ವರ್ಷಕ್ಕೆ 2 ಕೋಟಿಗೂ ಹೆಚ್ಚು ಸಂಬಳ ಪಡೆಯುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಮಿಶೆಲ್ ಯಂಗ್, ತಮ್ಮ ಐಷಾರಾಮಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಮನಸ್ಸಿನ ನೆಮ್ಮದಿಗಾಗಿ, ಅವರು ಈಗ ಮ್ಯಾನ್‌ಹ್ಯಾಟನ್‌ನಲ್ಲಿ 'ಮಚಾ ಹೌಸ್' ಎಂಬ ಜಪಾನೀಸ್ ಗ್ರೀನ್ ಟೀ ಕೆಫೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.

ಕೈತುಂಬಾ ಸಂಬಳ, ಐಷಾರಾಮಿ ಲೈಫು... ಇದನ್ನೆಲ್ಲಾ ಬಿಟ್ಟು ಯಾರಾದ್ರೂ ಬರ್ತಾರಾ? ಆದರೆ, 29 ವರ್ಷದ ಯುವತಿಯೊಬ್ಬರು ಇದನ್ನೆಲ್ಲಾ ಬಿಟ್ಟು ತಮ್ಮಿಷ್ಟದ ದಾರಿ ಹಿಡಿದಿದ್ದಾರೆ. ಸದ್ಯ ಈ ಯುವತಿಯ ಕಥೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಈ ಯುವತಿಯ ಹೆಸರು ಮಿಶೆಲ್ ಯಂಗ್. ಸಾಫ್ಟ್‌ವೇರ್ ಎಂಜಿನಿಯರ್ ಆಗಿ ವರ್ಷಕ್ಕೆ 2.5 ಲಕ್ಷ ಡಾಲರ್, ಅಂದ್ರೆ ಭಾರತದ ರುಪಾಯಿಗಳಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಸಂಪಾದಿಸುತ್ತಿದ್ದರು. ಆದರೆ, ಈ ಕೆಲಸಕ್ಕೆ ಗುಡ್‌ಬೈ ಹೇಳಿ, ಈಗ ಮ್ಯಾನ್‌ಹ್ಯಾಟನ್‌ನಲ್ಲಿ 'ಮಚಾ ಹೌಸ್' ಅನ್ನೋ ಕೆಫೆ ಶುರು ಮಾಡಿದ್ದಾರೆ. CNBC 'Make It' ಈ ಬಗ್ಗೆ ವರದಿ ಮಾಡಿದೆ.

ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಮಿಶೆಲ್, ಐಟಿ ಕಂಪನಿಗೆ ಸೇರಿದಾಗ ಅವರ ಆರಂಭಿಕ ಸಂಬಳವೇ 1,60,000 ಡಾಲರ್ ಇತ್ತು. ಕೆಲವೇ ವರ್ಷಗಳಲ್ಲಿ ಇದು 2,50,000 ಡಾಲರ್‌ಗೆ ಏರಿತು. ಬಡತನದಲ್ಲಿ ಬೆಳೆದ ಮಿಶೆಲ್‌ಗೆ ಆರಂಭದಲ್ಲಿ ಹಣ ಗಳಿಸುವುದೇ ಮುಖ್ಯವಾಗಿತ್ತು. ಆದರೆ, ಕೈತುಂಬಾ ಹಣ ಬಂದರೂ ಮನಸ್ಸಿಗೆ ನೆಮ್ಮದಿ ಸಿಗಲಿಲ್ಲ ಅಂತಾರೆ ಮಿಶೆಲ್.

'ನಾನೊಂದು ಯಂತ್ರದ ಹಾಗೆ ಕೆಲಸ ಮಾಡ್ತಿದ್ದೆ. ನಾನಿದನ್ನೆಲ್ಲಾ ಯಾಕೆ ಮಾಡ್ತಿದ್ದೀನಿ ಅಂತ ಯೋಚನೆ ಬರ್ತಿತ್ತು. ಕೊನೆಗೆ, ಈ ಐಷಾರಾಮಿ ಜೀವನದಿಂದ ಹೊರಬರಲು ನಿರ್ಧರಿಸಿದೆ' ಅಂತ ಮಿಶೆಲ್ ಹೇಳಿದ್ದಾರೆ.

ಜಪಾನೀಸ್ ಗ್ರೀನ್ ಟೀ 'ಮಚಾ'

ನ್ಯೂಯಾರ್ಕ್‌ನಲ್ಲಿದ್ದ ಮಚಾ ಔಟ್‌ಲೆಟ್‌ಗಳಿಗೆ ಹೋದಾಗ, ಮಿಶೆಲ್‌ಗೆ ಈ ಬ್ಯುಸಿನೆಸ್‌ನ ಸಾಧ್ಯತೆಗಳ ಬಗ್ಗೆ ಅರಿವಾಯಿತು. ಆದರೆ, ಅವರು ತಕ್ಷಣವೇ ಕೆಲಸ ಬಿಡಲಿಲ್ಲ. ಬದಲಿಗೆ ಪಕ್ಕಾ ಪ್ಲಾನ್ ಮಾಡಿಕೊಂಡರು. ಜಪಾನೀಸ್ ಗ್ರೀನ್ ಟೀ 'ಮಚಾ' ತಯಾರಿಸುವುದನ್ನು ಕಲಿಯಲು ಜಪಾನ್‌ಗೆ ಹೋದರು. ಕೆಫೆಗಳು ಹೇಗೆ ಕೆಲಸ ಮಾಡುತ್ತವೆ ಅಂತ ತಿಳಿಯಲು ಸ್ಟಾರ್‌ಬಕ್ಸ್‌ನಲ್ಲಿ ಪಾರ್ಟ್-ಟೈಮ್ ಕೆಲಸವನ್ನೂ ಮಾಡಿದರು.

ತಮ್ಮ ಉಳಿತಾಯದಿಂದ 1.5 ಲಕ್ಷ ಡಾಲರ್‌ಗೂ ಹೆಚ್ಚು, ಅಂದ್ರೆ ಸುಮಾರು 1.25 ಕೋಟಿ ರೂಪಾಯಿ ಹಣವನ್ನು ಕೆಫೆಗಾಗಿ ಮೀಸಲಿಟ್ಟರು. ಕೊನೆಗೆ, 2025ರಲ್ಲಿ ಮ್ಯಾನ್‌ಹ್ಯಾಟನ್‌ನಲ್ಲಿ 'ಮಚಾ ಹೌಸ್' ಶುರು ಮಾಡಿದರು. ಆರಂಭದಲ್ಲಿ ಸಾಕಷ್ಟು ಸವಾಲುಗಳು ಎದುರಾದವು. ಆದರೆ, ಸ್ನೇಹಿತರು ಮತ್ತು ಕುಟುಂಬದವರ ಬೆಂಬಲದಿಂದ ಮಿಶೆಲ್ ಧೈರ್ಯವಾಗಿ ಮುನ್ನಡೆದರು.

ಕೆಫೆ ಲಾಭದಲ್ಲಿಯೇ ನಡೆಯುತ್ತಿದೆ

ಐಟಿ ಕೆಲಸದಲ್ಲಿದ್ದ ಸಂಬಳದ ಹತ್ತನೇ ಒಂದು ಭಾಗವನ್ನು ಮಾತ್ರ ಮಿಶೆಲ್ ಈಗ ಸಂಬಳವಾಗಿ ಪಡೆಯುತ್ತಿದ್ದಾರೆ. ಅಂದ್ರೆ, ವರ್ಷಕ್ಕೆ ಕೇವಲ 27 ಲಕ್ಷ ರೂಪಾಯಿ. ಐಷಾರಾಮಿ ಜೀವನ ಬಿಟ್ಟು, ಸರಳವಾಗಿ ಬದುಕುತ್ತಿದ್ದಾರೆ. ಆದರೂ, ಅವರ ಕೆಫೆ ಲಾಭದಲ್ಲಿಯೇ ನಡೆಯುತ್ತಿದೆ. ಆದರೆ, ಲಾಭ ಅಥವಾ ಹಣಕ್ಕಿಂತ ಜೀವನದಲ್ಲಿ ಸಿಗುವ ಖುಷಿ ಮುಖ್ಯ. ಆ ಖುಷಿ ಈಗ ನನಗೆ ಸಿಗುತ್ತಿದೆ ಅಂತ ಮಿಶೆಲ್ ಹೇಳುತ್ತಾರೆ.