ಹೋರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗಿನ ಮೇಲೆ ಇರಾನ್ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ನಾವಿಕ ಮತ್ತು ಇರಾನ್ ಯೋಧರ ನಡುವಿನ ಸಂಭಾಷಣೆಯ ಆಡಿಯೋ ಬಿಡುಗಡೆಯಾಗಿದೆ. ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ.

ಟೆಹ್ರಾನ್‌ (ಏ.20): ಹೋರ್ಮುಜ್‌ ಜಲಸಂಧಿಯನ್ನು ದಾಟುತ್ತಿದ್ದ ಭಾರತದ ಹಡಗಿನ ಮೇಲೆ ಶನಿವಾರ ಇರಾನ್‌ ಗುಂಡಿನ ದಾಳಿ ನಡೆಸಿದ ವೇಳೆ ಹಡಗಿನ ಚಾಲಕ ಮತ್ತು ಇರಾನ್‌ ಯೋಧರ ನಡುವೆ ನಡೆದ ದೂರವಾಣಿ ಸಂಭಾಷಣೆಯ ಆಡಿಯೋ ಭಾನುವಾರ ಬಿಡುಗಡೆಯಾಗಿದೆ. ಅದರಲ್ಲಿ ಹಡಗಿನ ನಾವಿಕ, ‘ನಮಗೆ ಹೋಗಲು ನೀವು ಈಗಾಗಲೇ ಅನುಮತಿ ನೀಡಿದ್ದೀರಿ. ಗುಂಡು ಹಾರಿಸಬೇಡಿ. ಏಕೆ ಹಾರಿಸುತ್ತಿದ್ದೀರಿ?’ ಎಂದು ಇರಾನ್‌ ಅರೆಸೇನಾಪಡೆಯಾದ ರೆವಲ್ಯೂಷನರಿ ಗಾರ್ಡ್ಸ್‌ನ ಯೋಧರ ಜೊತೆ ಮಾತುಕತೆ ನಡೆಸಿದ ವಿವರಗಳಿವೆ.

ಆಡಿಯೋದಲ್ಲಿ ‘ಸೆಪಾ ನೇವಿ. ಸೆಪಾ ನೇವಿ. ಇದು ಮೋಟಾರ್ ಟ್ಯಾಂಕರ್ ಸನ್‌ಮಾರ್ ಹೆರಾಲ್ಡ್. ನೀವು ನನಗೆ ಹೋಗಲು ಕ್ಲಿಯರೆನ್ಸ್ ನೀಡಿದ್ದೀರಿ. ನನ್ನ ಹೆಸರು ನಿಮ್ಮ ಲಿಸ್ಟ್‌ನಲ್ಲಿ ಎರಡನೇದು. ನೀವು ಈಗ ಗುಂಡು ಹಾರಿಸುತ್ತಿದ್ದೀರಿ. ನನಗೆ ಹಿಂದಕ್ಕೆ ತಿರುಗಲು ಅವಕಾಶ ಕೊಡಿ’ ಎನ್ನುವುದನ್ನು ಕೇಳಬಹುದು.

ದಾಳಿ ಉದ್ದೇಶಪೂರ್ವಕ ಅಲ್ಲ: ಇರಾನ್‌ ಸ್ಪಷ್ಟನೆ

ಹೋರ್ಮುಜ್‌ ಜಲಸಂಧಿ ಬಳಿ ಶನಿವಾರ ಭಾರತದ ಹಡಗಿನ ಮೇಲೆ ನಡೆದ ದಾಳಿ ಉದ್ದೇಶಪೂರ್ವಕ ಅಲ್ಲ. ಸಂವಹನ ಕೊರತೆಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಇರಾನ್‌ ಸ್ಪಷ್ಟನೆ ನೀಡಿದೆ. ಶನಿವಾರದ ಘಟನೆ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯವು, ನವದೆಹಲಿಯಲ್ಲಿನ ಇರಾನ್‌ ರಾಯಭಾರಿಯನ್ನು ಕರೆಸಿ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ಈ ವೇಳೆ ‘ಭಾರತದತ್ತ ಹೊರಟಿದ್ದ 21 ಹಡಗುಗಳ ಕುರಿತು ಮೊದಲೇ ಪಟ್ಟಿ ನೀಡಿ ಅವುಗಳ ಸುಗಮ ಸಂಚಾರಕ್ಕೆ ಅವಕಾಶ ಕೋರಲಾಗಿತ್ತು. ಇದರ ಹೊರತಾಗಿಯೂ ಅವುಗಳ ಮೇಲೆ ದಾಳಿಯ ಪರಿಣಾಮ ಅವು ವಾಪಸ್‌ ತೆರಳುವಂತಾಯಿತು’ ಎಂದು ಹಿರಿಯ ಅಧಿಕಾರಿಗಳು ಪ್ರಸ್ತಾಪ ಮಾಡಿದ್ದಾರೆ. ಆಗ, ‘ಇದು ಉದ್ದೇಶಪೂರ್ವಕವಲ್ಲ. ಸಂವಹನ ಕೊರತೆಯಿಂದ ದಾಳಿ ಆಗಿದೆ’ ಎಂದು ರಾಯಭಾರಿ ಉತ್ತರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, ‘ಈ ಹಂತದಲ್ಲಿ ಹಡಗುಗಳ ಸಂಚಾರಕ್ಕೆ ಅನುಮತಿ ನೀಡುವ ಮೊದಲು ಒಮ್ಮೆ ನಿಮ್ಮ ಕೇಂದ್ರ ಕಚೇರಿಯ ಜೊತೆ ಸಂವಹನ ನಡೆಸಿ. ಬಳಿಕವಷ್ಟೇ ಅನುಮತಿ ನೀಡಿ. ಇದರಿಂದ ಗೊಂದಲ ತಪ್ಪುತ್ತದೆ’ ಎಂದು ಇರಾನ್‌ ರಾಯಭಾರಿಗೆ ಸಲಹೆ ನೀಡಿದೆ.

ಹೋರ್ಮುಜ್‌ ಬಂದ್‌ ಮಾಡಿದ ಇರಾನ್‌

ಜಲಸಂಧಿಯನ್ನು ತೆರೆದ ಒಂದೇ ದಿನದಲ್ಲಿ ಮತ್ತೆ ಹೋರ್ಮುಜ್‌ಅನ್ನು ಇರಾನ್‌ ಬಂದ್‌ ಮಾಡಿದೆ. ಜಲಸಂಧಿ ದಾಟುತ್ತಿದ್ದ 1 ಭಾರತ, 2 ಬ್ರಿಟನ್ ಹಡಗುಗಳಿಗೆ ಗುಂಡೇಟು ಹಾಕಿದೆ. ಇದಲ್ಲದೆ ಭಾರತದ 14 ಹಡಗಿಗೆ ತಡೆ ನೀಡಿದ್ದರೆ, ಜಲಸಂಧಿ ದಾಟಲು 1 ಹಡಗು ಯಶಸ್ವಿಯಾಗಿದೆ.

ದಾಳಿಗೆ ಭಾರತ ಕಿಡಿ: ಇರಾನ್‌ ದೂತನ ಕರೆಸಿ ಆಕ್ಷೇಪ ಸಲ್ಲಿಕೆ

ಈ ಗುಂಡಿನ ದಾಳಿಯ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ನವದೆಹಲಿಯಲ್ಲಿನ ಇರಾನ್‌ ರಾಯಭಾರಿ ಮೊಹಮ್ಮದ್‌ ಫಥಾಲಿ ಅವರನ್ನು ಕರೆಸಿ ತನ್ನ ಆಕ್ರೋಶ ವ್ಯಕ್ತಪಡಿಸಿದೆ.

ಬ್ಲ್ಯಾಕ್‌ಮೇಲ್‌ ನಡೆಯಲ್ಲ: ನಾವು ಇರಾನ್‌ ಜತೆ ಮಾತನಾಡುತ್ತಿದ್ದೇವೆ. ತೆರೆದಿದ್ದ ಜಲಸಂಧಿಯನ್ನು ಮತ್ತೆ ಅವರು ಮುಚ್ಚಿದ್ದಾರೆ. ನಿಮಗೆ ತಿಳಿದಿದೆ, ಅವರು ವರ್ಷಗಳಿಂದ ಇದನ್ನೇ ಮಾಡುತ್ತಾ ಬಂದಿದ್ದಾರೆ. ಅವರು ನಮ್ಮನ್ನು ಬ್ಲ್ಯಾಕ್ ಮೇಲ್ ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಆಗಿದ್ದೇನು?

  • ಲೆಬನಾನ್‌-ಇಸ್ರೇಲ್‌ ಕದನವಿರಾಮ ನಂತರ ಶುಕ್ರವಾರ ಹೋರ್ಮುಜ್‌ ತೆರೆದಿದ್ದ ಇರಾನ್‌
  • ಆದರೆ ಹೋರ್ಮುಜ್‌ ಮೇಲಿನ ದಿಗ್ಬಂಧನ ಮುಂದುವರಿಸುವೆ ಎಂದು ಹೇಳಿದ್ದ ಟ್ರಂಪ್‌
  • ಇದಕ್ಕೆ ಇರಾನ್‌ ಆಕ್ರೋಶ. ಪುನಃ ಜಲಸಂಧಿ ಮುಚ್ಚಿ ತೈಲ ಹಡಗುಗಳಿಗೆ ಇರಾನ್‌ ತಡೆ
  • ಆದಾಗ್ಯೂ ಅದನ್ನು ದಾಟುತ್ತಿದ್ದ 1 ಭಾರತ, 2 ಬ್ರಿಟನ್‌ ಹಡಗುಗಳಿಗೆ ಇರಾನ್‌ ಗುಂಡೇಟು
  • ಸುದೈವವಶಾತ್‌ ಯಾರಿಗೂ ಗಾಯವಿಲ್ಲ. ಈ ಮಧ್ಯೆ ಜಲಸಂಧಿ ದಾಟಿದ 1 ಭಾರತ ಹಡಗು

ಟೆಹ್ರಾನ್‌ (ಏ.20): ಶುಕ್ರವಾರವಷ್ಟೇ ಹೋರ್ಮುಜ್‌ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ತೆರವು ಮಾಡಿದ್ದ ಇರಾನ್‌, ಶನಿವಾರ ಪುನಃ ಅದನ್ನು ಬಂದ್‌ ಮಾಡಿದೆ. ಅದರ ಬೆನ್ನಲ್ಲೇ, ’ಭಾರತ ನಮ್ಮ ಮಿತ್ರ. ಅದರ ಹಡಗುಗಳ ಮೇಲೆ ನಾವು ಕ್ರಮ ಜರುಗಿಸಲ್ಲ’ ಎನ್ನುತ್ತಿದ್ದ ಇರಾನ್‌ ರಾಗ ಬದಲಿಸಿದೆ ಹಾಗೂ ಜಲಸಂಧಿ ದಾಟಿ ಭಾರತದತ್ತ ಹೊರಟಿದ್ದ 14 ಹಡಗುಗಳನ್ನು ತಡೆದಿದೆ. ಈ ಪೈಕಿ ಒಂದು ಹಡಗಿನ ಮೇಲೆ ಗುಂಡಿನ ದಾಳಿ ಕೂಡಾ ನಡೆದಿದೆ. ಇದರ ನಡುವೆ ಭಾರತದ ಒಂದು ಹಡಗು ಮಾತ್ರ ಜಲಸಂಧಿ ದಾಟುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ ಬ್ರಿಟನ್‌ ಕೂಡಾ ತನ್ನ 2 ವಾಣಿಜ್ಯ ಹಡಗಿನ ಮೇಲೆ ಹೋರ್ಮುಜ್‌ನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಹೇಳಿಕೊಂಡಿದೆ.

ಹಡಗಿನ ಮೇಲೆ ದಾಳಿ

ವಿವಿಧ ದೇಶಗಳಿಂದ ಕಚ್ಚಾತೈಲ, ಎಲ್‌ಪಿಜಿ, ರಸಗೊಬ್ಬರ ಹೊತ್ತು ಭಾರತದತ್ತ ಹೊರಟಿದ್ದ 14 ಹಡಗುಗಳನ್ನು ಹೋರ್ಮುಜ್‌ ಜಲಸಂಧಿ ಬಳಿ ಇರಾನ್‌ ಶನಿವಾರ ತಡೆದಿದೆ. ಬೋಟ್‌ನಲ್ಲಿ ಬಂದಿದ್ದ ಇರಾನ್‌ನ ಅರೆಸೇನಾಪಡೆಯ ಯೋಧರು ಯಾವುದೇ ಮುನ್ಸೂಚನೆ ನೀಡದೇ ಹಡಗುಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.

ಈ ಪೈಕಿ ಒಂದು ಹಡಗಿನ ಮೇಲೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನ ಯೋಧರು ಹಾರಿಸಿದ ಗುಂಡು ತಗುಲಿದೆ. ಈ ವೇಳೆ ಹಡಗಿಗೆ ಹಾನಿಯಾಗಿದೆಯಾದರೂ ದೊಡ್ಡ ಅಪಾಯ ಸಂಭವಿಸಿಲ್ಲ. ಜೊತೆಗೆ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ. ದಾಳಿಯ ಹಿನ್ನೆಲೆಯಲ್ಲಿ 13 ಹಡಗುಗಳು ಪರ್ಷಿಯನ್‌ ಕೊಲ್ಲಿಯಲ್ಲಿನ ವಿವಿಧ ಸ್ಥಾನಗಳಿಗೆ ಮರಳಿವೆ. ಆದರೆ ಈ ದಾಳಿಯ ನಡುವೆಯೇ ಕಚ್ಚಾತೈಲ ಹೊತ್ತ ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೆಷನ್‌ನ ಒಂದು ಹಡಗು ಮಾತ್ರ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಭಾರತದತ್ತ ಹೊರಟಿದೆ ಎಂದು ಮೂಲಗಳು ತಿಳಿಸಿವೆ.

ಹಡಗಿನಲ್ಲಿ ಏನಿತ್ತು?

ಭಾರತದತ್ತ ಹೊರಟಿದ್ದ 14 ಹಡಗುಗಳ ಪೈಕಿ 7 ಭಾರತದ ಧ್ವಜ ಹೊತ್ತಿದ್ದವು, 4 ಲೈಬೀರಿಯಾ ಧ್ವಜ, 2 ಮಾರ್ಷಲ್‌ ದ್ವೀಪ ಮತ್ತು 1 ವಿಯೆಟ್ನಾಂ ಧ್ವಜ ಹೊತ್ತಿದ್ದವು. ಈ ಪೈಕಿ 6 ಕಚ್ಚಾತೈಲ, 3 ಎಲ್‌ಪಿಜಿ, 4 ರಸಗೊಬ್ಬರ ಹೊತ್ತಿದ್ದವು ಎಂದು ಮೂಲಗಳು ಖಚಿತಪಡಿಸಿವೆ.

ಟ್ರಂಪ್‌ ಕಿರಿಕ್‌

ಇಸ್ರೇಲ್‌ ಮತ್ತು ಲೆಬನಾನ್‌ ನಡುವೆ 10 ದಿನಗಳ ಕದನವಿರಾಮ ಘೋಷಣೆ ಹಿನ್ನೆಲೆಯಲ್ಲಿ ಯುದ್ಧ ಆರಂಭವಾದಾಗಿನಿಂದಲೂ ನಿರ್ಬಂಧ ಹೇರಲಾಗಿದ್ದ ಜಲಸಂಧಿಯನ್ನು 10 ದಿನಗಳ ಅವಧಿಗೆ ಮುಕ್ತ ಮಾಡುವುದಾಗಿ ಶುಕ್ರವಾರ ಇರಾನ್‌ ಘೋಷಿಸಿತ್ತು. ಇರಾನ್‌ನ ನಿರ್ಣಯವನ್ನು ಅಮೆರಿಕ ಅಧ್ಯಕ್ಷ ಟ್ರಂಪ್‌ ‘ಥ್ಯಾಂಕ್‌ ಯೂ’ ಎನ್ನುವ ಮೂಲಕ ಸ್ವಾಗತಿಸಿದ್ದರು.

ಆದರೆ ಏ.21ರವರೆಗೆ ಇರುವ ಕದನವಿರಾಮ ವಿಸ್ತರಣೆ ಉದ್ದೇಶ ಇಲ್ಲ. ಅಷ್ಟರೊಳಗೆ ಯುರೇನಿಯಂ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಇರಾನ್‌ ನಮ್ಮ ಜೊತೆಗೆ ಒಪ್ಪಂದಕ್ಕೆ ಬರಬೇಕು. ಇಲ್ಲದೇ ಹೋದಲ್ಲಿ ನಾವು ಮತ್ತೆ ಬಾಂಬ್‌ ದಾಳಿ ನಡೆಸಬೇಕಾಗುತ್ತದೆ ಎಂದು ಟ್ರಂಪ್‌ ಎಚ್ಚರಿಸಿದ್ದರು. ಅಲ್ಲದೆ ಒಪ್ಪಂದ ಆಗುವವರೆಗೂ ಹೋರ್ಮುಜ್‌ ಜಲಸಂಧಿಯಲ್ಲಿ ನಾವು ಹಾಕಿರುವ ನಿರ್ಬಂಧಗಳು ಮುಂದುವರೆಯಲಿವೆ ಎಂದು ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಇರಾನ್‌ ಹೋರ್ಮುಜ್‌ ಜಲಸಂಧಿಯನ್ನು ಮತ್ತೆ ಮುಚ್ಚುವ ನಿರ್ಧಾರ ಕೈಗೊಂಡಿದೆ. ಈ ಕುರಿತು ಹೇಳಿಕೆ ನೀಡಿರುವ ಅದು, ‘ಹೋರ್ಮುಜ್‌ ಜಲಸಂಧಿಯ ಮೇಲೆ ನಾವು ಮತ್ತೆ ನಿಯಂತ್ರಣ ಸಾಧಿಸಿದ್ದೇವೆ. ಮಾರ್ಗವನ್ನು ಮುಕ್ತಗೊಳಿಸುವ ಮುನ್ನ ಇದ್ದ ಸ್ಥಿತಿಯಲ್ಲಿ ಮತ್ತೆ ನಾವು ಇದೀಗ ಇದ್ದೇವೆ. ಇಡೀ ಪ್ರದೇಶದ ಮೇಲೆ ನಮ್ಮ ನಿಯಂತ್ರಣ ಇದೆ. ನಾವು ಇಡೀ ಪ್ರದೇಶವನ್ನು ನಿರ್ವಹಿಸುತ್ತಿದ್ದೇವೆ ಎಂದು ಎಂದು ಇರಾನ್‌ನ ಜಂಟಿ ಸೇನಾ ಕಮಾಂಡ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.