ನಾಲ್ಕು ತಿಂಗಳ ಹಿಂದೆ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎನ್ನಲಾದ ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಜುಲೈ 9 ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಾನ್ ಆಹ್ವಾನ ನೀಡಿದೆ ಎಂದು ವರದಿಯಾಗಿದೆ. ಯುದ್ಧದ ಕಾರಣದಿಂದಾಗಿ ವಿಳಂಬವಾಗಿದ್ದ ಈ ಅಂತ್ಯಕ್ರಿಯೆಯು ಖಮೇನಿ ಅವರ ಹುಟ್ಟೂರಾದ ಮಶಾದ್‌ನಲ್ಲಿ ನಡೆಯಲಿದೆ.
ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಸತ್ತು ನಾಲ್ಕು ತಿಂಗಳಾಗಿದ್ದು, ಇದೀಗ ಅವರ ಅಂತ್ಯಕ್ರಿಯೆ ನೆರವೇರಿಸಲು ಇರಾನ್ ಸಿದ್ಧತೆ ನಡೆಸಿದೆ. ಕಳೆದ ಫೆ.28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ, ಖಮೇನಿ ಹತ್ಯೆಗೀಡಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಜುಲೈ 9ರಂದು ನಡೆಸಲು ಸಿದ್ಧತೆ ನಡೆದಿದ್ದು, ಕುತೂಹಲ ಎನ್ನುವಂತೆ ಇದರಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಾನ್ ಆಹ್ವಾನ ನೀಡಿದೆ ಎನ್ನುವ ಸುದ್ದಿ ವರದಿಯಾಗಿದೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಆಹ್ವಾನ ನೀಡಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ಬುಧವಾರ ತಿಳಿಸಿವೆ. ಖಮೇನಿ ಹುಟ್ಟೂರಾದ ಮಶಾದ್ ನಗರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದ್ದು, ಇದಕ್ಕೆ ಭಾರತಕ್ಕೆ ಆಹ್ವಾನ ನೀಡಲಾಗಿದ್ದು, ಭಾರತ ಈ ಕುರಿತು ತನ್ನ ನಿರ್ಧಾರವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ ಎನ್ನಲಾಗಿದೆ.
36 ವರ್ಷಗಳ ಪಯಣ
36 ವರ್ಷಗಳ ಕಾಲ ಇಸ್ಲಾಮಿಕ್ ಗಣರಾಜ್ಯದ ಸರ್ವೋಚ್ಚ ನಾಯಕರಾಗಿ ಸೇವೆ ಸಲ್ಲಿಸಿದ್ದ 86 ವರ್ಷದ ಆಯತೊಲ್ಲಾ ಅಲಿ ಖಮೇನಿ, ತಮ್ಮ ಆಡಳಿತದುದ್ದಕ್ಕೂ ಅಮೆರಿಕ ಮತ್ತು ಇಸ್ರೇಲ್‌ನ ವೈರತ್ವ ಎದುರಿಸುತ್ತಲೇ ಬಂದಿದ್ದರು. ಇವರು ಸಾವನ್ನಪ್ಪಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಸುದೀರ್ಘ ಯುದ್ಧ ಆರಂಭವಾಗಿತ್ತು. ಕಳೆದ ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಖಮೇನಿ ಅಂತ್ಯಕ್ರಿಯೆಯನ್ನು ಸಂಘರ್ಷದಿಂದಾಗಿ ಮುಂದೂಡಲಾಗಿತ್ತು. ಈ ವೇಳೆ 1 ಕೋಟಿಗೂ ಅಧಿಕ ಜನ ಭಾಗಿಯಾಗುವ ನಿರೀಕ್ಷೆಯಿದೆ.
ಯುದ್ಧದಲ್ಲಿ ವಿನಾಯಿತಿ
ಇಸ್ಲಾಮಿಕ್ ಕಾನೂನಿನ ಪ್ರಕಾರ ಮೃತರನ್ನು ಸಾಧ್ಯವಾದಷ್ಟು ಬೇಗ ಮತ್ತು ಆದರ್ಶಪ್ರಾಯವಾಗಿ ಮರಣದ ಒಂದು ದಿನದೊಳಗೆ ಸಮಾಧಿ ಮಾಡಬೇಕೆಂದು ಆದೇಶಿಸಲಾಗಿದ್ದರೂ, ವಿಶೇಷವಾಗಿ ಯುದ್ಧದ ಸಮಯದಲ್ಲಿ ವಿನಾಯಿತಿಗಳನ್ನು ಅನುಮತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ ವಿಳಂಬ ಮಾಡಲಾಗಿದೆ ಎಂದು ಇರಾನ್ ಸರ್ಕಾರ ಸ್ಪಷ್ಟಪಡಿಸಿದೆ.
ವರದಿಗಳ ಪ್ರಕಾರ, ಅಯತೊಲ್ಲಾ ಖಮೇನಿಯ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಟೆಹ್ರಾನ್‌ನ `ಗ್ರಾಂಡ್ ಮೊಸಲ್ಲಾ’ ಸಂಕೀರ್ಣದಲ್ಲಿ ಇರಿಸಲಾಗುವುದು. ಅಲ್ಲದೇ ಟೆಹ್ರಾನ್ ಮತ್ತು ಕೋಮ್ ನಗರಗಳಲ್ಲಿ ಬೃಹತ್ ಮೆರವಣಿಗೆ ನಡೆಯಲಿದ್ದು, ಇದರೊಂದಿಗೆ ಇರಾಕ್‌ನ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾದಲ್ಲೂ ವಿಶೇಷ ಪ್ರಾರ್ಥನೆ ನಡೆಯಲಿದೆ.


