ನವದೆಹಲಿ(ನ.18): ಹೆಚ್ಚುಕಮ್ಮಿ ಒಂದು ವರ್ಷದಿಂದ ಜಗತ್ತನ್ನು ಕಾಡುತ್ತಿರುವ ಕೊರೋನಾ ವೈರಸ್‌ಗೆ ಈಗ ಒಂದಾದ ಮೇಲೊಂದು ಉತ್ತಮ ಲಸಿಕೆಯ ಸಂಶೋಧನೆಯಾಗುತ್ತಿದ್ದು, ಅಮೆರಿಕದ ಮಾಡೆರ್ನಾ ಎಂಬ ಕಂಪನಿ ತನ್ನ ಲಸಿಕೆ ಶೇ.94.5ರಷ್ಟುಪರಿಣಾಮಕಾರಿಯಾಗಿದೆ ಎಂದು ಸೋಮವಾರ ಪ್ರಕಟಿಸಿದೆ. ಅಲ್ಲದೆ, 2020ರ ಅಂತ್ಯದೊಳಗೇ 2 ಕೋಟಿ ಡೋಸ್‌ ತಯಾರಿಸಿ ಅಮೆರಿಕದಲ್ಲಿ ವಿತರಿಸಲು ಸಿದ್ಧತೆ ಮಾಡಿಕೊಂಡಿರುವುದಾಗಿ ಅದು ಹೇಳಿದೆ.

ಇತ್ತೀಚೆಗಷ್ಟೇ ಅಮೆರಿಕದ ಫೈಝರ್‌ ಕಂಪನಿ ತನ್ನ ಲಸಿಕೆ ಶೇ.90ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಿಕೊಂಡ ಬೆನ್ನಲ್ಲೇ ಮಾಡೆರ್ನಾ ಕಂಪನಿಯ ಈ ಮಧ್ಯಂತರ ವರದಿ ಹೊರಬಿದ್ದಿದ್ದು, ಕೊರೋನಾ ವಿರುದ್ಧದ ಹೋರಾಟದಲ್ಲಿ ಹೊಸ ಆಶಾಕಿರಣ ಮೂಡಿದೆ.

ಭಾರತದ ಕೊರೋನಾ ಔಷಧ ಸಂಶೋಧನೆಗೆ ರಷ್ಯಾ, ಉತ್ತರ ಕೊರಿಯಾ ಹ್ಯಾಕರ್ಸ್ ಕಾಟ..!

ಅಮೆರಿಕದ ಮೆಸಾಚುಸೆಟ್ಸ್‌ನಲ್ಲಿರುವ ಕೇಂಬ್ರಿಜ್‌ ಮೂಲದ ಮಾಡೆರ್ನಾ ಕಂಪನಿ ‘ಎಂಆರ್‌ಎನ್‌ಎ-1273’ ಎಂಬ ಲಸಿಕೆ ಅಭಿವೃದ್ಧಿಪಡಿಸಿದೆ. ಅದು ಮೊದಲೆರಡು ಹಂತದ ಪ್ರಯೋಗಗಳಲ್ಲಿ ಉತ್ತೀರ್ಣವಾಗಿ ಇದೀಗ 3ನೇ ಹಂತದ ಪ್ರಯೋಗದಲ್ಲಿದೆ. ಅಮೆರಿಕದಲ್ಲಿ ಅಕ್ಟೋಬರ್‌ 22ರೊಳಗೆ ಸುಮಾರು 30,000 ಜನರಿಗೆ ಈ ಲಸಿಕೆ ನೀಡಲಾಗಿದೆ. ಅದನ್ನು ಅಮೆರಿಕ ಸರ್ಕಾರದಿಂದ ನೇಮಕಗೊಂಡ ಡೇಟಾ ಸೇಫ್ಟಿಮಾನಿಟರಿಂಗ್‌ ಬೋರ್ಡ್‌ ಎಂಬ ಸ್ವತಂತ್ರ ಕಂಪನಿ ಮೌಲ್ಯಮಾಪನ ನಡೆಸಿದ್ದು, ಆ ವೇಳೆ ಲಸಿಕೆಯು ಕೊರೋನಾ ಬಾರದಂತೆ ತಡೆಯುವಲ್ಲಿ ಶೇ.94.5ರಷ್ಟುಯಶಸ್ವಿಯಾಗಿದೆ ಎಂಬ ಫಲಿತಾಂಶ ಬಂದಿದೆ.

ಭಾರತದ ಕೊರೋನಾ ಔಷಧ ಸಂಶೋಧನೆಗೆ ರಷ್ಯಾ, ಉತ್ತರ ಕೊರಿಯಾ ಹ್ಯಾಕರ್ಸ್ ಕಾಟ..!

ಈ ಕುರಿತು ಮಾಹಿತಿ ನೀಡಿರುವ ಮಾಡೆರ್ನಾ ಕಂಪನಿಯ ಸಿಇಒ ಸ್ಟೀಫನ್‌ ಬಾನ್ಸೆಲ್‌, ‘3ನೇ ಹಂತದ ಮೌಲ್ಯಮಾಪನದಲ್ಲಿ ಉತ್ತಮ ಫಲಿತಾಂಶ ಬಂದಿರುವುದರಿಂದ ಶೀಘ್ರದಲ್ಲೇ ನಾವು ಈ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಅಮೆರಿಕದ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ. ಇನ್ನೆರಡು ತಿಂಗಳೊಳಗೆ ಸುರಕ್ಷತೆ ಮತ್ತು ದಕ್ಷತೆಯ ಅಂತಿಮ ವರದಿ ಬರಲಿದೆ. ಅಷ್ಟರೊಳಗೆ, ಅಂದರೆ 2020ರ ಅಂತ್ಯದೊಳಗೇ 2 ಕೋಟಿ ಡೋಸ್‌ ತಯಾರಿಸಿ ಅಮೆರಿಕದಲ್ಲಿ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. 2021ರಲ್ಲಿ ಜಗತ್ತಿನಾದ್ಯಂತ 100 ಕೋಟಿ ಡೋಸ್‌ ತಯಾರಿಸಲು ಯೋಜನೆ ರೂಪಿಸಿದ್ದೇವೆ’ ಎಂದು ಸೋಮವಾರ ತಿಳಿಸಿದ್ದಾರೆ