ಈ ಯುದ್ಧದ ಮಧ್ಯಸ್ಥಿಕೆಯಲ್ಲಿ ಅಮೆರಿಕ ಪಾತ್ರವಿಲ್ಲ. ಪಾಕಿಸ್ತಾನದ ಕಡೆಯಿಂದ ಮನವಿ ಬಂದ ಕಾರಣ ದಾಳಿ ನಿಲ್ಲಿಸಿದೆವು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ.
ಕಾನನಸ್ಕಿಸ್ (ಕೆನಡಾ) (ಜೂ.19): 'ಭಾರತ-ಪಾಕಿಸ್ತಾನದ ನಡುವೆ ಏರ್ಪಟ್ಟ ಕದನ ವಿರಾಮಕ್ಕೆ ನಾವೇ ಕಾರಣ' ಎಂದು 14 ಬಾರಿ ಹೇಳಿ ಭಾರತದಲ್ಲಿ ಸಂಚಲನ ಮೂಡಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ 35 ನಿಮಿಷಗಳ ಕಾಲ ಬುಧವಾರ ದೂರವಾಣಿಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, 'ಈ ಯುದ್ಧದ ಮಧ್ಯಸ್ಥಿಕೆಯಲ್ಲಿ ಅಮೆರಿಕ ಪಾತ್ರವಿಲ್ಲ. ಪಾಕಿಸ್ತಾನದ ಕಡೆಯಿಂದ ಮನವಿ ಬಂದ ಕಾರಣ ದಾಳಿ ನಿಲ್ಲಿಸಿದೆವು' ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇದರೊಂದಿಗೆ ಕದನ ವಿರಾಮದಲ್ಲಿ ಟ್ರಂಪ್ ಪಾತ್ರವಿಲ್ಲ ಎಂದು ಮೋದಿ ಇದೇ ಮೊದಲ ಬಾರಿ ಮೌನ ಮುರಿದು ಹೇಳಿಕೆ ನೀಡಿದಂತಾಗಿದೆ. ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾಗೆ ತೆರಳಿರುವ ಮೋದಿ, ಮಂಗಳವಾರ ಟ್ರಂಪ್‌ಗೆ ಕರೆ ಮಾಡಿ ಆಪರೇಷನ್ ಸಿಂದೂರದ ಬಗ್ಗೆ ಮಾಹಿತಿ ನೀಡಿದರು. ಇದು ಪಾಕ್ ವಿರುದ್ಧದ ಕಾರ್ಯಾಚರಣೆಯ ಬಳಿಕ ಉಭಯ ನಾಯಕರ ನಡುವೆ ನಡೆದ ಮೊದಲ ಮಾತುಕತೆಯಾಗಿದೆ. 'ಆಪರೇಷನ್ ಸಿಂದೂರ ನಿಲ್ಲಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಾಪಾರ ಮಾತುಕತೆ ನಡೆದಿರಲಿಲ್ಲ. ನಾವು ಮೂರನೆಯವರ ಮಧ್ಯಸ್ಥಿಕೆಯನ್ನು ಎಂದಿಗೂ ಸ್ವೀಕರಿಸಿಲ್ಲ ಮತ್ತು ಭವಿಷ್ಯದಲ್ಲಿಯೂ ಸ್ವೀಕರಿಸುವುದಿಲ್ಲ' ಎಂದು ಮೋದಿ ಹೇಳಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸಿ ಬಿಡುಗಡೆ ಮಾಡಿದ್ದಾರೆ.
ಅವಕಾಶ ಸಿಕ್ಕಾಗಲೆಲ್ಲಾ 'ವ್ಯಾಪಾರದ ಆಮಿಷವೊಡ್ಡಿ ನಾನೇ ಕನದ ವಿರಾಮ ಮಾಡಿಸಿದಿದ್ದು' ಎಂದು ಬೀಗುತ್ತಿದ್ದ ಟ್ರಂಪ್‌ಗೆ ಮೋದಿ ಈ ಮೂಲಕ ಅವರೊಂದಿಗಿನ ಮಾತುಕತೆಯ ವೇಳೆಯೇ ತಿರುಗೇಟು ನೀಡಿದ್ದಾರೆ. ಆದರೆ ಇದಕ್ಕೆ ಟ್ರಂಪ್ ಯಾವ ರೀತಿ ಪ್ರತಿಕ್ರಿಯಿಸಿದರು ಎಂಬ ಬಗ್ಗೆ ಮಾಹಿತಿ ಇಲ್ಲವಾದರೂ, ಉಗ್ರವಾದದ ವಿರುದ್ಧ ಭಾರತದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇದೇ ವೇಳೆ, 'ಭಾರತವು ಆಪರೇಷನ್ ಸಿಂದೂರದಲ್ಲಿ ಪಾಕಿಸ್ತಾನದ ಉಗ್ರನೆಲೆಗಳ ಮೇಲೆ ನಿಖರ ದಾಳಿ ಮಾಡಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ದಾಳಿ ಮಾಡಲಿದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಮೇ 9ರಂದು ಕರೆ ಮಾಡಿ ತಿಳಿಸಿದ್ದರು.
ಹಾಗೇನಾದರೂ ಆದರೆ ಭಾರತ ತೀಕ್ಷ್ಯ ಉತ್ತರ ನೀಡಲಿದೆ ಎಂದು ಅವರಿಗೆ ಮೋದಿ ಹೇಳಿದ್ದರು. ಅಂತೆಯೇ, ಮೇ 9-10ರಂದು ನಡೆದ ದಾಳಿಯಲ್ಲಿ ಪಾಕ್‌ಗೆ ಪ್ರಬಲ ಹೊಡೆತ ಕೊಟ್ಟೆವು. ಪಾಕ್ ಕಡೆಯಿಂದ ಗುಂಡು ಹಾರಿದರೆ ಅದಕ್ಕೆ ಫಿರಂಗಿಗಳಿಂದ ಉತ್ತರಿಸಲಾಗುವುದು. ಇನ್ನು ಮುಂದೆ ಉಗ್ರವಾದವನ್ನೂ ಯುದ್ಧವೆಂದು ಪರಿಗಣಿಸಲಾಗುವುದು ಎಂದೂ ಪ್ರಧಾನಿ ಘೋಷಿಸಿದರು' ಎಂದು ಮಿಸಿ ಹೇಳಿದ್ದಾರೆ. ಜಿ7 ಶೃಂಗದ ಜತೆಗೇ ಟ್ರಂಪ್ ಅವರೊಂದಿಗೆ ಮೋದಿಯವರ ಮಾತುಕತೆ ನಿಗದಿಯಾಗಿತ್ತಾದರೂ, ಅತ್ತ ಇಸ್ರೇಲ್-ಇರಾನ್ ಸಂಘರ್ಷ ತಾರಕಕ್ಕೇರುತ್ತಿರುವುದರಿಂದ ಟ್ರಂಪ್ ನಡುವೆಯೇ ಗಡಿಬಿಡಿಯಲ್ಲಿ ಅಮೆರಿಕ್ಕೆ ಮರಳಿದ್ದರು. ಆದ್ದರಿಂದ ಈ ಸಂವಾದವನ್ನು ಕರೆಯ ಮೂಲಕ ನಡೆಸಲಾಯಿತು.
