ಪಾಕಿಸ್ತಾನ ಮತ್ತು ಭಾರತ ನಡುವಿನ ಕದನ ವಿರಾಮಕ್ಕೆ ತನ್ನ ಮಧ್ಯಸ್ಥಿಕೆಯೇ ಕಾರಣ ಎಂದು ಬರೋಬ್ಬರಿ 15 ಬಾರಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಉಲ್ಟಾ ಹೊಡೆದಿದ್ದಾರೆ.

ನ್ಯೂಯಾರ್ಕ್‌/ವಾಷಿಂಗ್ಟನ್‌: ಪಾಕಿಸ್ತಾನ ಮತ್ತು ಭಾರತ ನಡುವಿನ ಕದನ ವಿರಾಮಕ್ಕೆ ತನ್ನ ಮಧ್ಯಸ್ಥಿಕೆಯೇ ಕಾರಣ ಎಂದು ಬರೋಬ್ಬರಿ 15 ಬಾರಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಉಲ್ಟಾ ಹೊಡೆದಿದ್ದಾರೆ. ಪರಮಾಣು ಸಮರಕ್ಕೆ ಕಾರಣವಾಗಬಹುದಾಗಿದ್ದ ಯುದ್ಧಕ್ಕೆ ಎರಡೂ ದೇಶಗಳ ಚತುರ ನಾಯಕರು ಸೇರಿಕೊಂಡು ಬ್ರೇಕ್‌ ಹಾಕುವ ನಿರ್ಧಾರ ತೆಗೆದುಕೊಂಡರು ಎಂದು ಟ್ರಂಪ್‌ ಹೇಳಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ತಮ್ಮ ಮಧ್ಯಸ್ಥಿಕೆಯನ್ನು ತಾವೇ ತಳ್ಳಿಹಾಕಿದ್ದಾರೆ.

ವಿಶೇಷವೆಂದರೆ, ಎರಡೂ ದೇಶಗಳ ನಡುವಿನ ಯುದ್ಧ ನಿಲ್ಲಿಸಿದ್ದು ತಾವೇ ಎಂದು ಟ್ರಂಪ್‌ ಬುಧವಾರ ಬೆಳಗ್ಗೆ ಹೇಳಿದ್ದರು. ಅದಾದ ಬೆನ್ನಲ್ಲೇ ಟ್ರಂಪ್‌ ಭಾರತದ ಪ್ರಧಾನಿ ಮೋದಿ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಈ ವೇಳೆ ಕದನ ವಿರಾಮದಲ್ಲಿ ಯಾವುದೇ ಮೂರನೇ ದೇಶದ ಮಧ್ಯಸ್ಥಿಕೆ ಆಗಿಲ್ಲ. ಯುದ್ಧ ಸ್ಥಗಿತಕ್ಕೆ ಪಾಕಿಸ್ತಾನ ಮನವಿ ಮಾಡಿದ ಕಾರಣವೇ ನಾವು ಯುದ್ಧ ನಿಲ್ಲಿಸಿದ್ದೆವು ಎಂದು ಮೋದಿ ಕಟುನುಡಿಗಳಲ್ಲಿ ಟ್ರಂಪ್‌ಗೆ ಸಂದೇಶ ರವಾನಿಸಿದ್ದರು.

ಅದರ ಬೆನ್ನಲ್ಲೇ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಜೊತೆಗೆ ಔತಣಕೂಟ ನಡೆಸಿದ ಟ್ರಂಪ್‌, ಬಳಿಕ ಕದನವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನದ ನಾಯಕರೇ ಕಾರಣ ಎಂದು ಹೇಳಿದ್ದಾರೆ. ಅವರು ಇಂಥ ಹೇಳಿಕೆ ನೀಡಿದ್ದು ಇದೇ ಮೊದಲು.

ಟ್ರಂಪ್‌ ಹೇಳಿದ್ದೇನು?:

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜ। ಅಸೀಂ ಮುನೀರ್‌ ಜತೆಗಿನ ಔತಣಕೂಟದ ಬಳಿಕ ಓವಲ್‌ ಕಚೇರಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಟ್ರಂಪ್‌ ಅವರು, ‘ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್‌ ಅಸೀಂ ಮುನೀರ್‌ ಅವರು ಮತ್ತು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಈ ಇಬ್ಬರು ಸ್ಮಾರ್ಟ್‌ ವ್ಯಕ್ತಿಗಳು ಅಣು ಸಮರಕ್ಕೆ ದಾರಿಮಾಡಿಕೊಡಬಹುದಾಗಿದ್ದ ಯುದ್ಧ ನಿಲ್ಲಿಸುವ ನಿರ್ಧಾರ ತೆಗೆದುಕೊಂಡರು. ಭಾರತ ಮತ್ತು ಪಾಕಿಸ್ತಾನ ಎರಡೂ ಅಣ್ವಸ್ತ್ರ ರಾಷ್ಟ್ರಗಳು. ಎರಡೂ ದೇಶಗಳಲ್ಲಿ ಭಾರೀ ಅಣ್ವಸ್ತ್ರಗಳಿವೆ’ ಎಂದು ಹೇಳಿದರು.

ಪಾಕ್‌ ಸೇನೆ ಮುಖ್ಯಸ್ಥಗೆ ಟ್ರಂಪ್‌ ಔತಣ ಪಾರ್ಟಿ?

ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನದ ನಡುವಣ ಯುದ್ಧ ನಿಲ್ಲಿಸಿದ್ದೇ ನಾನು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪದೇ ಪದೇ ಹೇಳಿಕೊಳ್ಳಲು ನೊಬೆಲ್‌ ಶಾಂತಿ ಪ್ರಶಸ್ತಿಯ ಹಪಾಹಪಿಯೇ ಕಾರಣ ಎಂಬ ವಿಶ್ಲೇಷಣೆ ಕೇಳಿಬಂದಿದೆ. ಇದೇ ಕಾರಣಕ್ಕಾಗಿಯೇ ಟ್ರಂಪ್‌, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ಗೆ ಔತಣ ಕೂಟ ಆಯೋಜಿಸಿದ್ದರು ಎಂಬುದನ್ನು ಸ್ವತಃ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರೇ ಬಹಿರಂಗಪಡಿಸಿದ್ದಾರೆ.