ಅಮೆರಿಕಕಕ್ಕೆ ಆಗಮಿಸುವಂತೆ ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನೀಡಿದ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ತಿರಸ್ಕರಿಸಿದ್ದಾರೆ.

ಟೊರಂಟೋ (ಜೂ.19): ಅಮೆರಿಕಕಕ್ಕೆ ಆಗಮಿಸುವಂತೆ ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನೀಡಿದ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ತಿರಸ್ಕರಿಸಿದ್ದಾರೆ. ಬುಧವಾರ ನಡೆದ ಫೋನ್‌ ಚರ್ಚೆ ವೇಳೆ ‘ಜಿ7 ಶೃಂಗ ಮುಗಿದ ಬಳಿಕ ಕೆನಡಾದಿಂದ ಭಾರತಕ್ಕೆ ಮರಳುವಾಗ ಅಮೆರಿಕಕ್ಕೆ ಬಂದು ಹೋಗಿ’ ಎಂದು ಟ್ರಂಪ್‌ ಅವರು ಮೋದಿಗೆ ಆಹ್ವಾನ ನೀಡಿದರು.

ಆದರೆ ‘ಬೇರೆ ಪೂರ್ವ ನಿರ್ಧರಿತ ಕಾರ್ಯಕ್ರಮ ಇದೆ’ ಎಂದ ಮೋದಿ, ವರ್ಷಾಂತ್ಯದಲ್ಲಿ ನಡೆಯಲಿರುವ ಕ್ವಾಡ್‌ ಶೃಂಗಕ್ಕೆ ಬರುವಂತೆ ಟ್ರಂಪ್‌ ಅವರಿಗೆ ಆಮಂತ್ರಣ ನೀಡಿದರು. ಮೋದಿ ಆಹ್ವಾನವನ್ನು ಸ್ವೀಕರಿಸಿದ ಟ್ರಂಪ್‌, ‘ಭಾರತಕ್ಕೆ ಬರುಲು ಉತ್ಸುಕನಾಗಿದ್ದೇನೆ’ ಎಂದರು. ಕೊನೆಯ ಬಾರಿ ಟ್ರಂಪ್‌ 2020ರ ಫೆಬ್ರವರಿಯಲ್ಲಿ ಭಾರತಕ್ಕೆ ಆಗಮಿಸಿದ್ದರು.

ಉಗ್ರವಾದದ ವಿರುದ್ಧ ಜಾಗತಿಕ ಕ್ರಮಕ್ಕೆ ಪ್ರಧಾನಿ ಮೋದಿ ಕರೆ: ಕೆನಡಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಉಗ್ರವಾದವನ್ನು ಹರುಡುವವರು ಮತ್ತು ಬೆಂಬಲಿಸುವವರ ವಿರುದ್ಧ ಜಾಗತಿಕ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಜಿ7 ದೇಶಗಳ ನಾಯಕರಿಗೆ ಕರೆ ನೀಡಿದ್ದಾರೆ.

‘ಜಾಗತಿಕ ಶಾಂತಿ ಮತ್ತು ಸಮೃದ್ಧಿಗಾಗಿ ನಮ್ಮ ವಿಚಾರ ಮತ್ತು ನೀತಿ ಸ್ಪಷ್ಟವಾಗಿರಬೇಕು. ಯಾವುದೇ ದೇಶ ಉಗ್ರವಾದವನ್ನು ಬೆಂಬಲಿಸಿದಲ್ಲಿ, ಅದು ತಕ್ಕ ಬೆಲೆ ತೆರಬೇಕು’ ಎಂದ ಮೋದಿ, ‘ಒಂದು ಕಡೆ ನಮ್ಮ ಸ್ವಂತ ಆದ್ಯತೆಗಳಿಗೆ ಅನುಸಾರವಾಗಿ ನಿರ್ಬಂಧಗಳನ್ನು ವಿಧಿಸಲು ಮುಂದಾಗುತ್ತೇವೆ. ಮತ್ತೊಂದೆಡೆ, ಭಯೋತ್ಪಾದನೆಯನ್ನು ಬಹಿರಂಗವಾಗಿ ಬೆಂಬಲಿಸುವ ದೇಶಗಳಿಗೆ ಬಹುಮಾನ ನೀಡಲಾಗುತ್ತದೆ’ ಎಂದರು.

ಈ ಮೂಲಕ, ಭಾರತ ಸೇರಿದಂತೆ ವಿವಿಧ ದೇಶಗಳ ಆಮದಿನ ಮೇಲೆ ತೆರಿಗೆ ಹೇರಿದ ಮತ್ತು ದುಗ್ರಪೋಷಕ ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್‌ ಅವರನ್ನು ಔತಣಕ್ಕೆ ಆಹ್ವಾನಿಸಿದ ಅಮೆರಿಕದ ನಡೆಯನ್ನು ಕಟು ಶಬ್ದಗಳಲ್ಲಿ ಪರೋಕ್ಷವಾಗಿ ಟೀಕಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಇದೇ ವೇಳೆ, ಜಾಗತಿಕ ದಕ್ಷಿಣ(ಅಭಿವೃದ್ಧಿ ಹೊಂದುತ್ತಿರುವ) ದೇಶಗಳ ಕಳವಳ ಮತ್ತು ಆದ್ಯತೆಗಳ ಕಡೆಗೂ ಗಮನ ಹರಿಸುವಂತೆ ಕರೆ ನೀಡಿರುವ ಮೋದಿ, ಸುಸ್ಥಿರ ಯೋಜನೆಗಳ ಮೂಲಕ ಇಂಧನ ಭದ್ರತೆ ಸಾಧನೆ, ಎಐ ಕಳವಳಗಳ ನಿವಾರಣೆಯತ್ತ ಗಮನ ಹರಿಸುವಂತೆಯೂ ಸಲಹೆ ನೀಡಿದರು.