ಸಹಪಾಠಿಗಳ ನೆರವಿನಿಂದ 55 ದಿನಗಳ ಬಳಿಕ ಕೋಮಾದಿಂದ ಹೊರಬಂದ 8 ವರ್ಷದ ಬಾಲಕ, ಭೀಕರ ಕಾರು ಅಪಘಾತದಿಂದ ಆಸ್ಪತ್ರೆ ದಾಖಲಾಗಿದ್ದ ಬಾಲಕ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದ್ದರು. ಆದರೆ ಅಚ್ಚರಿ ನಡೆದಿದೆ.
ಹುನಾನ್ (ಜ.29) ಪ್ರಯಾಣದ ವೇಳೆ ಸಂಭವಿಸಿದ ಅಫಘಾತದಲ್ಲಿ 8 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ಮೆದಳು, ಶ್ವಾಸಕೋಶ ಸೇರಿದಂತೆ ಬಹುತೇಕ ಭಾಗಗಳು ಡ್ಯಾಮೇಜ್ ಆಗಿತ್ತು. ತಕ್ಷಣವೇ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಆರಂಭಗೊಂಡಿತ್ತು. ಆದರೆ ಮೆದಳು ಡ್ಯಾಮೇಜ್ ಕಾರಣ ಬಾಲಕ ಕೋಮಾಗೆ ಜಾರಿದ್ದ. ಇತ್ತ ವೈದ್ಯರು ಬಾಲಕ ಸಹಜ ಸ್ಥಿತಿಗೆ ಮರಳುವುದು ಕಷ್ಟ ಎಂದಿದ್ದರು. ಆದರೆ ತಾಯಿ ಮನಸ್ಸು ಕೇಳಬೇಕಲ್ಲ. ಮಗನನ್ನು ಕೋಮಾದಿಂದ ಹೊರಬರಲು ಇನ್ನಿಲ್ಲದ ಕಸರತ್ತು ಮಾಡಿದ್ದಾರೆ. ಇದೇ ವೇಳೆ ಶಾಲಾ ಸಹಪಾಠಿಗಳ ನೆರವಿನಿಂದ ಬಾಲಕ 55 ದಿನಗಳ ಬಳಿಕ ಕೋಮಾದಿಂದ ಹೊರಬಂದ ಘಟನೆ ದಕ್ಷಿಣ ಚೀನಾದ ಹುನಾನ್‌ನಲ್ಲಿ ನಡೆದಿದೆ.
ತಾಯಿ ಪ್ರಯತ್ನಕ್ಕೆ ಸಿಕ್ಕಿತು ಫಲ
8 ವರ್ಷದ ಬಾಲಕನ ಹೆಸರು ಲಿಯೋ ಚುಕ್ಸಿ. ಕಾರು ಅಪಘಾತದಿಂದ ಕೋಮಾಗೆ ಜಾರಿದ್ದ. ವೈದ್ಯರು, ವೈದ್ಯಕೀಯ ದಾಖಲೆ ಎಲ್ಲವೂ ಮಗನನ್ನು ಮತ್ತೆ ಸಹಜ ಸ್ಥಿತಿಯಲ್ಲಿ ನೋಡುವ ತಾಯಿ ಆಸೆಗೆ ಕೊಳ್ಳಿ ಇಟ್ಟಿತ್ತು. ಆದರೆ ಚುಕ್ಸಿ ತಾಯಿ ಪ್ರಯತ್ನ ಆರಂಭಿಸಿದ್ದರು. ಮಗ ಓದುತ್ತಿದ್ದ ಶಾಲೆಗೆ ಭೇಟಿ ನೀಡಿದ ತಾಯಿ ಶಾಲೆಯ ಮ್ಯೂಸಿಕ್, ಬೆಳಗಿನ ಮಕ್ಕಳ ಮಾತು, ಹರಟೆ, ಸಹಪಾಠಿಗಳ ಸಂದೇಶವನ್ನು ರೆಕಾರ್ಡ್ ಮಾಡಿ ತಂದಿದ್ದಾರೆ. ಬಳಿಕ ಕೋಮಾದಲ್ಲಿರುವ ಮಗನಿಗೆ ಈ ಆಡಿಯೋ ಪ್ಲೇ ಮಾಡಿ ಕೇಳಿಸಿದ್ದರೆ. ಶಾಲೆಯ ಸದ್ದು, ಸಹಪಾಠಿಗಳ ಒಂದೊಂದು ಮಾತುಗಳು ಪರಿಣಾಮ ಬೀರಲು ಆರಂಭಿಸಿದೆ.
ಚುಕ್ಸಿ ಜೊತೆಯಲ್ಲೇ ಒಂದೇ ಬೆಂಚ್‌ನಲ್ಲಿ ಕುಳಿತುಕೊಳ್ಳುವ ಬಾಲಕ, ಚುಕ್ಸಿ ಬೇಗ ಏಳು, ನಾವು ಫುಟ್ಬಾಲ್ ಆಡಲು ಹೋಗಬೇಕು ಎಂದರೆ, ಚುಕ್ಸಿ ನಾವು ನಿನ್ನನ್ನು ಮಿಸ್ ಮಾಡುತ್ತಿದ್ದೇವೆ. ನಿನಗೆ ನಮ್ಮ ಧ್ವನಿ ಕೇಳಿಸುತ್ತಿದ್ದರೆ, ಬೇಗ ಕಣ್ಣು ತೆರಿ ಎಂದು ವಿದ್ಯಾರ್ಥಿಗಳು ಜೊತೆಯಾಗಿ ಮಾಡಿದ್ದ ಆಡಿಯೋ ಕೇಳಿಸಲಾಗಿದೆ. ಹೀಗೆ ಒಂದೊಂದು ದಿನ ಐದಾರು ಆಡಿಯೋಗಳನ್ನು ಕೋಮಾದಲ್ಲಿರುವ ಮಗನಿಗೆ ತಾಯಿ ಕೇಳಿಸುತ್ತಾ ಹೋಗಿದ್ದಾರೆ.
ಪರೀಕ್ಷೆ ಹತ್ತಿರಬರುತ್ತಿದೆ. ಬೇಗ ಏಳು ನಾವು ನಿನಗಾಗಿ ಕಾಯುತ್ತಿದ್ದೇವೆ, ಜೊತೆಯಾಗಿ ಅಭ್ಯಾಸ ಮಾಡುವ ಎಂಬ ವಿಡಿಯೋ ಸೇರಿದಂತೆ ಸಹಪಾಠಿಗಳ ಹಲವು ಆಡಿಯೋಗಳನ್ನು ತಾಯಿ ರೆಕಾರ್ಡ್ ಮಾಡಿ ತಂದು ಮಗನ ಕೇಳಿಸುವ ಪ್ರಯತ್ನ ಮಾಡಿದ್ದಾರೆ. ಆರಂಭಿಕ ವಾರದಲ್ಲಿ ಯಾವುದೇ ಫಲ ಸಿಕಿಲ್ಲಿ. ಆದರೆ 45ನೇ ದಿನ ಚುಕ್ಸಿ ಕಣ್ಣು ರೆಪ್ಪೆ ತೆರೆಯುವ ಪ್ರಯತ್ನ ಮಾಡಿದ್ದ. ತಾಯಿಗೆ ಹೋದ ಜೀವ ಬಂದಂತಾಗಿದೆ. ಬಳಿಕ ಸತತವಾಗಿ ಆಡಿಯೋ ಕೇಳಿಸಿದ್ದಾರೆ. 50 ದಿನ ಚುಕ್ಸಿ ಕ್ಲಾಸ್ ಟೀಚರ್ ಮಾತುಗಳ ಆಡಿಯೋ ಕೇಳಿಸಿದಾಗ ಚುಕ್ಸಿ ಮೆಲ್ಲನೆ ನಕ್ಕಿದ್ದಾನೆ. ಇನ್ನು 55 ದಿನ ಈ ರೀತಿಯ ಆಡಿಯೋ ಕೇಳಿಸಿದಾಗ ಚುಕ್ಸಿ ತನ್ನ ಕೈಗಳನ್ನು ಚಲಿಸಲು ಯತ್ನಿಸಿದ್ದಾನೆ. ವೈದ್ಯರು ನಿರಂತರವಾಗಿ ಮಾನಿಟರ್ ಮಾಡಿದ್ದಾರೆ. 55ನೇ ದಿನ ಚುಕ್ಸಿ ಕೋಮಾದಿಂದ ಹೊರಬಂದಿದ್ದಾನೆ.
ಆಸ್ಪತ್ರೆ ಭೇಟಿ ನೀಡಿದ ಸಹಪಾಠಿಗಳು, ಟೀಚರ್
ಚುಕ್ಸಿ ಕೋಮಾದಿಂದ ಹೊರಬಂದಿದ್ದಾನೆ ಅನ್ನೋ ಮಾಹಿತಿ ಸಿಗುತ್ತಿದ್ದಂತೆ ಸಹಪಾಠಿಗಳು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ವಿದ್ಯಾರ್ಥಿಗಳ ಜೊತೆ ಟೀಚರ್ ಕೂಡ ಆಗಮಿಸಿದ್ದಾರೆ. ಅಷ್ಟೊತ್ತಿಗೆ ಚುಕ್ಸಿ ಕಣ್ಣು ತೆರೆದಿದ್ದಾನೆ. ಹೇಳಿದ ಮಾತು ಕೇಳಿಸಿಕೊಂಡು ಮೆಲ್ಲನೆ ನಗಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಇಷ್ಟು ದಿನ ಆ್ಯಬ್ಸೆಂಟ್ ಆಗಿದ್ದೀಯಾ, ಆದರೆ ಹೋಮ್‌ವರ್ಕ್ ಕೇಳಲ್ಲ ಎಂದು ಟೀಚರ್ ಜೋಕ್ ಮಾಡಿದ್ದಾರೆ. ಈ ಜೋಕ್ ವೇಳೆ ಚುಕ್ಸಿ ನಕ್ಕಿದ್ದಾನೆ. ಚುಕ್ಸಿ ತಾಯಿ ಭಾವುಕರಾಗಿದ್ದಾರೆ. ಇತ್ತ ಚುಕ್ಸಿ ಸದ್ಯ ಆಸ್ಪತ್ರೆಯಲ್ಲೇ ಚಿಕತ್ಸೆ ಪಡೆಯುತ್ತಿದ್ದಾರೆ. ಪ್ರತಿ ದಿನ ಚೇತರಿಕೆ ಕಾಣುತ್ತಿದ್ದಾನೆ.


