ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಸಿಯಾಲ್‌ಕೋಟ್‌ನಲ್ಲಿ ಪಿಜ್ಜಾ ಹಟ್ ಎಂದು ಭಾವಿಸಿ ನಕಲಿ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿದ್ದಾರೆ. ಈ ಘಟನೆಯ ನಂತರ, ಪಿಜ್ಜಾ ಹಟ್ ಅಧಿಕೃತವಾಗಿ ಅದು ತಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದು, ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಪಾಕಿಸ್ತಾನ ಸದ್ಯ ಭಿಕ್ಷೆ ಬೇಡುವ ಸ್ಥಿತಿಯಲ್ಲಿ ಇದ್ದರೂ, ಉಗ್ರರಿಗೆ ರಕ್ಷಣೆ ನೀಡುತ್ತಾ ಭಾರತದ ಜೊತೆ ಕಿತಾಪತಿ ಮಾಡುವುದನ್ನಂತೂ ಬಿಟ್ಟಿಲ್ಲ. ಎಷ್ಟೆಂದರೂ ಅದು ಅವರ ಹುಟ್ಟುಗುಣ ಅನ್ನಿ. ಇದಾಗಲೇ ಭಾರತದಿಂದ ಭಾರಿ ನಷ್ಟ ಅನುಭವಿಸಿ, ಭಾರತದ ಸಹವಾಸವೇ ಬೇಡ ಎಂದು ಹೇಳುತ್ತಿದ್ದರೂ, ಅದೇ ಇನ್ನೊಂದೆಡೆ, ಒಳಗಿಂದ ಒಳಗೆ ಪಿತೂರಿ ಮಾಡುತ್ತಿದೆ ಈ ಪಾಕಿಸ್ತಾನ. ಆದರೆ ಇದೀಗ, ಬೇರೆ ದೇಶದ ವಿಷ್ಯ ಬಿಡಿ. ಇಲ್ಲಿನ ಪ್ರಜೆಗಳು ಖುದ್ದು ತಮ್ಮದೇ ದೇಶದ ಸಚಿವರು, ಅದರಲ್ಲಿಯೂ ರಕ್ಷಣಾ ಸಚಿವರಂಥ ಉನ್ನತ ಸ್ಥಾನದಲ್ಲಿ ಇರುವವರನ್ನೇ ಬಕ್ರಾ ಮಾಡಿದ್ದು, ಇದೀಗ ಭಾರಿ ಟ್ರೋಲ್​ ಆಗುತ್ತಿದೆ.

ನಕಲಿ ಪಿಜ್ಜಾ ಹಟ್​

ಅಷ್ಟಕ್ಕೂ ಆಗಿದ್ದೇನೆಂದರೆ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ನಕಲಿ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿ ಈಗ ಸದ್ದು ಮಾಡುತ್ತಿದ್ದಾರೆ. ಅವರನ್ನು ಪಿಜ್ಜಾ ಹಟ್​ ಉದ್ಘಾಟನೆಗೆ ಕರೆಯಲಾಗಿತ್ತು. ಸಿಯಾಲ್‌ಕೋಟ್ ಕಂಟೋನ್ಮೆಂಟ್‌ನಲ್ಲಿ ಪಿಜ್ಜಾ ಹಟ್ ಔಟ್‌ಲೆಟ್‌ನಂತೆ ಅದು ಕಾಣುತ್ತಿತ್ತು. ಅದರ ಉದ್ಘಾಟನೆಗೆ ಅವರನ್ನು ಕರೆಯಲಾಗಿತ್ತು. ಇದಕ್ಕೆ ಭಾರಿ ವಿಡಿಯೋಗಳ ಅರೇಂಜ್​ ಕೂಡ ಮಾಡಲಾಗಿತ್ತು. ರಕ್ಷಣಾ ಸಚಿವರು ಬರುತ್ತಾರೆ ಎಂದರೆ, ಸಹಜವಾಗಿ ಕ್ಯಾಮೆರಾಗಳು ಇದ್ದೇ ಇರುತ್ತವೆ ಅಲ್ಲವೆ? ಸಾಲದು ಎನ್ನುವುದಕ್ಕೆ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ನೆರೆದಿದ್ದವರು ಭರ್ಜರಿ ಚಪ್ಪಾಳೆ ತಟ್ಟಿದರು. ರಿಬ್ಬನ್ ಅನ್ನು ಕೂಡ ಖುಷಿಯಿಂದ ಕತ್ತರಿಸಿದರು. ಆದರೆ ಅಲ್ಲ ಓಪನ್​ ಆದಾಗ ಅಲ್ಲಿ ಏನೂ ಇರಲಿಲ್ಲ.

ಪಿಜ್ಜಾ ಹಟ್​ ಕ್ಲಾರಿಫಿಕೇಷನ್​

ಪಿಜ್ಜಾ ಹಟ್ ಕೂಡಲೇ ಕ್ಲಾರಿಫಿಕೇಷನ್​ ಕೊಟ್ಟು, ನಾವು ಇಂಥ ಯಾವುದೇ​ ಔಟ್​ಲೆಟ್​ ಓಪನ್​ ಮಾಡಲಿಲ್ಲ. ಇದು ನಮ್ಮದಲ್ಲ, ಇದು ನಕಲಿ ಎಂದು ಹೇಳಿದಾಗ ರಕ್ಷಣಾ ಸಚಿವರ ವಿರುದ್ಧ ಟ್ರೋಲ್​ಗಳ ಸುರಿಮಳೆಯೇ ಆಗುತ್ತಿದೆ. ಮೀಮ್ಸ್​ಗಳ ಭರಾಟೆ ಜೋರಾಗಿದೆ.

ಒಂದು ದೇಶದ ರಕ್ಷಣಾ ಸಚಿವರು ಪಿಜ್ಜಾ ಹಟ್ ಔಟ್ಲೆಟ್ ಉದ್ಘಾಟನೆಗೆ ಬಂದಿದ್ದೇ ಹಾಸ್ಯಾಸ್ಪದ. ಅದರಲ್ಲಿ ಈಗ ನಕಲಿಯಾಗಿರುವುದು ನಮ್ಮ ದೇಶದ ಸಾಧನೆಯನ್ನು ತೋರಿಸುತ್ತದೆ ಎಂದು ಪಾಕಿಸ್ತಾನದವರೇ ಬರೆದುಕೊಳ್ಳುವಂತಾಗಿದೆ!