ಆಸ್ಟ್ರೇಲಿಯಾದಲ್ಲಿ ಸ್ಕೈಡೈವಿಂಗ್ ಮಾಡುವಾಗ, ಓರ್ವ ಸ್ಕೈಡೈವರ್‌ನ ಪ್ಯಾರಾಚೂಟ್ ವಿಮಾನದ ಬಾಲಕ್ಕೆ ಸಿಲುಕಿಕೊಂಡು ಆತ ಆಗಸದಲ್ಲಿ ನೇತಾಡಿದ್ದು, ಆತ ಕೊನೆಗೂ ಪವಾಡದಂತೆ ಪಾರಾಗಿದ್ದು, ಆ ಘಟನೆಯ ರೋಚಕ ವೀಡಿಯೋ ಇಲ್ಲಿದೆ.

ಹೃದಯವೇ ನಿಂತು ಹೋಗುವಂತಹ ಘಟನೆಯೊಂದು ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ಆದರೂ ಸ್ಕೈಡೈವರ್ ಓರ್ವ ದೊಡ್ಡ ಅನಾಹುತದಿಂದ ಪಾರಾಗಿ ಬದುಕಿ ಬಂದಿದ್ದಾನೆ. ಘಟನೆಯ ವೀಡಿಯೋವನ್ನು ಈಗ ಆಸ್ಟ್ರೇಲಿಯಾದ ಅಧಿಕಾರಿಗಳು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದು, ಜೀವ ಬಾಯಿಗೆ ಬಂದಂತಹ ಆ ಘಟನೆಯ ವಿಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ಭಾರಿ ವೈರಲ್ ಆಗಿದೆ.

ಹಾಗಿದ್ದರೆ ಆಗಿದ್ದೇನು?

ಸ್ಕೈಡೈವರ್‌ಗಳ ತಂಡವೊಂದು ಸಾವಿರ ಮೀಟರ್ ಎತ್ತರದಿಂದ ವಿಮಾನದಿಂದ ಕೆಳಗೆ ಹಾರುವುದಕ್ಕಾಗಿ ವಿಮಾನದಲ್ಲಿ ಹೋಗಿದ್ದು, ನಂತರ ಅಲ್ಲಿಂದ ಕೆಳಗೆ ಹಾರಿದ್ದಾರೆ. ಆದರೆ ದುರಾದೃಷ್ಟವಶಾತ್ ಓರ್ವ ಸ್ಕೈಡೈವರ್‌ನ ಪ್ಯಾರಾಚೂಟ್‌ವೊಂದು ಈ ವಿಮಾನದ ಬಾಲಕ್ಕೆ ಸಿಲುಕಿದ್ದು, ಮಧ್ಯ ಆಗಸದಲ್ಲಿ ಆತ ಕೆಳಗೆ ಹಾರಲು ಆಗದೇ ವಿಮಾನದೊಳಗೂ ಹೋಗಲಾಗದೇ ಕೆಲ ನಿಮಿಷಗಳ ಕಾಲ ನೇತಾಡಿದ್ದಾರೆ. ಆದರೆ ಅದೃಷ್ಟವಶಾತ್ ಆತ ಏನೂ ಸಾಹಸ ಮಾಡಿ ಈ ಅನಾಹುತದಿಂದ ಪಾರಾಗಿ ಬದುಕಿ ಬಂದಿದ್ದಾನೆ. ಸೆಪ್ಟೆಂಬರ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.

ಗುರುವಾರ ಆಸ್ಟ್ರೇಲಿಯಾದ ಅಧಿಕಾರಿಗಳು ಬಿಡುಗಡೆ ಮಾಡಿದ ಈ ಆಘಾತಕಾರಿ ದೃಶ್ಯಾವಳಿಗಳಲ್ಲಿ ಸ್ಕೈಡೈವರ್ ವಿಮಾನದಿಂದ ಕೆಳಗೆ ಹಾರುತ್ತಿದ್ದಂತೆ ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿಕೊಂಡು ಅವರು ಸಾವಿರಾರು ಮೀಟರ್ ಎತ್ತರದಲ್ಲಿ ಗಾಳಿಯಲ್ಲಿ ನೇತಾಡುತ್ತಿರುವ ಕ್ಷಣವನ್ನು ಕಾಣಬಹುದಾಗಿದೆ. ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾದ ಕೈರ್ನ್ಸ್‌ನ ದಕ್ಷಿಣದಲ್ಲಿ ನಡೆದ ಸಾಹಸ ಪ್ರದರ್ಶನದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಆದರೆ ಸಾರಿಗೆ ಸುರಕ್ಷತಾ ಕಾವಲು ಸಂಸ್ಥೆಯ ತನಿಖೆಯ ನಂತರ ಇದೀಗ ವೀಡಿಯೋ ಬಹಿರಂಗವಾಗಿದೆ.

ಇದನ್ನೂ ಓದಿ: ಇಂಡಿಗೋ ಅವಾಂತರದ ಬಳಿಕ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಫೋಟೋ ಭಾರಿ ವೈರಲ್

15,000 ಅಡಿ (4,600 ಮೀಟರ್) ಎತ್ತರದಲ್ಲಿ ವಿಮಾನದಿಂದ ಕೆಳಗೆ ಹಾರುವ ಸ್ಕೈಡೈವರ್‌ಗಳು ಪ್ಯಾರಾಚೂಟ್ ಮೂಲಕ 16 ಮಾರ್ಗಗಳ ರಚನೆ ಮಾಡುವ ಪ್ಲಾನ್ ಇತ್ತು. ಆದರೆ ಮೊದಲ ಸ್ಪರ್ಧಿ ವಿಮಾನದಿಂದ ಇಳಿಯುತ್ತಿದ್ದಂತೆ ಈ ಅನಾಹುತ ಸಂಭವಿಸಿತ್ತು. ಈ ದೃಶ್ಯವನ್ನು ಪ್ಯಾರಾಚೂಟಿಂಗ್ ಕ್ಯಾಮೆರಾ ಆಪರೇಟರ್ ಚಿತ್ರೀಕರಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಸಾರಿಗೆ ಸುರಕ್ಷತಾ ಬ್ಯೂರೋ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ನಂತರ ಸ್ಕೈಡೈವರ್‌ ತನ್ನ ಬಳಿ ಇದ್ದ ಮೀಸಲು ಪ್ಯಾರಾಚೂಟ್ ಅನ್ನು ಆಕ್ಟಿವೇಟ್ ಮಾಡಿಕೊಂಡು ಈ ಪ್ಯಾರಾಚೂಟ್‌ನಿಂದ ಬಿಡಿಸಿಕೊಂಡು ಅನಾಹುತದಿಂದ ಪಾರಾಗಿದ್ದಾರೆ. ಕೇಸರಿ ಬಣ್ಣದ ಪ್ಯಾರಾಚೂಟ್ ವಿಮಾನದ ಬಾಲಕ್ಕೆ ಸಿಲುಕಿದ ನಂತರ ಜಂಪರ್ ನ ಕಾಲುಗಳು ವಿಮಾನದ ಹೊರಭಾಗಕ್ಕೆ ತಾಗುತ್ತಿತ್ತು. ಜೊತೆಗೆ ಈ ಪ್ಯಾರಾಚೂಟರ್ ಆತ ವಿಮಾನದಿಂದ ಕೆಳಗೆ ಹಾರಲು ಸಿದ್ಧನಾಗಿದ್ದ ಕ್ಯಾಮರಾ ಆಪರೇಟರ್‌ಗೂ ಬಡಿದಿದ್ದಾನೆ.

ಘಟನೆಯಿಂದ ಶಾಕ್‌ಗೆ ಒಳಗಾದ ಡೈವರ್ ತನ್ನ ಕೈಗಳೆರಡನ್ನು ತಲೆ ಮೇಲಿರುವ ಹೆಲ್ಮೆಟ್ ಮೇಲಿಡುತ್ತಾನೆ. ಕೆಳಗೆ ಬೀಳಬಹುದು ಎಂಬ ಭಯದ ನಡುವೆಯೇ ವಿಮಾನದಲ್ಲಿ ನೇತಾಡುತ್ತಲೇ ಆತ ವಿಮಾನದ ಬಾಲಕ್ಕೆ ಸಿಲುಕಿದ್ದ ಪ್ಯಾರಾಚೂಟ್‌ನ ತಂತಿಗಳನ್ನು ಕೊಕ್ಕೆ ಚಾಕುಗಳನ್ನು ಬಳಸಿ ಕತ್ತರಿಸಿ ತನ್ನನ್ನು ತಾನು ಅದರಿಂದ ಬಿಡಿಸಿಕೊಳ್ಳುತ್ತಾನೆ.

ಇದನ್ನೂ ಓದಿ: ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ

ನಂತರ ಅವನು ತನ್ನ ಮೀಸಲಿದ್ದ ಚೂಟ್‌ ಅನ್ನು ಬಿಡಿಸಿಕೊಂಡು ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಾನೆ. ತನ್ನ ಬಳಿ ಇದ್ದ ಹುಕ್ ನೈಫ್ ಅಥವಾ ಕೊಕ್ಕೆ ಚಾಕುವಿನಿಂದಾಗಿ ಈ ಡೈವರ್ ದೊಡ್ಡ ಅನಾಹುತದಿಂದ ಪಾರಾಗಿದ್ದಾನೆ. ಕೊಕ್ಕೆ ಚಾಕು ಕಡ್ಡಾಯವಲ್ಲದೇ ಇದ್ದರೂ ಕೂಡ ಇದು ಜೊತೆಗಿದ್ದರೆ ಇಂತಹ ಸಂದರ್ಭದಲ್ಲಿ ಜೀವ ಉಳಿಸುವಂತಹ ಸಾಧನವಾಗಬಹುದು ಎಂದು ಬ್ಯೂರೋದ ಮುಖ್ಯ ಕಮೀಷನರ್ ಅಂಗುಸ್ ಮಿಚೆಲ್ ಹೇಳಿದ್ದಾರೆ. ಈ ಘಟನೆಯಿಂದಾಗಿ ವಿಮಾನದ ಬಾಲಕ್ಕೆ ಹಾನಿಯಾಗಿದೆ. ಆದರೆ ಪೈಲಟ್‌ಗೆ ವಿಮಾನದ ಮೇಲೆ ಸೀಮಿತ ನಿಯಂತ್ರಣವಿತ್ತು. ಜೊತೆಗೆ ಮೇಡೇ ಕರೆ ವಿಪತ್ತು ಕರೆ ಮಾಡಲಾಗಿತ್ತು. ಆದರೂ ಅವರು ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು ಎಂದು ಅವರು ಹೇಳಿದ್ದಾರೆ.

Scroll to load tweet…

YouTube video player