ನವದೆಹಲಿ(ಜು.20): ದೇಶದಲ್ಲಿ ನಿತ್ಯವೂ ಹೊಸ ಕೊರೋನಾ ಸೋಂಕಿತರ ಪ್ರಮಾಣ ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದ್ದರೂ, ಸೋಂಕಿತರು ಸಾವನ್ನಪ್ಪುವ ಪ್ರಮಾಣವು ದಿನೇ ದಿನೇ ಇಳಿಕೆಯಾಗುತ್ತಿದೆ. ಜೊತೆಗೆ ಅತಿ ಹೆಚ್ಚು ಸೋಂಕಿತರು ಇರುವ ಟಾಪ್‌ 10 ದೇಶಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣವೂ ಭಾರತದಲ್ಲೇ ಕಡಿಮೆ ಇದೆ ಎಂಬ ಸಮಾಧಾನಕರ ವಿಷಯವೂ ಹೊರಬಿದ್ದಿದೆ. ಪ್ರಸಕ್ತ ಭಾರತದಲ್ಲಿ 100 ಜನರಿಗೆ ಸೋಂಕು ತಗುಲಿದ್ದರೆ ಅವರಲ್ಲಿ 2.49 ಜನರು ಮಾತ್ರವೇ ಸಾವನ್ನಪ್ಪುತ್ತಿದ್ದಾರೆ ಎಂದು ಅಂಕಿ ಅಂಶಗಳೇ ಹೇಳುತ್ತಿವೆ.

"

ಇನ್ನು ಭಾರತದ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕಿತರ ಸಾವಿನ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದೆ. ಅದರಲ್ಲೂ 5 ರಾಜ್ಯಗಳು ಶೂನ್ಯ ಸಾವಿನ ಪ್ರಮಾಣ ಹೊಂದಿದ್ದರೆ, 14 ರಾಜ್ಯಗಳು ಶೇ.1ಕ್ಕಿಂತ ಕಡಿಮೆ ಸಾವಿನ ಪ್ರಮಾಣ ಹೊಂದಿವೆ.

ಲಾಕ್ಡೌನ್‌ ಇಲ್ಲದೆ ಕೊರೋನಾ ಮಣಿಸಿದ ಕತಾರ್‌: ಅನುಭವ ಬಿಚ್ಚಿಟ್ಟ ಮಂಗಳೂರಿನ ಪ್ರಖ್ಯಾತ್‌ ರಾಜ್‌ !

ಇನ್ನು ಚೇತರಿಕೆ ಪ್ರಮಾಣದಲ್ಲೂ ಭಾರತ ಉತ್ತಮ ಸಾಧನೆ ಮಾಡಿದೆ. ಶನಿವಾರದವರೆಗಿನ ಲೆಕ್ಕಾಚಾರ ಹಿಡಿದರೆ, ದೇಶದಲ್ಲಿ ಈವರೆಗೆ 10,73,813 ಸೋಂಕಿತರು ಪತ್ತೆಯಾಗಿದ್ದು, ಈ ಪೈಕಿ 672898 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಅಂದರೆ ಸಕ್ರಿಯ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದೆ. ಈ ಮೂಲಕ ಚೇತರಿಕೆ ಪ್ರಮಾಣ ಶೇ.62.66ಕ್ಕೆ ತಲುಪಿದೆ.

ಸತತ ಇಳಿಕೆ:

ಭಾರತದಲ್ಲಿ ಸೋಂಕಿತರ ಸಾವಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಲೇ ಇದೆ. ತಿಂಗಳ ಹಿಂದೆ ಈ ಪ್ರಮಾಣ ಶೇ.2.82ರಷ್ಟಿತ್ತು, ಜುಲೈ 10ರ ವೇಳೆಗೆ ಅದು ಶೇ.2.72ಕ್ಕೆ ಇಳಿಯಿತು. ಇದೀಗ ಅದು ಶೇ.2.49ಕ್ಕೆ ಕುಸಿದಿದೆ.

ರಾಜ್ಯಗಳಲ್ಲಿ ಪ್ರಮಾಣ:

ವಿವಿಧ ರಾಜ್ಯಗಳಲ್ಲಿ ಸೋಂಕಿತರ ಪ್ರಮಾಣ ಈ ರೀತಿಯಲ್ಲ ಇದೆ. ತ್ರಿಪುರಾ (ಶೇ.0.19), ಅಸ್ಸಾಂ (ಶೇ.0.23), ಕೇರಳ (ಶೇ.0.34), ಒಡಿಶಾ (ಶೇ.0.51), ಗೋವಾ (ಶೇ.0.60), ಹಿಮಾಚಲ ಪ್ರದೇಶ (ಶೇ.0.75), ಬಿಹಾರ (ಶೇ.0.83), ತೆಲಂಗಾಣ (ಶೇ.0.93), ಆಂಧ್ರಪ್ರದೇಶ (ಶೇ.1.31), ತಮಿಳುನಾಡು (ಶೇ.1.45), ಚಂಡೀಗಢ (ಶೇ.1.71), ರಾಜಸ್ಥಾನ (ಶೇ.1.94), ಕರ್ನಾಟಕ (ಶೇ.2.08), ಉತ್ತರಪ್ರದೇಶ (ಶೇ.2.36).

ರಾಜ್ಯದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕ ಪತ್ತೆ ಕ್ಷೀಣ!

ಶೂನ್ಯ ಪ್ರಮಾಣ: ಮಣಿಪುರ, ನಾಗಾಲ್ಯಾಂಡ್‌, ಸಿಕ್ಕಿಂ, ಮಿಜೋರಾಂ, ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ಒಟ್ಟಾರೆ 2016 ಪ್ರಕರಣಗಳು ದಾಖಲಾಗಿದ್ದರೂ, ಒಂದೇ ಒಂದು ಸಾವು ಸಂಭವಿಸಿಲ್ಲ. ಈ ಮೂಲಕ ಅವರು ಸೋಂಕಿತರ ಸಾವಿನಲ್ಲಿ ಶೂನ್ಯ ಪ್ರಮಾಣ ಹೊಂದಿವೆ.

ಆಸ್ಪತ್ರೆಗೆ ದಾಖಲಾದ ರೋಗಿಗಳ ಸೂಕ್ತ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೋರಿದ ಶ್ರಮ, ಸೋಂಕು ಹೆಚ್ಚಾದ ಕಡೆ ಕಂಟ್ಮೈನೆಂಟ್‌ ವಲಯಗಳನ್ನು ರಚಿಸಿದ್ದು, ಸೋಂಕು ತಪಾಸಣೆ ಹೆಚ್ಚಿಸಿದ್ದು, ವೈದ್ಯಕೀಯ ಸೌಕರ್ಯ ಹೆಚ್ಚಳ ಮಾಡಿದ್ದು, ತಂತ್ರಜ್ಞಾನ ಬಳಸಿ ಸಮೀಕ್ಷೆ, ಚಿಕಿತ್ಸೆ ಮೇಲ್ವಿಚಾರಣೆ ನಡೆಸಿದ್ದು, ಸೋಂಕಿತರಿಗೆ ವೈದ್ಯಕೀಯ ಶಿಷ್ಟಾಚಾರದ ಅನ್ವಯ ಚಿಕಿತ್ಸೆ ನೀಡಿದ್ದು, ಆಶಾ ಕಾರ್ಯಕರ್ತೆಯರು, ದಾದಿಯರು, ವೈದ್ಯರು, ಕೊರೋನ ವಾರಿಯ​ರ್‍ಸ್ಗಳ ಅಪಾರ ಶ್ರಮವು ಸೋಂಕಿತರ ಸಾವಿನ ಪ್ರಮಾಣ ಕಡಿಮೆಯಾಗಲು ಮುಖ್ಯ ಕಾರಣ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.