ದಿಢೀರ್ ದಾಳಿಯಾಗಿತ್ತು, ನೋವು, ಆತಂಕದ ನಡುವೆ ಧೈರ್ಯ ಕಳೆದುಕೊಳ್ಳಲಿಲ್ಲ. 174 ಮಂದಿ ಜೀವ ನನ್ನ ಕೈಯಲ್ಲಿತ್ತು. ಹನುಮಾನ್ ಚಾಲೀಸಾ ಪಠಣ ನನಗೆ ಧೈರ್ಯ ನೀಡಿತು ಎಂದು ಕ್ಯಾಪ್ಟನ್ ಸ್ಮಿತ್ ಘಟನೆ ಕುರಿತು ಮೋದಿಗೆ ವಿವರಿಸಿದ್ದಾರೆ.

ನವದೆಹಲಿ (ಅ.02) ಫ್ಲೈ ದುಬೈ ವಿಮಾನ ಹೈಜಾಕ್ ಘಟನೆ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಇಸ್ರೇಲ್‌ಗೆ ಹೊರಟಿದ್ದ ವಿಮಾನವನ್ನು ಕೋಪೈಲೆಟ್‌ನಿಂದ ಹೈಜಾಕ್ ಮಾಡಿ ಪತನಗೊಳಿಸುವ ಯತ್ನವನ್ನು ಭಾರತೀಯ ಪೈಲೆಟ್ ಕ್ಯಾಪ್ಟನ್ ಸ್ಮಿತ್ ಮಛಾರ್ ತಡೆದು 174 ಮಂದಿ ಜೀವ ಉಳಿಸಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿರುವ ಕ್ಯಾಪ್ಟನ್ ಸ್ಮಿತ್‌ಗೆ ಪ್ರಧಾನಿ ಮೋದಿ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ದಾಳಿಯಾದಾಗ ಧೈರ್ಯದಿಂದ ಎದುರಿಸಿದೆ. ನನ್ನ ಕೈಯಲ್ಲಿ 174 ಮಂದಿ ಜೀವವಿತ್ತು. ಹನುಮಾನ್ ಚಾಲೀಸಾ ಪಠಣ ನನಗೆ ಧೈರ್ಯ ನೀಡಿತು ಎಂದು ಕ್ಯಾಪ್ಟನ್ ಸ್ಮಿತ್ ಹೇಳಿದ್ದಾರೆ.

174 ಮಂದಿ ಜೀವ ನನ್ನ ಕೈಯಲ್ಲಿತ್ತು

ಯುಎಐನ ಆಸ್ಪತ್ರೆಯಲ್ಲಿ ಸ್ಮಿತ್ ಮಛಾರ್‌ಗೆ ಚಿಕಿತ್ಸೆ ಮುಂದುವರಿದಿದೆ. ಸ್ವಲ್ಪ ಚೇತರಿಸಿಕೊಂಡ ಸ್ಮಿತ್‌ಗೆ ಮೋದಿ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಈ ವೇಳೆ ನಡೆದ ಘಟೆಯನ್ನು ಸ್ಮಿತ್ ವಿವರಿಸಿದ್ದಾರೆ. ಕೋ ಪೈಲೆಟ್‌ನಿಂದ ಏಕಾಏಕಿ ದಾಳಿಯಾಗಿತ್ತು. ಆತಂಕ, ಭಯದ ಜೊತೆ ನಾನು ಹೋರಾಟ ಮಾಡಬೇಕಿತ್ತು. ಈ ಸಮಯದಲ್ಲಿ ನಾನು ಧೈರ್ಯದಿಂದ ಹೋರಾಡದಿದ್ದರೆ 174 ಮಂದಿ ಪ್ರಾಣ ಕ್ಷಣಮಾತ್ರದಲ್ಲಿ ಹೋಗುತ್ತಿತ್ತು. ಹೀಗಾಗಿ ಧೈರ್ಯವಾಗಿ ಎದುರಿಸಿದೆ ಎಂದು ಸ್ಮಿತ್ ಮಛಾರ್ ಹೇಳಿದೆ.

ಹುನುಮಾನ್ ನನಗೆ ಧೈರ್ಯ ನೀಡಿದ

ಪ್ರತಿ ಬಾರಿ ನಾನು ಕಷ್ಟದಲ್ಲಿರುವಾಗ, ನೋವಿನಲ್ಲಿರುವಾಗ ಹನುಮಾನ್ ಚಾಲೀಸಾ ಪಠಣ ಮಾಡುತ್ತೇನೆ. ಇದು ನನಗೆ ಧೈರ್ಯ ನೀಡುತ್ತದೆ. ವಿಮಾನದಲ್ಲಿ ದಾಳಿ ನಡುವೆ ಧೈರ್ಯ ತಂದುಕೊಂಡೆ, ಪ್ರತಿರೋಧ ಮಾಡಿದೆ. ನೋವಿನಲ್ಲಿ, ಕಷ್ಟದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿದೆ. ಹನುಮಾನ್ ನನಗೆ ಧೈರ್ಯ ನೀಡಿದ ಎಂದು ಕ್ಯಾಪ್ಟನ್ ಸ್ಮಿತ್ ಘಟನೆ ವೇಳೆ ತನ್ನ ನಡೆ ಕುರಿತು ಮೋದಿಗೆ ಹೇಳಿದ್ದಾರೆ.

ಕ್ಯಾಪ್ಟನ್ ಸ್ಮಿತ್ ಬಾಲ್ಯದಲ್ಲಿ ಮನೆಯಲ್ಲಿ ಭಗವದ್ಗೀತೆ ಮೌಲ್ಯಗಳನ್ನು, ಬೋದನೆಗಳನ್ನು ತಿಳಿಸಿಕೊಡಲಾಗಿತ್ತು. ಈ ಕುರಿತು ಮೋದಿ ಜೊತೆ ಕ್ಯಾಪ್ಟನ್ ಸ್ಮಿತ್ ತಾಯಿ ಗೀತಾ ಬೆನ್ ಹೇಳಿಕೊಂಡಿದ್ದಾರೆ. ಭಗವದ್ಗೀತೆ ಮೌಲ್ಯಗಳನ್ನು ಮಗ ಮೈಗೂಡಿಸಿಕೊಂಡಿದ್ದಾನೆ ಎಂದು ಗೀತಾ ಬೆನ್ ಹೇಳಿದ್ದಾರೆ.

ಕ್ಯಾಪ್ಟನ್ ಸ್ಮಿತ್‌ಗೆ ಹೀರೋ ಎಂದು ಮೋದಿ ಕರೆದಿದ್ದಾರೆ. ನಿಮ್ಮ ಧೈರ್ಯ, ಸಾಹಸ ನಡೆಯನ್ನು ದೇಶವೇ ಕೊಂಡಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ. ನಿಮ್ಮ ಬಗ್ಗೆ ಅತೀವ ಗೌರವವಿದೆ, ಹೆಮ್ಮೆ ಇದೆ ಎಂದು ಮೋದಿ ಹೇಳಿದ್ದಾರೆ. ಮೋದಿ ಮಾತಿನ ನಡುವೆ ಭಾವುಕರಾದ ಕ್ಯಾಪ್ಟನ್ ಸ್ಮಿತ್, ಪ್ರಧಾನಿ ಮೋದಿ ಜೊತೆ ಮಾತನಾಡುವ ಅವಕಾಶ ಸಿಕ್ಕಿದೆ. ಅತೀವ ಸಂತಸವಿದೆ ಎಂದಿದ್ದಾರೆ. ಮೋದಿ ಜೊತೆ ಮಾತನಾಡುತಿರುವುದೇ ಹೆಮ್ಮೆಯ ವಿಷಯ ಎಂದು ಕ್ಯಾಪ್ಟನ್ ಸ್ಮಿತ್ ಹೇಳಿದ್ದಾರೆ.