ಪಾಕಿಸ್ತಾನದಲ್ಲಿ ಇಂದು ಮೂರು ಬಾರಿ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಮನೆಮಾಡಿದೆ. ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 5.2, 4.5 ಮತ್ತು 3.8 ರಷ್ಟು ತೀವ್ರತೆ ದಾಖಲಾಗಿದೆ.
ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಇಂದು ಒಂದೇ ದಿನದಲ್ಲಿ ಮೂರು ಬಾರಿ ಭೂಕಂಪ ಸಂಭವಿಸಿ, ಜನರಲ್ಲಿ ಆತಂಕ ಸೃಷ್ಟಿಸಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಈ ಭೂಕಂಪಗಳು ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 5.2, 4.5 ಮತ್ತು 3.8 ರಷ್ಟು ತೀವ್ರತೆ ದಾಖಲಾಗಿವೆ.
ಮೊದಲಿಗೆ ಇಂದು ಬೆಳಗ್ಗೆಭಾರತೀಯ ಕಾಲಮಾನ 3.54ಕ್ಕೆ ಮೊದಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 5.2 ರಷ್ಟು ದಾಖಲಾಗಿತ್ತು. ಈ ಭೂಕಂಪದ ಕೇಂದ್ರಬಿಂದು 150 ಕಿ.ಮೀ. ಆಳದಲ್ಲಿ, 30.25 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 69.82 ಡಿಗ್ರಿ ಪೂರ್ವ ರೇಖಾಂಶದಲ್ಲಿ ಕೇಂದ್ರೀಕೃತವಾಗಿತ್ತು. ಈ ಭೂಕಂಪದಿಂದ ಉಂಟಾದ ಹಾನಿ ಅಥವಾ ನಷ್ಟಗಳ ಬಗ್ಗೆ ತಕ್ಷಣದ ಮಾಹಿತಿ ಲಭ್ಯವಾಗಿಲ್ಲ.
ನಂತರ ಬೆಳಗ್ಗೆ 8.02ಕ್ಕೆ ಎರಡನೇ ಬಾರಿ ಅಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದು ರಿಕ್ಟರ್ ಮಾಪಕದಲ್ಲಿ 4.5 ರಷ್ಟು ತೀವ್ರತೆ ದಾಖಲು ಮಾಡಿದೆ. ಇದಾದ ಬಳಿಕ ಬೆಳಗ್ಗೆ 11.21ಕ್ಕೆ ಮತ್ತೊಂದು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.8 ರಷ್ಟು ತೀವ್ರತೆ ದಾಖಲಾಗಿದೆ. ಒಂದೇ ದಿನದಲ್ಲಿ ಮೂರು ಭೂಕಂಪಗಳು ಸಂಭವಿಸಿರುವುದರಿಂದ ಪಾಕಿಸ್ತಾನದ ಭೂಕಂಪನ ಸಂಭವಿಸಿದ ಪ್ರದೇಶಗಳಲ್ಲಿ ಜನರು ಭಯಭೀತರಾಗಿದ್ದಾರೆ. ಭೂಕಂಪದ ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಪಾಕಿಸ್ತಾನದ ಭೌಗೋಳಿಕ ರಚನೆ ಮತ್ತು ಭೂಕಂಪದ ಅಪಾಯ:
ಪಾಕಿಸ್ತಾನವು ವಿಶ್ವದಲ್ಲೇ ಅತಿ ಹೆಚ್ಚು ಭೂಕಂಪನ ಚಟುವಟಿಕೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಇದು ಹಲವು ಪ್ರಮುಖ ಬಿರುಕುಗಳಿಂದ ಕೂಡಿದೆ. ಇದರ ಪರಿಣಾಮವಾಗಿ ಪಾಕಿಸ್ತಾನದಲ್ಲಿ ಭೂಕಂಪಗಳು ಆಗಾಗ್ಗೆ ಸಂಭವಿಸುತ್ತವೆ ಮತ್ತು ಅವುಗಳು ವ್ಯಾಪಕ ಹಾನಿಯನ್ನುಂಟು ಮಾಡುತ್ತವೆ.
ಭೌಗೋಳಿಕವಾಗಿ, ಪಾಕಿಸ್ತಾನವು ಯುರೇಷಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್‌ಗಳ ಮೇಲೆ ಇದೆ. ಬಲೂಚಿಸ್ತಾನ್, ಫೆಡರಲಿ ಅಡ್ಮಿನಿಸ್ಟ್ರೆಡ್ ಟ್ರೈಬಲ್ ಏರಿಯಾಸ್ (FATA), ಖೈಬರ್ ಪಖ್ತುಂಖ್ವಾ ಮತ್ತು ಗಿಲ್ಗಿಟ್-ಬಲೂಚಿಸ್ತಾನ್ ಪ್ರಾಂತ್ಯಗಳು ಇರಾನಿನ ಪ್ರಸ್ಥಭೂಮಿಯಲ್ಲಿರುವ ಯುರೇಷಿಯನ್ ಪ್ಲೇಟ್‌ನ ದಕ್ಷಿಣ ತುದಿಯಲ್ಲಿವೆ.
ಸಿಂಧ್, ಪಂಜಾಬ್ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯಗಳು ದಕ್ಷಿಣ ಏಷ್ಯಾದಲ್ಲಿರುವ ಭಾರತೀಯ ಪ್ಲೇಟ್‌ನ ವಾಯುವ್ಯ ತುದಿಯಲ್ಲಿವೆ. ಈ ಎರಡು ಟೆಕ್ಟೋನಿಕ್ ಪ್ಲೇಟ್‌ಗಳು ಡಿಕ್ಕಿ ಹೊಡೆದಾಗ ಈ ಪ್ರದೇಶವು ಪ್ರಬಲ ಭೂಕಂಪಗಳಿಗೆ ತುತ್ತಾಗುತ್ತದೆ.
