ಇಬ್ಬರು ಪ್ರಯಾಣಿಕರು, ನಾಲ್ವರು ಸಿಬ್ಬಂದಿಗಳು ಸೇರಿದಂತೆ 6 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ನಾಪತ್ತೆಯಾಗಿದೆ. ತುರ್ತು ಸಂದೇಶ ರವಾನೆ ಬಳಿಕ ವಿಮಾನ ಸಂಪರ್ಕ ಕಡಿತಗೊಂಡಿದೆ. ಇದೀಗ ಕರಾವಳಿ ಪಡೆ ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಿದೆ.

ನಂಟುಕೆಟ್ (ಅ.04) ವೈದ್ಯಕೀಯ ನೆರವಿನ ವಿಮಾನವೊಂದು ನಾಪತ್ತೆಯಾಗಿರುವ ಘಟನೆ ನಡೆದಿದೆ. ಇಬ್ಬರು ಪ್ರಯಾಣಿಕರು ನಾಲ್ವರು ಸಿಬ್ಬಂಧಿಗಳನ್ನು ಹೊತ್ತು ಪ್ರಯಾಣ ಬೆಳೆಸಿದ್ದ ವಿಮಾನ ಏಕಾಏಕಿ ಸಂಪರ್ಕ ಕಡಿದುಕೊಂಡಿದೆ. ಪೈಲೆಟ್ ವಿಮಾನದಲ್ಲಿನ ಎಲೆಕ್ಟ್ರಿಕ್ ಸಮಸ್ಯೆ ಕುರಿತು ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ನೀಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ತುರ್ತು ಸಂದೇಶ ರವಾನಿಸಲಾಗಿದೆ. ಬಳಿಕ ಸಂಪರ್ಕ ಕಡಿದುಕೊಂಡ ಘಟನೆ ಅಮೆರಿಕ ನಂಟುಕೆಟ್ ಬಳಿ ನಡೆದಿದೆ. ಬರ್ಮುಡಾದಿಂದ ಬೋಸ್ಟನ್‌ತ್ತ ಪ್ರಯಾಣದಲ್ಲಿದ್ದ ವೇಳೆ ವಿಮಾನ ನಾಪತ್ತೆಯಾಗಿದೆ. ಇದೀಗ ಅಮೆರಿಕ ಕೋಸ್ಟಲ್ ಗಾರ್ಡ್ ವಿಮಾನದ ಅವಶೇಷಗಳನ್ನು ನಂಟುಕೆಟ್ ಕರಾವಳಿ ತೀರದಲ್ಲಿ ಪತ್ತೆ ಹಚ್ಚಿದೆ.

6 ಮಂದಿಗಾಗಿ ಹುಡುಕಾಟ ತೀವ್ರ

ವಿಮಾನದ ಕೆಲ ಅವಶೇಷಗಳು ನಂಟುಕೇಟ್ ಕರಾವಳಿ ತೀರದಲ್ಲಿ ಪತ್ತೆಯಾಗಿದೆ. ಹೀಗಾಗಿ ಅಮರಿಕ ಕೋಸ್ಟಲ್ ಗಾರ್ಡ್ ಹುಡುಕಾಟ ತೀವ್ರಗೊಳಿಸಿದೆ. ವಿಮಾನದಲ್ಲಿ ಒಟ್ಟು 6 ಮಂದಿಗಾಗಿ ಕೋಸ್ಟಲ್ ಗಾರ್ಡ್ ಹುಡುಕಾಟ ನಡೆಸುತ್ತಿದೆ. ವಿಮಾನದ ಕೆಲ ಅವಶೇಷಗಳು ಮಾತ್ರ ಲಭ್ಯವಾಗಿದೆ. ಇದು ನಾಪತ್ತೆಯಾಗಿರುವ ವಿಮಾನದ ಅವಶೇಷಗಳು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರ ಪೈಕಿ ಓರ್ವ ರೋಗಿಯಾಗಿದ್ದರೆ, ಮತ್ತೊಬ್ಬರು ಕುಟುಂಬಸ್ಥರಾಗಿದ್ದರು. ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರ ಮಾಡಲಾಗುತ್ತಿತ್ತು. ಏರ್ ಆಂಬುಲೆನ್ಸ್ ನೆರವಿನಲ್ಲಿದ್ದ ವಿಮಾನ ಏಕಾಏಕಿ ನಾಪತ್ತೆಯಾಗಿದೆ.

ನಾಲ್ವರು ಸಿಬ್ಬಂದಿಗಳು ಕೆನಡಾ ಮೂಲದವರಾಗಿದ್ದರೆ, ರೋಗಿ ಹಾಗೂ ಆತನ ಕುಟುಂಬಸ್ಥರು ಬರ್ಮುಡಾ ಮೂಲದವರಾಗಿದ್ದಾರೆ. ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿಗಳು ಘಟನೆ ಕುರಿತು ವಿವರಿಸಿದ್ದಾರೆ. ಪೈಲೆಟ್ ಹಾರಾಟದ ನಡುವೆ ಏರ್ ಕಂಟ್ರೋಲ್‌ ಜೊತೆ ಮಾತನಾಡಿದ್ದಾರೆ. ಎಲೆಕ್ಟ್ರಿಕ್ ಸಮಸ್ಯೆಗಳು ಕಾಣಿಸಿಕೊಂಡಿದೆ ಎಂದಿದ್ದಾರೆ. ಪೈಲೆಟ್ ಧ್ವನಿಗಳು ಸ್ಪಷ್ಟವಾಗಿ ಕೇಳಿಸಲಿಲ್ಲ. ಸಂಪರ್ಕ ಕಡಿತಗೊಳ್ಳುವ ಕೆಲವೇ ಕ್ಷಣಗಳ ಮುನ್ನ ಕಂಟ್ರೋಲ್ ರೂಂಗೆ ತುರ್ತು ಸಂದೇಶ ರವಾನಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಮಾನ ಪತನಗೊಂಡಿರುವ ಸಾಧ್ಯತೆಯನ್ನು ಕೋಸ್ಟ್ ಗಾರ್ಡ್ ಅಧಿಕಾರಿಗಳು ಹೇಳಿದ್ದಾರೆ. ಕರಾವಳಿ ತೀರ ಪ್ರದೇಶದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿರುವ ಹಿನ್ನಲೆಯಲ್ಲಿ ಸಮುದ್ರದಲ್ಲಿ ಪತನಗೊಂಡಿರುವ ಸಾಧ್ಯತೆ ಇದೆ. ಕೋಸ್ಟ್ ಗಾರ್ಡ್ ಹುಡುಕಾಟ ನಡೆಸುತ್ತಿದ್ದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದಿದ್ದಾರೆ.