ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರದಲ್ಲಿ ಧ್ವಂಸಗೊಂಡ ಲ್ಯಾಂಚ್‌ ಪ್ಯಾಡ್‌, ತರಬೇತಿ ಶಿಬಿರಗಳ ಪುನರ್‌ ನಿರ್ಮಾಣಕ್ಕೆ ಪಾಕಿಸ್ತಾನ ಮುಂದಾಗಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ.

ಇಸ್ಲಾಮಾಬಾದ್: ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರದಲ್ಲಿ ಧ್ವಂಸಗೊಂಡ ಲ್ಯಾಂಚ್‌ ಪ್ಯಾಡ್‌, ತರಬೇತಿ ಶಿಬಿರಗಳ ಪುನರ್‌ ನಿರ್ಮಾಣಕ್ಕೆ ಪಾಕಿಸ್ತಾನ ಮುಂದಾಗಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ.

ಮೂಲಗಳ ಅನ್ವಯ, ಪಾಕ್‌ನ ಉಗ್ರ ಸಂಘಟನೆಗಳು, ಪಾಕ್‌ ಸರ್ಕಾರ, ಸೇನೆ, ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಸೇರಿಕೊಂಡು ಗಡಿ ನಿಯಂತ್ರಣ ರೇಖೆಯ ಬಳಿಯ ದಟ್ಟ ಕಾಡಿನಲ್ಲಿ ಹೈಟೆಕ್‌ ಸಣ್ಣ ಉಗ್ರ ಶಿಬಿರಗಳ ನಿರ್ಮಾಣಕ್ಕೆ ಮುಂದಾಗಿವೆ. ದೊಡ್ಡ ಶಿಬಿರ ಸ್ಥಾಪಿಸಿದರೆ ದಾಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಸಣ್ಣ ಸಣ್ಣ ಶಿಬಿರ ಸ್ಥಾಪಿಸುವುದು. ಈ ಆ ಮೂಲಕ ಈ ತಂತ್ರದ ಮೂಲಕ ಭಾರತದ ಕಣ್ಗಾವಲು ಮತ್ತು ವಾಯುದಾಳಿಗಳನ್ನು ತಪ್ಪಿಸಿಕೊಳ್ಳುವ ಗುರಿ ಹೊಂದಿದೆ. ಈ ಶಿಬಿರಗಳು 200 ಕ್ಕಿಂತ ಕಡಿಮೆ ಭಯೋತ್ಪಾದಕರಿಗೆ ಆಶ್ರಯ ನೀಡುತ್ತವೆ ಎನ್ನಲಾಗಿದೆ.

ಹೊಸ ಶಿಬಿರಗಳು ರಾಡಾರ್‌ ಮತ್ತು ಉಪಗ್ರಹದ ಕಣ್ಗಾವಲು ಎದುರಿಸುವ ತಂತ್ರಜ್ಞಾನ ಹೊಂದಿರಲಿವೆ. ಇಂಥ ಒಟ್ಟು 3 ಲಾಂಚ್‌ ಪ್ಯಾಡ್‌ಗಳ ಪುನಾರಭಿವೃದ್ಧಿಗೆ ಪಾಕ್‌ ಮುಂದಾಗಿದೆ.

ಗಡಿ ಮೇಲೂ ಕಣ್ಣು: ಪಿಒಕೆ ಜೊತೆಗೆ ಭಾರತದ ದಾಳಿಗೆ ನಾಶವಾಗಿದ್ದ ಅಂತಾರಾಷ್ಟ್ರೀಯ ಗಡಿಯ ಲಾಂಚ್‌ಪ್ಯಾಡ್‌ಗಳ ಅಭಿವೃದ್ಧಿಗೂ ಪಾಕ್‌ ಮುಂದಾಗಿದೆ. ಆರ್ಥಿಕವಾಗಿ ಬರ್ಬಾದ್‌ ಆಗಿರುವ ಪಾಕಿಸ್ತಾನ ತನ್ನ ದೇಶದಲ್ಲಿನ ಉಗ್ರರನ್ನು ಸಲಹುವುದಕ್ಕೆ ಇತ್ತೀಚೆಗಷ್ಟೇ ಏಷ್ಯನ್ ಡೆವಲಪ್‌ಮೆಂಟ್‌ ಬ್ಯಾಂಕ್ ನೀಡಿದ್ದ ಹಣಕಾಸು ನೆರವಿನ ಪೈಕಿ ಒಂದು ಭಾಗವನ್ನು ಮೀಸಲಿಡುವುದಕ್ಕೆ ಮುಂದಾಗಿದೆ ಎನ್ನಲಾಗಿದೆ.

ಚೀನಾ ಇಸ್ಲಾಮಾಬಾದ್‌ಗೆ ಪ್ರಮುಖ ಗುಪ್ತಚರ ಮಾಹಿತಿ ಒದಗಿಸಿತ್ತು

ಇಸ್ಲಾಮಾಬಾದ್: ಭಾರತದೊಂದಿಗೆ ಮಿಲಿಟರಿ ಮಾತುಕತೆಗಳ ನಡುವೆ, ಚೀನಾ ಇಸ್ಲಾಮಾಬಾದ್‌ಗೆ ಪ್ರಮುಖ ಗುಪ್ತಚರ ಮಾಹಿತಿ ಒದಗಿಸಿತ್ತು ಎಂಬುದನ್ನು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ. ಈ ಮಾಹಿತಿಯಲ್ಲಿ ಭಾರತದ ವಾಯು ರಕ್ಷಣಾ ವ್ಯವಸ್ಥೆಗಳ ಕುರಿತು ವಿವರಗಳು ಇದ್ದವು ಎಂದು ವರದಿಯಾಗಿದೆ, ಇದರಿಂದ ಪಾಕಿಸ್ತಾನ ಹೆಚ್ಚಿದ ಉದ್ವಿಗ್ನತೆ ನಡುವೆ ತನ್ನ ಕಾರ್ಯತಂತ್ರದ ಸಿದ್ಧತೆಯನ್ನು ಬಲಪಡಿಸಲು ಸಾಧ್ಯವಾಯ್ತು ಎನ್ನಲಾಗಿದೆ.

ಇತ್ತೀಚಿನ ಸಂದರ್ಶನದಲ್ಲಿ ಖವಾಜಾ ಆಸಿಫ್ ಮಾತನಾಡಿ, ಭಾರತದೊಂದಿಗೆ ಅಲ್ಪಾವಧಿಯ ಸಂಘರ್ಷದ ಸಮಯದದಲ್ಲಿ ಪಾಕಿಸ್ತಾನ ಹೆಚ್ಚಿನ ಎಚ್ಚರಿಕೆಯಿಂದ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ, ಭಾರತದ ರಕ್ಷಣಾ ಸಾಮರ್ಥ್ಯಗಳಿಗೆ ಸಂಬಂಧಿಸಿದ ಗುಪ್ತಚರ ಮಾಹಿತಿ ಹಂಚಿಕೆ ಮೂಲಕ ಬೀಜಿಂಗ್ ಪಾಕಿಸ್ತಾನಕ್ಕೆ ನೆರವಾಗಿ ಸಹಾಯ ಮಾಡಿದೆ ಎಂದು ಅವರು ಒತ್ತಿ ಹೇಳಿದರು. 

ಭಾರತದೊಂದಿಗೆ ನಡೆದ ಅಲ್ಪಾವಧಿಯ ಸಂಘರ್ಷದ ನಂತರ ಪಾಕಿಸ್ತಾನ ಎಚ್ಚರಿಕೆಯಿಂದ ಇರಲು ಚೀನಾ ನೀಡಿದ ಮಾಹಿತಿಯಿಂದಲೇ ಸಾಧ್ಯವಾಯ್ತು. ಸಂಘರ್ಷ ನಡೆದು ಒಂದೂವರೆ ತಿಂಗಳಿಗಿಂತ ಹೆಚ್ಚು ಕಾಲ ಕಳೆದಿದೆ ಆದರೂ ನಾವು ನಮ್ಮ ಭದ್ರತೆಯನ್ನು ಕಡಿಮೆ ಮಾಡಿಲ್ಲ ಎಂದು ಆಸಿಫ್ ಹೇಳಿದ್ದಾರೆ. ಕಾರ್ಯತಂತ್ರದ ದೃಷ್ಟಿಯಿಂದ ಮಿತ್ರ ರಾಷ್ಟ್ರಗಳು ಪರಸ್ಪರ ಗುಪ್ತಚರ ಮಾಹಿತಿ ಹಂಚಿಕೊಳ್ಳುತ್ತವೆ. ನಾವು ಚೀನಾದೊಂದಿಗೆ ಸಹ ಇದೇ ರೀತಿಯ ಸಹಕಾರ ನಡೆಸುತ್ತಿದ್ದೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.