ಇಸ್ರೇಲ್ ಬೆನ್ನಲ್ಲೇ ಅಮೆರಿಕ ಕೂಡ ಇರಾನ್ ಮೇಲೆ ದಾಳಿ ನಡೆಸಿದ್ದು, ಅಧ್ಯಕ್ಷರ ನಿವಾಸ ಸೇರಿದಂತೆ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ಜಂಟಿ ದಾಳಿಯ ನಂತರ, ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ನವದೆಹಲಿ (ಫೆ.28): ಇರಾನ್‌ ಮೇಲೆ ಇಸ್ರೇಲ್‌ ಮುಂಜಾಗ್ರತಾ ದಾಳಿ ನಡೆಸಿದ ಬೆನ್ನಲ್ಲಿಯೇ ಅಮೆರಿಕ ಕೂಡ ಇರಾನ್‌ ಮೇಲೆ ದಾಳಿ ಆರಂಭಿಸಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ನಿವಾಸದ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಲಾಗಿದೆ. ಇದರ ಜೊತೆಗೆ, ಹಲವಾರು ಮಂತ್ರಿಗಳ ಮನೆಗಳು ಮತ್ತು ಭದ್ರತಾ ಪಡೆಗಳ ನೆಲೆಗಳ ಮೇಲೂ ದಾಳಿ ನಡೆದಿದೆ. ಗುಪ್ತಚರ ಸಂಸ್ಥೆಯ ಕಚೇರಿಗಳ ಮೇಲೂ ದಾಳಿ ನಡೆದಿದೆ. ಇರಾನ್‌ನ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಾಂಬ್‌ಸ್ಫೋಟದ ಸದ್ದು ಕೇಳಿಬಂದಿದ್ದುಮ ಇರಾನ್ ಕೂಡ ದಾಳಿಯನ್ನು ದೃಢಪಡಿಸಿದೆ. ಸುಪ್ರೀಂ ಲೀಡರ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಇರಾನ್ ಹೇಳಿದೆ. ಆದಾಗ್ಯೂ, ದಾಳಿಯ ಸ್ಥಳಗಳನ್ನು ಇರಾನ್ ಇನ್ನೂ ಬಹಿರಂಗಪಡಿಸಿಲ್ಲ.

Add Asianetnews Kannada as a Preferred SourcegooglePreferred

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಿಂದಾಗಿ ಪೂರ್ವ ಮತ್ತು ಪಶ್ಚಿಮ ಟೆಹ್ರಾನ್‌ನ ಕೆಲವು ಭಾಗಗಳಲ್ಲಿ ಸಂವಹನ ಮಾರ್ಗಗಳು ಕಡಿತಗೊಂಡಿದ್ದು, ಮೊಬೈಲ್ ಸಂಪರ್ಕ ಕಡಿತಗೊಂಡಿದೆ, ಆದರೆ ಕೆಲವು ಪ್ರದೇಶಗಳಲ್ಲಿ ಇಂಟರ್ನೆಟ್ ಅಸ್ತವ್ಯಸ್ತವಾಗಿದೆ.

ವೆನುಜುವೇಲ ಮೇಲೆ ಅಮೆರಿಕ ನಡೆಸಿದ ದಾಳಿಯಿಂದ ಅರಿತಿರುವ ಇರಾನ್‌ನ ಸುಪ್ರೀಂ ನಾಯಕ ಖಮೇನಿ ಗುಪ್ತ ಸ್ಥಳಕ್ಕೆ ಶಿಫ್ಟ್‌ ಆಗಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಟೆಹ್ರಾನ್‌ನಲ್ಲಿಲ್ಲ ಮತ್ತು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಯ ನಂತರ ಅವರನ್ನು 'ಸುರಕ್ಷಿತ' ಸ್ಥಳಕ್ಕೆ ವರ್ಗಾಯಿಸಲಾಗಿದೆ ಎಂದು ಇರಾನ್ ಮಾಧ್ಯಮಗಳು ತಿಳಿಸಿವೆ.

12 ದಿನಗಳ ಕಾಲ ನಡೆದಿದ್ದ ವಾಯು ಸಮರ

ಇಸ್ರೇಲ್ ಶನಿವಾರ ಇರಾನ್ ಮೇಲೆ ಮಂಜಾಗ್ರತಾ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ಮಿಲಿಟರಿ ಉದ್ವಿಗ್ನತೆಯನ್ನು ಮತ್ತೆ ಹೆಚ್ಚಿಸಿದೆ ಮತ್ತು ಪಾಶ್ಚಿಮಾತ್ಯ ಶಕ್ತಿಗಳೊಂದಿಗೆ ಟೆಹ್ರಾನ್‌ನ ದೀರ್ಘಕಾಲದ ಪರಮಾಣು ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರದ ಸಾಧ್ಯತೆಗಳನ್ನು ಮತ್ತಷ್ಟು ಹಾಳು ಮಾಡಿದೆ. ಕಳೆದ ಜೂನ್‌ನಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ 12 ದಿನಗಳ ವಾಯು ಸಂಘರ್ಷ ನಡೆದ ನಂತರ ಮತ್ತು ಇರಾನ್ ತನ್ನ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳನ್ನು ಮುಂದುವರಿಸಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಸ್ರೇಲ್ ಮತ್ತು ಯುಎಸ್ ಪದೇ ಪದೇ ಎಚ್ಚರಿಕೆ ನೀಡಿದ ನಂತರ ಈ ಹೊಸ ದಾಳಿ ನಡೆದಿದೆ. ಇರಾನ್ ಮಾಧ್ಯಮಗಳು ಟೆಹ್ರಾನ್‌ನಲ್ಲಿ ಸ್ಫೋಟಗಳನ್ನು ವರದಿ ಮಾಡಿದ್ದರೆ, ಇಸ್ರೇಲ್‌ನ ಹಲವಾರು ಭಾಗಗಳಲ್ಲಿ ವಾಯುದಾಳಿ ಸೈರನ್‌ಗಳು ಮೊಳಗಿದವು.