ಮಾಲ್ಡೀವ್ಸ್ ಟ್ರಿಪ್ ಕ್ಯಾನ್ಸಲ್ ಮಾಡಿದ ಭಾರತೀಯರು: ಹೆಚ್ಚು ಪ್ರವಾಸಿಗರ ಕಳಿಸುವಂತೆ ಚೀನಾಗೆ ಮುಯಿಝು ಮನವಿ
ಭಾರತದಲ್ಲಿ ಮಾಲ್ಡೀವ್ಸ್ ವಿರುದ್ಧ ಬೃಹತ್ ಬಹಿಷ್ಕಾರ ಅಭಿಯಾನ ಆರಂಭವಾಗಿದೆ. ಈ ನಡುವೆ ಹೆಚ್ಚಿನ ಪ್ರವಾಸಿಗರನ್ನು ದ್ವೀಪ ರಾಷ್ಟ್ರಕ್ಕೆ ಕಳುಹಿಸುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮಂಗಳವಾರ ಚೀನಾಗೆ ಮನವಿ ಮಾಡಿದ್ದಾರೆ.
ಬೀಜಿಂಗ್ (ಜನವರಿ 9, 2024): ಪ್ರಧಾನಿ ಮೋದಿ ವಿರುದ್ಧ ಹಾಗೂ ಭಾರತದ ವಿರುದ್ಧ ತಮ್ಮ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ ನಡುವೆಯೇ ಭಾರತದಲ್ಲಿ ಮಾಲ್ಡೀವ್ಸ್ ವಿರುದ್ಧ ಬೃಹತ್ ಬಹಿಷ್ಕಾರ ಅಭಿಯಾನ ಆರಂಭವಾಗಿದೆ. ಈ ನಡುವೆ ಹೆಚ್ಚಿನ ಪ್ರವಾಸಿಗರನ್ನು ದ್ವೀಪ ರಾಷ್ಟ್ರಕ್ಕೆ ಕಳುಹಿಸುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮಂಗಳವಾರ ಚೀನಾಗೆ ಮನವಿ ಮಾಡಿದ್ದಾರೆ.
2023 ರಲ್ಲಿ ಮಾಲ್ಡೀವ್ಸ್ ದ್ವೀಪಸಮೂಹಕ್ಕೆ ಭಾರತವೇ ಅಗ್ರ ಪ್ರವಾಸಿ ಮಾರುಕಟ್ಟೆಯಾಗಿದ್ದು, ಆದರೆ ಮೂವರು ಸಚಿವರ ಹೇಳಿಕೆಗಳ ಬಳಿಕ ಭಾರತದಲ್ಲಿ #BoycottMaldives ಅಭಿಯಾನ ಜೋರಾಗಿದೆ. ಅನೇಕರು ಮಾಲ್ಡೀವ್ಸ್ ಪ್ರವಾಸ ಕ್ಯಾನ್ಸಲ್ ಮಾಡಿರೋದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿ: ಲಕ್ಷದ್ವೀಪಕ್ಕೆ ಹೋಗಲು ಪ್ಲ್ಯಾನ್ ಮಾಡ್ತಿದ್ದೀರಾ? PAYTMನಲ್ಲಿ ಬುಕ್ ಮಾಡಿ ವಿಮಾನ ಟಿಕೆಟ್‌ಗೆ ಭರ್ಜರಿ ಡಿಸ್ಕೌಂಟ್ ಗಳಿಸಿ!
ಇನ್ನು, ಪ್ರಸ್ತುತ ಚೀನಾಕ್ಕೆ 5 ದಿನಗಳ ಭೇಟಿಯಲ್ಲಿರೋ ಮೊಹಮ್ಮದ್ ಮುಯಿಝು ಚೀನಾ ಪರವಾಗಿದ್ದು, ಭಾರತ ವಿರೋಧಿಯಾಗಿದ್ದಾರೆ. ಮಂಗಳವಾರದಂದು ಫುಜಿಯಾನ್ ಪ್ರಾಂತ್ಯದಲ್ಲಿ ಮಾಲ್ಡೀವ್ಸ್ ಬ್ಯುಸಿನೆಸ್ ಫೋರಮ್‌ಗೆ ನೀಡಿದ ಭಾಷಣದಲ್ಲಿ ಮುಯಿಝು ತನ್ನ ಭೇಟಿಯ ಎರಡನೇ ದಿನದಂದು ಚೀನಾವನ್ನು ದ್ವೀಪ ರಾಷ್ಟ್ರದ "ಹತ್ತಿರದ" ಮಿತ್ರ ಎಂದು ಕರೆದರು.
ಚೀನಾ ನಮ್ಮ ಹತ್ತಿರದ ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು ಅಭಿವೃದ್ಧಿ ಪಾಲುದಾರರಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಅಲ್ಲದೆ, 2014 ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪ್ರಾರಂಭಿಸಿದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI) ಯೋಜನೆಗಳನ್ನು ಶ್ಲಾಘಿಸಿದರು. ಈ ಮೂಲಕ ಮಾಲ್ಡೀವ್ಸ್ ಇತಿಹಾಸದಲ್ಲಿ ಕಂಡ ಅತ್ಯಂತ ಮಹತ್ವದ ಮೂಲಸೌಕರ್ಯ ಯೋಜನೆಗಳನ್ನು ತಲುಪಿಸಿದ್ದಾರೆ ಎಂದೂ ತಮ್ಮ ಭಾಷಣದಲ್ಲಿ ಹೇಳಿದರು.
ಇದನ್ನು ಓದಿ: ಪಾಕ್ ಹೊಂಚು ಹಾಕಿದ್ದ ಲಕ್ಷದ್ವೀಪ ಭಾರತದಲ್ಲೇ ಉಳಿದುಕೊಂಡಿದ್ದೇಗೆ? ಗುಟ್ಟು ರಟ್ಟು ಮಾಡಿದ ಮೋದಿ!
ಹಾಗೂ, ಈ ವೇಳೆ ಮಾಲ್ಡೀವ್ಸ್‌ಗೆ ತನ್ನ ಪ್ರವಾಸಿಗರ ಹರಿವನ್ನು ಹೆಚ್ಚಿಸಲು ಚೀನಾಗೆ ಮನವಿ ಮಾಡಿದರು. ಚೀನಾ ಕೋವಿಡ್ ಪೂರ್ವದಲ್ಲಿ ನಮ್ಮ (ಮಾಲ್ಡೀವ್ಸ್‌ನ) ನಂ. 1 ಮಾರುಕಟ್ಟೆಯಾಗಿತ್ತು. ಮತ್ತು ಚೀನಾ ಈ ಸ್ಥಾನವನ್ನು ಮರಳಿ ಪಡೆಯಲು ನಾವು ಪ್ರಯತ್ನಗಳನ್ನು ತೀವ್ರಗೊಳಿಸಬೇಕೆಂಬುದು ನನ್ನ ವಿನಂತಿಯಾಗಿದೆ ಎಂದು ಮೊಹಮ್ಮದ್ ಮುಯಿಝು ಹೇಳಿದ್ದಾರೆಂದು ವರದಿಯಾಗಿದೆ. ಹಿಂದೂ ಮಹಾಸಾಗರದ ದ್ವೀಪದಲ್ಲಿ ಸಮಗ್ರ ಪ್ರವಾಸೋದ್ಯಮ ವಲಯವನ್ನು ಅಭಿವೃದ್ಧಿಪಡಿಸಲು ಉಭಯ ದೇಶಗಳು 50 ಮಿಲಿಯನ್ ಡಾಲರ್ ಯೋಜನೆಗೆ ಸಹಿ ಹಾಕಿವೆ ಎಂದು ಮಾಲ್ಡೀವ್ಸ್ ಮಾಧ್ಯಮ ವರದಿ ಮಾಡಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಭಾರತ ಮತ್ತು ರಷ್ಯಾ ನಂತರ ಮಾಲ್ಡೀವ್ಸ್‌ಗೆ ಚೀನಾ ಮೂರನೇ ಅತಿದೊಡ್ಡ ಪ್ರವಾಸಿ ಸಂಚಾರ ಮೂಲವಾಗಿದೆ. 2023ರಲ್ಲಿ ಮಾಲ್ಡೀವ್ಸ್ ಅತಿ ಹೆಚ್ಚು ಪ್ರವಾಸಿಗರು ಭಾರತದಿಂದಲೇ ಹೋಗಿದ್ದಾರೆ. 209,198 ಲಕ್ಷ ಜನ ಭಾರತೀಯರು ಹೋಗಿದ್ರೆ, ರಷ್ಯಾದ 209,146 ಪ್ರವಾಸಿಗರು ಹೋಗಿದ್ದಾರೆ. ಹಾಗೂ ಚೀನಾದಿಂದ 187,118 ಪ್ರವಾಸಿಗರು ಹೋಗಿದ್ದು, ಈ ಹಿನ್ನೆಲೆ ರಷ್ಯಾ 2ನೇ ಸ್ಥಾನದಲ್ಲಿದ್ರೆ, ಚೀನಾ 3ನೇ ಸ್ಥಾನದಲ್ಲಿದೆ.
ಪ್ರಧಾನಿ ಭೇಟಿ ನಂತರ MakeMyTripನಲ್ಲಿ ಲಕ್ಷದ್ವೀಪ ಸರ್ಚ್‌ನಲ್ಲಿ 3,400% ಏರಿಕೆ: ನೂತನ ಅಭಿಯಾನ ಪ್ರಾರಂಭ!
ಕೋವಿಡ್‌ಗಿಂತ ಮೊದಲು, ಚೀನಾ 2.80 ಲಕ್ಷಕ್ಕೂ ಹೆಚ್ಚು ಪ್ರವಾಸಿಗರೊಂದಿಗೆ ಅಗ್ರಸ್ಥಾನವನ್ನು ಹೊಂದಿತ್ತು. ಆದರೆ, ಈಗ ಆರ್ಥಿಕ ಹಿಂಜರಿತದಿಂದಾಗಿ ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳುತ್ತಿದ್ದಾರೆ.
ಮಾಲ್ಡೀವ್ಸ್ ಟ್ರಿಪ್ ಕ್ಯಾನ್ಸಲ್ ಮಾಡಿದ ಭಾರತೀಯರು: ಬೆದರಿದ ಮುಯಿಝು ಸರ್ಕಾರದಿಂದ ಟೀಕೆಗೆ ಸ್ಪಷ್ಟನೆ