174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲೆಟ್ ಕ್ಯಾಪ್ಟನ್ ಸ್ಮಿತ್ ಮಛಾರ್ ಜೊತೆ ಮೋದಿ ವಿಡಿಯೋ ಕಾಲ್ ಮಾತನಾಡಿದ್ದಾರೆ. ಗಂಭೀರ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕ್ಯಾಪ್ಟನ್ ಸ್ಮಿತ್, ತನ್ನ ಆದರ್ಶ ವ್ಯಕ್ತಿ ಯಾರು ಅನ್ನೋದು ಬಹಿರಂಗಪಡಿಸಿದ್ದಾರೆ.
ನವದೆಹಲಿ (ಅ.02) ಫ್ಲೈದುಬೈ ವಿಮಾನ ಹೈಜಾಕ್ ಪ್ರಯತ್ನವನ್ನು ವಿಫಲಗೊಳಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲೆಟ್ ಕ್ಯಾಪ್ಟನ್ ಸ್ಮಿತ್ ಮಛಾರ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕ ಇಸ್ರೇಲ್ ಪ್ರಯಾಣಿಕರ ಹೊತ್ತು ದುಬೈನಿಂದ ಇಸ್ರೇಲ್‌ಗೆ ಹೊರಟ ವಿಮಾನವನ್ನು ಹೈಜಾಕ್ ಮಾಡಿ ಪತನಗೊಳಿಸುವ ಪ್ರಯತ್ನ ನಡೆದಿತ್ತು. ಆದರೆ ಕ್ಯಾಪ್ಟನ್ ಸ್ಮಿತ್ ತನ್ನ ಮೇಲೆ ಭೀಕರ ದಾಳಿ ನಡೆದರೂ ಪ್ರಾಣದ ಹಂಗು ತೊರೆದು ಪ್ರಯಾಣಿಕರ ಜೀವ ಉಳಿಸಿದ ಕ್ಯಾಪ್ಟನ್ ಸ್ಮಿತ್ ಚಿಕಿತ್ಸೆ ಮುಂದುವರಿದಿದೆ. ಸದ್ಯ ಚೇತರಿಸಿಕೊಳ್ಳುತ್ತಿರುವ ಕ್ಯಾಪ್ಟನ್ ಸ್ಮಿತ್ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಕ್ಯಾಪ್ಟನ್ ಸ್ಮಿತ್ ಧೈರ್ಯ ಹಾಗೂ ಸಾಹಸಕ್ಕೆ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.
ಇಡೀ ದೇಶ ಸ್ಮಿತ್‌ಗಾಗಿ ಪ್ರಾರ್ಥಿಸುತ್ತಿದೆ
ಕ್ಯಾಪ್ಟನ್ ಸ್ಮಿತ್ ಜೊತೆಗಿನ ಮಾತುಕತೆಯಲ್ಲಿ ಮೋದಿ ಆರೋಗ್ಯ ವಿಚಾರಿಸಿದ್ದಾರೆ. ಕ್ಯಾಪ್ಟನ್ ಸ್ಮಿತ್ ಸಮಯೋಚಿತ ನಿರ್ಧಾರ, ಧೈರ್ಯ, ಸಾಹಸವನ್ನು ಮೋದಿ ಕೊಂಡಾಡಿದ್ದಾರೆ. ಸ್ಮಿತ್ ಧೈರ್ಯದ ನಿರ್ಧಾರ ಭಾರತೀಯರನ್ನು ಹೆಮ್ಮೆಪಡುವಂತೆ ಮಾಡಿದೆ. ಇಡೀ ದೇಶ ಸ್ಮಿತ್ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದೆ, ದೇಶದ ಪ್ರತಿಯೊಬ್ಬ ಪ್ರಜೆ ಸ್ಮಿತ್ ಶೀಘ್ರ ಚೇತರಿಸಲಿ ಎಂದು ಹಾರೇಸಿದೆ ಎಂದು ಮೋದಿ ಹೇಳಿದ್ದಾರೆ.
ಮೋದಿ ನನ್ನ ಆದರ್ಶ ವ್ಯಕ್ತಿ
ಪ್ರಧಾನಿ ಮೋದಿ ಜೊತೆಗಿನ ಮಾತುಕತೆಯಲ್ಲಿ ಕ್ಯಾಪ್ಟನ್ ಸ್ಮಿತ್ ತಮ್ಮ ರೋಲ್ ಮಾಡೆಲ್ ಕುರಿತು ಹೇಳಿದ್ದಾರೆ. ಪ್ರಧಾನಿ ಮೋದಿ ನನ್ನ ಆದರ್ಶ ವ್ಯಕ್ತಿ ಎಂದು ಸ್ಮಿತ್ ಹೇಳಿದ್ದಾರೆ. ಮೋದಿ ಜೊತೆಗಿನ ವಿಡಿಯೋ ಕಾಲ್ ವೇಳೆ ಕ್ಯಾಪ್ಟನ್ ಸ್ಮಿತ್ ಭಾವುಕರಾಗಿದ್ದಾರೆ. ಪ್ರಧಾನಿ ಜೊತೆ ಮಾತನಾಡುತ್ತಿರುವುದು ಅತ್ಯಂತ ವಿಶೇಷ ಹಾಗೂ ಹೆಮ್ಮೆಯ ಕ್ಷಣ ಎಂದು ಕ್ಯಾಪ್ಟನ್ ಸ್ಮಿತ್ ಹೇಳಿದ್ದಾರೆ.
ಭಾರತೀಯರು ಜೀವ ಉಳಿಸಲು ತಮ್ಮ ಪ್ರಾಣ ಪಣಕ್ಕಿಡುತ್ತಾರೆ
ಕ್ಯಾಪ್ಟನ್ ಸ್ಮಿತ್ ಜೊತೆಗಿನ ಮಾತುಕತೆಯಲ್ಲಿ ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ. ವಿಶ್ವವೇ ಕ್ಯಾಪ್ಟನ್ ಸ್ಮಿತ್‌ಗೆ ಸಲಾಂ ಹೇಳುತ್ತಿದೆ. ಭಾರತೀಯರು ಯಾರ ಜೀವ ತೆಗೆಯುವವರಲ್ಲ, ನಾವು ಇತರರನ್ನು ಉಳಿಸಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಟ ಮಾಡುವವರು ಎಂದು ದೇಶ ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದು ಮೋದಿ ಹೇಳಿದ್ದಾರೆ. ಮೋದಿ ಮಾತುಗಳನ್ನು ಕೇಳಿಸಿಕೊಂಡ ಕ್ಯಾಪ್ಟನ್ ಸ್ಮಿತ್ ಭಾವುಕರಾಗಿದ್ದಾರೆ.
ಹನುಮಾನ್ ಚಾಲಿಸಾ ಪಠಣ
ಪ್ರತಿ ಸಂಕಷ್ಟದ ಸಮಯದಲ್ಲಿ ತಾವು ಹನುಮಾನ್ ಚಾಲೀಸ ಪಠಿಸುತ್ತೇವೆ ಎಂದು ಕ್ಯಾಪ್ಟನ್ ಸ್ಮಿತ್ ಹೇಳಿದ್ದಾರೆ. ವಿಮಾನದ ದಾಳಿ ಬಳಿಕ ಅತೀವ ನೋವು, ಕಷ್ಟದ ಸಮಯದಲ್ಲಿ ಹನುಮಾನ್ ಚಾಲೀಸ ಪಠಣ ನನ್ನ ಧೈರ್ಯವನ್ನು ಇಮ್ಮಡಿಗೊಳಿಸಿದೆ ಎಂದು ಸ್ಮಿತ್ ಹೇಳಿದ್ದಾರೆ.
ಭಗವದ್ಗೀತೆ ಮೌಲ್ಯಗಳ ತಿಳಿಸಿ ಬೆಳೆಸಿದ್ದೇನೆ
ಇದೇ ವೇಳೆ ಕ್ಯಾಪ್ಟನ್ ಸ್ಮಿತ್ ತಾಯಿ ಜೊತೆಗೆ ಮೋದಿ ಮಾತನಾಡಿದ್ದಾರೆ. ಈ ವೇಳೆ ಸ್ಮಿತ್ ಗೀತಾ ಬೆನ್, ನನ್ನ ಮಗನನ್ನು ಭಗವದ್ಗೀತೆಯ ಮೌಲ್ಯಗಳು, ಬೋಧನೆಗಳನ್ನು ತಿಳಿಸಿ ಬೆಳೆಸಿದ್ದೇನೆ ಎಂದಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯ ಕರೆ ಸ್ವೀಕರಿಸಿ ಮಾತನಾಡುತ್ತಿರುವುದು ಅತೀವ ಹೆಮ್ಮೆಯ ವಿಚಾರ. ಮೋದಿ ಜೊತೆ ಮಾತನಾಡುವ ಅವಕಾಶ ಸಿಗುತ್ತೆ ಎಂದು ನಾವು ಯಾವತ್ತೂ ಊಹಿಸಿರಲಿಲ್ಲ ಎಂದಿದ್ದಾರೆ.


