ಪಾಕ್‌ನಲ್ಲಿ ಆಹಾರಕ್ಕೆ ತೀವ್ರ ಹಾಹಾಕಾರ: ಗನ್ ಹಿಡಿದು ಸರ್ಕಾರದಿಂದ ಆಹಾರ ವಿತರಣೆ
ಪಾಕ್‌ನಲ್ಲಿ ಆಹಾರಕ್ಕೆ ತೀವ್ರ ಹಾಹಾಕಾರ ಉಂಟಾಗಿದ್ದು, ಗೋಧಿ ಹಿಟ್ಟಿಗಾಗಿ ನೂಕುನುಗ್ಗಲು, ಕಾಲ್ತುಳಿತ ಉಂಟಾಗುತ್ತಿದೆ. ಗನ್ ಹಿಡಿದು ಸರ್ಕಾರ ಆಹಾರ ವಿತರಣೆ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಇಸ್ಲಾಮಾಬಾದ್: ಸರ್ಕಾರ - ಸೇನೆ ನಡುವಿನ ಸಂಘರ್ಷ, ಆಡಳಿತದಲ್ಲಿ ಉಗ್ರ ಸಂಘಟನೆಗಳ ಹಸ್ತಕ್ಷೇಪ, ರಾಜಕೀಯ ನಾಯಕರ ಮಿತಿಮೀರಿದ ಭ್ರಷ್ಟಾಚಾರದಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಇದೀಗ ತುತ್ತು ಆಹಾರಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಆರ್ಥಿಕ ಸಂಕಷ್ಟದ ಕಾರಣ ದೇಶದಲ್ಲಿ ಆಹಾರ ವಸ್ತುಗಳ ಕೊರತೆ ಕಾಣಿಸಿಕೊಂಡಿದೆ. ಪರಿಣಾಮ ದಿನ ಬಳಕೆ ವಸ್ತುಗಳ ದರ ಮುಗಿಲು ಮುಟ್ಟಿದೆ. ಹೀಗಾಗಿ ಸರ್ಕಾರವೇ ಅತ್ಯಂತ ಪ್ರಮುಖ ಆಹಾರವಾದ ಗೋಧಿ ಹಿಟ್ಟನ್ನು ಪಡಿತರ ರೀತಿಯಲ್ಲಿ ವಿತರಣೆಗೆ ಮುಂದಾಗಿದೆ.
ಆದರೆ ಸಿಂಧ್ (Sindh), ಬಲೂಚಿಸ್ತಾನ್ (Balochistan), ಖೈಬರ್‌ಪಖ್ತೂನ್‌ಕ್ವಾ (Khyber Pakhtunkhwa) ಮೊದಲಾದ ಪ್ರದೇಶಗಳಲ್ಲಿ ಗೋಧಿ ಹಿಟ್ಟಿನ (Wheat Flour) ಸಂಗ್ರಹ ಬಹುತೇಕ ಖಾಲಿಯಾಗಿರುವ ಕಾರಣ, ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ಜನರು ಲಭ್ಯವಿರುವ ವಸ್ತುಗಳ ಖರೀದಿಗೆ ಮುಗಿಬೀಳುತ್ತಿದ್ದಾರೆ. ಹೀಗಾಗಿ ಸರ್ಕಾರ (Government) ವಾಹನಗಳ (Vehicle) ಮೂಲಕ ತಂದು ಪೂರೈಸುತ್ತಿರುವ ಗೋಧಿಹಿಟ್ಟು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಜನರು ಉದ್ದದ ಸರದಿಯಲ್ಲಿ ನಿಂತಿರುವ ದೃಶ್ಯಗಳು ಹಲವೆಡೆ ಕಂಡುಬಂದಿದೆ. ಕೆಲವೆಡೆ ಜನರು ಇಂಥ ವಾಹನಗಳ ಮೇಲೆ ದಾಳಿ ಮಾಡಿ ಲೂಟಿ ಮಾಡಲು ಯತ್ನಿಸಿದ ಘಟನೆಗಳು ನಡೆದಿವೆ. ಹೀಗಾಗಿ ಪೊಲೀಸರ ಗನ್ ಭದ್ರತೆಯಲ್ಲಿ ಆಹಾರ ವಸ್ತುಗಳ ವಿತರಣೆ ಮಾಡಲಾಗುತ್ತಿದೆ.
ಇದನ್ನು ಓದಿ: ಪಾಕ್‌ನಲ್ಲಿ 1 ಕೆಜಿಗೆ ಗೋಧಿಹಿಟ್ಟಿಗೆ 1500 ರುಪಾಯಿ: ಅಗ್ಗದ ಗೋಧಿಹಿಟ್ಟು ವಿತರಣೆ ವೇಳೆ ಕಾಲ್ತುಳಿತಕ್ಕೆ ನಾಲ್ವರ ಬಲಿ
ಸರ್ಕಾರ ಪ್ರತಿ 10 ಕೆಜಿ ಗೋಧಿ ಹಿಟ್ಟಿನ ಬ್ಯಾಗ್‌ಗಳನ್ನು 2000-3000 ರೂ. ದರಕ್ಕೆ ಮಾರಾಟ ಮಾಡುತ್ತಿದೆ. ಆದರೆ ಸಿಂಧ್, ಬಲೂಚಿಸ್ತಾನ್, ಖೈಬರ್‌ಪಖ್ತೂನ್‌ಕ್ವಾನ ಕಾಳಸಂತೆಯಲ್ಲಿ ಇದು ಪ್ರತಿ ಕೆಜಿಗೆ 1000 ರೂ .ನಿಂದ 1500 ರೂ .ವರೆಗೂ ಮಾರಾಟವಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ದೇಶದಲ್ಲಿ ಬೇಕರಿ ಪದಾರ್ಥಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಸ್ತುಗಳು ದುಬಾರಿಯಾಗಿವೆ. ಈರುಳ್ಳಿ ಕೇಜಿಗೆ 220 ರೂ.ಗೆ ತಲುಪಿದೆ. ಬೇಳೆಕಾಳುಗಳು 380 ರೂ.ಗಿಂತ ಹೆಚ್ಚಾಗಿವೆ. ಉಪ್ಪು ಸಹ 60 ರೂ.ಗಳ ಗಡಿ ದಾಟಿದೆ. 1 ಲೀ. ಹಾಲಿನ ಬೆಲೆ 150 ರೂ. ಆಗಿದೆ. ಅಕ್ಕಿಯೂ ಸಹ ಕೇಜಿಗೆ 150 ರೂ. ಗಡಿ ದಾಟಿದೆ.
ಇದನ್ನೂ ಓದಿ: ಸಿಲಿಂಡರ್ ಬದ್ಲು ಪ್ಲಾಸ್ಟಿಕ್ ಬ್ಯಾಗ್ ಅಲ್ಲಿ ದೊರೆಯುತ್ತೆ ಎಲ್‌ಪಿಜಿ
ಕಾರಣ ಏನು?:
ಕಳೆದ ವರ್ಷ 2.7 ಕೋಟಿ ಟನ್ ಗೋಧಿ ಉತ್ಪಾದನೆ ಗುರಿಯನ್ನು ಸರ್ಕಾರ ಹಾಕಿಕೊಂಡಿತ್ತು. ಆದರೆ ಕೃಷಿ ಭೂಮಿ ಪ್ರಮಾಣ ಇಳಿಕೆ, ನೀರಿನ ಕೊರತೆ, ಬರಗಾಲ ಮತ್ತು ಕಡೆಯಲ್ಲಿ ಕಾಣಿಸಿಕೊಂಡ ಭಾರೀ ಪ್ರವಾಹ ಗೋಧಿ ಉತ್ಪಾದನೆ ಮೇಲೆ ಕರಿನೆರಳು ಬೀರಿದೆ. ಹೀಗಾಗಿ ದೇಶದಲ್ಲಿ ಗೋಧಿ ಉತ್ಪಾದನೆ ಕುಸಿತಗೊಂಡು ಸಮಸ್ಯೆ ಸೃಷ್ಟಿಯಾಗಿದೆ. ವಿದೇಶಗಳಿಂದ ಖರೀದಿಸಲು ಸರ್ಕಾರದ ಬಳಿ ಅಗತ್ಯ ಪ್ರಮಾಣದ ಹಣ, ವಿದೇಶಿ ವಿನಿಮಯ ಇಲ್ಲ. ಈಗಾಗಲೇ ಮಾಡಿರುವ ಸಾಲವೇ ತೀರಿಸದ ಮಟ್ಟಕ್ಕೆ ಹೋಗಿರುವ ಕಾರಣ, ಹೊಸ ಸಾಲ ನೀಡಲು ವಿದೇಶಗಳು ಹಿಂದೆ ಮುಂದೆ ನೋಡುತ್ತಿವೆ.
ಏಕೆ ಈ ದುಸ್ಥಿತಿ..?
- ಆರ್ಥಿಕ ಸಮಸ್ಯೆ, ತೀವ್ರ ನೆರೆಯಿಂದ ಆಹಾರೋತ್ಪಾದನೆ ಇಳಿಕೆ
- ಜನರಿಗೆ ಆಹಾರ ಕೊರತೆ, ಜೊತೆಗೆ ಧಾನ್ಯಗಳು ತೀವ್ರ ದುಬಾರಿ
- ಸರ್ಕಾರದಿಂದಲೇ ಭಾರಿ ದುಬಾರಿ ದರಕ್ಕೆ ಆಹಾರದ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: ವಿದ್ಯುತ್ ಸಮಸ್ಯೆ: ಪಾಕ್‌ನಲ್ಲಿ ರಾತ್ರಿ 8ಕ್ಕೆ ಅಂಗಡಿ ಬಂದ್