Mark Zuckerberg: ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಐರ್ಲೆಂಡ್‌ನಲ್ಲಿ ಅತ್ಯಂತ ಐಷಾರಾಮಿ ಅರಮನೆಯನ್ನು ಖರೀದಿಸಿದ್ದು, ಈ ಭವ್ಯ ಬಂಗಲೆಯು ಸುಮಾರು 440 ಎಕರೆ ಜಮೀನನ್ನು ಒಳಗೊಂಡಿದೆ. ಈ ಅರಮನೆಯ ಕುರಿತಾದ ಮಹತ್ವದ ಹಾಗೂ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
₹335 ಕೋಟಿ ಕೊಟ್ಟು ಬಂಗಲೆ ಖರೀದಿಸಿದ ಜುಕರ್‌ಬರ್ಗ್
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಐರ್ಲೆಂಡ್‌ನಲ್ಲಿ ಅತ್ಯಂತ ಐಷಾರಾಮಿ ಅರಮನೆಯನ್ನು ಖರೀದಿಸಿದ್ದು, ಇದೀಗ ಈ ಅರಮನೆ ಸಾಕಷ್ಟು ಸುದ್ದಿಯಲ್ಲಿದೆ. ವರದಿಗಳ ಪ್ರಕಾರ, ಈ ಮಹಲಿನ ಬೆಲೆ ಸುಮಾರು 30 ಮಿಲಿಯನ್ ಯುರೋ, ಅಂದರೆ ಸುಮಾರು ₹335 ಕೋಟಿ ಎಂದು ಹೇಳಲಾಗುತ್ತಿದೆ. ಮಾರ್ಕ್ ಜುಕರ್‌ಬರ್ಗ್ ಅವರ ಹೊಸ ಐಷಾರಾಮಿ ಅರಮನೆಯ ಹೆಸರು Strancally Castle. ಇದು ಆಗ್ನೇಯ ಐರ್ಲೆಂಡ್‌ನಲ್ಲಿದ್ದು, ಈ ಆಸ್ತಿಯೊಂದಿಗೆ ಬರೋಬ್ಬರಿ 440 ಎಕರೆ ಜಮೀನು ಕೂಡ ಇದೆ. ಐರಿಶ್ ಟೈಮ್ಸ್ ವರದಿ ಪ್ರಕಾರ, ಜುಕರ್‌ಬರ್ಗ್ ಮತ್ತು ಅವರ ಪತ್ನಿ ಸುಮಾರು ಒಂದು ವಾರದ ಹಿಂದೆಯಷ್ಟೇ ಈ ಭವ್ಯ ಮಹಲನ್ನು ಖರೀದಿಸಿದ್ದಾರೆ. ಆದರೆ ಈ ಒಪ್ಪಂದ ಇನ್ನೂ ಐರ್ಲೆಂಡ್‌ನ ಪ್ರಾಪರ್ಟಿ ಪ್ರೈಸ್ ರಿಜಿಸ್ಟರ್‌ನಲ್ಲಿ ದಾಖಲಾಗಿಲ್ಲ.
ಈ ಭವ್ಯ ಮಹಲಿನ ವಿಶೇಷತೆ ಏನು?
ಜುಕರ್‌ಬರ್ಗ್ ಖರೀದಿಸಿರುವ Strancally Castle, ಬ್ಲ್ಯಾಕ್‌ವಾಟರ್ ವ್ಯಾಲಿಯಲ್ಲಿ ನದಿಯ ದಡದಲ್ಲಿದೆ. 19ನೇ ಶತಮಾನದಲ್ಲಿ ಇದನ್ನು ಗೋಥಿಕ್ ಶೈಲಿಯಲ್ಲಿ ನಿರ್ಮಿಸಲಾಗಿತ್ತು. ಸುಮಾರು 1830ರ ವೇಳೆಯಲ್ಲಿ ಟೋರಿ ಸಂಸದ ಜಾನ್ ಕೀಲಿ ಅವರಿಗಾಗಿ ಈ ಮಹಲನ್ನು ನಿರ್ಮಿಸಲಾಯಿತು. ಬ್ರಿಯಾನ್ ಡಿ ಬ್ರೆಫ್ನಿ ಮತ್ತು ರೋಸ್ಮೆರಿ ಫೋಲಿಯಟ್ ಬರೆದ ‘ದಿ ಹೌಸೆಸ್ ಆಫ್ ಐರ್ಲ್ಯಾಂಡ್’ ಪುಸ್ತಕದ ಪ್ರಕಾರ, ಈ ಕೋಟೆಯನ್ನು ಪೆನ್ ಬ್ರದರ್ಸ್ ವಿನ್ಯಾಸಗೊಳಿಸಿದ್ದರು. ಈ ಮಹಲಿನ ವಿಸ್ತೀರ್ಣ ಸುಮಾರು 16,000 ಚದರ ಅಡಿ. ಇದು ಎಷ್ಟು ದೊಡ್ಡದಾಗಿದೆ ಎಂದರೆ, ಅಡುಗೆಮನೆಯಿಂದ ಡೈನಿಂಗ್ ರೂಮ್‌ಗೆ ವೇಗವಾಗಿ ನಡೆದುಕೊಂಡು ಹೋದರೂ ಸುಮಾರು 4.5 ನಿಮಿಷ ಬೇಕಾಗುತ್ತದೆ!
ಜುಕರ್‌ಬರ್ಗ್ ಖರೀದಿಸಿರುವ ಈ ಭವ್ಯ ಅರಮನೆಯ ನಿಖರ ಬೆಲೆ ಇನ್ನೂ ಸ್ಪಷ್ಟವಾಗಿಲ್ಲ. ಇದರ ನಿಜವಾದ ಬೆಲೆ ಸುಮಾರು ₹223 ಕೋಟಿಯಿಂದ ₹335 ಕೋಟಿಯವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಮಾರ್ಕ್ ಜುಕರ್‌ಬರ್ಗ್ ಅವರ ಈ ಹೊಸ ಕೋಟೆ, ಮೆಟಾದ ಅಂತಾರಾಷ್ಟ್ರೀಯ ಪ್ರಧಾನ ಕಚೇರಿಯಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿದೆ. ಮೆಟಾ ಸಿಇಒ ಅವರ ವಕ್ತಾರರ ಪ್ರಕಾರ, ಜುಕರ್‌ಬರ್ಗ್ ಮತ್ತು ಅವರ ಕುಟುಂಬ ತಮ್ಮ ಹೊಸ ಐಷಾರಾಮಿ ನಿವಾಸದ ಬಗ್ಗೆ ಬಹಳ ಉತ್ಸುಕರಾಗಿದ್ದಾರೆ.
ಮಾರ್ಕ್ ಜುಕರ್‌ಬರ್ಗ್ ಯಾರಿಂದ ಈ ಮಹಲು ಖರೀದಿಸಿದರು?
ಈ ಮಹಲನ್ನು ಸುಮಾರು 25 ವರ್ಷಗಳ ಹಿಂದೆ ಪ್ರೈವೇಟ್ ಇನ್ವೆಸ್ಟ್‌ಮೆಂಟ್ ಸಂಸ್ಥೆ RAB Capitalನ ಸಹ-ಸಂಸ್ಥಾಪಕ ಮೈಕೆಲ್ ಅಲೆನ್-ಬಕ್ಲಿ ಮತ್ತು ಅವರ ಪತ್ನಿ ಜಿಯಾನ್ಕಾರ್ಲಾ ಖರೀದಿಸಿದ್ದರು. 25 ವರ್ಷಗಳಿಂದ ತಾವು ವಾಸಿಸುತ್ತಿದ್ದ ಮನೆಯನ್ನು ಪ್ರೀತಿಯಿಂದ ಬಿಟ್ಟು ಕೊಡುತ್ತಿರುವುದಾಗಿ ಅವರು ಹೇಳಿದ್ದಾರೆ. ಜೊತೆಗೆ, ಈ ಭವ್ಯ ಅರಮನೆಯನ್ನು ಸಂರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಿದೆ ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಮಾರ್ಕ್ ಜುಕರ್‌ಬರ್ಗ್ ತಮ್ಮ ಪತ್ನಿಯೊಂದಿಗೆ ಅಮೆರಿಕದಲ್ಲೇ ವಾಸಿಸಲಿದ್ದಾರೆ. ಅವರು ಐರ್ಲೆಂಡ್‌ಗೆ ಬಂದಾಗ ಈ ಮಹಲನ್ನು ತಮ್ಮ ನಿವಾಸವಾಗಿ ಬಳಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.


