ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (SIPRI) ವರದಿಯ ಪ್ರಕಾರ, ಭಾರತವು 190 ಪರಮಾಣು ಸಿಡಿತಲೆಗಳನ್ನು ಹೊಂದುವ ಮೂಲಕ ಪಾಕಿಸ್ತಾನವನ್ನು (170) ಮೀರಿಸಿದೆ. ಅಲ್ಲದೆ, ಭಾರತವು ಸೇನಾ ವೆಚ್ಚದಲ್ಲಿ ವಿಶ್ವದ 5ನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ ಎಂದು ವರದಿ ಉಲ್ಲೇಖಿಸಿದೆ.
ನವದೆಹಲಿ: ಭಾರತ(India)ವು ಪಾಕಿಸ್ತಾನ(Pakistan)ಕ್ಕಿಂತ ತನ್ನ ಪರಮಾಣು ಸಂಗ್ರಹ ಪ್ರಾಬಲ್ಯ ಹೆಚ್ಚಿಸಿಕೊಂಡಿದ್ದು, ಈ ವರ್ಷದ ಆರಂಭದ ವೇಳೆಗೆ 190 ಪರಮಾಣು ಸಿಡಿತಲೆಗಳನ್ನು ಹೊಂದಿತ್ತು. ಇದೇ ವೇಳೆ ಪಾಕಿಸ್ತಾನ ಹೊಂದಿದ್ದ ಸಿಡಿತಲೆಗಳ ಸಂಖ್ಯೆ 170 ಎಂದು ವರದಿಯೊಂದು ಹೇಳಿದೆ.
ಭಾರತ-ಪಾಕಿಸ್ತಾನ: ಪರಮಾಣು ಅಣ್ವಸ್ತ್ರ ಯಾರ ಬಳಿ ಹೆಚ್ಚು?
ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (SIPRI) ತನ್ನ ವಾರ್ಷಿಕ ಪುಸ್ತಕ ಬಿಡುಗಡೆ ಮಾಡಿದೆ. ಅದರಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದೆ. ಭಾರತವು ಪಾಕಿಸ್ತಾನಕ್ಕಿಂತ ಅಧಿಕ ಪರಮಾಣು ಸಂಗ್ರಹವನ್ನು ಹೊಂದಿದೆ. ಪಾಕಿಸ್ತಾನದಲ್ಲಿ 170 ಸಿಡಿತಲೆಗಳ ಸಂಗ್ರಹವಿದ್ದರೆ ಭಾರತ ಅದಕ್ಕಿಂತ 20 ಜಾಸ್ತಿ ಹೊಂದಿದೆ ಎಂದು ವರದಿ ಹೇಳಿದೆ.
ಭಾರತ ಸೇನಾ ವೆಚ್ಚಕ್ಕಾಗಿ ಎಷ್ಟು ಖರ್ಚು ಮಾಡುತ್ತೆ
ಭಾರತವು 2025ರಲ್ಲಿ ಸೇನಾ ವೆಚ್ಚಕ್ಕಾಗಿ ಭಾರತ 8.7 ಲಕ್ಷ ಕೋಟಿ ರು. ಖರ್ಚು ಮಾಡಿದೆ. ಈ ಮೂಲಕ ಮಿಲಿಟರಿ ವೆಚ್ಚಕ್ಕೆ ಅತಿ ಹೆಚ್ಚು ಖರ್ಚು ಮಾಡುವ ವಿಶ್ವದ 5ನೇ ದೇಶವಾಗಿ ಹೊರಹೊಮ್ಮಿದೆ. ಅಮೆರಿಕ 90 ಲಕ್ಷ ಕೋಟಿ ರು., ಚೀನಾ 32 ಲಕ್ಷ ಕೋಟಿ ರು., ರಷ್ಯಾ 18 ಲಕ್ಷ ಕೋಟಿ ರು., ಜರ್ಮನಿ ಮತ್ತು ಭಾರತ 8.74 ಲಕ್ಷ ಕೋಟಿ ರು. ಖರ್ಚು ಮಾಡುವ ಮೂಲಕ ಕ್ರಮವಾಗಿ 1ರಿಂದ 5ನೇ ಸ್ಥಾನ ಹೊಂದಿವೆ ಎಂದು ವರದಿ ಉಲ್ಲೇಖಿಸಿದೆ.
2026ರ ಆರಂಭದಲ್ಲಿ, ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ಇಸ್ರೇಲ್ - ಈ 9 ದೇಶಗಳು ಒಟ್ಟಾಗಿ ಸುಮಾರು 12,187 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಅವುಗಳಲ್ಲಿ 9,745 ಶಸ್ತ್ರಾಸ್ತ್ರಗಳ ದಾಸ್ತಾನಿದ್ದು, ಕಾರ್ಯಾಚರಣೆಗೆ ಲಭ್ಯವಿವೆ. 2021–25ರಲ್ಲಿ 162 ದೇಶಗಳು ಪ್ರಮುಖ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿವೆ. ಇವುಗಳಲ್ಲಿ ಉಕ್ರೇನ್, ಭಾರತ, ಸೌದಿ ಅರೇಬಿಯಾ, ಕತಾರ್ ಮತ್ತು ಪಾಕಿಸ್ತಾನ - ಈ 5 ದೇಶಗಳ ಪಾಲೇ ಶೇ.35ರಷ್ಟಿದ್ದವು ಎಂದು ವರದಿ ತಿಳಿಸಿದೆ.
ದೇಶ ರಕ್ಷಣಾ ವೆಚ್ಚ ಒಟ್ಟು ಸಿಡಿತಲೆ
ಅಮೆರಿಕ ₹90 ಲಕ್ಷ ಕೋಟಿ 5042
ಚೀನಾ ₹32 ಲಕ್ಷ ಕೋಟಿ 620
ರಷ್ಯಾ ₹18 ಲಕ್ಷ ಕೋಟಿ 5420
ಜರ್ಮನಿ ₹8.74 ಲಕ್ಷ ಕೋಟಿ 000
ಭಾರತ ₹8.74 ಲಕ್ಷ ಕೋಟಿ 190
ಪಾಕಿಸ್ತಾನ ₹8.74 ಲಕ್ಷ ಕೋಟಿ 170


