳೂರಿಗೆ ಬರುವವರೆಗೂ ಸಾಧ್ಯವಾದ ಎಲ್ಲ ಮುಂಜಾಗ್ರತೆ ತೆಗೆದುಕೊಂಡಿದ್ದರಿಂದ ನಾನು, ಪತ್ನಿಯೂ ಸೋಂಕಿನಿಂದ ದೂರ ಉಳಿಯಲು ಸಾಧ್ಯವಾಯಿತು ಎನ್ನುತ್ತಾರೆ ಪ್ರಖ್ಯಾತ್‌ ರಾಜ್‌.

ಮಳೆಗಾಲ, ಚಳಿಗಾಲದಲ್ಲಿ ಕೊರೋನಾ ಭೀಕರ: ಐಐಟಿ- ಏಮ್ಸ್‌ ಅಧ್ಯಯನ!

ಮಾಸ್ಕ್‌ ಹಾಕದಿದ್ದರೆ 3 ವರ್ಷ ಜೈಲು ಶಿಕ್ಷೆ

- 26 ಲಕ್ಷ ಜನರಿರುವ ಕತಾರ್‌ಗೆ ಮಾರ್ಚಲ್ಲೇ ಕೊರೋನಾ ಆಗಮನ

- ಸೋಂಕು ಏರುತ್ತಿದ್ದಂತೆ ಅಂತಾರಾಷ್ಟ್ರೀಯ ವಿಮಾನ ಸೇವೆ ಬಂದ್‌

- ನಿತ್ಯ 600-700 ಕೇಸ್‌ ಬರುತ್ತಿದ್ದಂತೆ ಕೆಲಸದ ಅವಧಿಯೂ ಕಡಿತ

- ರಾತ್ರಿ ವೇಳೆ ಸಂಚಾರ ನಿರ್ಬಂಧ, ವರ್ಕ್ ಫ್ರಂ ಹೋಮ್‌ಗೆ ಆದೇಶ

- ಮಾಸ್ಕ್‌ ಹಾಕದವರಿಗೆ 3 ವರ್ಷ ಜೈಲು ಶಿಕ್ಷೆ ಘೋಷಿಸಿದ್ದ ಕತಾರ್‌

- ಸಾಮಾಜಿಕ ಅಂತರ ಪಾಲನೆಯನ್ನೂ ಕಡ್ಡಾಯಗೊಳಿಸಿದ್ದ ಕೊಲ್ಲಿ ರಾಷ್ಟ್ರ