ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಶೆಹಬಾಜ್ ಷರೀಫ್ ಸರ್ಕಾರದ ದಮನಕಾರಿ ನೀತಿಗಳ ವಿರುದ್ಧ ನಡೆದ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿದೆ. ಪಾಕಿಸ್ತಾನ ಸೇನೆಯು ಪ್ರತಿಭಟನಾಕಾರರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ 30 ಜನರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿ

ಏನಿದು ಘಟನೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
  • ಪ್ರಧಾನಿ ಶೆಹಬಾಜ್‌ ಷರೀಫ್‌ ನೇತೃತ್ವದ ಸರ್ಕಾರದಿಂದ ಪಿಒಕೆ ಜನರ ಮೇಲೆ ದಮನಕಾರಿ ನೀತಿ
  • ಪಿಒಕೆ ಶಾಸನಸಭೆಯ 12 ಸ್ಥಾನಗಳನ್ನು ಈ ಪ್ರದೇಶಕ್ಕೆ ಸೇರದ ಜನರಿಗೆ ನೀಡಲು ಮುಂದಾಗಿತ್ತು
  • ಇದನ್ನು ಖಂಡಿಸಿ ಪಿಒಕೆ ಜನ ಪ್ರತಿಭಟನೆಗೆ ಇಳಿದ ವೇಳೆ ಪಾಕಿಸ್ತಾನ ಸೇನೆಯ ದುಂಡಾವರ್ತನೆ
  •  ಪಾಕಿಸ್ತಾನಿ ಸೇನೆಯ ಗೋಲಿಬಾರ್‌ಗೆ 30 ಜನರು ಬಲಿ. ಈ ಕೃತ್ಯಕ್ಕೆ ಭಾರತದಿಂದ ತೀವ್ರ ಖಂಡನೆ
  • ಸಾವಿನ ಸಂಖ್ಯೆ ಇನ್ನೂ ಹೆಚ್ಚಿದೆ. ಅಸಲಿ ಸಂಖ್ಯೆಯನ್ನು ಪಾಕ್‌ ಸೇನೆ ಮುಚ್ಚಿಡುತ್ತಿದೆ: ಸ್ಥಳೀಯರು

---ಇಸ್ಲಾಮಾಬಾದ್‌: ಪ್ರಧಾನಿ ಶೆಹಬಾಜ್‌ ಷರೀಫ್‌(Prime Minister Shehbaz Sharif) ನೇತೃತ್ವದ ಸರ್ಕಾರದ ದಮನಕಾರಿ, ಕಡೆಗಣಿಸುವ ನೀತಿ ವಿರುದ್ಧ ಪಾಕ್‌ ಆಕ್ರಮಿತ ಕಾಶ್ಮೀರ(PoK)ದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪಾಕ್‌ ಸೇನೆ ಗುಂಡಿನ ಭೀಕರ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ 30 ಪ್ರತಿಭಟನಾಕಾರರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈ ನಡುವೆ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಸೇನೆ ನಡೆಸಿದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ಜಾಗತಿಕ ಸಮುದಾಯ ಪಾಕಿಸ್ತಾನ(Pakistan)ಕ್ಕೆ ಛೀಮಾರಿ ಹಾಕಬೇಕು ಎಂದು ಆಗ್ರಹಿಸಿದೆ.

ಜು.27ರಂದು ನಡೆಯಲಿರುವ ಚುನಾವಣೆಯಲ್ಲಿ 45 ಸದಸ್ಯ ಬಲದ ಪಿಒಕೆ ಶಾಸನ ಸಭೆ(POK Legislative Assembly)ಯ 12 ಸ್ಥಾನಗಳನ್ನು ಹೊರಗಿನವರಿಗೆ ಮೀಸಲಿಡುವ ಮೂಲಕ ಪಾಕಿಸ್ತಾನವು ಪಿಒಕೆ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪ, ವಿದ್ಯುತ್‌ ಕೊರತೆ, ವಿದ್ಯುತ್‌ ದರ ಹೆಚ್ಚಳ, ಸಂಪತ್ತಿನ ಲೂಟಿ, ನಿರುದ್ಯೋಗ ಸಮಸ್ಯೆ, ಗಗನಕ್ಕೇರಿರುವ ಹಣದುಬ್ಬರ ವಿಷಯ ಮುಂದಿಟ್ಟುಕೊಂಡು ರವಾಲಾಕೋಟ್‌ನಲ್ಲಿ ಜಾಯಿಂಟ್‌ ಅವಾಮಿ ಆ್ಯಕ್ಷನ್‌ ಕಮಿಟಿ(ಜೆಎಎಸಿ) ಕರೆ ನೀಡಿದ್ದ ಪ್ರತಿಭಟನೆ ವೇಳೆ ಈ ಘಟನೆ ನಡೆದಿದೆ.

ಸಾರ್ವಜನಿಕ ಶಾಂತಿ, ಸುವ್ಯವಸ್ಥೆಯ ಬೆದರಿಕೆಯ ನೆಪವೊಡ್ಡಿ ಕಳೆದ ವಾರವಷ್ಟೇ ಸರ್ಕಾರವು ಜೆಎಎಸಿ ಅನ್ನು ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿತ್ತು. ಈ ನಡುವೆ, ಶುಕ್ರವಾರ ರಾತ್ರಿ ವ್ಯಾಪಾರಿಯೊಬ್ಬನನ್ನು ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದು, ಆ ಬಳಿಕ ಜೆಎಎಸಿ ಬೆಂಬಲಿಗರು ಆಸ್ಪತ್ರೆಯ ಶವಾಗಾರದ ಹೊರಗೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದಾಗ ಗಲಾಟೆ ನಡೆದಿದೆ.

ಪೊಲೀಸರ ಪ್ರಕಾರ ಜನರ ಗುಂಪನ್ನು ಭದ್ರತಾ ಸಿಬ್ಬಂದಿ ಚದುರಿಸಲು ಯತ್ನಿಸಿದ್ದು, ಆಗ ಜೆಎಎಸಿ ಸದಸ್ಯರು ರೈಫಲ್‌ಗಳು, ಪೆಟ್ರೋಲ್‌ ಬಾಂಬ್‌ಗಳು ಹಾಗೂ ಆಯುಧಗಳ ಮೂಲಕ ದಾಳಿಗೆತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪ್ಯಾರಾ ಮಿಲಿಟರಿಯವರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಏಳು ಮಂದಿ ಮೃತಪಟ್ಟಿದ್ದಾರೆ.

ಆದರೆ ಸ್ಥಳೀಯರು ಹಾಗೂ ಜೆಎಎಸಿ ಬೆಂಬಲಿಗರು ಪೊಲೀಸರ ಈ ಆರೋಪ ತಳ್ಳಿಹಾಕಿದ್ದಾರೆ. ಸಾವಿನ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.