Shahid Afridi Reaction: ಪಹಲ್ಗಾಮ್ ದಾಳಿಗೆ ಭಾರತೀಯ ಸೇನೆಯೇ ಕಾರಣ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಆರೋಪಿಸಿದ್ದಾರೆ. ಭಾರತೀಯ ಸೇನೆಯನ್ನು 'ನಿಷ್ಪ್ರಯೋಜಕ' ಎಂದು ಕರೆದ ಆಫ್ರಿದಿ, ಭಾರತ ತನ್ನ ದೇಶದಲ್ಲಿ ನಡೆಯುವ ಪ್ರತಿಯೊಂದು ಘಟನೆಗೆ ಪಾಕಿಸ್ತಾನದ ಮೇಲೆ ಆಪಾದನೆ ಮಾಡುತ್ತದೆ ಎಂದು ಹೇಳಿದ್ದಾರೆ.
ಇಸ್ಲಾಮಾಬಾದ್: ಏಪ್ರಿಲ್ 22ರಂದು ಪಹಲ್ಗಾಮ್ ದಾಳಿಯನ್ನು ಇಡೀ ವಿಶ್ವವೇ ಖಂಡಿಸುತ್ತಿದೆ. ಈ ದಾಳಿಯ ಹಿಂದೆ ಪಾಕಿಸ್ತಾನವಿರೋದು ದೃಢಪಟ್ಟಿದ್ದು, ಭಾರತ ಸರ್ಕಾರ ಹಲವು ದಿಟ್ಟಕ್ರಮಗಳನ್ನು ತೆಗೆದುಕೊಂಡಿದೆ. ಈ ಉಗ್ರರ ದಾಳಿಯಲ್ಲಿ 26 ಅಮಾಯಕರು ಪ್ರಾಣ ಕಳೆದುಕೊಂಡಿದ್ದು, ಭಾರತೀಯರು ಪ್ರತೀಕಾರದ ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ದಾಳಿ ಬಳಿಕ ಭಾರತ ಗಡಿಯನ್ನು ಬಂದ್ ಮಾಡಿದ್ದು, ನಮ್ಮ ದೇಶದಲ್ಲಿದ್ದ ಪಾಕ್ ನಿವಾಸಿಗಳನ್ನು ಹಿಂದಿರುಗಿ ಕಳುಹಿಸಿದೆ. ಇದೀಗ ಪಹಲ್ಗಾಮ್ ದಾಳಿ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ವಿಷ ಉಗುಳಿದ್ದಾನೆ. ಶಾಹಿದ್ ಆಫ್ರಿದಿ ವಿವಾದಾತ್ಮಕ ಹೇಳಿಕೆಗೆ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಶಾಹಿದ್ ಆಫ್ರಿದಿ ಹೇಳಿದ್ದೇನು?
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ, ಪಹಲ್ಗಾಮ್ ಭಯೋತ್ಪಾದಕರ ದಾಳಿಗೆ ಭಾರತದ ಸೇನೆ ಕಾರಣ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನದ ಚಾನೆಲ್ ಜೊತೆ ಮಾತನಾಡಿರುವ ಶಾಹಿದ್ ಆಫ್ರಿದಿ, ಭಾರತೀಯ ಸೇನೆಯನ್ನು 'ನಿಷ್ಪಪ್ರಯೋಜಕ' ಎಂದು ಕರೆದಿದ್ದಾನೆ. ಭಾರತ ತನ್ನ ದೇಶದಲ್ಲಿ ನಡೆಯುವ ಪ್ರತಿಯೊಂದು ಘಟನೆಗೆ ಪಾಕಿಸ್ತಾನದ ಮೇಲೆ ಆಪಾದನೆ ಮಾಡುತ್ತದೆ. ಭಾರತದಲ್ಲಿ ಪಟಾಕಿ ಸ್ಪೋಟವಾದ್ರೂ ಅದರ ಆರೋಪ ಪಾಕಿಸ್ತಾನದ ಮೇಲೆ ಬರುತ್ತದೆ. ಕಾಶ್ಮೀರದಲ್ಲಿ 8 ಲಕ್ಷ ಸೈನಿಕರನ್ನು ನಿಯೋಜಿಸಲಾಗಿದೆ. ಆದರೂ ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಆಗಿದೆ ಅಂದ್ರೆ ಏನರ್ಥ. ಹಾಗಾಗಿ ಭಾರತೀಯ ಸೇನೆ ನಿಷ್ಪ್ರಯೋಜಕ ಮತ್ತು ನಿಷ್ಪರಿಣಾಮಕಾರಿ ಎಂಬುದು ಸ್ಪಷ್ಟವಾಗುತ್ತದೆ. ಭಾರತೀಯ ಸೇನೆ ಯಾರಿಗೂ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾನೆ.
ಭಾರತವೇ ಸ್ವತಃ ಭಯೋತ್ಪಾದನೆಯನ್ನು ನಡೆಸುವ ಮೂಲಕ ತನ್ನದೇ ಜನರು ಕೊಂದು ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿದೆ. ಯಾವುದೇ ದೇಶ ಅಥವಾ ಧರ್ಮ ಭಯೋತ್ಪಾದನೆಯನ್ನು ಬೆಂಬಲಿಸಲ್ಲ. ನಾವು ಶಾಂತಿಪ್ರಿಯರಾಗಿದ್ದು, ಇಸ್ಲಾಂ ನಮಗೆ ಶಾಂತಿಯನ್ನು ಕಲಿಸುತ್ತದೆ. ಪಾಕಿಸ್ತಾನ ಎಂದಿಗೂ ಇಂತಹ ಚಟುವಟಿಕೆಗಳನ್ನು ಬೆಂಬಲಿಸಲ್ಲ ಎಂದು ಹಸಿ ಸುಳ್ಳನ್ನು ಹೇಳಿದ್ದಾನೆ ಶಾಹಿದ್ ಆಫ್ರಿದಿ.
ಇದನ್ನೂ ಓದಿ: ಭಾರತ ಕೊಟ್ಟ ಶಾಕ್‌ನಿಂದ ಕಂಗಾಲು, ಭಿಕ್ಷೆಗಾಗಿ ಪಾತ್ರೆ ಹಿಡಿದುಕೊಂಡು ನಿಂತ ಪಾಕಿಸ್ತಾನ!
ಪುರಾವೆಗಳಿಲ್ಲದೇ ಮಾತನಾಡಬೇಡಿ
ಇದೇ ವೇಳೆ ಭಾರತದ ಮಾಧ್ಯಮಗಳನ್ನು ಟೀಕಿಸಿದ ಶಾಹಿದ್ ಆಫ್ರಿದಿ, ದಾಳಿ ನಡೆದ ಒಂದು ಗಂಟೆಯೊಳಗೆ ಭಾರತದ ಮಾಧ್ಯಮಗಳು ಬಾಲಿವುಡ್ ಆಗಿ ಬದಲಾದವು. ಓ ದೇವರೇ ಪ್ರತಿಯೊಂದು ವಸ್ತುವನ್ನು ಬಾಲಿವುಡ್‌ನ್ನಾಗಿ ಮಾಡಬೇಡ. ಭಾರತದ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದ ಸುದ್ದಿಗಳನ್ನು ನೋಡಿ ನನಗೆ ಶಾಕ್ ಆಯ್ತು. ಆದ್ರೆ ನಾನು ಎಲ್ಲವನ್ನು ನೋಡುತ್ತಾ ಎಂಜಾಯ್ ಮಾಡುತ್ತಿದ್ದೆ. ಯಾವುದೇ ಪುರಾವೆಗಳಿಲ್ಲದೇ ಮಾಧ್ಯಮಗಳು ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿದ್ದವು. ಯೋಚಿಸಿ ಮತ್ತು ಪುರಾವೆಗಳಿಂದ ಮಾತನಾಡಬೇಕೆಂದಿದ್ದಾನೆ.
ಇದೇ ವೇಳೆ ಭಾರತದ ಕ್ರಿಕೆಟಿಗರ ಯಾರ ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು, ಕೆಲವರು ಟೀಂ ಇಂಡಿಯಾದಲ್ಲಿ ಹಲವು ಪಂದ್ಯಗಳಲ್ಲಿ ಆಟವಾಡಿದ್ದಾರೆ. ವಿವಿಧ ಉತ್ಪನ್ನಗಳಿಗೆ ರಾಯಭಾರಿಗಳಾಗಿದ್ದಾರೆ. ಆದ್ರೂ ಯಾವುದೇ ಸಾಕ್ಷಿಗಳಿಲ್ಲದೇ ನೇರವಾಗಿ ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಾರೆ. ಯಾಕೆ ಪಾಕಿಸ್ತಾನದ ಮೇಲೆ ಆರೋಪ? ನಿಮ್ಮ ಬಳಿಯಲ್ಲಿ ಏನಾದ್ರೂ ಸಾಕ್ಷಿಗಳಿದ್ದರೆ ತೋರಿಸಿ ಎಂದು ಶಾಹಿದ್ ಆಫ್ರಿದಿ ಕೇಳಿದ್ದಾನೆ.
ಚಹಾ ಕುಡಿಸಿ ವಾಪಸ್ ಕಳುಹಿಸಿದ್ದೇವೆ
ನಾನು ನಿಮಗೆ ಸಾಕ್ಷಿ ಕೊಡುತ್ತವೆ. ಈ ಹಿಂದೆ ಬಂದಿದ್ದ ವ್ಯಕ್ತಿಗೆ ಚಹಾ ಕುಡಿಸಿ ವಾಪಸ್ ಕಳುಹಿಸಿದ್ದೇವೆ. ನಮ್ಮ ಬಳಿಯಲ್ಲಿ ಇನ್ನು ಒಬ್ಬ ಇದ್ದಾನೆ. ಅದಕ್ಕೆ ನಮ್ಮ ಬಳಿಯಲ್ಲಿ ಸಾಕ್ಷಿಗಳಿವೆ. ಬಲೂಚಿಸ್ತಾನದಲ್ಲಿ ಅಶಾಂತಿಯ ಹಿಂದೆ ಭಾರತವಿದೆ. ಪಾಕಿಸ್ತಾನದಲ್ಲಿ ಏನಾಗ್ತಿದೆ? ಬಲೂಚಿಸ್ತಾನದಲ್ಲಿ ಏನಾಗ್ತಿದೆ? ಈ ಎಲ್ಲದರ ಹಿಂದೆ ಯಾರಿದ್ದಾರೆ ಎಂಬ ಮಾಹಿತಿ ನಮಗೆ ಗೊತ್ತಾಗಿದೆ. ನಾವು ಸುಳ್ಳು ಆರೋಪಗಳನ್ನ ಮಾಡದೇ ಭಾರತ ಮತ್ತು ಪ್ರಪಂಚಕ್ಕೆ ಸಾಕ್ಷಿಗಳನ್ನು ನೀಡಿದ್ದೇವೆ.
ಇದನ್ನೂ ಓದಿ: ಭಾರತ ಯುದ್ಧ ಸಿದ್ಧತೆಗೆ ಪಾಕ್ ಕಂಗಾಲು, ಸೇನಾ ಮುಖ್ಯಸ್ಥ ನಾಪತ್ತೆ ಬೆನ್ನಲ್ಲೇ 5000 ಯೋಧರು ರಾಜೀನಾಮೆ?
