ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್‌ನ ಐಆರ್‌ಜಿಸಿ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಸೂಚನೆ ನೀಡಿದೆ. ಸಮುದ್ರದಾಳದ ಇಂಟರ್ನೆಟ್ ಕೇಬಲ್‌ಗಳನ್ನು ಗುರಿಯಾಗಿಸುವ ದೊಡ್ಡ ಎಚ್ಚರಿಕೆ ನೀಡಿದೆ.

ಟೆಹ್ರಾನ್/ವಾಷಿಂಗ್ಟನ್ (ಏ.22): ಜಾಗತಿಕ ಉದ್ವಿಗ್ನತೆಯ ನಡುವೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಪರ್ಷಿಯನ್ ಕೊಲ್ಲಿಯಲ್ಲಿರುವ ನಿರ್ಣಾಯಕ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಮುನ್ಸೂಚನೆ ನೀಡಿದೆ. ಇದು ಕೇವಲ ಮಿಲಿಟರಿ ಸಂಘರ್ಷವನ್ನಷ್ಟೇ ಅಲ್ಲದೆ, ಜಾಗತಿಕ ಸಂವಹನ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸುವ ಆತಂಕ ಮೂಡಿಸಿದೆ. ಇರಾನ್‌ನ ಐಆರ್‌ಜಿಸಿ ಜೊತೆ ಗುರುತಿಸಿಕೊಂಡಿರುವ 'ತಸ್ನಿಮ್ ನ್ಯೂಸ್ ಏಜೆನ್ಸಿ' ವರದಿಯ ಪ್ರಕಾರ, ಈ ಪ್ರದೇಶದಲ್ಲಿನ ಡಿಜಿಟಲ್ ಮೂಲಸೌಕರ್ಯಗಳ ಕಾರ್ಯತಂತ್ರದ ಪ್ರಾಮುಖ್ಯತೆ ಮತ್ತು ಅವುಗಳ ದುರ್ಬಲತೆಯನ್ನು ಎತ್ತಿ ತೋರಿಸಲಾಗಿದೆ. ಇದು ಕೇವಲ ತಾಂತ್ರಿಕ ವಿಶ್ಲೇಷಣೆಯಾಗಿರದೆ, ಮುಂಬರುವ ದಿನಗಳಲ್ಲಿ ಇವುಗಳನ್ನು ಗುರಿಯಾಗಿಸುವ ಸ್ಪಷ್ಟ ಸಂಕೇತವೆಂದು ವಿಶ್ಲೇಷಿಸಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಸಮುದ್ರದಾಳದ ಪ್ರಮುಖ ಇಂಟರ್ನೆಟ್ ಕೇಬಲ್‌ಗಳನ್ನು ಈ ವರದಿಯಲ್ಲಿ ಮ್ಯಾಪ್ ಮಾಡಲಾಗಿದೆ. ಯುಎಇ (UAE), ಕತಾರ್, ಬಹ್ರೇನ್, ಕುವೈತ್ ಮತ್ತು ಸೌದಿ ಅರೇಬಿಯಾದಂತಹ ಕೊಲ್ಲಿ ರಾಷ್ಟ್ರಗಳು ತಮ್ಮ ಸಂಪರ್ಕಕ್ಕಾಗಿ ಈ ಕೇಬಲ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ. ಡೇಟಾ ಸೆಂಟರ್‌ಗಳು ಮತ್ತು ಕ್ಲೌಡ್ ಹಬ್‌ಗಳನ್ನು ಗುರಿಯಾಗಿಸುವುದರಿಂದ ಆ ದೇಶಗಳ ಆರ್ಥಿಕತೆ ಮತ್ತು ಸಂವಹನ ವ್ಯವಸ್ಥೆಗೆ ಭಾರಿ ಹೊಡೆತ ಬೀಳಲಿದೆ ಎಂದು ತಸ್ನಿಮ್ ವರದಿ ಸೂಚಿಸಿದೆ.

ಡೊನಾಲ್ಡ್ ಟ್ರಂಪ್ ಅವರ ಕಠಿಣ ನಿಲುವು

ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಕದನ ವಿರಾಮವನ್ನು (Ceasefire) ವಿಸ್ತರಿಸುವುದಾಗಿ ಘೋಷಿಸಿದ್ದರೂ, ಇರಾನ್ ಬಂದರುಗಳ ಮೇಲಿನ ನೌಕಾ ದಿಗ್ಬಂಧನವನ್ನು (Naval Blockade) ಮುಂದುವರಿಸಲು ನಿರ್ಧರಿಸಿದ್ದಾರೆ. ಮಾತುಕತೆಗೆ ಹೆಚ್ಚಿನ ಸಮಯ ನೀಡಲು ಟ್ರಂಪ್ ಕದನ ವಿರಾಮವನ್ನು ವಿಸ್ತರಿಸಿದ್ದಾರೆ. ಆದರೆ, ಇರಾನ್ ಕಡೆಯಿಂದ ಶಾಂತಿ ಸ್ಥಾಪನೆಯ ಬಗ್ಗೆ ಸ್ಪಷ್ಟ ಪ್ರಸ್ತಾವನೆ ಬರುವವರೆಗೂ ಈ ದಿಗ್ಬಂಧನ ಮುಂದುವರಿಯಲಿದೆ. ಇರಾನ್ ಸರ್ಕಾರವು ಆಂತರಿಕವಾಗಿ ಭಿನ್ನಾಭಿಪ್ರಾಯಗಳಿಂದ ಒಡೆದು ಹೋಗಿದೆ ಎಂದು ಟ್ರಂಪ್ ಟೀಕಿಸಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ವಿನಂತಿಯ ಮೇರೆಗೆ ದಾಳಿಯನ್ನು ತಡೆಹಿಡಿಯಲಾಗಿದೆ ಎಂದು ಟ್ರಂಪ್ ತಮ್ಮ 'ಟ್ರೂತ್ ಸೋಷಿಯಲ್' ಖಾತೆಯಲ್ಲಿ ತಿಳಿಸಿದ್ದಾರೆ.

ಶಾಂತಿ ಮಾತುಕತೆಗೆ ಹಿನ್ನಡೆ

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಶಾಂತಿ ಮಾತುಕತೆಯ ಎರಡನೇ ಸುತ್ತಿನ ಚರ್ಚೆಗಾಗಿ ಪಾಕಿಸ್ತಾನಕ್ಕೆ ತೆರಳಬೇಕಿತ್ತು. ಆದರೆ, ಈ ಪ್ರವಾಸವನ್ನು ರದ್ದುಗೊಳಿಸಲಾಗಿದೆ ಎಂದು ವೈಟ್ ಹೌಸ್ ತಿಳಿಸಿದೆ. ಸದ್ಯಕ್ಕೆ ಹಾರ್ಮುಜ್ ಜಲಸಂಧಿಯಲ್ಲಿನ ಇರಾನ್ ಬಂದರುಗಳ ಮೇಲೆ ಅಮೆರಿಕದ ಮಿಲಿಟರಿ ದಿಗ್ಬಂಧನ ಮುಂದುವರಿಯಲಿದ್ದು, ಯುದ್ಧ ವಿಮಾನಗಳು ಮತ್ತು ನೌಕೆಗಳು ಯಾವುದೇ ಕ್ಷಣದಲ್ಲಿ ದಾಳಿಗೆ ಸನ್ನದ್ಧವಾಗಿರಲಿವೆ.