ಭಾರತಕ್ಕೆ ಬೇಕಾಗಿದ್ದ ಜೈಷ್ ಎ ಮೊಹಮ್ಮದ್ ಸಂಘಟನೆಯ ಕಮಾಂಡರ್ ಮೌಲಾನಾ ಸಲ್ಮಾನ್ ಅಜರ್, ಪಾಕಿಸ್ತಾನದ ಬಹಾವಲ್‌ಪುರದಲ್ಲಿ ನಿಗೂಢ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಕಳೆದ ಎರಡು ವಾರಗಳಲ್ಲಿ ಪಾಕಿಸ್ತಾನದಲ್ಲಿ ಉಗ್ರರು ನಿಗೂಢವಾಗಿ ಹತ್ಯೆಯಾಗುತ್ತಿರುವ ಸರಣಿಯಲ್ಲಿ ಇದು ಮೂರನೇ ಪ್ರಕರಣವಾಗಿದೆ.

ಇಸ್ಲಾಮಾಬಾದ್‌ (ಮೇ.1): ಭಾರತಕ್ಕೆ ಬೇಕಾಗಿರುವ ಕುಖ್ಯಾತ ಉಗ್ರರು ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪುವ ಸರಣಿ ಪ್ರಕರಣ ಮುಂದುವರೆದಿದ್ದು, ಇದೀಗ ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಕಮಾಂಡರ್‌ ಮೌಲಾನಾ ಸಲ್ಮಾನ್‌ ಅಜರ್‌ ನಿಗೂಢ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.

ಜೈಷ್‌ ಸಂಘಟನೆಯ ಪ್ರಮುಖ ಕಾರ್ಯಾಚರಣೆ ಸ್ಥಳಗಳ ಪೈಕಿ ಒಂದಾದ ಬಹಾವಲ್‌ಪುರದಲ್ಲಿ ನಿಗೂಢ ವಾಹನವೊಂದು ಡಿಕ್ಕಿ ಹೊಡೆದು ಸಲ್ಮಾನ್‌ ಅಜರ್‌ ಸಾವನ್ನಪ್ಪಿದ್ದಾನೆ. ಅಪಘಾತ ಹೇಗಾಯ್ತು? ಮಾಡಿದ್ದು ಯಾರು? ಎಂಬ ಮಾಹಿತಿ ರಹಸ್ಯವಾಗಿಯೇ ಉಳಿದಿದೆ. ಆದರೆ ಇತ್ತೀಚೆಗೆ ಪಾಕ್‌ನಲ್ಲಿ ನಡೆಯುತ್ತಿರುವ ಉಗ್ರರ ಹತ್ಯೆಯ ಹಿಂದಿನ ಶಕ್ತಿಯಾದ ಧುರಂಧರ್‌ ಕೈವಾಡವನ್ನು ಇಲ್ಲಿಯೂ ಶಂಕಿಸಲಾಗಿದೆ.

ಯಾರು ಈ ಆಜರ್‌?:

ಜೈಷ್‌ನ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದ, ಭಾರತದ ಗಡಿಪ್ರದೇಶದಲ್ಲಿ ನಡೆದ ಹಲವು ಉಗ್ರ ಕೃತ್ಯಗಳ ಹಿಂದೆ ಈತನ ಕೈವಾಡದ ಶಂಕೆ ಇತ್ತು. ಜೊತೆಗೆ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಭಾರತದ ವಿರುದ್ದ ದ್ವೇಷ, ಪ್ರಚೋದನಕಾರಿ ಭಾಷಣಗಳ ಮೂಲಕ ಈತ ಉಗ್ರ ಕೃತ್ಯಕ್ಕೆ ಪ್ರಚೋದನೆ ನೀಡುತ್ತಿದ್ದ.

ಕಳೆದ 2 ವಾರದಲ್ಲಿ ಪಾಕಿಸ್ತಾನದಲ್ಲಿ ಹೀಗೆ ಧುರಂದರ್‌ ದಾಳಿಗೆ ತುತ್ತಾದ ಮೂರನೇ ವ್ಯಕ್ತಿ ಈತ. ಎರಡು ದಿನಗಳ ಹಿಂದಷ್ಟೇ ಇಂಥದ್ದೇ ದಾಳಿಯಲ್ಲಿ ಲಷ್ಕರ್‌ನ ಶೇಖ್‌ ಯೂಸುಫ್‌ ಆಫ್ರಿದಿ ಸಾವನ್ನಪ್ಪಿದ್ದರೆ, ಅದಕ್ಕೂ ಮೊದಲು ನಡೆದ ದಾಳಿಯಲ್ಲಿ ಲಷ್ಕರ್‌ ಸಹ ಸಂಸ್ಥಾಪಕ ಅಮೀರ್‌ ಹಮ್ಜಾನ ಮೇಲೆ ಗುಂಡಿನ ದಾಳಿ ನಡೆದಿತ್ತಾದರೂ ಆದ ಬದುಕುಳಿದಿದ್ದ.