ಶ್ರೀಕಾಂತ್‌ ಎನ್‌.ಗೌಡಸಂದ್ರ

ಬೆಂಗಳೂರು(ಜು.20): ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡಿ ಕ್ವಾರಂಟೈನ್‌ ಮಾಡುವ ಮೂಲಕ ಸೋಂಕು ಬೇರೆಯವರಿಗೆ ಹರಡದಂತೆ ಕ್ರಮವಹಿಸಿ ಕೇಂದ್ರ ಸರ್ಕಾರದಿಂದ ಶಹಬ್ಬಾಸ್‌ಗಿರಿ ಪಡೆದಿದ್ದ ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ, ಜನರು ಹಾಗೂ ಸಿಬ್ಬಂದಿಗಳು ಸಹಕಾರ ನೀಡದ ಕಾರಣ ಪತ್ತೆ ಪ್ರಮಾಣ ತೀರಾ ಕಡಿಮೆಯಾಗಿದೆ.

ಜೂ.18ರವರೆಗೆ ಪ್ರತಿ ಸೋಂಕಿತನಿಗೆ ಸರಾಸರಿ 47 ಮಂದಿ ಸಂಪರ್ಕಿತರನ್ನು ಪತ್ತೆ ಮಾಡಿ ಸಾಂಸ್ಥಿಕ ಅಥವಾ ಹೋಂ ಕ್ವಾರಂಟೈನ್‌ಗೆ ಒಳಪಡಿಸಿ ದೇಶದಲ್ಲೇ ಅತಿ ಹೆಚ್ಚು ಸರಾಸರಿ ಸಂಪರ್ಕ ಮಾಡಿದ ಕೀರ್ತಿಗೆ ರಾಜ್ಯ ಸರ್ಕಾರ ಪಾತ್ರವಾಗಿತ್ತು. ಪರಿಣಾಮ, ಜೂ.18 ರಂದು ಎಲ್ಲಾ ರಾಜ್ಯಗಳಿಗೂ ಪತ್ರ ಬರೆದಿದ್ದ ಕೇಂದ್ರ ಸರ್ಕಾರ ಸಂಪರ್ಕ ಪತ್ತೆಗೆ ಕರ್ನಾಟಕ ಮಾದರಿ ಅನುಸರಿಸುವಂತೆ ಸೂಚನೆ ನೀಡಿತ್ತು.

ಕೊರೋನಾ ಸುಳಿಯಲ್ಲಿ ಮುಂಚೂಣಿ ವಾರಿಯರ್ಸ್!

ದೇಶಕ್ಕೆ ಮಾದರಿಯಾಗಿ ಗಮನ ಸೆಳೆದ ರಾಜ್ಯದಲ್ಲಿ ಕಳೆದ ಜೂನ್‌ 18 ರಿಂದ ಜುಲೈ 16ರವರೆಗಿನ ಅವಧಿಯಲ್ಲಿ ಸಂಪರ್ಕ ಪತ್ತೆಯ ಪ್ರಮಾಣ ತೀರಾ ಕಡಿಮೆಯಾಗಿದೆ. ಪ್ರತಿ ಸೋಂಕಿತನಿಗೆ ಸರಾಸರಿ 47 ಸಂಪರ್ಕ ಪತ್ತೆ ಮಾಡುತ್ತಿದ್ದ ರಾಜ್ಯ ಇದೀಗ 3.92 ಮಂದಿಯನ್ನು ಮಾತ್ರ ಪತ್ತೆ ಮಾಡುತ್ತಿದೆ. ರಾಜ್ಯದ ಅರ್ಧ ಸೋಂಕಿತರನ್ನು ಒಡಲಲ್ಲಿ ಇಟ್ಟುಕೊಂಡಿರುವ ಬೆಂಗಳೂರು ನಗರದಲ್ಲಿ ಪ್ರತಿಯೊಬ್ಬರಿಗೆ 1.7 (2ಕ್ಕಿಂತ ಕಡಿಮೆ) ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಿದೆ.

ಸೋಂಕಿತರ ಕುಟುಂಬ ಸದಸ್ಯರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಿದರೂ ಇದಕ್ಕಿಂತ ಹೆಚ್ಚು ಮಂದಿಯನ್ನು ಪತ್ತೆ ಹಚ್ಚಬಹುದಿತ್ತು. ಆದರೆ ಇದರ ಬಗ್ಗೆಯೇ ನಿರ್ಲಕ್ಷ್ಯ ವಹಿಸಿರುವುದು ತೀವ್ರ ಟೀಕೆಗೆ ಕಾರಣವಾಗಿದೆ.

ಸೋಂಕು ಹೆಚ್ಚಳದಿಂದ ಕೈ ಚೆಲ್ಲಿದ ಇಲಾಖೆ:

ಜೂ.18 ರವರೆಗೆ ರಾಜ್ಯದಲ್ಲಿ 7944 ಪ್ರಕರಣ ಪತ್ತೆಯಾಗಿ 114 ಮಂದಿ ಸಾವನ್ನಪ್ಪಿದ್ದರು. ಜೂ.20 ರ ಬಳಿಕ ಸೋಂಕು ವೇಗವಾಗಿ ಹೆಚ್ಚಳವಾಯಿತು. ನಿತ್ಯ ಸಾವಿರಕ್ಕಿಂತಲೂ ಹೆಚ್ಚು ಸೋಂಕು ವರದಿಯಾಗಿದ್ದರಿಂದ ಅಷ್ಟೂಮಂದಿಯ ಸಂಪರ್ಕಿತರ ಪತ್ತೆಗೆ ಮುಂದಾಗದೆ ಕೈ ಚೆಲ್ಲಿತು.

ಸಂಪರ್ಕ ಪತ್ತೆಗೆ ದೂರವಾಣಿ ಆಧಾರಿತ ವ್ಯವಸ್ಥೆ, ಪ್ರತ್ಯೇಕ ವೆಬ್‌ ಅಪ್ಲಿಕೇಷನ್‌ ಹಾಗೂ ಆ್ಯಪ್‌ ಅಭಿವೃದ್ಧಿಪಡಿಸಿದ್ದ ರಾಜ್ಯ ಕೊರೋನಾ ಕಾರ್ಯಪಡೆ ಅದರ ಸದ್ಬಳಕೆಯಲ್ಲಿ ಆರಂಭದಲ್ಲಿ ಕಂಡಿದ್ದ ಯಶಸ್ಸು ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕೊರೋನಾ ಕಾರ್ಯಪಡೆ ಮುಖ್ಯಸ್ಥ ಮುನಿಶ್‌ ಮೌದ್ಗಿಲ್‌, ‘ಸಂಪರ್ಕ ಪತ್ತೆಗೆ ಅಗತ್ಯವಾದ ಎಲ್ಲಾ ತಂತ್ರಜ್ಞಾನವನ್ನು ಸಿದ್ಧಪಡಿಸಿದ್ದೆವು. ಜನರಿಗೂ ಇದರ ಆಯ್ಕೆಗಳನ್ನು ನೀಡಿದ್ದೆವು. ಸಿಬ್ಬಂದಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದೆವು. ಅವರು ಸಹಕರಿಸಲಿಲ್ಲ ಎಂದರೆ ನಾವೇನು ಮಾಡಲಾಗುತ್ತದೆ?’ ಎಂದು ಮರುಪ್ರಶ್ನೆ ಮಾಡಿದರು.

ಲಾಕ್ಡೌನ್‌ ಇಲ್ಲದೆ ಕೊರೋನಾ ಮಣಿಸಿದ ಕತಾರ್‌: ಅನುಭವ ಬಿಚ್ಚಿಟ್ಟ ಮಂಗಳೂರಿನ ಪ್ರಖ್ಯಾತ್‌ ರಾಜ್‌ !

ಬೆಂಗಳೂರಿನಲ್ಲಿ ಶೇ.1.7 ರಷ್ಟುಪತ್ತೆ:

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಪರ್ಕ ಪತ್ತೆ ಸರಾಸರಿ ಪ್ರಮಾಣ ಕಡಿಮೆಯಾಗುತ್ತಿದ್ದು, ಕಳೆದ ಒಂದು ತಿಂಗಳಲ್ಲಿ ಪ್ರತಿ ಸೋಂಕಿತನಿಗೆ ಬೆಂಗಳೂರು ನಗರದಲ್ಲಿ 1.7 ಮಂದಿ, ಬೆಂಗಳೂರು ಗ್ರಾಮಾಂತರ 1.9 ಮಂದಿ, ಬೆಳಗಾವಿ 2.1, ಚಿಕ್ಕಮಗಳೂರು 7.8, ಬೀದರ್‌ 7.7, ಹಾವೇರಿ 5.4, ಬಾಗಲಕೋಟೆ 5.3, ಕೊಪ್ಪಳ 5.2, ರಾಮನಗರ, ಕಲಬುರಗಿ ತಲಾ 5, ಮಂಡ್ಯ 4.7, ರಾಯಚೂರು 4.6, ಕೊಡಗು 4.6, ಚಾಮರಾಜನಗರ 4.5, ಚಿತ್ರದುರ್ಗ 4.3, ತುಮಕೂರು 4.3, ಚಿಕ್ಕಬಳ್ಳಾಪುರ 4.2, ಉತ್ತರಕನ್ನಡ 4.2, ಕೋಲಾರ 4.0, ಹಾಸನ 4.0, ಬಳ್ಳಾರಿ 3.9, ಧಾರವಾಡ 3.8, ಗದಗ 3.8, ಯಾದಗಿರಿ 3.2, ವಿಜಯಪುರ 3.2, ಶಿವಮೊಗ್ಗ 3.1, ಮೈಸೂರು 3.0, ಉಡುಪಿ 3.7, ದಾವಣಗೆರೆ 2.5, ದಕ್ಷಿಣ ಕನ್ನಡ 2.3 ಮಂದಿಯನ್ನು ಮಾತ್ರ ಪತ್ತೆ ಮಾಡಲಾಗಿದೆ.