ನೇಪಾಳ ಪ್ರಧಾನಿ ಬಾಲೇನ್ ಶಾ ಅವರು, ಭಾರತ ಮಾತ್ರವಲ್ಲ, ನೇಪಾಳವೂ ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿದೆ ಎಂದು ಸಂಸತ್ತಿನಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ದೀರ್ಘಕಾಲದ ಗಡಿ ವಿವಾದವನ್ನು ಇತಿಹಾಸಕಾರರು ಮತ್ತು ತಜ್ಞರ ಸಹಾಯದಿಂದ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ.
ಕಾಠ್ಮಂಡು: ‘ಭಾರತವು ನಮ್ಮ ಲಿಪುಲೇಖ್ ಪಾಸ್ ಸೇರಿ ಹಲವು ಸ್ಥಳ ಅತಿಕ್ರಮಿಸಿಕೊಂಡಿದೆ. ಲಿಪುಲೇಖ್ ನಮ್ಮದು’ ಎಂದು ಈ ಹಿಂದೆ ಹೇಳಿ ವಿವಾದ ಸೃಷ್ಟಿಸಿದ್ದ ನೇಪಾಳ ಪ್ರಧಾನಿ ಬಾಲೇನ್ ಶಾ, ‘ಬರೀ ಭಾರತ ಮಾತ್ರ ನಮ್ಮ ಭೂಮಿಯನ್ನು ಅತಿಕ್ರಮಿಸಿಕೊಂಡಿಲ್ಲ, ನೇಪಾಳ ಕೂಡ ಭಾರತದ ಜೊತೆ ಹಲವಾರು ಸ್ಥಳಗಳಲ್ಲಿ ಅತಿಕ್ರಮಣ ಮಾಡಿದೆ’ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ನೇಪಾಳದ ವಿಪಕ್ಷಗಳ ಆರೋಪಕ್ಕೆ ಗುರಿಯಾಗಿದೆ.
ನೇಪಾಳ ಸಂಸತ್ತಿನಲ್ಲಿ ಭಾಷಣ ಮಾಡಿದ ಅವರು, ‘ನಾನು ಇತ್ತೀಚೆಗೆ ಪ್ರಧಾನಿಯಾದ ನಂತರವೇ ತಿಳಿದ ಒಂದು ಸಂಗತಿಯ ಬಗ್ಗೆ ನಿಮಗೆ ಆಶ್ಚರ್ಯವಾಗುತ್ತದೆ. ನೇಪಾಳವೂ ಭಾರತದ ಹಲವಾರು ಸ್ಥಳಗಳಲ್ಲಿ ಅತಿಕ್ರಮಣ ಮಾಡಿಕೊಂಡಿದೆ ಎಂಬುದೇ ಆ ವಿಷಯ’ ಎಂದರು.
‘ಹೀಗಾಗಿ ಎರಡೂ ದೇಶಗಳು ವಾಸ್ತವವನ್ನು ಅಧ್ಯಯನ ಮಾಡಿ ಸ್ನೇಹಿತರಾಗಿ ಒಟ್ಟಾಗಿ ಕುಳಿತು ಸಮಸ್ಯೆ ಪರಿಹರಿಸಿಕೊಳ್ಳಬೇಕು. ದೀರ್ಘಕಾಲದ ಗಡಿ ವಿವಾದಕ್ಕೆ ಪರಿಹಾರ ಪಡೆಯಲು ಇತಿಹಾಸಕಾರರು, ಸರ್ವೇಯರ್‌ಗಳು ಮತ್ತು ತಜ್ಞರ ಸಹಾಯವನ್ನು ಪಡೆಯಲು ಎರಡೂ ದೇಶಗಳು ಒಪ್ಪಿಕೊಂಡಿವೆ’ ಎಂದು ಹೇಳಿದರು.
‘ಈ ವಿವಾದವು 1947ರಲ್ಲಿ ಬ್ರಿಟಿಷ್ ಸರ್ಕಾರ ಈ ಪ್ರದೇಶವನ್ನು ತೊರೆದಾಗಿನಿಂದ ಇದೆ. ಹೀಗಾಗಿ ಬ್ರಿಟನ್ ಹಾಗೂ ನೆರೆಯ ಚೀನಾ ಜತೆಗೂ ನಾವು ಮಾತುಕತೆ ನಡೆಸಿದ್ದೇವೆ’ ಎಂದರು.
ಏನಿದು ವಿವಾದ?:
ಭಾರತ ಮತ್ತು ನೇಪಾಳಗಳು ಕಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಗಳ ಕುರಿತು ದೀರ್ಘಕಾಲದ ಗಡಿ ವಿವಾದ ಹೊಂದಿವೆ. ಎರಡೂ ದೇಶಗಳು ಭಾರತ, ಟಿಬೆಟ್ ಮತ್ತು ನೇಪಾಳಗಳ ತ್ರಿಕೋನ ಜಂಕ್ಷನ್ ಬಳಿ ಇರುವ ಈ ಪ್ರದೇಶಗಳ ಮೇಲೆ ಹಕ್ಕು ಸಾಧಿಸುತ್ತಿವೆ. ಅದಕ್ಕೆಂದೇ ಲಿಪುಲೇಖ್ ಮೂಲಕ ನಡೆಯುವ ಕೈಲಾಸ ಮಾನಸ ಸರೋವರ ಯಾತ್ರೆಗೆ ನೇಪಾಳ ಸರ್ಕಾರ ಇತ್ತೀಚೆಗೆ ಆಕ್ಷೇಪಿಸಿತ್ತು. ಆದರೆ ಈ ಪ್ರದೇಶಗಳು ಉತ್ತರಾಖಂಡದ ಭಾಗವೆಂದು ಭಾರತವು ಸಮರ್ಥಿಸಿಕೊಂಡಿದೆ.


