ಭಾರತದೊಂದಿಗಿನ ಮಿಲಿಟರಿ ಉದ್ವಿಗ್ನತೆಯ ಸಮಯದಲ್ಲಿ ಚೀನಾ ಪಾಕಿಸ್ತಾನಕ್ಕೆ ಭಾರತದ ವಾಯು ರಕ್ಷಣಾ ವ್ಯವಸ್ಥೆಗಳ ಕುರಿತು ಗುಪ್ತಚರ ಮಾಹಿತಿ ಒದಗಿಸಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ.
ಇಸ್ಲಾಮಾಬಾದ್: ಭಾರತದೊಂದಿಗೆ ಮಿಲಿಟರಿ ಮಾತುಕತೆಗಳ ನಡುವೆ, ಚೀನಾ ಇಸ್ಲಾಮಾಬಾದ್‌ಗೆ ಪ್ರಮುಖ ಗುಪ್ತಚರ ಮಾಹಿತಿ ಒದಗಿಸಿತ್ತು ಎಂಬುದನ್ನು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ. ಈ ಮಾಹಿತಿಯಲ್ಲಿ ಭಾರತದ ವಾಯು ರಕ್ಷಣಾ ವ್ಯವಸ್ಥೆಗಳ ಕುರಿತು ವಿವರಗಳು ಇದ್ದವು ಎಂದು ವರದಿಯಾಗಿದೆ, ಇದರಿಂದ ಪಾಕಿಸ್ತಾನ ಹೆಚ್ಚಿದ ಉದ್ವಿಗ್ನತೆ ನಡುವೆ ತನ್ನ ಕಾರ್ಯತಂತ್ರದ ಸಿದ್ಧತೆಯನ್ನು ಬಲಪಡಿಸಲು ಸಾಧ್ಯವಾಯ್ತು ಎನ್ನಲಾಗಿದೆ.
ಇತ್ತೀಚಿನ ಸಂದರ್ಶನದಲ್ಲಿ ಖವಾಜಾ ಆಸಿಫ್ ಮಾತನಾಡಿ, ಭಾರತದೊಂದಿಗೆ ಅಲ್ಪಾವಧಿಯ ಸಂಘರ್ಷದ ಸಮಯದದಲ್ಲಿ ಪಾಕಿಸ್ತಾನ ಹೆಚ್ಚಿನ ಎಚ್ಚರಿಕೆಯಿಂದ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ, ಭಾರತದ ರಕ್ಷಣಾ ಸಾಮರ್ಥ್ಯಗಳಿಗೆ ಸಂಬಂಧಿಸಿದ ಗುಪ್ತಚರ ಮಾಹಿತಿ ಹಂಚಿಕೆ ಮೂಲಕ ಬೀಜಿಂಗ್ ಪಾಕಿಸ್ತಾನಕ್ಕೆ ನೆರವಾಗಿ ಸಹಾಯ ಮಾಡಿದೆ ಎಂದು ಅವರು ಒತ್ತಿ ಹೇಳಿದರು. ಭಾರತದೊಂದಿಗೆ ನಡೆದ ಅಲ್ಪಾವಧಿಯ ಸಂಘರ್ಷದ ನಂತರ ಪಾಕಿಸ್ತಾನ ಎಚ್ಚರಿಕೆಯಿಂದ ಇರಲು ಚೀನಾ ನೀಡಿದ ಮಾಹಿತಿಯಿಂದಲೇ ಸಾಧ್ಯವಾಯ್ತು. ಸಂಘರ್ಷ ನಡೆದು ಒಂದೂವರೆ ತಿಂಗಳಿಗಿಂತ ಹೆಚ್ಚು ಕಾಲ ಕಳೆದಿದೆ ಆದರೂ ನಾವು ನಮ್ಮ ಭದ್ರತೆಯನ್ನು ಕಡಿಮೆ ಮಾಡಿಲ್ಲ ಎಂದು ಆಸಿಫ್ ಹೇಳಿದ್ದಾರೆ. ಕಾರ್ಯತಂತ್ರದ ದೃಷ್ಟಿಯಿಂದ ಮಿತ್ರ ರಾಷ್ಟ್ರಗಳು ಪರಸ್ಪರ ಗುಪ್ತಚರ ಮಾಹಿತಿ ಹಂಚಿಕೊಳ್ಳುತ್ತವೆ. ನಾವು ಚೀನಾದೊಂದಿಗೆ ಸಹ ಇದೇ ರೀತಿಯ ಸಹಕಾರ ನಡೆಸುತ್ತಿದ್ದೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಮಿತ್ರ ರಾಷ್ಟ್ರಗಳ ನಡುವಿನ ಗುಪ್ತಚರ ಸಹಕಾರ
ಉಪಗ್ರಹ ಚಿತ್ರಣಗಳು, ಬೆದರಿಕೆ ಮೌಲ್ಯಮಾಪನ ಸೇರಿದಂತೆ ಸೂಕ್ಷ್ಮ ಮಾಹಿತಿಗಳ ವಿನಿಮಯವು ಕಾರ್ಯತಂತ್ರದ ಹಿತಾಸಕ್ತಿಗಳನ್ನು ಹಂಚಿಕೊಳ್ಳುವ ರಾಷ್ಟ್ರಗಳ ನಡುವೆ ಸಾಮಾನ್ಯ ವಿಷಯವೆಂದು ಆಸಿಫ್ ವಿವರಿಸಿದರು. ಪಾಕಿಸ್ತಾನದಂತೆಯೇ, ಚೀನಾಕ್ಕೂ ಸಹ ಭಾರತದ ಕುರಿತು ತನ್ನದೇ ಆದ ಭದ್ರತಾ ಚಿಂತೆಗಳನ್ನು ಹೊಂದಿದ್ದು, ಇದುವರೆಗೂ ನಿಕಟ ಗುಪ್ತಚರ ಸಹಕಾರಕ್ಕೆ ಆಧಾರವಾಗಿದೆ ಎಂದು ಅವರು ಸೂಚಿಸಿದರು.
ವಿಶೇಷವಾಗಿ ಬೆದರಿಕೆಗಳು ಒಂದಕ್ಕೊಂದು ಸಂಬಂಧ ಹೊಂದಿರುವಾಗ ದೇಶಗಳು ತಮಗೆ ಗೊತ್ತಿರುವ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಚೀನಾ ಕೂಡ, ಪಾಕಿಸ್ತಾನದಂತೆ, ಭಾರತದಿಂದ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಉಪಗ್ರಹ ಆಧಾರಿತ ಗುಪ್ತಚರ ಮಾಹಿತಿ ಮತ್ತು ಕಣ್ಗಾವಲು ವಿವರಗಳನ್ನು ಹಂಚಿಕೊಳ್ಳುವುದು ನಮ್ಮ ನಿರಂತರ ಕಾರ್ಯತಂತ್ರದ ಸಹಕಾರದ ಭಾಗವಾಗಿದೆ ಎಂದು ಆಸಿಫ್ ಹೇಳಿದರು.
ಆಪರೇಶನ್ ಸಿಂದೂರ ಮತ್ತು ಗಡಿ ಉದ್ವಿಗ್ನತೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಮಿಲಿಟರಿ ಕಾರ್ಯಾಚರಣೆಗಳು ತೀವ್ರಗೊಂಡಿತ್ತು. ಇದಾಗಿ ಹಲವು ದಿನಗಳ ಬಳಿಕ ಈಗ ಆಸಿಫ್ ಅವರ ಈ ಹೇಳಿಕೆ ಗಮನ ಸೆಳೆದಿದೆ. ಪ್ರತೀಕಾರದವಾಗಿ, ಭಾರತೀಯ ಸಶಸ್ತ್ರ ಪಡೆಗಳು ಗಡಿಯಾಚೆಯ ಭಯೋತ್ಪಾದಕ ಶಿಬಿರಗಳ ಮೇಲೆ ‘ಆಪರೇಶನ್ ಸಿಂದೂರ’ ವನ್ನು ಆರಂಭಿಸಿದವು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಗಡಿಯಾಚೆಯಿಂದ ಭಾರೀ ಶೆಲ್ ದಾಳಿಗಳನ್ನು ನಡೆಸಿದ್ದು, ನಿಯಂತ್ರಣ ರೇಖೆ (LoC) ಉದ್ದಕ್ಕೂ ನಾಗರಿಕ ಪ್ರದೇಶಗಳಿಗೆ ಹಾನಿ ಉಂಟುಮಾಡಿತು. ಇದಕ್ಕೆ ಉತ್ತರವಾಗಿ, ಭಾರತೀಯ ಸೇನೆ ತೀವ್ರ ಪ್ರತಿದಾಳಿ ನಡೆಸಿತು. ವರದಿಯಂತೆ ಭಾರತೀಯ ಕ್ಷಿಪಣಿಗಳ ದಾಳಿಯಲ್ಲಿ ಪಾಕಿಸ್ತಾನದ 11 ವಾಯು ನೆಲೆಗಳು ನಾಶಗೊಂಡಿದ್ದು, ಇದರಿಂದ ಇಸ್ಲಾಮಾಬಾದ್ ಮತ್ತಷ್ಟು ಉದ್ವಿಗ್ನತೆಯಿಂದ ಹಿಂದೆ ಸರಿಯಬೇಕಾಯಿತು.
