ಚೀನಾದ ಪುರಾತತ್ವಜ್ಞರು ಕ್ವಿನ್ ರಾಜವಂಶದ ಸಮಾಧಿಯೊಂದರಲ್ಲಿ 2,000 ವರ್ಷಗಳಷ್ಟು ಹಳೆಯ, ಕಂಚಿನ ಪಾತ್ರೆಯಲ್ಲಿ ಸುಸ್ಥಿತಿಯಲ್ಲಿದ್ದ ಮದ್ಯವನ್ನು ಪತ್ತೆಹಚ್ಚಿದ್ದಾರೆ. ಈ ದ್ರವವು ಪ್ರಾಚೀನ ಚೀನಾದ ಮದ್ಯ ತಯಾರಿಕೆಯ ಸಂಕೀರ್ಣ ತಂತ್ರಜ್ಞಾನದ ಮೇಲೆ ಹೊಸ ಬೆಳಕು ಚೆಲ್ಲಿದೆ.
ನವದೆಹಲಿ (ಆ.11): ಚೀನಾದ ಪುರಾತತ್ವ ತಜ್ಞರು ಸುಮಾರು 2,000ಕ್ಕೂ ಹೆಚ್ಚು ವರ್ಷಗಳಷ್ಟು ಅತ್ಯಂತ ಪ್ರಾಚೀನ ಹಾಗೂ ವಿಸ್ಮಯಕಾರಿ ಎನ್ನುವ ರೀತಿಯಲ್ಲಿ ಸುಸ್ಥಿತಿಯಲ್ಲಿರುವ ಮದ್ಯದ ದ್ರವವನ್ನು ಪತ್ತೆಹಚ್ಚಿದ್ದಾರೆ. ಚೀನಾದ ನಿಂಗ್ಕ್ಸಿಯಾ ಹುಯಿ ಸ್ವಾಯತ್ತ ಪ್ರದೇಶದ ಶಾಂಜಿಯಾಬಾವೊ ಸ್ಮಶಾನದಲ್ಲಿದ್ದ ಕ್ವಿನ್ (Qin) ಕಾಲದ ಸಮಾಧಿಯೊಂದರಲ್ಲಿ ಸಿಕ್ಕ ಪ್ರಾಚೀನ ಕಂಚಿನ (Bronze) ಬಾಟಲಿಯಲ್ಲಿ ಈ ಮದ್ಯ ದೊರೆತಿದೆ.
ಕಂಚಿನ ಪಾತ್ರೆಯಲ್ಲಿ ಸುಮಾರು 3.74 ಲೀಟರ್ (ಸರಿ ಸುಮಾರು ಒಂದು ಗ್ಯಾಲನ್) ತಿಳಿ ನೀಲಿ-ಹಸಿರು ಬಣ್ಣದ ದ್ರವ ಶೇಖರಣೆಯಾಗಿತ್ತು. ವಿಜ್ಞಾನಿಗಳು ಈ ದ್ರವವನ್ನು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿದಾಗ ಅದರಲ್ಲಿ 2,400ಕ್ಕೂ ಹೆಚ್ಚು ಸಾವಯವ ಸಂಯುಕ್ತಗಳು (Organic compounds), ಪಿಷ್ಟದ ಕಣಗಳು (Starch grains), ಫೈಟೊಲಿತ್‌ಗಳು ಹಾಗೂ ಈಸ್ಟ್‌ನ (Yeast) ಅವಶೇಷಗಳು ಪತ್ತೆಯಾಗಿವೆ. ಈ ಸಂಶೋಧನೆಯು ಚೀನಾದ ‘ವಾರಿಂಗ್ ಸ್ಟೇಟ್ಸ್’ (Warring States) ಯುಗದ ಮದ್ಯ ತಯಾರಿಕೆಯ ಸಂಪ್ರದಾಯದ ಮೇಲೆ ಹೊಸ ಬೆಳಕು ಚೆಲ್ಲಿದೆ.
ವಾಯುವ್ಯ ಚೀನಾದ ಶಾಂಜಿಯಾಬಾವೊ ಪ್ರದೇಶದಲ್ಲಿರುವ ‘M39’ ಎಂಬ ಸಮಾಧಿಯಲ್ಲಿ ಈ ಅಪರೂಪದ ಕಂಚಿನ ಪಾತ್ರೆ ಪತ್ತೆಯಾಗಿದೆ. ಈ ಸ್ಮಶಾನದಲ್ಲಿ ಕ್ರಿಸ್ತಪೂರ್ವ 475 ರಿಂದ 221 ರವರೆಗಿನ 'ವಾರಿಂಗ್ ಸ್ಟೇಟ್ಸ್' ಅವಧಿಗೆ ಸೇರಿದ ಒಟ್ಟು 183 ಸಮಾಧಿಗಳಿವೆ. ಈ ಶೋಧನೆಯ ವಿವರಗಳನ್ನು 'ಜರ್ನಲ್ ಆಫ್ ಆರ್ಕಿಯೋಲಾಜಿಕಲ್ ಸೈನ್ಸ್: ರಿಪೋರ್ಟ್ಸ್'ನಲ್ಲಿ ಪ್ರಕಟಿಸಲಾಗಿದೆ. ಚೀನಾವನ್ನು ಒಗ್ಗೂಡಿಸಿದ ಕ್ವಿನ್ ಸಾಮ್ರಾಜ್ಯಕ್ಕೆ ಈ ಸಮಾಧಿ ಸಂಬಂಧಿಸಿದೆ. ಬೆಳ್ಳುಳ್ಳಿಯ ಆಕಾರದ ಬಾಯಿಯನ್ನು ಹೊಂದಿರುವ ಈ ವಿಶಾಲ ಕಂಚಿನ ಪಾತ್ರೆಯನ್ನು ಅಂದು ಮದ್ಯ ಸಂಗ್ರಹಿಸಿಡಲು ಬಳಸಲಾಗುತ್ತಿತ್ತು.
ಎರಡು ಸಹಸ್ರಮಾನಗಳ ಕಾಲ ದ್ರವ ಸುರಕ್ಷಿತವಾಗಿದ್ದದ್ದು ಹೇಗೆ?
ಸಾಮಾನ್ಯವಾಗಿ ಪ್ರಾಚೀನ ಸಮಾಧಿಗಳಲ್ಲಿ ಪಾತ್ರೆಗಳ ತಳದಲ್ಲಿ ಒಣಗಿದ ಲೇಪನ ಅಥವಾ ಮದ್ಯದ ಕೇವಲ ಕುರುಹುಗಳು ಮಾತ್ರ ಸಿಗುತ್ತವೆ. ಆದರೆ ಇಲ್ಲಿ ಬರೋಬ್ಬರಿ 3.74 ಲೀಟರ್ ದ್ರವ ಆವಿಯಾಗದೆ ದ್ರವರೂಪದಲ್ಲೇ ಉಳಿದಿರುವುದು ಅಚ್ಚರಿಗೆ ಕಾರಣವಾಗಿದೆ.
ವಾಯುವ್ಯ ಚೀನಾದ ಒಣ ಹವಾಮಾನ ಹಾಗೂ ಈ ಪಾತ್ರೆಯನ್ನು ಮುಚ್ಚಿದ ವಿಶೇಷ ವಿಧಾನವೇ ಇದಕ್ಕೆ ಮುಖ್ಯ ಕಾರಣ. ಪಾತ್ರೆಯ ಒಳಭಾಗವನ್ನು ಜವಳಿ (Textile) ಬಟ್ಟೆಯಿಂದ ಮತ್ತು ಹೊರಭಾಗವನ್ನು ಸಾವಯವ ಪದಾರ್ಥ ಮಿಶ್ರಿತ ಮಣ್ಣಿನಿಂದ (Organic-tempered daub) ಸಂಪೂರ್ಣ ಸೀಲ್ ಮಾಡಲಾಗಿತ್ತು. ಈ ಜಲನಿರೋಧಕ ಸೀಲಿಂಗ್ ಹಾಗೂ ಸಮಾಧಿಯ ಒಳಗಿನ ಸೂಕ್ತ ವಾತಾವರಣವು ದ್ರವವನ್ನು ಆವಿಯಾಗದಂತೆ ಮತ್ತು ಕಲುಷಿತಗೊಳ್ಳದಂತೆ ರಕ್ಷಿಸಿದೆ.
ರಾಸಾಯನಿಕ ವಿಶ್ಲೇಷಣೆ: ದ್ರವದಲ್ಲಿದೆ 2,400ಕ್ಕೂ ಹೆಚ್ಚು ಸಂಯುಕ್ತಗಳು!
ಸಂಶೋಧಕರು ಈ ದ್ರವವನ್ನು ಅತ್ಯಾಧುನಿಕ ಪರೀಕ್ಷೆಗೆ ಒಳಪಡಿಸಿದಾಗ 24 ವಿವಿಧ ವರ್ಗಗಳಿಗೆ ಸೇರಿದ 2400ಕ್ಕೂ ಹೆಚ್ಚು ಸಾವಯವ ಸಂಯುಕ್ತಗಳು ಪತ್ತೆಯಾಗಿವೆ. ಅವುಗಳಲ್ಲಿ ಅಮೈನೋ ಆಮ್ಲಗಳು, ಕೊಬ್ಬಿನಾಮ್ಲಗಳು, ಕಾರ್ಬೋಹೈಡ್ರೇಟ್‌ಗಳು, ಲ್ಯಾಕ್ಟಿಕ್ ಆಮ್ಲ ಮತ್ತು ಆಕ್ಸಾಲಿಕ್ ಆಮ್ಲಗಳು ಕಂಡುಬಂದಿವೆ. ಇದು ಸಮಾಧಿಯೊಳಗೆ ಸೇರಿದ ಬರಿ ಅಂತರ್ಜಲವಲ್ಲ, ಬದಲಿಗೆ ಹುದುಗುವಿಕೆಗೆ (Fermentation) ಒಳಪಟ್ಟ ನಿಜವಾದ ಮದ್ಯವೇ ಆಗಿದೆ ಎಂಬುದನ್ನು ಈ ಸಂಯೋಜನೆ ಸ್ಪಷ್ಟಪಡಿಸಿದೆ.
ಪ್ರಾಚೀನ ಮದ್ಯದ ಪದಾರ್ಥಗಳು ಮತ್ತು ತಯಾರಿಕಾ ವಿಧಾನ
ಸೂಕ್ಷ್ಮದರ್ಶಕೀಯ ಪರೀಕ್ಷೆಯು ಈ ಮದ್ಯದ ಪ್ರಮುಖ ಪದಾರ್ಥಗಳನ್ನು ಬಹಿರಂಗಪಡಿಸಿದೆ: ಈ ಪಾನೀಯವನ್ನು ಮುಖ್ಯವಾಗಿ ಸಾಮೆ/ರಾಗಿ ವರ್ಗಕ್ಕೆ ಸೇರಿದ 'ಬ್ರೂಮ್‌ಕಾರ್ನ್ ರಾಗಿ' (Broomcorn millet) ಹಾಗೂ ಗೋಧಿ ಅಥವಾ ಬಾರ್ಲಿ ಧಾನ್ಯಗಳನ್ನು ಬಳಸಿ ತಯಾರಿಸಲಾಗಿತ್ತು. ಈ ಮದ್ಯವನ್ನು ತಯಾರಿಸಲು ಚೀನಾದ ಸಾಂಪ್ರದಾಯಿಕ ವಿಧಾನವಾದ 'ಕ್ಯು' (Qu) ಎಂಬ ಹುದುಗುವಿಕೆ ಕಾರಕವನ್ನು ಬಳಸಲಾಗಿತ್ತು. ಕ್ಯು ಎಂಬುದು ಶಿಲೀಂಧ್ರ, ಈಸ್ಟ್ ಮತ್ತು ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಧಾನ್ಯದ ಮಿಶ್ರಣವಾಗಿದೆ.
ಇದು ಆಧುನಿಕ ಬಿಯರ್ ಅಲ್ಲ: ಇದನ್ನು ಸಾಮಾನ್ಯವಾಗಿ '2300 ವರ್ಷಗಳ ಹಳೆಯ ಬಿಯರ್' ಎಂದು ಕರೆಯಲಾಗುತ್ತಿದ್ದರೂ, ವಿಜ್ಞಾನಿಗಳ ಪ್ರಕಾರ ಇದು ಇಂದಿನ ಲೇಗರ್ ಅಥವಾ ಕಮರ್ಷಿಯಲ್ ಬಿಯರ್‌ನಂತೆ ಇರಲಿಲ್ಲ. ಇದು ಧಾನ್ಯ ಆಧಾರಿತ, ಬಟ್ಟಿ ಇಳಿಸದ (Non-distilled) ವಿಶಿಷ್ಟ ಸಾಂಪ್ರದಾಯಿಕ ಪಾನೀಯವಾಗಿತ್ತು.
ಸಮಾಧಿಯಲ್ಲಿ ಮದ್ಯವಿಟ್ಟ ಉದ್ದೇಶವೇನು?
ಪ್ರಾಚೀನ ಚೀನೀ ಸಂಸ್ಕೃತಿಯಲ್ಲಿ ಮದ್ಯಕ್ಕೆ ಧಾರ್ಮಿಕ ಮತ್ತು ಸಾಮಾಜಿಕವಾಗಿ ಅತ್ಯಂತ ಉನ್ನತ ಸ್ಥಾನವಿತ್ತು. ಪೂಜೆ-ಪುನಸ್ಕಾರಗಳು, ಹಬ್ಬಗಳು ಹಾಗೂ ಶ್ರಾದ್ಧ ವಿಧಿಗಳಲ್ಲಿ ಮದ್ಯವನ್ನು ಅರ್ಪಿಸಲಾಗುತ್ತಿತ್ತು. ಸತ್ತ ವ್ಯಕ್ತಿಯ ಆತ್ಮದ ಸದ್ಗತಿಗೆ ಅಥವಾ ಪರಲೋಕದ ಪ್ರಯಾಣದಲ್ಲಿ ಆತನ ಬಳಕೆಗೆಂದು ಗೌರವಾರ್ಥವಾಗಿ ಈ ಮದ್ಯದ ಪಾತ್ರೆಯನ್ನು ಸಮಾಧಿಯಲ್ಲಿ ಇಟ್ಟಿರಬಹುದು ಎಂದು ಊಹಿಸಲಾಗಿದೆ.
ಚೀನಾದಲ್ಲಿ ಮದ್ಯ ತಯಾರಿಕೆಯ ಇತಿಹಾಸ ಅತ್ಯಂತ ಪ್ರಾಚೀನವಾದುದು. ನವಶಿಲಾಯುಗದ (Neolithic) ಕಾಲದಲ್ಲೇ ಅಕ್ಕಿ ಮತ್ತು ರಾಗಿ ಆಧಾರಿತ ಮದ್ಯ ತಯಾರಿಸುತ್ತಿದ್ದ ಕುರುಹುಗಳು ಸಿಕ್ಕಿವೆ. ಆದರೆ, ಶಾಂಜಿಯಾಬಾವೊದಲ್ಲಿ ಸಿಕ್ಕಿರುವ ಈ ದ್ರವವು ಕೇವಲ ಕುರುಹಾಗಿರದೆ, ಅಪಾರ ಪ್ರಮಾಣದಲ್ಲಿ ದ್ರವರೂಪದಲ್ಲೇ ಸಿಕ್ಕಿರುವುದರಿಂದ, ಪ್ರಾಚೀನ ಚೀನಾದ ಕ್ವಿನ್ ಸಾಮ್ರಾಜ್ಯದ ಸಂಕೀರ್ಣ ಮದ್ಯ ತಯಾರಿಕಾ ತಂತ್ರಜ್ಞಾನವನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಅತ್ಯಂತ ಅಪರೂಪದ ಸುವರ್ಣಾವಕಾಶ ಸಿಕ್ಕಂತಾಗಿದೆ.


