ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ ಮುಂಜಾಗ್ರತಾ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದ್ದು, ನಗರದಾದ್ಯಂತ ಸರಣಿ ಸ್ಫೋಟಗಳು ಸಂಭವಿಸಿವೆ. ಈ ದಾಳಿಯ ನಂತರ, ಇರಾನ್‌ನಿಂದ ಸಂಭವನೀಯ ಪ್ರತಿ-ದಾಳಿಯ ನಿರೀಕ್ಷೆಯಲ್ಲಿ ಇಸ್ರೇಲ್ ತನ್ನ ದೇಶದಾದ್ಯಂತ ಏರ್ ರೈಡ್ ಸೈರನ್‌ ಮೊಳಗಿಸಿದೆ.

ಟೆಹ್ರಾನ್ (ಫೆ.28): ಇರಾನ್ ಮತ್ತು ಅಮೆರಿಕ ನಡುವೆ ಅಣು ಒಪ್ಪಂದದ ವಿಚಾರವಾಗಿ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ, ಶನಿವಾರ ಇಸ್ರೇಲ್ ಇರಾನ್ ಮೇಲೆ ಭೀಕರ 'ಮುಂಜಾಗ್ರತಾ ಕ್ಷಿಪಣಿ ದಾಳಿ' (Preventive Missile Strike) ನಡೆಸಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಾದ್ಯಂತ ಸರಣಿ ಸ್ಫೋಟಗಳು ಸಂಭವಿಸಿದ್ದು, ಇಡೀ ನಗರವೇ ನಡುಗಿದೆ. ಸುದ್ದಿ ಸಂಸ್ಥೆ 'ರಾಯಿಟರ್ಸ್' ವರದಿಯ ಪ್ರಕಾರ, ಟೆಹ್ರಾನ್‌ನ ಯೂನಿವರ್ಸಿಟಿ ಸ್ಟ್ರೀಟ್ ಮತ್ತು ಜೊಮ್ಹೌರಿ ಪ್ರದೇಶಗಳಿಗೆ ಇಸ್ರೇಲ್‌ನ ಹಲವು ಕ್ಷಿಪಣಿಗಳು ಅಪ್ಪಳಿಸಿವೆ. ಅಷ್ಟೇ ಅಲ್ಲದೆ, ನಗರದ ಹೃದಯಭಾಗದಲ್ಲಿರುವ ಪಾಸ್ಟರ್ ಸ್ಟ್ರೀಟ್ ಪರಿಸರದಲ್ಲಿ ಸ್ಫೋಟದ ನಂತರ ದಟ್ಟವಾದ ಹೊಗೆ ಆಕಾಶಕ್ಕೆ ಚಿಮ್ಮುತ್ತಿರುವುದು ಕಂಡುಬಂದಿದೆ.

ಇಸ್ರೇಲ್‌ನಲ್ಲಿ 'ಸೈರನ್' ಮೊಳಗಿಸಿದ ಸೇನೆ

ದಾಳಿಯ ಬೆನ್ನಲ್ಲೇ ಇರಾನ್‌ನಿಂದ ಪ್ರತಿ-ದಾಳಿ ನಡೆಯುವ ಸಾಧ್ಯತೆಯನ್ನು ಮನಗಂಡಿರುವ ಇಸ್ರೇಲ್ ಸೇನೆ, ತನ್ನ ದೇಶದಾದ್ಯಂತ 'ಏರ್ ರೈಡ್ ಸೈರನ್'ಗಳನ್ನು (Air Raid Sirens) ಮೊಳಗಿಸಿದೆ. "ಇರಾನ್‌ನಿಂದ ಇಸ್ರೇಲ್ ಕಡೆಗೆ ಕ್ಷಿಪಣಿಗಳು ಬರುವ ಸಾಧ್ಯತೆಯಿದೆ, ಹೀಗಾಗಿ ಸಾರ್ವಜನಿಕರು ಸನ್ನದ್ಧರಾಗಿರಬೇಕು" ಎಂದು ಇಸ್ರೇಲ್ ರಕ್ಷಣಾ ಪಡೆ (IDF) ಎಚ್ಚರಿಕೆ ನೀಡಿದೆ.

ದಾಳಿಯ ಬೆನ್ನಲ್ಲೇ, ಇಸ್ರೇಲ್ ತನ್ನ ದೇಶದ ಎಲ್ಲಾ ನಾಗರಿಕರಿಗೆ ಸುರಕ್ಷಿತ ಸ್ಥಳಗಳ ಸಮೀಪವೇ ಇರುವಂತೆ ರಾಷ್ಟ್ರೀಯ ಎಚ್ಚರಿಕೆಯನ್ನು ರವಾನಿಸಿದೆ. ಇರಾನ್‌ನಿಂದ ಕ್ಷಿಪಣಿ ದಾಳಿ ನಡೆಯುವ ಸಾಧ್ಯತೆಯನ್ನು ಮನಗಂಡು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. "ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರನ್ನು ಸನ್ನದ್ಧಗೊಳಿಸಲು ಈ ಪ್ರೊಆಕ್ಟಿವ್ ಅಲರ್ಟ್ ನೀಡಲಾಗಿದೆ" ಎಂದು ಐಡಿಎಫ್ (IDF) ತಿಳಿಸಿದೆ. ಸದ್ಯದ ವರದಿಗಳ ಪ್ರಕಾರ, ಇರಾನ್‌ನಿಂದ ಇಸ್ರೇಲ್ ಮೇಲೆ ಯಾವುದೇ ಕ್ಷಿಪಣಿ ದಾಳಿ ನಡೆದಿಲ್ಲ.

ಇಡೀ ದೇಶದಲ್ಲಿ ಹೈ ಅಲರ್ಟ್‌

ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಬೆನ್ನಲ್ಲೇ, ಇಡೀ ಇಸ್ರೇಲ್ ದೇಶಾದ್ಯಂತ ಹೈ-ಅಲರ್ಟ್ ಘೋಷಿಸಲಾಗಿದೆ. ಇತ್ತ ಇರಾನ್ ರಾಜಧಾನಿ ಟೆಹ್ರಾನ್‌ನ ಪಶ್ಚಿಮ ಭಾಗದಲ್ಲಿ ಭೀಕರ ಬಾಂಬ್ ಸ್ಫೋಟದ ಸದ್ದುಗಳು ಕೇಳಿಬಂದಿವೆ. ಇಸ್ರೇಲ್ ಮಿಲಿಟರಿ ತನ್ನ ಟೆಲಿಗ್ರಾಂ ಸಂದೇಶದಲ್ಲಿ ದೇಶಾದ್ಯಂತ ಸೈರನ್‌ಗಳನ್ನು ಮೊಳಗಿಸಿದೆ. "ಇರಾನ್‌ನಿಂದ ಕ್ಷಿಪಣಿ ದಾಳಿ ನಡೆಯುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಿದ್ಧರಾಗಿರಬೇಕು" ಎಂದು ಎಚ್ಚರಿಸಿದೆ.

ಇಡೀ ದೇಶವನ್ನು 'ಪೂರ್ಣ ಚಟುವಟಿಕೆ'ಯಿಂದ 'ಅಗತ್ಯ ಚಟುವಟಿಕೆ' ಹಂತಕ್ಕೆ ಬದಲಾಯಿಸಲಾಗಿದೆ. ಶಾಲೆಗಳನ್ನು ಮುಚ್ಚಲಾಗಿದ್ದು, ಸಾರ್ವಜನಿಕ ಸಭೆ-ಸಮಾರಂಭಗಳನ್ನು ನಿಷೇಧಿಸಲಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕೆಲಸದ ಸ್ಥಳಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ.

ಇರಾನ್‌ನ ಫಾರ್ಸ್ (Fars) ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಟೆಹ್ರಾನ್‌ನ ಯೂನಿವರ್ಸಿಟಿ ಸ್ಟ್ರೀಟ್ ಮತ್ತು ಜೊಮ್ಹೌರಿ ಪ್ರದೇಶಗಳಿಗೆ ಹಲವು ಕ್ಷಿಪಣಿಗಳು ಅಪ್ಪಳಿಸಿವೆ. ಪಶ್ಚಿಮ ಟೆಹ್ರಾನ್‌ನಲ್ಲಿರುವ ಪತ್ರಕರ್ತರು ಎರಡು ಭೀಕರ ಬಾಂಬ್ ಸ್ಫೋಟದ ಸದ್ದುಗಳನ್ನು ಕೇಳಿರುವುದಾಗಿ ವರದಿ ಮಾಡಿದ್ದಾರೆ.