ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಸಹಪೈಲಟ್ ಯತ್ನಿಸಿದಾಗ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮತ್ತು ಸಿಬ್ಬಂದಿ ಧೈರ್ಯದಿಂದ ಹೋರಾಡಿ ಭೀಕರ ದುರಂತವನ್ನು ತಪ್ಪಿಸಿದ್ದಾರೆ. ಈ ಸಾಹಸವನ್ನು ಮೆಚ್ಚಿ ಯುಎಇ ಸರ್ಕಾರವು ಕ್ಯಾಪ್ಟನ್ ಸ್ಮಿತ್ ಸೇರಿದಂತೆ ವಿಮಾನದ ಸಿಬ್ಬಂದಿಗೆ ಪ್ರತಿಷ್ಠಿತ ‘ಆರ್ಡರ್ ಆಫ್ ಜಾಯೆದ್ II’ ಪ್ರಶಸ್ತಿ ನೀಡಿ ಗೌರವಿಸಿದೆ.
ದುಬೈ(ಅ.28): ದುಬೈನಿಂದ ಇಸ್ರೇಲ್ನ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಂಭವಿಸಬಹುದಾಗಿದ್ದ ಭೀಕರ ದುರಂತವನ್ನು ತಪ್ಪಿಸಲು ಧೈರ್ಯದಿಂದ ಹೋರಾಡಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಸೇರಿದಂತೆ ವಿಮಾನ ಸಿಬ್ಬಂದಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೌರವ ಸಲ್ಲಿಸಿದೆ.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಕ್ಯಾಪ್ಟನ್ ಸ್ಮಿತ್ ಮಚ್ಚರ್ ಸೇರಿದಂತೆ ಫ್ಲೈದುಬೈ ಸಿಬ್ಬಂದಿಗೆ ‘ಆರ್ಡರ್ ಆಫ್ ಜಾಯೆದ್ II’ ಪ್ರಥಮ ದರ್ಜೆ ಗೌರವ ಪ್ರದಾನ ಮಾಡಿದ್ದಾರೆ. ಸೆಪ್ಟೆಂಬರ್ 30ರಂದು ದುಬೈ-ಟೆಲ್ ಅವೀವ್ ವಿಮಾನದಲ್ಲಿ ನಡೆದಿದ್ದ ದಾಳಿಯ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಸಿಬ್ಬಂದಿ ತೋರಿದ ಧೈರ್ಯ ಮತ್ತು ವೃತ್ತಿಪರ ಬದ್ಧತೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ದುಬೈನ ಯುವರಾಜ, ಯುಎಇಯ ಉಪಪ್ರಧಾನಿ ಹಾಗೂ ರಕ್ಷಣಾ ಸಚಿವ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಸಿಬ್ಬಂದಿಗೆ ಗೌರವ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡಲು ಸಿಬ್ಬಂದಿ ತೋರಿದ ವೃತ್ತಿಪರತೆ ಮತ್ತು ಬದ್ಧತೆಯನ್ನು ಅವರು ಶ್ಲಾಘಿಸಿದರು.
ಫ್ಲೈದುಬೈ ಸಿಬ್ಬಂದಿಯ ಧೈರ್ಯಕ್ಕೆ ಯುಎಇ ಅಧ್ಯಕ್ಷರಿಂದ ಮೆಚ್ಚುಗೆ
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಉಪಾಧ್ಯಕ್ಷ, ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಮಂಗಳವಾರ ವಿಮಾನದ ಸಿಬ್ಬಂದಿಯನ್ನು ಭೇಟಿಯಾಗಿ ಗೌರವಿಸಿದರು. ಸಂಭವಿಸಬಹುದಾಗಿದ್ದ ವಿಮಾನಯಾನ ದುರಂತವನ್ನು ತಪ್ಪಿಸುವಲ್ಲಿ ಅವರು ವಹಿಸಿದ ಪಾತ್ರವನ್ನು ನಾಯಕರು ಕೊಂಡಾಡಿದರು. ಜನರ ಜೀವ ರಕ್ಷಣೆ ಮತ್ತು ಅವರ ಭದ್ರತೆಯನ್ನು ಖಚಿತಪಡಿಸುವುದು ದೇಶದ ಅತ್ಯುನ್ನತ ಆದ್ಯತೆಗಳಲ್ಲಿ ಒಂದಾಗಿದೆ ಎಂದು ನಾಯಕರು ಗುಣಗಾನ ಮಾಡಿದರು
ಫ್ಲೈದುಬೈ FZ1073 ವಿಮಾನದಲ್ಲಿ ನಡೆದಿದ್ದೇನು?
ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈಯ FZ1073 ವಿಮಾನದಲ್ಲಿ ಈ ಘಟನೆ ನಡೆದಿತ್ತು. ಯುಎಇ ತನಿಖಾಧಿಕಾರಿಗಳ ಪ್ರಕಾರ, ವಿಮಾನದ ಸಹಪೈಲಟ್ ವಿಮಾನದ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆದು, ಇಸ್ರೇಲ್ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ವಿಮಾನವನ್ನು ಅಪ್ಪಳಿಸುವ ಉದ್ದೇಶ ಹೊಂದಿದ್ದನೆಂದು ಆರೋಪಿಸಲಾಗಿದೆ.
ವಿಮಾನದೊಳಗೆ ಸಹಪೈಲಟ್ ಕಾಕ್ಪಿಟ್ನಲ್ಲಿ ಬಳಸುವ ಕೊಡಲಿಯಿಂದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಈ ದಾಳಿಯಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಂಭೀರವಾಗಿ ಗಾಯಗೊಂಡಿದ್ದರು. ಆದರೂ ಗಾಯದ ನಡುವೆಯೇ ಅವರು ಕಾಕ್ಪಿಟ್ ಬಾಗಿಲನ್ನು ಅನ್ಲಾಕ್ ಮಾಡುವಲ್ಲಿ ಯಶಸ್ವಿಯಾದರು. ಇದರಿಂದ ವಿಮಾನದ ಕ್ಯಾಬಿನ್ ಸಿಬ್ಬಂದಿ ಮತ್ತು ಪ್ರಯಾಣಿಕರು ಮಧ್ಯಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು.
ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇತರ ಇಬ್ಬರು ಫ್ಲೈದುಬೈ ಪೈಲಟ್ಗಳು ಬಳಿಕ ವಿಮಾನದ ನಿಯಂತ್ರಣವನ್ನು ವಹಿಸಿಕೊಂಡರು. ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದತ್ತ ತಿರುಗಿಸಿ ಸುರಕ್ಷಿತವಾಗಿ ಇಳಿಸಿದರು. ದಾಳಿಯ ವೇಳೆ ವಿಮಾನವು ಸಾವಿರಾರು ಅಡಿ ಎತ್ತರ ದಿಢೀರ್ ಕುಸಿತ ಕಂಡಿತ್ತು ಎಂದು ವರದಿಯಾಗಿದೆ. ಆದರೂ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಘಟನೆಯ ಬಳಿಕ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಸೌದಿ ಅರೇಬಿಯಾದ ತಬೂಕ್ನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಮತ್ತು ಚೇತರಿಕೆಗಾಗಿ ಅವರನ್ನು ಅಬುಧಾಬಿಗೆ ಸ್ಥಳಾಂತರಿಸಲಾಯಿತು.






