ಪೆಹಲ್ಗಾಂ ಉಗ್ರ ದಾಳಿಯಿಂದ ಭಾರತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಾಗ ಪಾಕಿಸ್ತಾನ ಪ್ರತಿಯಾಗಿ ಭಾರತದ ವಿಮಾನಗಳಿಗೆ ವಾಯುಪ್ರದೇಶ ನಿರಾಕರಿಸಿತ್ತು. ಇದರಿಂದ ಪಾಕಿಸ್ತಾನ ಕೇವಲ 2 ತಿಂಗಳಲ್ಲಿ 127 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.
ನವದೆಹಲಿ (ಆ.09) ಪೆಹಲ್ಗಾಂ ಉಗ್ರ ದಾಳಿ ಹಿಂದೆ ಪಾಕಿಸ್ತಾನದ ಕೈವಾಡ ವ್ಯಕ್ತವಾಗುತ್ತಿದ್ದಂತೆ ಭಾರತ ಕಠಿಣ ಕ್ರಮ ಕೈಗೊಂಡಿತ್ತು. ಈ ಪೈಕಿ ಸಿಂಧೂ ನದಿ ಒಪ್ಪಂದ ರದ್ದುಗೊಳಿಸಿತ್ತು. ಎಪ್ರಿಲ್ 23ರಂದು ಭಾರತದ ಈ ನಿರ್ಧಾರ ಕೈಗೊಂಡಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತದ ವಿಮಾನಗಳಿಗೆ ಪಾಕಿಸ್ತಾನದ ವಾಯು ಪ್ರದೇಶ ನಿರ್ಬಂಧಿಸಿತ್ತು. ಆದರೆ ಕೇವಲ 2 ತಿಂಗಳಲ್ಲಿ ಪಾಕಿಸ್ತಾನ ಬರೋಬ್ಬರಿ 127 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಎಪ್ರಿಲ್ 24 ರಿಂದ ಜೂನ್ 30ರ ಎರಡು ತಿಂಗಳ ಅವಧಿಯಲ್ಲಿ ಪಾಕಿಸ್ತಾನ 127 ಕೋಟಿ ರೂಪಾಯಿ ನಷ್ಟ ಅನುಭವಿದೆ.
ಭಾರತ ನಿರ್ಧಾರಕ್ಕೆ ಬೆಚ್ಚಿ ಬಿದ್ದ ಪಾಕಿಸ್ತಾನ
ಪಾಕಿಸ್ತಾನ ಈ ಅಂಕಿ ಅಂಶಗಳನ್ನು ಪಾಕಿಸ್ತಾನ ಅಸೆಂಬ್ಲಿಯಲ್ಲಿ ಪ್ರಸ್ತುತಪಡಿಸಿದೆ. ಭಾರತಕ್ಕೆ ತಿರುಗೇಟು ನೀಡಲು ಬಂದ ಪಾಕಿಸ್ತಾನ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಇಂಡಸ್ ವಾಟರ್ ಒಪ್ಪಂದ ರದ್ದುಗೊಳಿಸಿರುವ ನಿರ್ಧಾರವನ್ನು ಹಿಂಪಡೆಯಲು ಪಾಕಿಸ್ತಾನ ಕೆಲ ಪ್ರಯತ್ನ ನಡೆಸಿದೆ. ಆದರೆ ಯಾವೂದೂ ಕೈಗೂಡಿಲ್ಲ. ಇಷ್ಟೇ ಅಲ್ಲ ಕೆಲ ಪಾಕಿಸ್ತಾನ ನಾಯಕರು ಬಹಿರಂಗವಾಗಿ ಭಾರತಕ್ಕೆ ಬೆದರಿಕೆ ಹಾಕುವ ಪ್ರಯತ್ನ ಮಾಡಿದ್ದಾರೆ. ಆದರೆ ಭಾರತ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ.
2019ರಲ್ಲಿ ನಷ್ಟ ಅನುಭವಿಸಿತ್ತು ಪಾಕಿಸ್ತಾನ
2019ರಲ್ಲಿ ಪುಲ್ವಾಮಾ ದಾಳಿ ಬಳಿಕ ಭಾರತ ಪ್ರತಿ ದಾಳಿ ನಡೆಸಿತ್ತು. ಬಾಲಾಕೋಟ್ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಏರ್ ಸ್ಟ್ರೈಕ್ ನಡೆಸಿತ್ತು. ಇದರಿಂದ ಪಾಕಿಸ್ತಾನ ವಾಯು ಪ್ರದೇಶ ನಿರ್ಬಂಧಿಸಿತ್ತು. ಇದರಿಂದ ಪಾಕಿಸ್ತಾನ 54 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟ ಅನುಭವಿಸಿತ್ತು. ಬಳಿಕ ದ್ವಿಪಕ್ಷೀಯ ಸಂಬಂಧ ಸುಧಾರಿಸಿದ ಬೆನ್ನಲ್ಲೇ ನಿರ್ಬಂಧ ಹಿಂಪಡೆದಿತ್ತು. ಆರ್ಥಿಕತೆ ಹಳ್ಳ ಹಿಡಿದಿರುವ ಪಾಕಿಸ್ತಾನ 2019ರಲ್ಲಿ ನಿರ್ಬಂಧ ಹಿಂಪಡೆಯಲು ಉತ್ಸುಕವಾಗಿತ್ತು. ಈ ಬಾರಿಯೂ ನಿರ್ಬಂಧ ಹಿಂಪಡೆಯಲು ಪಾಕಿಸ್ತಾನ ತಯಾರಿದೆ. ಆದರೆ ಭಾರತದ ಯಾವುದೇ ಮಾತುಕತೆ, ಸಿಂಧೂ ನದಿ ಒಪ್ಪದ ರದ್ದತಿ ವಾಪಾಸ್‌ಗೆ ಒಪ್ಪುತ್ತಿಲ್ಲ. ಹೀಗಾಗಿ ಪಾಕಿಸ್ತಾನದ ನಷ್ಟ ಮತ್ತಷ್ಟು ಹೆಚ್ಚಾಗಲಿದೆ.
ಭಾರತದ ವಾಯು ಪ್ರದೇಶ ಕೂಡ ಪಾಕಿಸ್ತಾನಕ್ಕೆ ನಿರ್ಬಂಧ
ಪೆಹಲ್ಗಾಂ ಉಗ್ರ ದಾಳಿ ಬಳಿಕ ಭಾರತ ಕೂಡ ತನ್ನ ವಾಯು ಪ್ರದೇಶ ಬಳಕೆಯನ್ನು ಪಾಕಿಸ್ತಾನಕ್ಕೆ ನಿರ್ಬಂಧಿಸಿದೆ. ಭಾರತದ ಕೆಲ ಪ್ರಮುಖ ನಿರ್ಧಾರಗಳು ಪಾಕಿಸ್ತಾನದ ಆರ್ಥಿಕತೆ ಮೇಲೆ ಮತ್ತಷ್ಟು ಹೊಡೆತ ನೀಡಿದೆ. ಪಾಕಿಸ್ತಾನದಲ್ಲಿ ಹಣದುಬ್ಬರ ತಾಂಡವವಾಡುತ್ತಿದೆ. ಜನಸಾಮಾನ್ಯರು ಅಗತ್ಯ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಸರ್ಕಾರದ ಬಹುಪಾಲು ಹಣ ಸೇನೆಗೆ ನೀಡಲಾಗಿದೆ.
ಭಾರತದ ಆಪರೇಶನ್ ಸಿಂದೂರ್ ದಾಳಿಯಲ್ಲಿ ಪಾಕಿಸ್ತಾನ 9 ಉಗ್ರ ನೆಲೆಗಳು ಧ್ವಂಸಗೊಂಡಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತದ ನಾಗರೀಕ ಪ್ರದೇಶಗಳ ಮೇಲೆ, ಗುರುದ್ವಾರದ ಮೇಲೆ ದಾಳಿಗೆ ಮುಂದಾಗಿತ್ತು.ಇತ್ತ ಭಾರತ ತಕ್ಕ ಉತ್ತರ ನೀಡಿತ್ತು. ಪಾಕಿಸ್ತಾನ ಹಲವು ವಾಯು ನೆಲೆಗಳನ್ನು ಧ್ವಂಸಗೊಳಿಸಿತ್ತು. ಪಾಕಿಸ್ತಾನ ಐದು ಫೈಟರ್ ಜೆಟ್ ಹಾಗೂ ಮತ್ತೊಂದು ಏರ್‌ಕ್ರಾಫ್ಟ್‌ನ್ನು ಭಾರತ ಧ್ವಂಸಗೊಳಿಸಿತ್ತು. ಈ ಕುರಿತು ಭಾರತೀಯ ವಾಯುಸೇನಾ ಮುಖ್ಯಸ್ಥರು ಸ್ಪಷ್ಟೆನೆ ನೀಡಿದ್ದಾರೆ.
